HomePage_Banner
HomePage_Banner
HomePage_Banner

ಪರಿಸರ ಸ್ನೇಹಿಯಾಗಲಿ “ಬೆಳಕಿನ ಹಬ್ಬ” ದೀಪಾವಳಿ… | ಸುರಕ್ಷಿತ ಹಸಿರು ಪಟಾಕಿಗೆ ಗ್ರೀನ್ ಸಿಗ್ನಲ್..!

Puttur_Advt_NewsUnder_1
Puttur_Advt_NewsUnder_1

@ಶರತ್ ಆಳ್ವ ಚನಿಲ

ಬೆಳಕಿನ ಹಬ್ಬ ದೀಪಾವಳಿ ಹತ್ತಿರ ಸಮೀಪಿಸುತ್ತಿದೆ. ದೀಪಗಳ ಸಾಲುಗಳಿಗಿರುವ ಮಹತ್ವದಷ್ಟೇ ಢಮ್ ಢಮ್ ಎನ್ನುವ ಪಟಾಕಿಗಿದೆ. ಪಟಾಕಿ ಮಾರುವ ಮಾಲಕರಿಗಂತು ಎಲ್ಲಿಲ್ಲದ ಸಂಭ್ರಮ. ರಸ್ತೆಯ ಬದಿಗಳಲ್ಲಿ, ಅಂಗಡಿಗಳಲ್ಲಿ ಪಟಾಕಿಗಳದ್ದೇ ಕಾರುಬಾರು.

ಮಕ್ಕಳಿಗಂತೂ ಸುರು ಸುರು ಕಡ್ಡಿ, ಗುದ್ದುವ ಕೇಪು, ದುರ್ಸು ಪಟಾಕಿಗಳೆಂದರೆ ಖುಷಿ. ದೊಡ್ಡವರಿಗೆ ದೊಡ್ಡ ಶಬ್ದದ ಪಟಾಕಿ ಸಿಡಿಸುವ ಕಾತುರತೆ. ಮನೆಯ ಮಹಿಳೆಯರಿಗಂತು ಇವೆಲ್ಲದರ ಢಮ್ ಢಮ್ ಶಬ್ದ ಕೇಳುವ ಭಯ. ಮಕ್ಕಳಿಗೆ ಪಟಾಕಿ ಹೊಡೆಯುವ ಸಂಭ್ರಮದ ಸಮಯ. ನರಕ ಚತುರ್ದಶಿಯ ಮುಂಜಾವಿನಿಂದ ಪ್ರಾರಂಭವಾಗುವ ಪಟಾಕಿ ಸಂಭ್ರಮದ ಸದ್ದು ತುಳಸಿ ಹಬ್ಬದ ತನಕ ಮುಂದುವರೆಯುತ್ತದೆ. ಪಟಾಕಿ ಸದ್ದಿಲ್ಲದ, ಬೆಳಕಿಲ್ಲದ ದೀಪಾವಳಿಯನ್ನು ಊಹಿಸುವುದೂ ಅಸಾಧ್ಯವಲ್ಲವೇ… ಪಟಾಕಿಯಿಂದ ಶಬ್ದಮಾಲಿನ್ಯ, ವಾಯುಮಾಲಿನ್ಯ, ಹಣಮಾಲಿನ್ಯ ಎಲ್ಲಾ ಆಗುವುದು ಹೌದು ಎಂದು ಪ್ರಜ್ಞಾವಂತ ಸಮಾಜ ಒಪ್ಪಿಕೊಳ್ಳುವುದಾದರೂ, ದೀಪಾವಳಿಯಂದು ಕೊನೇ ಪಕ್ಷ ಒಂದು ಸರಪಟಾಕಿಯನ್ನಾದರೂ ಢಮ್ ಅನಿಸದಿದ್ದರೆ, ದೀಪಾವಳಿ ಆಚರಣೆ ಅಪೂರ್ಣವಾಗುತ್ತದೆ ಎನ್ನುವವರೇ ಅಧಿಕ ಮಂದಿ. ಆದರೆ ಕೊರೊನಾ ಮಹಾಮಾರಿ ನಮ್ಮ ದೇಶವನ್ನು ವಕ್ಕರಿಸಿದ ಪರಿಣಾಮ ಮನುಷ್ಯನ ನೈಜ ಬದುಕಿನ ಮೇಲೆ ಬೀರಿರುವ ಕರಾಳ ನೆರಳು ಇದೀಗ ಬೆಳಕಿನ ಹಬ್ಬ ದೀಪಾವಳಿಗೂ ತಾಗಿದ್ದು, ಈ ವರ್ಷ ಹಬ್ಬದ ಸಂಭ್ರಮಕ್ಕೆ ಪಟಾಕಿ ಸಿಡಿಸುವ ಮೋಜನ್ನು ಕಸಿದಿದೆ.

