HomePage_Banner
HomePage_Banner
HomePage_Banner

ಇನ್ಮುಂದೆ ಪೊಲೀಸ್, ಆರೋಗ್ಯ, ಅಗ್ನಿಶಾಮಕದಳದ ತುರ್ತು ಸೇವಾ ಕರೆ ಸಂಖ್ಯೆ `112′ | ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಕಾರ್ಯಾರಂಭ- ಎಸ್ಪಿ

Puttur_Advt_NewsUnder_1
Puttur_Advt_NewsUnder_1

– ಇಬ್ರಾಹಿಂ ಖಲೀಲ್ ಪುತ್ತೂರು

 
ಪುತ್ತೂರು: ಕೇಂದ್ರ ಸರಕಾರ `ಒಂದೇ ಭಾರತ ಒಂದೇ ತುರ್ತು ಕರೆ’ ಸಂಖ್ಯೆ 112 ಅನ್ನು ಜಾರಿಗೆ ತಂದಿದೆ. ಈ ಹಿಂದೆ ತುರ್ತು ಸಮಯದಲ್ಲಿ ಪೊಲೀಸ್ ಇಲಾಖೆ (100), ಅಗ್ನಿಶಾಮಕ (101), ಅಂಬುಲೆನ್ಸ್ (108), ಮಹಿಳೆ ಮತ್ತು ಮಕ್ಕಳ ರಕ್ಷಣೆ (181), ನೈಸರ್ಗಿಕ ವಿಪತ್ತು ನಿರ್ವಹಣಾ ಸೇವಾ ತಂಡ ಸಹಿತ ಬೇರೆ ಬೇರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕಾಗಿತ್ತು. ಇದರಿಂದ ಸಾರ್ವಜನಿಕರು ಸಹ ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದರು. ಈ ಗೊಂದಲಕ್ಕೀಗ ಕೇಂದ್ರ ಸರಕಾರ ಪರಿಹಾರ ಕಂಡುಕೊಳ್ಳುವಲ್ಲಿ ಶ್ರಮಿಸಿದೆ. ಇದೀಗ ಎಲ್ಲಾ ಇಲಾಖೆಗಳಿಗೆ ಒಂದೇ ತುರ್ತು ಕರೆ ಸಂಖ್ಯೆ 112 ಆಗಿ ಬದಲಾಯಿಸಲಾಗಿದೆ. ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ 112 ತುರ್ತು ಸೇವಾ ಕರೆ ವ್ಯವಸ್ಥೆ ಕಾರ್ಯಪ್ರವೃತ್ತವಾಗಿದೆ. ದ.ಕ ಜಿಲ್ಲೆಯಲ್ಲೂ ಸಹ ನ.14ರಿಂದ ತುರ್ತು ಸ್ಪಂದನಾ ವ್ಯವಸ್ಥೆ ಪ್ರಾಯೋಗಿಕವಾಗಿ ಕಾರ್ಯಾರಂಭಿಸಿದ್ದು, ಈಗಾಗಲೇ ಹಲವು ಕರೆ ಬರುತ್ತಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಬೆಂಕಿ ಅವಘಡ, ಅನಾರೋಗ್ಯ, ನೀರಿಗೆ ಬಿದ್ದಿರುವುದು, ಕಾನೂನು ಸುವ್ಯವಸ್ಥೆ, ಗಲಭೆ, ನೆರೆ- ಪ್ರವಾಹ ಸಂದರ್ಭ, ಮಹಿಳಾ, ಮಕ್ಕಳ, ಹಿರಿಯ ನಾಗರಿಕರ ರಕ್ಷಣೆ ಹಾಗೂ ಇನ್ನಿತರ ಯಾವುದೇ ತುರ್ತು ಸಮಸ್ಯೆಗಳಿದ್ದರೂ ಸಾರ್ವಜನಿಕರು 112 ನಂಬರ್‌ಗೆ ಡಯಲ್ ಮಾಡಬಹುದಾಗಿದೆ. ಹಿಂದೆ ಪೊಲೀಸ್, ಅಗ್ನಿಶಾಮಕ, ಆಂಬುಲೆನ್ಸ್‌ಗೆ ಪ್ರತ್ಯೇಕ ನಂಬರ್‌ಗಳಿದ್ದು ಈಗ ಎಲ್ಲವೂ ಒಂದೇ ನಂಬರ್‌ನಡಿಯಲ್ಲಿ ಸೇವೆಗೆ ಬರಲಿದೆ.

