HomePage_Banner
HomePage_Banner
HomePage_Banner

ಪತ್ರಿಕಾ ಭವನದಲ್ಲಿ ಎಲ್ಲಾ ಮಾಧ್ಯಮದವರಿಗೂ ಅವಕಾಶ ನೀಡಲು ಮನವಿ ಹಿನ್ನೆಲೆ | 3 ಪತ್ರಕರ್ತರ ಸಂಘದ ಪದಾಧಿಕಾರಿಗಳ ಅಭಿಪ್ರಾಯ ಆಲಿಸಿದ ವಾರ್ತಾ ಇಲಾಖಾ ಅಧಿಕಾರಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾ ಭವನದಲ್ಲಿ ಈಗ ಪುತ್ತೂರು ಪತ್ರಕರ್ತರ ಸಂಘ ಮಾತ್ರ ಕಾರ್ಯಾಚರಿಸುತ್ತಿದೆ. ಇಲ್ಲಿ ಭಾಗವಹಿಸಲು ಅದರ ಸದಸ್ಯರುಗಳಿಗೆ ಮಾತ್ರ ಅವಕಾಶ ಇದ್ದು ಈ ಸಂಘದ ಸದಸ್ಯರಲ್ಲದಿರುವ ಪತ್ರಕರ್ತರಿಗೆ ಅವಕಾಶ ಇಲ್ಲ.

ಹಾಗಾಗಿ, ತಾಲೂಕಿನ ಎಲ್ಲಾ ಪತ್ರಕರ್ತರ ಸಂಘಗಳಿಗೆ ಹಾಗೂ ಎಲ್ಲಾ ಮಾಧ್ಯಮದವರಿಗೆ ಭಾಗವಹಿಸಲು ಅವಕಾಶ ನೀಡಬೇಕೆಂದು ಇತರ ಸಂಘಗಳು ನೀಡಿದ ಮನವಿಯ ಕುರಿತು ಮತ್ತು ಪತ್ರಕರ್ತರ ಸಂಘದ ಕುರಿತು ಸಂಗ್ರಹಿಸಲಾಗಿರುವ ಅಭಿಪ್ರಾಯಗಳ ಬಗ್ಗೆ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ದ.ಕ. ಜಿಲ್ಲಾಧಿಕಾರಿಯವರಿಗೆ ವರದಿ ನೀಡಲಾಗುವುದು, ಬಳಿಕ ಜಿಲ್ಲಾಧಿಕಾರಿಯವರು ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಿ. ಅವರು ತಿಳಿಸಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್‌ರವರು ಸಭೆ ನಡೆಸುತ್ತಿರುವುದು

ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕಾ ಭವನದಲ್ಲಿ ಪುತ್ತೂರು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರುಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದು, ತಮಗೆ ಬೇಡ ಎನಿಸಿದವರಿಗೆ ಅವಕಾಶ ನೀಡದೇ ಇರುವುದರಿಂದ ತಾಲೂಕಿನ ಎಲ್ಲಾ ಪತ್ರಕರ್ತರ ಸಂಘಗಳಿಗೆ ಮತ್ತು ಎಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಭಾಗವಹಿಸಲು ಅವಕಾಶ ನೀಡಬೇಕು ತಾವು ಪತ್ರಕರ್ತರ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದೇವೆ, ಸಂಘದಲ್ಲಿ ಖರ್ಚುವೆಚ್ಚ ನೋಡಲು ತಯಾರಿದ್ದೇವೆ ಹಾಗೂ ಸೌಹಾರ್ದತೆಯಿಂದ ಕೆಲಸ ಮಾಡಲು ಇಚ್ಛಿಸುತ್ತೇವೆ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ಹಾಗೂ ಕರ್ನಾಟಕ ಪತ್ರಕರ್ತ ಸಂಘದ ಪುತ್ತೂರು ಘಟಕದ ವತಿಯಿಂದ ನೀಡಲಾಗಿದ್ದ ಪ್ರತ್ಯೇಕ ಮನವಿಯ ಬಗ್ಗೆ ಸಭೆ ನಡೆಸಿ ವರದಿ ನೀಡುವಂತೆ ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಯವರು ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಮಂಜುನಾಥ್‌ರವರು ನ.10ರಂದು ಪತ್ರಿಕಾ ಭವನದ ಸಭಾಂಗಣದಲ್ಲಿ ಸಭೆ ನಡೆಸಿ ಅಭಿಪ್ರಾಯ ಆಲಿಸಿದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರ, ಪ್ರಧಾನ ಕಾರ್ಯದರ್ಶಿ ಗಣೇಶ್ ಕೆ, ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಯೂಸುಫ್ ರೆಂಜಲಾಡಿ, ಮಾಜಿ ಅಧ್ಯಕ್ಷರಾದ ಉಮೇಶ್ ಮಿತ್ತಡ್ಕ, ಸದಾಶಿವ ಶೆಟ್ಟಿ ಮಾರಂಗ, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಮತ್ತು ಕಾರ್ಯದರ್ಶಿ ಸಂದೀಪ್ ಕುಮಾರ್ ಐ.ಬಿ.ರವರು ಸಭೆಯಲ್ಲಿ ಭಾಗವಹಿಸಿದ್ದರು.

ಮೂರೂ ಪತ್ರಕರ್ತರ ಸಂಘದ ಪದಾಧಿಕಾರಿಗಳ ಅಭಿಪ್ರಾಯ ಆಲಿಸಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್‌ರವರು ಎಲ್ಲಾ ಪತ್ರಕರ್ತರ ಸಂಘದವರು, ಪತ್ರಕರ್ತರು ಒಂದಾಗಿ ಸೌಹಾರ್ದಯುತವಾಗಿ ಇರಬೇಕು ಎಂದು ಹೇಳಿದರಲ್ಲದೆ ಸಭೆಯಲ್ಲಿ ವ್ಯಕ್ತವಾದ ಎಲ್ಲಾ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಜಿಲ್ಲಾಧಿಕಾರಿಯವರಿಗೆ ನೀಡಲಾಗುವುದು.  ಜಿಲ್ಲಾಧಿಕಾರಿಯವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಎಲ್ಲಾ ಪತ್ರಕರ್ತರು ಸೌಹಾರ್ದತೆಯಿಂದ ಇರೋಣ – ಮಂಜುನಾಥ್: ಸಭೆಯ ಆರಂಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ನಿರ್ದೇಶಕ ಮಂಜುನಾಥ್‌ರವರು ಸಭೆಯ ಉದ್ದೇಶವನ್ನು ಸಂಕ್ಷಿಪ್ತವಾಗಿ ತಿಳಿಸಿದರಲ್ಲದೆ, ಅಭಿಪ್ರಾಯ ತಿಳಿಸುವಂತೆ ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ತಿಳಿಸಿದರು. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ತಮ್ಮ ಅಭಿಪ್ರಾಯ ಮಂಡಿಸಿ, ಸರಕಾರ 2004ರಲ್ಲಿ ವಾರ್ತಾ ಭವನವನ್ನು ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಹಸ್ತಾಂತರಿಸಿದೆ, ಇದರ ನಿರ್ವಹಣೆಯನ್ನು ಪತ್ರಕರ್ತರ ಸಂಘವೇ ನಿಭಾಯಿಸುತ್ತಿದೆ, ಬೈಲಾದ ಪ್ರಕಾರವೇ ನಮ್ಮ ಸಂಘ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಸಂಘದ ಬೈಲಾದ ಪ್ರಕಾರ ಸದಸ್ಯರಿಗೆ ಮಾತ್ರ ಇಲ್ಲಿ ಪ್ರವೇಶ, ಉಳಿದವರಿಗೆ ಇಲ್ಲ ಎಂದರು.

ಆಗ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಶಾಂತಿನಗರರವರು ಮಾತನಾಡಿ, ನಿಮ್ಮ ಪತ್ರಕರ್ತರ ಸಂಘದ ಬೈಲಾದ ಬಗ್ಗೆ ನಮಗೆ ಆಕ್ಷೇಪಣೆಗಳಿಲ್ಲ. ನಿಮ್ಮ ಸಂಘಕ್ಕೆ ಬರುತ್ತೇವೆ ಎಂದು ನಾವು ಯಾರೂ ಕೇಳಿಕೊಂಡಿಲ್ಲ. ಪತ್ರಿಕಾ ಭವನದಲ್ಲಿ ಎಲ್ಲಾ ಪತ್ರಕರ್ತರ ಸಂಘದವರಿಗೆ ಮತ್ತು ಎಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ನೀಡಬೇಕು ಎಂಬುದನ್ನು ಮಾತ್ರ ನಾವು ಕೇಳಿಕೊಂಡಿದ್ದೇವೆ.

ತಾಲೂಕಿನಲ್ಲಿ ನಡೆಯುವ ಪತ್ರಿಕಾಗೋಷ್ಠಿಗಳ ಬಗ್ಗೆ, ಕಾರ್ಯಕ್ರಮಗಳ ಬಗ್ಗೆ ಸೀಮಿತ ಪತ್ರಕರ್ತರಿಗೆ ಮಾತ್ರ ತಿಳಿಸುವ ಬದಲು ಎಲ್ಲಾ ಪತ್ರಕರ್ತರಿಗೂ ಮಾಹಿತಿ ನೀಡುವ ವ್ಯವಸ್ಥೆ ಆಗಬೇಕಿದೆ, ಜತೆಗೆ ನಮ್ಮ ಪತ್ರಕರ್ತರ ಸಂಘಗಳ ಚಟುವಟಿಕೆಗಳಿಗೂ ಪತ್ರಿಕಾ ಭವನದಲ್ಲಿ ಅವಕಾಶ ನೀಡಬೇಕು ಎಂಬುದು ನಮ್ಮ ಮನವಿಯಾಗಿದೆ ಎಂದರು. ಜರ್ನಲಿಸ್ಟ್ ಯೂನಿಯನ್ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಚಟುವಟಿಕೆಗಳನ್ನು ನಡೆಸಲು, ಸಂಘದ ಸಭೆ ನಡೆಸಲು ಸರಕಾರಿ ಕಟ್ಟಡವಾದ ಪತ್ರಿಕಾ ಭವನದಲ್ಲಿ ಅವಕಾಶ ನೀಡಬೇಕು ಎಂದು ನಮ್ಮ ಆಗ್ರಹವಾಗಿದೆ ಎಂದು ಒತ್ತಿ ಹೇಳಿದರು.