ನಿಷೇಧದ ಜಾಡು ಹುಡುಕುತ್ತಾ…..
ಎರಡು ವರ್ಷದ ಹಿಂದೆ ಪಟಾಕಿ ನಿಷೇಧಿಸಬೇಕೆಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ವಿಚಾರಣೆ ನಡೆಸುತ್ತಿದ್ದ ನ್ಯಾಯಪೀಠ, ಪಟಾಕಿಗೂ ದೀಪಾವಳಿಗೂ ಅವಿನಾವಭಾವ ಸಂಬಂಧವಿದೆ. ನಿಷೇಧಗೊಳಿಸುವ ಬದಲು ಪಟಾಕಿಯಿಂದಾಗುವ ತೊಂದರೆಗಳು ಏನು ಎಂಬುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿ ಎಂದು ತೀರ್ಪು ನೀಡಿತ್ತು. ಇದೀಗ “ಪಟಾಕಿ” ಗೆ ಸುಪ್ರೀಂಕೋರ್ಟ್ ಕಡಿವಾಣ ಹಾಕಿದೆ. ಕಳೆದ ವರ್ಷ ಕೂಡ ಸುಪ್ರೀಂಕೋರ್ಟ್ ಪಟಾಕಿ ಮಾರಾಟಕ್ಕೆ ಕಡಿವಾಣ ಹಾಕಿತ್ತು. ಆದರೆ ಇದು ಅಕ್ಷರಶಃ ಪಾಲನೆಯಾಗಿರಲಿಲ್ಲ. ಹೀಗಾಗಿ ಕೋರ್ಟ್ ಈ ಬಾರಿ ಕಠಿಣ ನಿರ್ಬಂಧಗಳನ್ನು ವಿಧಿಸಿದೆ.ಈಗಾಗಲೇ ವಾಯುಮಾಲಿನ್ಯ ಮಿತಿ ಮೀರಿರುವುದರಿಂದ ವಾಯುಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ನಿಷೇಧಿಸಿದೆ. ದೇಶಾದ್ಯಂತ ಜಾತ್ರೆ, ಹಬ್ಬಗಳು, ಅದರಲ್ಲೂ ದೀಪಾವಳಿ ಹಬ್ಬದಂದು ಪಟಾಕಿ ಬಳಕೆ ಹೆಚ್ಚುತ್ತಿದೆ. ಇದರಿಂದ ವಾಯುಮಾಲಿನ್ಯ ಹೆಚ್ಚಾಗುವ ಅಪಾಯವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಆರೋಗ್ಯ ನಾಶಕ ಪಟಾಕಿ…..
ಪಟಾಕಿ ಅಬ್ಬರದಿಂದ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗುತ್ತದೆ; ಶಬ್ದ ಮಾಲಿನ್ಯ ಮತ್ತು ವಾಯುಮಾಲಿನ್ಯ ಹಬ್ಬದ ಸಂಭ್ರಮವನ್ನು ನುಂಗಿ ಹಾಕುತ್ತದೆ; ಗಂಧಕದ ಹೊಗೆಯಿಂದ ಅಸ್ತಮಾ ಪೀಡಿತರು, ಚಿಕ್ಕಮಕ್ಕಳು ಮತ್ತು ಹಿರಿಯ ನಾಗರಿಕರು ಕಷ್ಟ ಅನುಭವಿಸುತ್ತಾರೆ. ಯಾರೋ ಸಿಡಿಸಿದ ಕಿಡಿಗೆ ಇನ್ಯಾರೋ ಬಲಿಪಶುಗಳಾಗುತ್ತಾರೆ. ಶಾಲಾ ಮಕ್ಕಳು ಕಣ್ಣಿಗೆ ಬಿಳಿ ಬ್ಯಾಂಡೇಜ್ ಕಟ್ಟಿಕೊಂಡು ಆಸ್ಪತ್ರೆ ಹಾಸಿಗೆಗಳ ಮೇಲೆ ಸಾಲುಸಾಲಾಗಿ ಮಲಗಿರುವ ದೃಶ್ಯ ಕರುಣಾಜನಕವಾಗಿರುತ್ತದೆ. ಸುಡುಮದ್ದಿನ ಸದ್ದಿನ ಕಾರಣ ಸಾಕುಪ್ರಾಣಿಗಳೂ ಕಕ್ಕಾಬಿಕ್ಕಿಯಾಗಿರುತ್ತವೆ. ಮಾಲಿನ್ಯ ನಿಯಂತ್ರಣ ಮಂಡಳಿಗಳು ಹಲವು ನಿರ್ಬಂಧಗಳನ್ನು ಹೇರಿದರೂ ಅದು ಪಟಾಕಿ ಸದ್ದಿನಲ್ಲಿ ಉದುಗಿ ಹೋಗುತ್ತದೆ. ಪಟಾಕಿಯಲ್ಲಿ ಬೇರಿಯಂ ಹಾಗೂ ಲೀಥಿಯಂ ನೈಟ್ರೇಟ್ ಎಂಬ ಅತೀ ವಿಷಕಾರಿ ರಾಸಾಯನಿಕಗಳು ಭಾರಿ ಹೊಗೆಯನ್ನು ಉಂಟು ಮಾಡುತ್ತದೆ. ಪಟಾಕಿಯಲ್ಲಿ ಹೊರಸೂಸುವ ಹೊಗೆ ಶ್ವಾಸಕೋಶಕ್ಕೆ ಹೋದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಕೊರೋನಾ ವೈರಾಣು ಶ್ವಾಸಕೋಶ ಸಮಸ್ಯೆ ಹೊಂದಿದ್ದರಿಂದ ತೀವ್ರ ರೀತಿಯ ಸಮಸ್ಯೆ ಉಂಟು ಮಾಡುತ್ತದೆ.

