- ಮಧುಮೇಹ ಸಂಕೀರ್ಣತೆಗಳ ಬಗ್ಗೆ ತಿಳುವಳಿಕೆ ಅಗತ್ಯ-ಡಾ.ನಝೀರ್ ಅಹಮ್ಮದ್
ಪುತ್ತೂರು: ಪ್ರತಿಯೊಬ್ಬ ನಾಗರಿಕರೂ ಮಧುಮೇಹದಂತಹ ಸಾಮಾನ್ಯ ರೋಗದ ಬಗ್ಗೆ ಸಂಪೂರ್ಣ ವೈಜ್ಞಾನಿಕ ತಿಳುವಳಿಕೆಯನ್ನು ಪಡೆಯುವುದರಿಂದ ತಮ್ಮ ಕುಟುಂಬದಲ್ಲಿ ಮತ್ತು ನೆರೆಕರೆಯಲ್ಲಿರುವ ರೋಗಿಗಳನ್ನು ಸೂಕ್ತ ರೀತಿಯಲ್ಲಿ ಆರೈಕೆ ಮಾಡಿ ಡಯಾಬಿಟಿಸ್ನಿಂದ ಆಗಬಹುದಾದ ಸಂಕೀರ್ಣತೆಗಳನ್ನು ತಡೆಗಟ್ಟಬಹುದು ಎಂದು ವೈದ್ಯರು ಮತ್ತು ಮಧುಮೇಹ ತಜ್ಞರು, ಡಾ.ನಝೀರ್ಸ್ ಡಯಾಬಿಟಿಕ್ ಸೆಂಟರ್ನ ಡಾ.ನಝೀರ್ ಅಹಮ್ಮದ್ರವರು ಹೇಳಿದರು.
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಎಲೈಟ್, ಚೇತನಾ ಆಸ್ಪತ್ರೆ, ಪುತ್ತೂರು ಡಯಾಗ್ನಾಸ್ಟಿಕ್ ಲ್ಯಾಬೋರೇಟರಿ ಮತ್ತು ಮೈಕ್ರೋಲ್ಯಾಬ್ ಸಹಯೋಗದಲ್ಲಿ ಕೆಎಸ್ಆರ್ಟಿಸಿ ಪುತ್ತೂರು ಸಹಕಾರದಲ್ಲಿ ವಿಶ್ವ ಮಧುಮೇಹ ದಿನದ ಪ್ರಯುಕ್ತ ನ.೧೪ ರಂದು ಬೆಳಿಗ್ಗೆ ಕೆಎಸ್ಅರ್ಟಿಸಿ ಬಸ್ಸ್ಟ್ಯಾಂಡ್ನಲ್ಲಿ ಜರಗಿದ ಉಚಿತ ಮಧುಮೇಹ ತಪಾಸಣಾ ಶಿಬಿರಲ್ಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮುಂದಿನ ಐದು ಅಥವಾ ಹತ್ತು ವರ್ಷಗಳಲ್ಲಿ ತಮಗೂ ಮಧುಮೇಹ ರೋಗ ಬಾಧಿಸಬಹುದು ಎಂಬ ಸಾಮಾನ್ಯ ತಿಳುವಳಿಕೆ ಇರುವುದು ಅಗತ್ಯ. ಬಿಪಿ, ಶುಗರ್ ನಮ್ಮ ದೇಹಕ್ಕೆ ಯಾವಾಗ ಬೇಕಾದರೂ ಬಾಧಿಸಬಹುದು. ಒಂದು ವೇಳೆ ಮಧುಮೇಹ ಅಂಟಿಕೊಂಡರೂ ಅದನ್ನು ತಡೆಗಟ್ಟಲು ಆಗದಿದ್ದರೆ ನಾವು ಮೂರ್ಖರು. ತಾನು ಮಧುಮೇಹವನ್ನು ನಿಯಂತ್ರಣದಲ್ಲಿಡಬಲ್ಲೆ ಎಂದಾಗ ಇಂತಹ ಕಾರ್ಯಕ್ರಮಗಳಿಗೆ ನಿಜವಾದ ಅರ್ಥ ಬರುವುದು ಎಂದರು.