ಸೆಂಟ್ರಲೈಝ್ ಸಿಸ್ಟಮ್
112ಗೆ ಕರೆ ಮಾಡಿದಾಗ ನೇರವಾಗಿ ಬೆಂಗಳೂರಿನಲ್ಲಿರುವ ಪೊಲೀಸ್ ಮಹಾನಿರ್ದೇಶಕರ ಕಛೇರಿಯಲ್ಲಿರುವ Public Safety Answering Point (PSAP) ಕಂಟ್ರೋಲ್ ರೂಮ್‌ಗೆ ಸಂದೇಶ ರವಾನೆಯಾಗುತ್ತದೆ. ಕಛೇರಿಯಿಂದ ಪರಿಣತ, ತರಬೇತಿ ಪಡೆದ ಕಾಲ್‌ಸೆಂಟರ್ ಸಿಬ್ಬಂದಿ ಕರೆಯ ಮಾಹಿತಿಯನ್ನು ಕಲೆ ಹಾಕಿ, ಅಲ್ಲಿಂದ ಜಿಲ್ಲಾ ಕಮಾಂಡ್ ಕೇಂದ್ರದ ಸಹಾಯದಿಂದ ಸಂತ್ರಸ್ತರ ಲೊಕೇಷನ್ ಟ್ರ್ಯಾಪ್ ಮಾಡಿ ಮ್ಯಾಪ್ ಸಂಗ್ರಹಿಸಲಾಗುತ್ತದೆ. ಕರೆ ಮಾಡಿದ ವ್ಯಕ್ತಿ ಹೇಳಿದ ಸಮಸ್ಯೆಯ ಸಂಪೂರ್ಣ ಮಾಹಿತಿ ಪಡೆದ ಬಳಿಕ ಸಂಬಂಧಪಟ್ಟ ಕಂಟ್ರೋಲ್ ರೂಂ, ಪೊಲೀಸ್, ಅಂಬುಲೆನ್ಸ್, ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ರವಾನಿಸಲಾಗುತ್ತದೆ. ಹೀಗೆ ಸಂತ್ರಸ್ತರಿಗೆ ತಕ್ಷಣ ನೆರವು ಒದಗಿಸುವ ಕಾರ್ಯವಾಗಲಿದೆ.

ಎಸ್ಪಿ ವ್ಯಾಪ್ತಿ- 10 ವಾಹನ ಸೇವೆಗೆ
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ 10 ಪೊಲೀಸ್ ವಾಹನಗಳನ್ನು ಇದಕ್ಕಾಗಿ ನಿಯೋಜಿಸಲಾಗಿದ್ದು, ಈ ವಾಹನಗಳಲ್ಲಿ ಅತ್ಯಾಧುನಿಕ ವ್ಯವಸ್ಥೆಯ ಟ್ಯಾಬ್ ಅಳವಡಿಕೆ ಮಾಡಲಾಗುತ್ತದೆ. ವೋಲಾ, ಉಬರ್ ಮಾದರಿಯಲ್ಲೇ ಕಂಟ್ರೋಲ್ ರೂಂನಿಂದ 112ನಲ್ಲಿ ಬಂದ ದೂರಿನ ಸಂದೇಶ, ರೂಟ್ ಮ್ಯಾಪ್ ಸಂಬಂಧಪಟ್ಟ ಎಲ್ಲಾ ಮಾಹಿತಿ ಲೊಕೇಷನ್‌ಗೆ ಹತ್ತಿರುವಿರುವ ವಾಹನಕ್ಕೆ ರವಾನೆಯಾಗಿ, ತಕ್ಷಣವೇ ಸಿಬ್ಬಂದಿಗಳು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ತುರ್ತು ಕರೆಗೆ ಸೀಮಿತ
112 ಕರೆಯ ದೂರಿಗೆ ಸ್ಪಂದಿಸಲು ನಿಗದಿಪಡಿಸಿದ ವಾಹನವನ್ನು ಬೇರೆ ಯಾವುದಕ್ಕೂ ಬಳಕೆ ಮಾಡುವಂತಿಲ್ಲ. ಈ ವಾಹನಗಳು ಯಾವಾಗಲೂ ಹೈ-ಅಲರ್ಟ್ ಸ್ಥಿತಿಯಲ್ಲಿತ್ತವೆ. ಬಂಟ್ವಾಳ ಸಬ್- ಡಿವಿಷನ್ (ಬಂಟ್ವಾಳ, ವಿಟ್ಲ, ಬೆಳ್ತಂಗಡಿ) 5 ವಾಹನ ಹಾಗೂ ಪುತ್ತೂರು ಸಬ್- ಡಿವಿಷನ್ (ಪುತ್ತೂರು, ಸುಳ್ಯ, ಕಡಬ) 5 ವಾಹನ ನಿಯೋಜಿಸಲಾಗಿದೆ.

ನೀವೂ ಹೀಗೂ ಮಾಡಬಹುದು
ತುರ್ತು ಸೇವೆಗೆ 112 ಸಂಖ್ಯೆಗೆ ಡಯಲ್ ಮಾಡಬಹುದು, ಅದು ಸಾಧ್ಯವಾಗದಿದ್ದರೆ ಪ್ಯಾನಿಕ್ ಅಲರ್ಟ್‌ಗಾಗಿ ಸಾಮಾನ್ಯ ಫೋನಿನಲ್ಲಿ 5 ಅಥವಾ 9 ಸಂಖ್ಯೆಯನ್ನು ದೀಘವಾಗಿ ಒತ್ತಬೇಕು. ಸ್ಮಾರ್ಟ್ ಫೋನ್‌ಗಳಾಗಿದ್ದರೆ ಪವರ್ ಬಟನ್‌ನ್ನು 3 ಬಾರಿ ವೇಗವಾಗಿ ಪ್ರೆಸ್ ಮಾಡಬೇಕು.Emergency Response Support System (ERSS) ವೆಬ್‌ಸೈಟ್ ಮೂಲಕ ಕೂಡ ವಿನಂತಿ ಕಳುಹಿಸಬಹುದು. Emergency Report Centre (ERC)ಗೆ ಈ-ಮೇಲ್ ಕಳುಹಿಸುವ ವ್ಯವಸ್ಥೆಯಿರುತ್ತದೆ. ಇಲ್ಲವಾದ್ದಲ್ಲಿ `112 India’ ಮೊಬೈಲ್ ಆಪ್ ಮೂಲಕ ವಿನಂತಿ ಕಳುಹಿಸಬಹುದು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಕರೆ ಮಾಡಿದ ಕೇವಲ 10 ನಿಮಿಷದೊಳಗೆ ಸೇವಾ ಸ್ಪಂದನಾ ಕಾರ್ಯ ಒದಗಲಿದೆ.

ಅಟೋಮೆಟಿಕ್ ಕನೆಕ್ಟ್
ಹಿಂದಿದಿದ್ದ ತುರ್ತು ಸಂಖ್ಯೆಗಳಾದ 100, 101, 108, 119 ನ್ನು ಸಂಪರ್ಕಿಸಿದಾಗ ನೇರವಾಗಿ 112 ಕ್ಕೆ ಅಟೋಮೆಟಿಕ್ ಆಗಿ ಕರೆ ಹೋಗುತ್ತದೆ. ಅಲ್ಲಿಂದ ವಿನಂತಿ ಅನುಸಾರ ಬೇರೆ ಇಲಾಖೆಗೆ ಕರೆಯ ಮಾಹಿತಿ ತಿಳಿಸಲಾಗುತ್ತದೆ.

ನೂತನವಾಗಿ ಆರಂಭಗೊಂಡ ತುರ್ತು ಸ್ಪಂದನಾ ವ್ಯವಸ್ಥೆ `112 ಇಂಡಿಯಾ’ ಮೊಬೈಲ್ ಆಪ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪ್ ಸ್ಟೋರ್ ಗಳಲ್ಲಿ ಲಭ್ಯವಿದೆ. ಇನ್‌ಸ್ಟಾಲ್ ಮಾಡಿದ ನಂತರ ನಿಮ್ಮ ರಾಜ್ಯ ಆಯ್ಕೆ ಮಾಡಿ ಮೊಬೈಲ್ ಸಂಖ್ಯೆ ನೋಂದಾವಣಿಗೊಳಿಸಬೇಕು. ಈ ಸಾಫ್ಟ್‌ವೇರ್‌ನ್ನು ಸಿ-ಡಿಎಸಿ ಸಿದ್ಧಪಡಿಸಿದ್ದು, ಯಾವುದೇ ತಾಂತ್ರಿಕ ದೋಷ, ಮಾಹಿತಿ ಸೋರಿಕೆಯಂತಹ ತೊಂದರೆವಿರುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಪೊಲೀಸ್, ಆರೋಗ್ಯ, ಅಗ್ನಿಶಾಮಕ ಸೇರಿದಂತೆ ಇನ್ನಿತರ ಯಾವುದೇ ತುರ್ತು ಸೇವೆಗಳಿಗಾಗಿ ದೇಶಕ್ಕೊಂದೇ ನಂಬರ್ `112′ ಜಾರಿಗೆ ಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವಿನೂತನ ತುರ್ತು ಸೇವಾ ಸ್ಪಂದನಾ ವ್ಯವಸ್ಥೆ ಪ್ರಾಯೋಗಿಕವಾಗಿ ಆರಂಭಗೊಂಡಿವೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿವೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.