ಏನಿದು ಹಸಿರು ಪಟಾಕಿ?
ಪ್ರಕೃತಿಗೆ ಹೆಚ್ಚು ಹಾನಿ ಮಾಡದ ಪಟಾಕಿಗಳು. ಕಡಿಮೆ ಹೊಗೆ ಹಾಗೂ ಶಬ್ದವಿರುವ ಪಟಾಕಿಗಳು. ವೈಜ್ಞಾನಿಕ ಮತ್ತು ಕೈಗಾರಿಕ ಸಂಶೋಧನ ಮಂಡಳಿ(ಸಿಎಸ್‌ಐಆರ್) ಮತ್ತು ಎನ್‌ಇಇಆರ್‌ಐ ಯ ವಿಜ್ಞಾನಿಗಳು ಅಭಿವೃದ್ದಿಪಡಿಸಿರುವ ಈ ಪಟಾಕಿಗಳಲ್ಲಿ ಲಿಥಿಯಂ, ನೈಟ್ರೇಟ್, ಆರ್ಸೆನಿಕ್, ಬೇರಿಯಂ ಮತ್ತು ಸತುವಿನಂಥ ಅಪಾಯಕಾರಿ ರಾಸಾಯನಿಕಗಳು ಇರುವುದಿಲ್ಲ. ಬದಲಾಗಿ ಅಲ್ಯೂಮಿನಿಯಂ ಮತ್ತು ಥರ್ಮೈಟ್ ರಾಸಾಯನಿಕಗಳನ್ನು ಹಸಿರು ಪಟಾಕಿ ತಯಾರಿಕೆಯಲ್ಲಿ ಬಳಸಲಾಗಿದೆ. ಇದರ ಪರಿಣಾಮವಾಗಿ ಪಾರಂಪರಿಕ ಪಟಾಕಿಗಿಂತ ಶೇ.೩೦ರಷ್ಟು ಹೊಗೆಯನ್ನು ಮಾತ್ರ ಹಸಿರು ಪಟಾಕಿಗಳು ಹೊರಸೂಸುತ್ತದೆ. ಇವುಗಳಿಂದ ಜೀವಸಂಕುಲ ಮತ್ತು ಪರಿಸರದ ಮೇಲಿನ ದೃಷ್ಟಕೋನದಿಂದ ಅಪಾಯಕಾರಿ ಪಟಾಕಿಯನ್ನು ನಿಷೇಧಿಸಿ ಸುರಕ್ಷಿತ ಹಸಿರು ಪಟಾಕಿಯನ್ನು ಬಳಕೆ ಮಾಡಬೇಕು.