ಬೇರೆ ಪತ್ರಕರ್ತರ ಸಂಘದವರು ಇಲ್ಲಿರಬಾರದು, ನಾವು ಮಾತ್ರ ಇರಬೇಕೆಂದು ನಾವು ಹೇಳುತ್ತಿಲ್ಲ, ಬದಲಾಗಿ ಎಲ್ಲಾ ಪತ್ರಕರ್ತರ ಸಂಘದವರು ಒಟ್ಟಾಗಿ ಒಂದೇ ಕಡೆ ಇರಬೇಕೆಂಬುದು ನಮ್ಮ ಕೇಳಿಕೆಯಾಗಿದೆ ಎಂದು ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ಘಟಕದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕರವರು ಹೇಳಿದರು. ಅಧ್ಯಕ್ಷ ಯೂಸುಫ್ ರೆಂಜಲಾಡಿರವರು ಮಾತನಾಡಿ, ಮೂರೂ ಪತ್ರಕರ್ತರ ಸಂಘಗಳು ಸೌಹಾರ್ದಯುತವಾಗಿ ಪತ್ರಿಕಾ ಭವನದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು ಎಂದು ಅಭಿಪ್ರಾಯ ಮಂಡಿಸಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಕಾರ್ಯದರ್ಶಿ ಕಹಳೆ ಚಾನೆಲ್‌ನ ಗಣೇಶ್ ಮಾತನಾಡಿ, ನಾವು ಕಳೆದ ಮೂರು ವರ್ಷಗಳಿಂದ ಕೇಬಲ್ ಚಾನೆಲ್ ನಡೆಸುತ್ತಿದ್ದೇವೆ ಆದರೆ ನಮಗೆ ಈ ಸಂಘದಲ್ಲಿ ಅವಕಾಶ ನೀಡಿರುವುದಿಲ್ಲ ಮಾತ್ರವಲ್ಲದೇ ನಮ್ಮ ಅರ್ಜಿಯನ್ನು ಸಹ ತಿರಸ್ಕರಿಸಲಾಗಿದೆ ಎಂದು ಹೇಳಿದರು.

ವಾರ್ತಾಧಿಕಾರಿ ಮಂಜುನಾಥ್ ಅವರು ಮಾತನಾಡಿ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್‌ಗಳಿಗೆ ಮಾನ್ಯತೆ ನೀಡಲಾಗುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಒಂದೊಂದು ವೆಬ್‌ಸೈಟ್ ಒಂದೊಂದು ಯೂಟ್ಯೂಬ್ ಚಾನೆಲ್ ಮಾಡಬಹುದು, ಪ್ರತೀ ಮನೆಯಲ್ಲೂ ಪ್ರಾರಂಭವಾಗಬಹುದು. ಅವರಿಗೆಲ್ಲಾ ಅವಕಾಶ ನೀಡಲಾಗುವುದಿಲ್ಲ ಸುಪ್ರೀಂ ಕೋರ್ಟ್‌ನಲ್ಲಿಯೇ ಅದಕ್ಕೆ ಮಾನ್ಯತೆ ಇಲ್ಲ ಎಂದು ತೀರ್ಪು ನೀಡಲಾಗಿದೆ ಎಂದರು. ಅದಕ್ಕೆ ಎಲ್ಲರ ಸಹಮತ ದೊರೆಯಿತು.

ನಂತರ ಪರ-ವಿರೋಧ ಅಭಿಪ್ರಾಯ ಆಲಿಸಿದ ವಾರ್ತಾಧಿಕಾರಿ ಮಂಜುನಾಥ್‌ರವರು ನಾವು ಸರಕಾರಿ ವ್ಯವಸ್ಥೆಯವರು, ನೀವು ಖಾಸಗಿ ವ್ಯವಸ್ಥೆಯವರು, ಆದರೂ ನಾವೆಲ್ಲಾ ಪತ್ರಕರ್ತರು ಒಗ್ಗಟ್ಟಿನಿಂದ ಸೌಹಾರ್ದಯುತೆಯಿಂದ ಇರಬೇಕು ಎಂಬುದೇ ನಮ್ಮದೂ ಅಭಿಪ್ರಾಯವಾಗಿದೆ. ಹಾಗಿದ್ದರೂ ಈ ಬಗ್ಗೆ ಅಂತಿಮ ತೀರ್ಮಾನವನ್ನು ಡಿ.ಸಿ.ಯವರೇ ತೆಗೆದುಕೊಳ್ಳಲಿದ್ದಾರೆ. ಇಲ್ಲಿ ಪಡೆದುಕೊಳ್ಳಲಾದ ಅಭಿಪ್ರಾಯಗಳನ್ನು ಜಿಲ್ಲಾಧಿಕಾರಿಯವರಿಗೆ ಕೂಡಲೇ ನೀಡಲಿದ್ದೇನೆ ಎಂದರು.

