HomePage_Banner
HomePage_Banner

ರೋಟರಿ ಪುತ್ತೂರು, ಡಾ.ನಝೀರ್ಸ್ ಡಯಾಬಿಟಿಸ್ ಸೆಂಟರ್‌ನಿಂದ ವಿಶ್ವ ಮಧುಮೇಹ ದಿನಾಚರಣೆ, ಮಕ್ಕಳ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಡಯಾಬಿಟಿಸ್ ಬಗ್ಗೆ ಜನರಲ್ಲಿ ಜಾಗೃತಿ, ತಿಳುವಳಿಕೆ ಮೂಡಿಸುವುದು ಈ ದಿನಾಚರಣೆಯ ಉದ್ಧೇಶ. ಡಯಾಬಿಟಿಸ್ ಒಂದು ಜೀವನ ಶೈಲಿ ಆಧಾರಿತ ರೋಗವಾಗಿದ್ದು, ರೋಗದ ಬಗ್ಗೆ ಸಂಪೂರ್ಣವಾಗಿ ವೈಜ್ಞಾನಿಕವಾದ ಮಾಹಿತಿಯನ್ನು ಅರಿತಿರುವುದರಿಂದ ಮಾತ್ರ ಮಧುಮೇಹ ರೋಗವನ್ನು ನಿಯಂತ್ರಿಸಲು ಅಥವಾ ಬಾರದಂತೆ ತಡೆಗಟ್ಟಲು ಸಾಧ್ಯ ಎಂದು ಡಾ.ನಝೀರ್ ಅಹಮ್ಮದ್ ಡಯಾಬಿಟಿಸ್ ಸೆಂಟರ್‌ನ ವೈದ್ಯ ಡಾ.ನಝೀರ್ ಅಹಮ್ಮದ್‌ರವರು ಹೇಳಿದರು.

