HomePage_Banner
HomePage_Banner
HomePage_Banner

ಖಾಲಿ ಜಾಗದಲ್ಲಿ ಅಡಿಕೆ ಕೃಷಿ, ಸುವರ್ಣ ಮಹೋತ್ಸವದ ಸವಿನೆನಪು | ತೆಗ್ಗು ಸರಕಾರಿ ಶಾಲಾ ಆವರಣದೊಳಗೆ ನಳನಳಿಸುತ್ತೆ ಅಡಿಕೆ ಗಿಡಗಳು

Puttur_Advt_NewsUnder_1
Puttur_Advt_NewsUnder_1

@ ಸಿಶೇ ಕಜೆಮಾರ್


ಪುತ್ತೂರು: ಮನಸ್ಸಿದ್ದರೆ ಮಾರ್ಗವಿದೆ ಎನ್ನುವುದಕ್ಕೆ ಇಲ್ಲೊಂದು ಸಾಕ್ಷಿ ಸಿಗುತ್ತದೆ. ಕೆಯ್ಯೂರು ಗ್ರಾಮದ ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದೊಳಗಿನ ಖಾಲಿ ಜಾಗವನ್ನು ಕೃಷಿಗೆ ಬಳಸಿಕೊಳ್ಳಲಾಗಿದೆ.ಅಡಿಕೆ ಮತ್ತು ಬಾಳೆ ಕೃಷಿ ಮಾಡುವ ಮೂಲಕ ಬರಡು ಭೂಮಿಗೆ ಜೀವ ಕಳೆ ನೀಡಲಾಗಿದೆ. ಶಾಲಾ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸುವರ್ಣ ಮಹೋತ್ಸವ ಸಮಿತಿ, ಶಾಲಾಭಿವೃದ್ಧಿ ಸಮಿತಿ ಮತ್ತು ಊರವರ ಸಹಕಾರ, ಸಲಹೆ ಪಡೆದುಕೊಂಡು ಶಾಲಾ ಖಾಲಿ ಜಾಗದಲ್ಲಿ ಅಡಿಕೆ ಕೃಷಿ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಶಾಲೆಗೊಂದು ಆದಾಯ ಬರುವಂತೆ ಮಾಡಲಾಗಿದೆ.

1 ಎಕರೆಯಲ್ಲಿ ಅಡಿಕೆ ಕೃಷಿ
ಶಾಲೆಗೆ ಸುಮಾರು ೨.೩೪ ಸೆಂಟ್ಸ್ ಜಾಗವಿದ್ದು ಇದರಲ್ಲಿ 1 ಎಕರೆ ಜಾಗದಲ್ಲಿ ಅಡಿಕೆ ಕೃಷಿ ಮಾಡಲಾಗಿದೆ. ಸುಮಾರು ