HomePage_Banner
HomePage_Banner

ನಗರಸಭೆ ಜಲಸಿರಿ ನಿವೇಶನಕ್ಕೆ ಪರಿಹಾರ ನಿಗದಿ ವೇಳೆ ಅವ್ಯವಹಾರ | ತನಿಖೆಗಾಗಿ ನಗರಸಭಾ ಸದಸ್ಯ ಭಾಮಿ ಅಶೋಕ್ ಶೆಣೈಯವರಿಂದ ಮುಖ್ಯಮಂತ್ರಿಗಳಿಗೆ ದೂರು

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪುತ್ತೂರು ನಗರಸಭೆ ಜಲಸಿರಿ ಯೋಜನೆಯಡಿಯಲ್ಲಿ ೩೦ಲಕ್ಷ ಲೀ.ಸಾಮರ್ಥ್ಯದ ನೆಲಮಟ್ಟದ ಜಲಸಂಗ್ರಹಕ್ಕಾಗಿ ಜಮೀನು ಕ್ರಯಕ್ಕೆ ಪಡೆಯುವ ವಿಚಾರದಲ್ಲಿ ಕರ್ಮಲ ಈಗಿರುವ ಹಳೆ ನೀರಿನ ಟ್ಯಾಂಕ್‌ಗೆ ತಾಗಿರುವ ಸಿಟಿಗುಡ್ಡೆಯಲ್ಲಿ ಸಂಪರ್ಕ ರಸ್ತೆ ಇಲ್ಲದ ಜಾಗವನ್ನು ಗುರುತಿಸಿ ನಿವೇಶನಕ್ಕೆ ರೂ. ೩ ಕೋಟಿ ದಾರಣೆ ಪರಿಹಾರವನ್ನು ನಿಗದಿ ಮಾಡುವ ವಿಚಾರದಲ್ಲಿ ಭಾರಿ ಅವ್ಯವಹಾರ ಆಗಿದೆ ಎಂದು ನಗರಸಭಾ ಸದಸ್ಯ ಭಾಮಿ ಅಶೋಕ್ ಶೆಣೈ ಅವರು ಪ್ರಕರಣದ ತನಿಖೆಗಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಸದ್ರಿ ಜಲಸಂಗ್ರಹಣಗಾರವನ್ನು ಈ ಹಿಂದೆ ನಗರಸಭೆ ವ್ಯಾಪ್ತಿಯ ತೆಂಕಿಲ ಪ್ರದೇಶದ ಸ.ನಂ.೧೬೬-೧ ಹಾಗೂ ಇತರ ಜಮೀನಿನಲ್ಲಿ ನಿರ್ಮಿಸಲು ನಿರ್ಧರಿಸಲಾಗಿತ್ತು. ೨೦೧೯ರಲ್ಲಿ ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಗುಡ್ಡ ಕುಸಿತ ಪ್ರಕರಣದ ಕಾರಣ ಸಿಟಿಗುಡ್ಡೆಯಲ್ಲಿ ಜಮೀನು ಖರೀದಿಗೆ ನಿರ್ಧರಿಸಲಾಗಿತ್ತು. ಆದರೆ ಈಗಿನ ಜಿಲ್ಲಾಧಿಕಾರಿಗಳು ಈ ಹಿಂದೆ ಪುತ್ತೂರ ಉಪವಿಭಾಗಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಮೀನಿನ ಮೌಲ್ಯ ಹೆಚ್ಚಾದ ಕಾರಣ ಬೇರೆ ಸ್ಥಳ ಹುಡುಕಲು ನಿರ್ದೇಶಿದ್ದರು. ಇದೀಗ ಜಿಲ್ಲಾಧಿಕಾರಿಯವರು ಮತ್ತೆ ಕಾಲು ದಾರಿಯೂ ಇಲ್ಲದಿರುವ ಈ ಹಿಂದೆ ರಿಜೆಕ್ಟ್ ಮಾಡಿದ ಸ್ಥಳವನ್ನೇ ಖರೀದಿಸಲು ಮುಂದಾಗಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈ ಕುರಿತು ಸಹಾಯಕ ಕಮಿಷನರ್‌ಗೆ ದೂರು ನೀಡಿ ವಿಷಯ ತಿಳಿಸಿದರೂ ಯಾವುದೇ ಹಿಂಬರಹವನ್ನು ನೀಡಲಾಗಿಲ್ಲ.

ಅಲ್ಲದೇ, ಎನ್‌ಐಟಿಕೆ ಸೂರತ್ಕಲ್‌ನಿಂದ ಯಾವುದೇ ತಾಂತ್ರಿಕ ಅಭಿಪ್ರಾಯವನ್ನು ಪಡೆದಿರುವುದಿಲ್ಲ. ನಗರಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಆಡಳಿತವಿದ್ದರೂ ಈ ಕುರಿತು ಪರಮರ್ಶೆಗೆ ಅವಕಾಶವಿದ್ದರೂ ಕೌನ್ಸಿಂಲ್ ಆಡಳಿತವು ಅಸ್ತಿತ್ವಕ್ಕೆ ಬರುವ ಮೊದಲೇ ಆತುರ ಆತುರವಾಗಿ ಆಡಳಿತಶಾಹಿಯೇ ನೇರವಾಗಿ ಹಣ ಪಾವತಿಸಿ ಜಮೀನಿನ ನೋಂದಣಿ ಪ್ರಕ್ರಿಯೆಯನ್ನು ನಡೆಸಲು ಅವಸರ ಮಾಡಿರುವುದು ಈ ಪ್ರಕರಣದಲ್ಲಿ ಸ್ಪಷ್ಟವಾಗಿ ತಿಳಿದು ಬರುತ್ತದೆ. ಅಲ್ಲದೇ, ಚುನಾಯಿತ ಜನಪ್ರತಿನಿಧಿಗಳಿಗೆ ಅಗೌರವ ಮಾಡಿದಂತಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಭೂ ಸ್ವಾಧೀನತಾ ಪ್ರಕ್ರಿಯೆಯ ಕುರಿತಂತೆ ನಡೆದಿದೆ ಎನ್ನಲಾದ ಅಕ್ರಮ ಮತ್ತು ಅವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ ಐಜಿಪಿಯವರಿಗೂ ಅರ್ಜಿದಾರರು ದೂರಿನ ಪ್ರತಿಯನ್ನು ರವಾನಿಸಿದ್ದಾರೆ. ಸ್ಥಳೀಯ ಶಾಸಕ ಸಂಜೀವ ಮಠಂದೂರು, ಸಂಸದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ನಗರಾಭಿವೃದ್ಧಿ ಸಚಿವ ಬಿ. ಬಸವರಾಜು ಅವರಿಗೂ ರವಾನಿಸಲಾಗಿದೆ. ಈ ಯೋಜನೆಯ ಕುರಿತಂತೆ ಅಧಿಕಾರಿಗಳಿಂದ ನಡೆದಿರುವ ತಪ್ಪುಗಳನ್ನು ತನಿಖೆ ಮಾಡಿದರೆ ಒಟ್ಟು ಸತ್ಯ ಬಹಿರಂಗವಾಗುತ್ತದೆ ಎಂದು ಭಾಮಿ ಅಶೋಕ್ ಶೆಣೈ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.