ಸಭೆಯ ಬಳಿಕ ಮಂಜುನಾಥ್‌ರವರು ವಾರ್ತಾಭವನವನ್ನು ವೀಕ್ಷಿಸಿ ಅದರ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ನೀವು ಪತ್ರಕರ್ತರು ಎಲ್ಲರೂ ಸೌಹಾರ್ದತೆಯಿಂದ ಒಂದೇ ಮನೆಯವರಂತೆ ಇರಬೇಕು ಎಂದು ಪದೇ ಪದೇ ಹೇಳಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಿ.ರವರು ಇದಕ್ಕೆ ಪೂರಕ ಎಂಬಂತೆ ವಾರ್ತಾಭವನದಲ್ಲಿ ಸಭೆಯ ಬಳಿಕ ಜರ್ನಲಿಸ್ಟ್ ಯೂನಿಯನ್, ಕರ್ನಾಟಕ ಪತ್ರಕರ್ತ ಸಂಘ ಮತ್ತು ಪುತ್ತೂರು ತಾಲೂಕು ಪತ್ರಕರ್ತರ ಸಂಘದವರನ್ನು ಒಟ್ಟು ಸೇರಿಸಿ ಮತ್ತೊಂದು ಅನೌಪಚಾರಿಕ ಸಭೆ ನಡೆಸಿ ವಾರ್ತಾ ಇಲಾಖೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ ಮೂರೂ ಪತ್ರಕರ್ತರ ಸಂಘದವರನ್ನು ಒಟ್ಟುಗೂಡಿಸಿ ಖಾಸಗಿ ಹೊಟೇಲ್‌ನಲ್ಲಿ ಔತಣ ಕೂಟ ಏರ್ಪಡಿಸಿದರು.

ಬಿಟಿ ರಂಜನ್ ಸಹಿತ ಕುತೂಹಲದಲ್ಲಿ ಇಣುಕುತ್ತಿದ್ದ ಪತ್ರಕರ್ತರು
ಪತ್ರಿಕಾ ಭವನದ ಕೊಠಡಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥರವರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್, ಕರ್ನಾಟಕ ಪತ್ರಕರ್ತರ ಸಂಘ ಮತ್ತು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳ ನಡುವೆ ಸಭೆ ನಡೆಸುತ್ತಿದ್ದ ಕೊಠಡಿಯ ಬಾಗಿಲ ಬಳಿ ಹಿರಿಯ ಪತ್ರಕರ್ತರಾದ ಸಂಘದ ಸ್ಥಾಪಕಾಧ್ಯಕ್ಷರಾದ, ಪತ್ರಿಕಾ ಭವನವನ್ನು ಸಂಘಕ್ಕೆ ಉಳಿಸಿಕೊಳ್ಳುತ್ತೇನೆ ಎಂದು ಸಂಘದ ಮಹಾಸಭೆಯಲ್ಲಿ ಹೇಳಿದ್ದ, ತನ್ನ ವರದಿಯಿಂದ ಭಾರತದ ಇಂಟಲಿಜೆನ್ಸ್ ಬ್ಯೂರೋ `ರಾ’ವನ್ನೇ ಬೆಚ್ಚಿಬೀಳಿಸಿದ್ದ, ಮಂಗಳೂರಿನ ಸಂಸದರಾಗಿದ್ದ ಸದಾನಂದ ಗೌಡ, ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್, ಧಾರ್ಮಿಕ ಮುಂದಾಳು ಪ್ರಸಾದ್ ಭಂಡಾರಿ, ಮತ್ತಿತರ ಗಣ್ಯರು ಗಂಭೀರ ವಿಷಯಗಳಲ್ಲಿ ಇವರ ಸಲಹೆ ಸೂಚನೆ ಪಡೆದೇ ಮುಂದಡಿಯಿಡುತ್ತಿದ್ದರು ಎನ್ನಲಾದ ಶ್ರೇಷ್ಠ ವ್ಯಕ್ತಿ, ಪ್ರಶಸ್ತಿ ವಿಜೇತ (ಬಿ.ಟಿ.ರಂಜನ್‌ರ ನಿಖರ ವೆಬ್‌ಸೈಟ್ ವರದಿ) ಬಿ.ಟಿ.ರಂಜನ್, ಸಂಶುದ್ದೀನ್ ಸಂಪ್ಯ, ಪ್ರವೀಣ್ ಕುಮಾರ್ ಬೊಳುವಾರು, ಅಜಿತ್ ಕುಮಾರ್ ಮುಂತಾದವರು ಕುತೂಹಲದಿಂದ ಇಣುಕಿ ನೋಡುತ್ತಿದ್ದರು. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಅನೀಶ್ ಕುಮಾರ್ ಮರೀಲ್ ಮತ್ತು ಕೋಶಾಧಿಕಾರಿ ಕೃಷ್ಣಪ್ರಸಾದ್ ಬಲ್ನಾಡುರವರು ಸಭೆಯಲ್ಲಿದ್ದವರಿಗೆ ಚಹಾ, ತಿಂಡಿ ನೀಡಲು ಸಹಕರಿಸಿದರು.