ರೋಟರಿ ಕ್ಲಬ್ ಪುತ್ತೂರು, ಡಾ.ನಝೀರ್ ಅಹಮ್ಮದ್ ಡಯಾಬಿಟಿಸ್ ಸೆಂಟರ್ ಹಾಗೂ ಇಡಿಆರ್‌ಟಿ ಬೆಂಗಳೂರು ಇದರ ಆಶ್ರಯದಲ್ಲಿ ನ.೧೪ ರಂದು ರೋಟರಿ ಟ್ರಸ್ಟ್ ಹಾಲ್‌ನಲ್ಲಿ ಜರಗಿದ ವಿಶ್ವ ಮಧುಮೇಹ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆ ಪ್ರಯುಕ್ತ ಡಯಾಬಿಟಿಕ್ ಚಿಲ್ಡ್ರನ್ಸ್ ಕೇರ್ ಸೆಂಟರ್‌ನ `ಪ್ರಾಜೆಕ್ಟ್ ಸ್ವೀಟ್ ಚೈಲ್ಡ್’ ಮತ್ತು `ಡಯಾ ಟಾಕ್’ ಯೂಟ್ಯೂಬ್ ವಿಡಿಯೋ ಸರಣಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಧುಮೇಹದ ಕುರಿತಾಗಿ ಮಾತನಾಡಿದರು. ಸಕ್ಕರೆ ಕಾಯಿಲೆ ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ವಯೋಮಾನದವರನ್ನು ಕಾಡುತ್ತಿದೆ. ಅದರಲ್ಲೂ ಸುಮಾರು ೫%-೧೦% ಟೈಪ್ ೧ ಡಯಾಬಿಟಿಸ್ ಆಗಿರುತ್ತದೆ. ಸಾಧಾರಣವಾಗಿ ಗುಣಪಡಿಸಲು ಅಸಾಧ್ಯವಾದ ಇದು ನವಜಾತ ಶಿಶುವಿನಿಂದ ಹಿಡಿದು ಸುಮಾರು ೨೦ ವರ್ಷ ಪ್ರಾಯದವರಲ್ಲಿ ಕಂಡುಬರುತ್ತದೆ ಎಂದ ಅವರು ಈ ಮಧುಮೇಹಕ್ಕೆ ತುತ್ತಾದ ಮಕ್ಕಳು ತಮ್ಮ ಜೀವನಪರ್ಯಂತ ಇನ್ಸುಲಿನ್ ಇಂಜೆಕ್ಷನ್ ದಿನಕ್ಕೆ ೪ ರಿಂದ ೫ ಬಾರಿ ತೆಗೆದುಕೊಳ್ಳುವುದು ಮಾತ್ರವಲ್ಲದೆ ಪ್ರತಿದಿನ ೨ ರಿಂದ ೩ ಸಲ ತಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಗ್ಲುಕೋಮೀಟರ್‌ನಿಂದ ಸ್ವತ: ನೋಡಿಕೊಳ್ಳಬೇಕಾಗುತ್ತದೆ. ಇದಕ್ಕೆ ತಿಂಗಳಿಗೆ ಸುಮಾರು ೫ರಿಂದ ೧೦ ಸಾವಿರದವರೆಗೆ ವೆಚ್ಚವಾಗುವುದಲ್ಲದೆ, ಆಗಿಂದಾಗೆ ಸಕ್ಕರೆಯ ಏರಿಳಿತದಿಂದಾಗಿ ಉಂಟಾಗುವ ಇತರ ಸಮಸ್ಯೆಗಳು ಕುಟುಂಬದ ಮೇಲಿನ ಆರ್ಥಿಕ ಹೊರೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದರು. ಇದನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸದಿದ್ದರೆ ಇದು ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ, ಶೈಕ್ಷಣಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಅವರಲ್ಲಿ ಆತ್ಮವಿಶ್ವಾಸದ ಕೊರತೆ ಮೂಡಿಸುತ್ತದೆ. ಅಲ್ಲದೆ ದೇಹದಲ್ಲಿನ ಅನಿಯಂತ್ರಿತ ಸಕ್ಕರೆಯ ಅಂಶ ಭವಿಷ್ಯದಲ್ಲಿ ವಿವಿಧ ಅಂಗಾಂಗ ವೈಫಲ್ಯಗಳಿಗೆ ಕಾರಣವಾಗಬಹುದು ಎಂದು ಅವರು ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿ, ೧೯೯೧ರಿಂದ ಪ್ರತಿ ವರ್ಷ ನವೆಂಬರ್ ೧೪ರಂದು ವಿಶ್ವ ಮಧುಮೇಹ ದಿನ ಎಂದು ಆಚರಿಸಲಾಗುತ್ತಿದೆ. ಈ ದಿನ `ಇನ್ಸುಲಿನ್’ ಸಂಶೋಧನೆಯಲ್ಲಿ ಪ್ರಧಾನ ಪಾತ್ರ ವಹಿಸಿದ ಸರ್ ಫ್ರೆಡ್‌ರಿಕ್ ಬ್ಯಾಂಟಿಂಗ್ ಅವರ ಜನ್ಮದಿನವೂ ಹೌದು. ರೋಟರಿ ಸಂಸ್ಥೆಯು ಪಲ್ಸ್ ಪೊಲೀಯೋ ನಿರ್ಮೂಲನೆಯಂತಹ ಮಹತ್ತರ ಕಾರ್ಯಗಳಿಗೆ ಈಗಾಗಲೇ ನಾಂದಿ ಹಾಡಿರುತ್ತಾರೆ ಅಲ್ಲದೆ ಪುತ್ತೂರಿನಲ್ಲಿ ಜನರಿಗೆ ಉಪಯುಕ್ತವಾದಂತಹ ಬ್ಲಡ್‌ಬ್ಯಾಂಕ್‌ನ್ನು ಸಾರ್ವಜನಿಕರಿಗೆ ಕೊಡುಗೆಯಾಗಿ ನೀಡಿರುವುದು ಕೂಡ ರೋಟರಿಯ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜರವರು ಸ್ವಾಗತಿಸಿ, ಮಾತನಾಡಿ, ಕೆಲವು ದಿನಗಳ ಹಿಂದೆ ವೈದ್ಯರಾದ ಡಾ.ನಝೀರ್ ಅಹಮ್ಮದ್‌ರವರು ಮಕ್ಕಳ ದಿನಾಚರಣೆಯ ಪ್ರಯುಕ್ತ ವಿಶ್ವ ಮಧುಮೇಹ ದಿನಾಚರಣೆಯನ್ನು ಆಚರಿಸಿದರೇನು ಎಂದು ಹೇಳಿದ್ದಕ್ಕೆ ನಾವುಗಳು ಕೂಡಲೇ ಸ್ಪಂದಿಸಿ ಇಂದು ಯಶಸ್ವಿಯಾಗಿ ಕಾರ್ಯಕ್ರಮವನ್ನು ಆಚರಿಸಿರುವುದು ಹೆಮ್ಮೆ ತಂದಿದೆ. ಸಣ್ಣ ಪ್ರಾಯದಿಂದಲೇ ಮಧುಮೇಹದಿಂದ ಬಳಲುತ್ತಿರುವ ಅನೇಕ ಮಕ್ಕಳು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಭಾವಾನಾತ್ಮಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವುದು ಬೇಸರದ ಸಂಗತಿಯಾಗಿದೆ.ಅದಕ್ಕಾಗಿ ಡಯಾಬಿಟಿಕ್ ಚಿಲ್ಡ್ರನ್ಸ್ ಕೇರ್ ಸೆಂಟರ್‌ನ `ಪ್ರಾಜೆಕ್ಟ್ ಸ್ವೀಟ್ ಚೈಲ್ಡ್’ ಎಂಬ ಯೋಜನೆಯನ್ನು ಶಾಶ್ವತ ಪ್ರಾಜೆಕ್ಟ್ ಆಗಿ ಸಮಾಜಕ್ಕೆ ಅರ್ಪಿಸಲಿದ್ದೇವೆ. ಮಕ್ಕಳನ್ನು, ಪಾಲಕರನ್ನು ಮತ್ತು ಸಮಾಜವನ್ನು ಜಾಗೃತಿಗೊಳಿಸುವುದು ಈ ಪ್ರಾಜೆಕ್ಟ್‌ನ ಉದ್ಧೇಶವಾಗಿದೆ ಎಂದರು.