ಹಸಿರು ಪಟಾಕಿಯಿಂದ ಮಾಲಿನ್ಯ ಕಡಿಮೆ..?
ಹಸಿರು ಪಟಾಕಿಗಳು ಸ್ಪೋಟಗೊಂಡಾಗ ಹೆಚ್ಚು ಹೊಗೆ ಬಿಡುಗಡೆ ಮಾಡುವ ಬದಲು ನೀರಿನ ಆವಿಯನ್ನು ಬಿಡುಗಡೆ ಮಾಡುತ್ತದೆ. ಈ ಆವಿಯು ಧೂಳು ಮೇಲೇಳದಂತೆ ತಡೆಯುತ್ತದೆ. ಅಲ್ಲದೇ ಇವು ಸಾಮಾನ್ಯ ಪಟಾಕಿಗಳಿಗಿಂತ ಶೇ.೩೦ಕ್ಕೂ ಕಡಿಮೆ ಮಾಲಿನ್ಯಕಾರಕಗಳನ್ನು ಹೊರಸೂಸುತ್ತವೆ. ಸಾಮಾನ್ಯ ಪಟಾಕಿಗಳಿಗಿಂತ ಕಡಿಮೆ ಸದ್ದು ಹೊರಡಿಸುತ್ತದೆ.

ಹಸಿರು ಪಟಾಕಿ ಗುರುತಿಸುವುದು ಹೇಗೆ?
ಪಟಾಕಿ ಮೇಲೆ ನಮೂದಿಸಿದ ಲೋಗೋ ಮತ್ತು ಕ್ಯೂ ಆರ್ ಕೋಡ್ ಮೂಲಕ ಹಸಿರು ಪಟಾಕಿಗಳನ್ನು ಗುರುತಿಸಬಹುದು. ಪಾರಂಪರಿಕ ಪಟಾಕಿಯಲ್ಲಿ ಕ್ಯೂ ಆರ್ ಕೋಡ್ ಇಲ್ಲ. ಹಸಿರು ಪಟಾಕಿಗಳಲ್ಲಿ ಮಕ್ಕಳ ಕ್ಯಾಪ್ ಪಟಾಕಿ, ಸುರುಸುರು ಕಡ್ಡಿ, ಹಾಗೂ ನೆಲಚಕ್ರ ಮೊದಲಾದವುಗಳು ಇವೆ. ಪಟಾಕಿಯ ಬಾಕ್ಸ್‌ನಲ್ಲಿ ಅಧಿಕೃತ ಮುದ್ರೆ ಇರುತ್ತದೆ.

ಪರಿಸರಕ್ಕೆ ಮಾರಕವಾದ ಎಲ್ಲವನ್ನು ನಿಷೇಧ ಮಾಡಲಿ. ಪರಿಸರ ಹಸಿರು ಪಟಾಕಿಯು ಬಳಕೆಗೆ ತರುವಂತಾಗಲಿ. ಪರಿಸರ ಉಳಿಸುವ ಕಾರ್ಯಕ್ಕೆ ಎಲ್ಲರದ್ದು ಬೆಂಬಲವಿದೆ. ಆದರೆ ನಿಷೇಧದ ವಸ್ತುಗಳನ್ನೇ ನಂಬಿ ಕಾಯಕ ಮಾಡಿ ಬದುಕುವ ಅದೆಷ್ಟೋ ಸಂಸಾರಗಳಿವೆ ಅವರಿಗೆ ಪರ್‍ಯಾಯ ವ್ಯವಸ್ಥೆ ಮಾಡಿದಾಗ ಜೀವನವೂ ಸಾಗುತ್ತದೆ, ಪರಿಸರವೂ ಉಳಿಯುತ್ತದೆಯಲ್ಲವೇ ಎನ್ನುತ್ತಾರೆ ಪಟಾಕಿ ಮಾರಾಟಗಾರರು. ದೀಪಾವಳಿಯನ್ನು ಪರಿಸರ ಸ್ನೇಹಿಯಾಗಿ, ಸಾಂಪ್ರದಾಯಿಕವಾಗಿ ಆಚರಿಸುವ ಮೂಲಕ ಹಬ್ಬದ ಮಹತ್ವ ಹೆಚ್ಚಿಸೋಣ. ಈ ಮೂಲಕ ಸಂಸ್ಕೃತಿ ಕಾಪಾಡುವುದರೊಂದಿಗೆ ಸುಂದರ ಪ್ರಕೃತಿಯ ಉಳಿವು, ನಮ್ಮ ಹಿರಿಯರ ಆರೋಗ್ಯ ವೃದ್ದಿಗೂ ಕಾರಣರಾಗೋಣ.