ಪತ್ರಕರ್ತರ ಸಂಘಕ್ಕೆ ಕೀರ್ತಿ ತಂದಿರುವ ಸುದ್ದಿಯವರು  ರಾಜೀನಾಮೆ ನೀಡಿರುವುದು ಬೇಸರವಾಗಿದೆ: ಸುದರ್ಶನ್
ಪತ್ರಕರ್ತರ ಸಂಘಕ್ಕೆ ಕೀರ್ತಿ ತಂದಿರುವ ಸುದ್ದಿ ಬಿಡುಗಡೆಯವರು ಪತ್ರಕರ್ತರ ಸಂಘಕ್ಕೆ ರಾಜೀನಾಮೆ ನೀಡಿರುವುದು ಬೇಸರವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸುದರ್ಶನ್ ಪುತ್ತೂರು ಹೇಳಿದ್ದಾರೆ. ವಾರ್ತಾಭವನಕ್ಕೆ ಆಗಮಿಸಿ ಸಭೆಯ ಆರಂಭದಿಂದಲೇ ಕುಳಿತಿದ್ದ ಸುದರ್ಶನ್‌ರವರು ವಾರ್ತಾ ಇಲಾಖಾಧಿಕಾರಿವರಿಗೆ ತನ್ನ ಅಭಿಪ್ರಾಯ ತಿಳಿಸಿದರು.

ಸುದ್ದಿ ಪತ್ರಿಕೆ ಪುತ್ತೂರಿನ ಸ್ಥಿತಿಗತಿಗಳನ್ನು ಹಾಗೂ ಸರ್ವತೋಮುಖ ಬೆಳವಣಿಗೆಯನ್ನು ವರದಿ ಮಾಡಿ ವಿಶ್ವಕ್ಕೆ ತಿಳಿಸುವ ಕೆಲಸ ಮಾಡಿದೆ. ಇಲ್ಲಿನ ಪತ್ರಕರ್ತರ ಸಂಘದಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂಬುದು ಬಹಳ ಬೇಸರದ ಸಂಗತಿಯಾಗಿದೆ. ಇಲ್ಲಿನ ಪತ್ರಿಕಾ ವರದಿಗಾರರ ಭಿನ್ನಾಭಿಪ್ರಾವನ್ನು ಸರಿ ಮಾಡಿಸಬೇಕು ಎಂಬ ಅಭಿಪ್ರಾಯ ನನ್ನಲ್ಲೂ ಇತ್ತು. ಈ ಸಮಸ್ಯೆಯನ್ನು ಸರಿಪಡಿಸುವಂತೆ ನಾನು ಖುದ್ದಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೆ ಎಂದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.