ದ್ವಿತೀಯ ವರ್ಷದ ಎಂಬಿಬಿಎಸ್ ಓದುತ್ತಿರುವ ವಿಷ್ಣು ಕೀರ್ತಿರವರು ಡಯಾ ಟಾಕ್ ವಿಡಿಯೋ ಸರಣಿಗಳನ್ನು ಎಡಿಟಿಂಗ್ ಮಾಡಿದ್ದು, ಈ ಸಂದರ್ಭದಲ್ಲಿ ಅವರು ತನ್ನ ಅನುಭವವನ್ನು ಸಭೆಯ ಮುಂದಿಟ್ಟರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಭುಜಂಗ ಆಚಾರ್ಯ ಉಪಸ್ಥಿತರಿದ್ದರು. ಕ್ಲಬ್ ಸದಸ್ಯ ದಾಮೋದರ್ ಪ್ರಾರ್ಥಿಸಿದರು. ಮಾಜಿ ಅಧ್ಯಕ್ಷ ವಾಮನ್ ಪೈ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಕ್ಲಬ್ ಕಾರ್ಯದರ್ಶಿ ಪ್ರೊ|ದತ್ತಾತ್ರೇಯ ರಾವ್ ವಂದಿಸಿದರು.

`ಪ್ರಾಜೆಕ್ಟ್ ಸ್ವೀಟ್ ಚೈಲ್ಡ್’…`ಡಯಾ ಟಾಕ್’ ವಿಡಿಯೋ ಸರಣಿ ಬಿಡುಗಡೆ…
ಮಧುಮೇಹಿ ಮಕ್ಕಳಿಗೆ ನೆರವಾಗಲು ಪ್ರಾಜೆಕ್ಟ್ ಸ್ವೀಟ್ ಚೈಲ್ಡ್(ರೋಟರಿ ಪುತ್ತೂರು ಡಯಾಬಿಟಿಕ್ ಚಿಲ್ಡ್ರನ್ ಕೇರ್ ಸೆಂಟರ್) ಎಂಬ ಯೋಜನೆಯನ್ನು ರೋಟರಿ ಕ್ಲಬ್ ಪುತ್ತೂರು ವತಿಯಿಂದ ಡಾ|ನಝೀರ್ ಡಯಾಬಿಟಿಕ್ ಸೆಂಟರ್ ಮತ್ತು ಇಡಿಆರ್‌ಟಿ ಬೆಂಗಳೂರು ಇವರ ಸಹಯೋಗದೊಂದಿಗೆ ರೂಪುಗೊಳಿಸಲಾಗಿದ್ದು, ಈ ಯೋಜನೆಯು ಮಕ್ಕಳಿಗೆ ವೈದ್ಯಕೀಯ ನೆರವು, ಅವಶ್ಯಕ ವೈದ್ಯಕೀಯ ಉಪಕರಣಗಳು, ಔಷಧ ವಿತರಿಸುವ ಮತ್ತು ಅವಶ್ಯಕತೆ ಇರುವವರಿಗೆ ಶಿಕ್ಷಣಕ್ಕೆ ಆರ್ಥಿಕ ನೆರವನ್ನು ಒದಗಿಸುವ ಉದ್ದೇಶಗಳನ್ನು ಹೊಂದಿದೆ. ಟೈಪ್ ೧ ಡಯಾಬಿಟೀಸ್ ರೋಗ ಮತ್ತು ಅದರ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿ ಮಕ್ಕಳು ಮತ್ತು ಪೋಷಕರ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶದಿಂದ `ಡಾ. ನಝೀರ್ಸ್ ಡಯಾಬಿಟೀಸ್ ಸೆಂಟರ್ ಯೂಟ್ಯೂಬ್ ಚಾನಲ್‌ನಲ್ಲಿ ಮೂಡಿಬರಲಿರುವ `ಡಯಾ ಟಾಕ್’ ವಿಡಿಯೋ ಸರಣಿಯ ಬಿಡುಗಡೆಯನ್ನು ಮಧುಮೇಹ ಹೊಂದಿದ ಸಣ್ಣ ಪ್ರಾಯದ ಸಮದ್‌ರವರು ನೆರವೇರಿಸಿರುವುದು ವಿಶೇಷವಾಗಿದೆ.

ಡಯಾ ಟಾಕ್ ವಿಡಿಯೋ ಕಾರ್ಯಕ್ರಮವನ್ನು drnazeer?s diabetes centre https://www.youtube.com/channel/UCSiOA1_Ehd7vI8_k2SSU6vA ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದಾಗಿದೆ. 

ಕಾರ್ಯಕ್ರಮದ ವಿಶೇಷತೆಗಳು…
-ಮಕ್ಕಳ ದಿನಾಚರಣೆಯ ಪ್ರಯುಕ್ತ ವಿಶೇಷ ಅಗತ್ಯವುಳ್ಳ ಮತ್ತು ಸಣ್ಣ ಪ್ರಾಯದಿಂದಲೇ ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಮಕ್ಕಳ ದಿನಾಚರಣೆಗೆ ವಿಶೇಷ ಮಹತ್ವ ನೀಡಲಾಯಿತು.

-ಸುಳ್ಯ, ಬೆಳ್ತಂಗಡಿ ಮತ್ತು ಪುತ್ತೂರು ತಾಲೂಕಿನಲ್ಲಿರುವ ಮಧುಮೇಹಿ ಮಕ್ಕಳನ್ನು ಸಾರ್ವಜನಿಕರು ಗುರುತಿಸಿ ರೋಟರಿ ಕ್ಲಬ್ ಪುತ್ತೂರು ಸಂಸ್ಥೆಗೆ ತಿಳಿಸಿದರೆ ಅಂತಹ ಮಕ್ಕಳಿಗೆ ವಿಶೇಷ ನೆರವು ನೀಡಲು ಇಚ್ಛಿಸಲಾಗಿದೆ.

-ಕಾರ್ಯಕ್ರಮದಲ್ಲಿ ಹಾಜರಾದ ಏಳು ಮಂದಿ ಮಧುಮೇಹಿ ಮಕ್ಕಳ ಆಧಾರ್ ಕಾರ್ಡ್, ಎರಡು ಭಾವಚಿತ್ರ, ಆದಾಯ ಪ್ರಮಾಣ ಪತ್ರದೊಂದಿಗೆ ರಿಜಿಸ್ಟ್ರೇಶನ್ ಫಾರ್ಮ್‌ನ್ನು ಭರ್ತಿಗೊಳಿಸಲಾಯಿತು.