ಕೆಎಸ್ಆರ್ಟಿಸಿ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ ಜಯಕರ್ ಶೆಟ್ಟಿ ಮಾತನಾಡಿ, ಮಧುಮೇಹ ಎನ್ನುವುದು ಶ್ರೀಮಂತರ ಕಾಯಿಲೆ ಎಂದು ಹೇಳುತ್ತಾರೆ. ಆದರೆ ಮಧುಮೇಹ ಕಾಯಿಲೆಯು ಸಣ್ಣ ಮಕ್ಕಳಲ್ಲಿ, ಸಾಮಾನ್ಯ ಜನರಲ್ಲಿಯೂ ಕಂಡು ಬರಲಾರಂಭಿಸಿದೆ.ಮಧುಮೇಹ ಕಾಯಿಲೆಯು ವಂಶಪಾರಂಪರೆಯಾಗಿ ಬರಬಹುದು ಅಥವಾ ಸಡನ್ನಾಗಿ ಬರಬಹುದು. ಮುಂದಿನ ಜನಾಂಗ ಹೇಗಿರಬೇಕು, ಅವರನ್ನು ರೋಗಗ್ರಸ್ತರನ್ನಾಗಿ ಮಾಡಬಾರದು ಎಂದಾದರೆ ನಾವು ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ಅತಿಯಾದರೆ ಅಮೃತವೂ ವಿಷವೆಂಬಂತೆ ಎಲ್ಲವನ್ನೂ ಮಿತಿಯಾಗಿ ಸೇವಿಸುವ ಗುಣ ನಮ್ಮದಾಗಲಿ. ನಿರಂತರ ವ್ಯಾಯಾಮ, ಯೋಗಾಸನ, ನಡಿಗೆಯನ್ನು ಆಭ್ಯಸಿಸುತ್ತಾ ಮತ್ತು ನಮ್ಮ ಜೀವನಶೈಲಿಯಲ್ಲಿ ಮಾರ್ಪಾಡು ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ನಮ್ಮದಾಗಿಸುವಲ್ಲಿ ಶ್ರಮಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ವೆಂಕಟ್ರಾಜ್ರವರು ಮಾತನಾಡಿ, ಪ್ರತೀ ವರ್ಷ ಇಲ್ಲಿನ ಕೆಎಸ್ಆರ್ಟಿಸಿ ಬಸ್ಸು ನಿಲ್ದಾಣದಲ್ಲಿ ಮಧುಮೇಹದ ಕುರಿತಂತೆ ಶಿಬಿರವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಮಧುಮೇಹದ ಕುರಿತು ಸಾರ್ವಜನಿಕರಲ್ಲಿ ಅಗತ್ಯ ಮಾಹಿತಿ ಇರಬೇಕಾದ್ದು ಕರ್ತವ್ಯವಾಗಿದೆ ಮತ್ತು ಇಂತಹ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ ಎಂದರು.
ಕೆಎಸ್ಆರ್ಟಿಸಿ ಪುತ್ತೂರು ವಿಭಾಗದ ಹಿರಿಯ ಘಟಕ ವ್ಯವಸ್ಥಾಪಕ ರವೀಂದ್ರ ಕೆ.ಎಂ, ಕಾರ್ಯಕ್ರಮದ ಕೋ-ಆರ್ಡಿನೇಟರ್ ರೋಟರಿ ಸೆಂಟ್ರಲ್ನ ಅಶ್ರಫ್ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೋಟರಿ ಎಲೈಟ್ ನಿಯೋಜಿತ ಅಧ್ಯಕ್ಷ ಮನ್ಸೂರ್ ಸ್ವಾಗತಿಸಿ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷೆ ಸೆನೋರಿಟ ಆನಂದ್ ವಂದಿಸಿದರು. ರೋಟರಿ ಎಲೈಟ್ನ ಆಸ್ಕರ್ ಆನಂದ್, ರೋಟರಿ ಸೆಂಟ್ರಲ್ನ ಸ್ಥಾಪಕ ಅಧ್ಯಕ್ಷ ಸಂತೋಷ್ ಶೆಟ್ಟಿ, ನಿಯೋಜಿತ ಅಧ್ಯಕ್ಷ ನವೀನ್ಚಂದ್ರ ನಾಕ್, ಸದಸ್ಯರಾದ ಚಂದ್ರಹಾಸ ರೈ, ಸನತ್ ಕುಮಾರ್ ರೈ, ಪುರುಷೋತ್ತಮ ಶೆಟ್ಟಿ, ಲಾವಣ್ಯ ನಾಯ್ಕ್, ಹಫೀಜ್, ಅಜ್ಮಲ್, ರೋಟರಿ ಎಲೈಟ್ನ ಮೌನೇಶ್ ವಿಶ್ವಕರ್ಮರವರು ಸಹಕರಿಸಿದರು. ರೋಟರಿ ಸೆಂಟ್ರಲ್ ಮಾಜಿ ಕಾರ್ಯದರ್ಶಿ ರಫೀಕ್ ರೋಯಲ್ ಕಾರ್ಯಕ್ರಮ ನಿರೂಪಿಸಿದರು.
268 ಮಂದಿ ತಪಾಸಣೆ, ೪೪ ಮಂದಿಗೆ ಮಧುಮೇಹ…
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ತಪಾಸಣಾ ಶಿಬಿರದಲ್ಲಿ ೨೬೮ ಮಂದಿ ತಪಾಸಣೆಗೊಳಗಾಗಿದ್ದು, ಈ ಪೈಕಿ ೪೪ ಮಂದಿಗೆ ಮಧುಮೇಹ ರೋಗವಿರುವುದು ಪತ್ತೆಯಾಗಿದೆ. ಮಧುಮೇಹ ಪರೀಕ್ಷಕರಾಗಿ ಪುತ್ತೂರು ಡಯಾಗ್ನಾಸ್ಟಿಕ್ ಲ್ಯಾಬೋರೇಟರಿಯ ನೋಯಲ್ ಡಿ’ಸೋಜರವರ ನೇತೃತ್ವದಲ್ಲಿ ಸುದೇಶ್ ಹಾಗೂ ಕಾವ್ಯಾರವರು ಸಹಕರಿಸಿದ್ದಾರೆ.