ಪುತ್ತೂರು: ಕಹಳೆ ನ್ಯೂಸ್ ವರದಿಗಾರ ನಿಶಾಂತ್ ಬನ್ನೂರು ಎಂಬವರಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ ವಿ ೪ ನ್ಯೂಸ್ ಚಾನೆಲ್ ವರದಿಗಾರ ಎಂದು ಹೇಳಿಕೊಳ್ಳುತ್ತಿರುವ ಅನೀಶ್ ಕುಮಾರ್ ಮರೀಲ್ ಎಂಬಾತನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ನಿಶಾಂತ್ ಬನ್ನೂರುರವರು ಆಡಿಯೋ ದಾಖಲೆ ಸಹಿತ ದೂರು ನೀಡಿದ್ದು `ಕಹಳೆ ನ್ಯೂಸ್ ವಾಹಿನಿಯಲ್ಲಿ ಎರಡು ವರ್ಷಗಳಿಂದ ವರದಿಗಾರನಾಗಿzನೆ. ನವೆಂಬರ್ ೧೧ರಂದು ಭಾರತ್ ಆಂಬುಲೆನ್ಸ್ ಮಾಲಕ ಸಿರಾಜ್ ಎಂಬವರು ನನ್ನ ಬಳಿ ಬಂದಿದ್ದರು. ವೆಬ್ ಸೈಟೊಂದರಲ್ಲಿ ಸುಳ್ಳು ವರದಿ ಪ್ರಕಟ ಆಗಿರುವ ಬಗ್ಗೆ ಅವರು ನನ್ನಲ್ಲಿ ತಿಳಿಸಿದ್ದರು.ಆ ವರದಿ ನೋಡಿದಾಗ ಅದರಲ್ಲಿದ್ದ ಸುದರ್ಶನ್ ಎಂಬವರನ್ನು ವಿಚಾರಿಸಿದಾಗ ತಾನು ಭಾರತ್ ಆಂಬುಲೆನ್ಸ್ ಬಗ್ಗೆ ಯಾವುದೇ ದೂರು ನೀಡಿಲ್ಲ ಎಂದು ತಿಳಿಸಿದ್ದರು.ಬಳಿಕ ಖಾಸಗಿ ವಾಹಿನಿ ವರದಿಗಾರ ಅನೀಶ್ ಎಂಬಾತನು ರಾತ್ರಿ ಸುಮಾರು 11 ಗಂಟೆಯ ವೇಳೆಗೆ ನನ್ನ ಮೊಬೈಲ್ ಫೋನ್ಗೆ ಕರೆ ಮಾಡಿ ನಾನು ಮಾಡಿದ ವರದಿಯ ಬಗ್ಗೆ ಕೇಳಲು ನೀನ್ಯಾರು ಎಂದು ಹೇಳಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿದ್ದಾನೆ.ಇದರಿಂದಾಗಿ ನನಗೆ ವರದಿ ಮಾಡಲು ಹೋಗಲು ಭಯವಾಗುತ್ತಿದ್ದು ನನಗೆ ರಕ್ಷಣೆ ನೀಡಬೇಕು ಮತ್ತು ಅನೀಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ದೂರು ನೀಡುವ ವೇಳೆ ಕಹಳೆ ನ್ಯೂಸ್ ಎಂ.ಡಿ. ಶ್ಯಾಮ್ ಸುದರ್ಶನ ಭಟ್ ಉಪಸ್ಥಿತರಿದ್ದರು.
ಕಾನೂನು ಕ್ರಮಕ್ಕೆ ಜರ್ನಲಿಸ್ಟ್ ಯೂನಿಯನ್ ಆಗ್ರಹ
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿಯ ಉಪಾಧ್ಯಕ್ಷರೂ ಆಗಿರುವ ಕಹಳೆ ನ್ಯೂಸ್ ವರದಿಗಾರ ನಿಶಾಂತ್ ಬನ್ನೂರುರವರಿಗೆ ಬೆದರಿಕೆ ಒಡ್ಡಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಅನೀಶ್ ಕುಮಾರ್ ಮರೀಲ್ ಎಂಬಾತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿ ಒತ್ತಾಯಿಸಿದೆ.
ಬೆದರಿಕೆ ಕರೆಯ ವಾಯ್ಸ್ ರೆಕಾರ್ಡ್..
ತನ್ನೊಂದಿಗೆ ಕಾರ್ಯ ನಿರ್ವಹಿಸುವ ಇತರ ಮಾಧ್ಯಮದವರ ಮೇಲೆ ದ್ವೇಷ ಹೊಂದಿರುವ ಇಂತಹ ಬ್ಲಾಕ್ ಮೇಲ್ ಪತ್ರಕರ್ತರು ಪತ್ರಿಕಾ ಭವನವನ್ನು ದುರುಪಯೋಗ ಪಡಿಸಿಕೊಂಡು ಇತರ ಪತ್ರಿಕಾ ಮಾಧ್ಯಮದವರ ಮೇಲೆ ಸುಳ್ಳು ಕೇಸ್ ದಾಖಲಿಸುವುದು, ಸುಳ್ಳು ಸಾಕ್ಷಿ ಹಾಕುವುದು, ಅಪಪ್ರಚಾರ ನಡೆಸುವುದು, ಬ್ಲಾಕ್ ಮೇಲ್ ಮಾಡುವ ಜಾಯಮಾನ ಹೊಂದಿದ್ದಾರೆ. ಇದೀಗ ನಿಶಾಂತ್ ಗೆ ಬೆದರಿಕೆ ಒಡ್ಡಲಾಗಿದೆ. ಇಂತಹ ಘಟನೆಗಳಿಂದ ಪತ್ರಿಕಾ ಮಾಧ್ಯಮದ ವರದಿಗಾರರಿಗೆ ಭಯದಿಂದ ಕಾರ್ಯ ನಿರ್ವಹಿಸುವಂತಾಗಿದೆ. ಆದ್ದರಿಂದ ಸೂಕ್ತ ರಕ್ಷಣೆ ನೀಡಬೇಕು ಎಂದು ಸಮಿತಿ ಒತ್ತಾಯಿಸಿದೆ.