ಪಟಾಕಿ ಸಿಡಿಸುವುದು ಹಾಗೂ ಅದರಿಂದ ಹೊರಸೂಸುವ ಹೊಗೆಯೂ ಜನರ ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರಲಿದೆ. ವಿಶೇಷವಾಗಿ ಕೊರೊನಾ ಪೀಡಿತರು ಹಾಗೂ ಅದರಿಂದ ಗುಣಮುಖರಾದವರ ಆರೋಗ್ಯದ ಮೇಲೆ ಪಟಾಕಿಯಿಂದ ತೀವ್ರ ಅಡ್ಡ ಪರಿಣಾಮ ಬೀರಲಿರುವ ಕಾರಣದಿಂದ ಮತ್ತು ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಪಟಾಕಿಯನ್ನು ನಿಷೇಧ ಮಾಡಿದೆ. ಆದರೆ ಹಸಿರು ಪಟಾಕಿಯನ್ನು ಬಳಕೆ ಮಾಡುವಂತೆ ಸೂಚಿಸಲಾಗಿದೆ. ಸರಕಾರದ ಆದೇಶದಂತೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಯತೀಶ್ ಉಳ್ಳಾಲ್, ಸಹಾಯಕ ಆಯುಕ್ತರು, ಪುತ್ತೂರು ಉಪವಿಭಾಗ

ಪಟಾಕಿಯಿಂದ ವಾತಾವರಣದಲ್ಲಿ ಆಗುವ ಮಾಲಿನ್ಯ ಮತ್ತು ಹಣದ ದುಂದು, ಅಪಾಯವನ್ನುಪರಿಗಣಿಸಿದರೆ ಪಟಾಕಿ ನಿಷೇಧ ಎಲ್ಲ ರೀತಿಯಲ್ಲೂ ಸರಿ ಎಂದೆನಿಸುತ್ತದೆ. ಇದು ಕೇವಲ ಕಾನೂನಿನ ಪ್ರಶ್ನೆಯಲ್ಲ; ಜನರ ಮನೋಭಾವ ಕೂಡ ಬದಲಾಗಬೇಕು. ಸಾವು, ನೋವು, ಗೆಲುವು- ಎಲ್ಲದಕ್ಕೂ ಪಟಾಕಿ ಸಿಡಿಸುವ ಅಭ್ಯಾಸಗಳನ್ನು ಬಿಡಬೇಕು. ಹಬ್ಬವನ್ನು ಮುದದಿಂದ ಆಚರಿಸಲು ಹತ್ತಾರು ದಾರಿಗಳಿವೆ. ಪಟಾಕಿ ಹೊರತಾದ ಹಬ್ಬಗಳು ಹತ್ತಾರು ಇವೆ. ಹೀಗಾಗಿ ಇದೇನು ಅನಿವಾರ್ಯವಲ್ಲ. ಬೆಳಕಿನ ಹಬ್ಬ ಜೀವಕೋಟಿಗೆ ಸಂತಸವನ್ನು ತರಬೇಕು. ಈ ಸಲ ಹಸಿರು ಪಟಾಕಿ ಬಳಸೋಣ. ಪರಿಸರ ಪ್ರಿಯ ಹಬ್ಬ ಆಚರಿಸೋಣ. ಪುತ್ತೂರು ಸ್ಥಳಿಯ ನಾಗರಿಕರು

  • ಹಸಿರು ಪಟಾಕಿಯ ಬಳಕೆ…
  • ಹೆಚ್ಚು ಸುರಕ್ಷಿತ
  • ಮಾಲಿನ್ಯಕಾರಕವಲ್ಲ
  • ತಜ್ಞರ ವರದಿ
  • ಆರೋಗ್ಯದ ಹಿತದೃಷ್ಟಿ
  • ಪರಿಸರ ಸ್ನೇಹಿ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.