-ಡಯಾಬಿಟಿಸ್ ರೋಗಿಗಳು ತಮ್ಮ ನಿಯಮಿತ ವೈದ್ಯಕೀಯ ಪರೀಕ್ಷೆಗೆ ಬಾರದೆ, ಔಷಧಗಳನ್ನು ಸರಿಯಾಗಿ ಸೇವಿಸದೆ ರಕ್ತದ ಸಕ್ಕರೆಯಂಶದಲ್ಲಿ ವಿಪರೀತ ಏರಿಳಿತಗಳಾಗಿ ತೊಂದರೆ ಅನುಭವಿಸುವವರು ಆನ್‌ಲೈನ್ ಕನ್ಸಲ್ಟೇಶನ್ ಸೌಲಭ್ಯದಿಂದ ಆಡಿಯೋ ಮತ್ತು ವಿಡಿಯೋಗಳ ಮೂಲಕ ವೈದ್ಯರನ್ನು ಸುಲಭವಾಗಿ ಸಂದರ್ಶಿಸಿ ಶುಗರ್, ಬಿಪಿ ಮತ್ತು ಸಾಮಾನ್ಯ ರೋಗಲಕ್ಷಣಗಳಿಗೆ ಸುರಕ್ಷಿತವಾಗಿ ಮನೆಯಿಂದಲ್ಲೇ ಚಿಕಿತ್ಸೆ ಪಡೆಯಬಹುದಾಗಿದೆ.

-ರಕ್ತದಲ್ಲಿನ ಸಕ್ಕರೆಯಂಶವನ್ನು ಅಳೆಯುವ ಗ್ಲುಕೋಮೀಟರ್ ಮತ್ತು ರಕ್ತದೊತ್ತಡ ಅಳೆಯಲು ಡಿಜಿಟಲ್ ಬಿಪಿ ಉಪಕರಣಗಳನ್ನು ಉಪಯೋಗಿಸುವುದು ಸೂಕ್ತ. ಅಲ್ಲದೆ ಅತ್ಯಾಧುನಿಕ ಇನ್ಸುಲಿನ್ ಡೆಲಿವರಿ ಸಲಕರಣೆಗಳು, ಇನ್ಸುಲಿನ್ ಪಂಪ್, ಅಉಒS-ಅಂದರೆ ಒಂದು ಸಣ್ಣ ಚಿಪ್‌ನ್ನು ತಮ್ಮ ತೋಳಿಗೆ ಅಳವಡಿಸಿಕೊಂಡು ಪ್ರತಿ ೧೫ ನಿಮಿಷಕ್ಕೊಮ್ಮೆ ರಕ್ತದಲ್ಲಿನ ಸಕ್ಕರೆಯಂಶವನ್ನು ಅಳೆದು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ನೋಡಬಹುದಾದ ಆಧುನಿಕ ಸರಳ ವಿಧನಗಳ ಬಗ್ಗೆಯೂ ಪ್ರತಿಯೊಬ್ಬರೂ ಅರಿತುಕೊಳ್ಳುವುದು ಉತ್ತಮ.

-ಶೀಘ್ರವೇ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ಬಹುಮುಖ್ಯ ಪ್ರಾಜೆಕ್ಟ್ ಎನಿಸಿದ ಮೂರು ಮೆಶಿನ್‌ವುಳ್ಳ ಡಯಾಲಿಸಿಸ್ ಘಟಕವನ್ನು ಲೋಕಾರ್ಪಣೆಗೊಳಿಸಲಾಗುವುದು.

-ಕಾರ್ಯಕ್ರಮದ ಅಂಗವಾಗಿ ವಿಶ್ವ ಮಧುಮೇಹ ದಿನಾಚರಣೆ ಲೋಗೋವುಳ್ಳ ಬಿಳಿ ಟೀ-ಶರ್ಟ್ ಹಾಗೂ ಕ್ಯಾಪ್‌ನ್ನು ಆಗಮಿಸಿದವರಿಗೆ ಹಂಚಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.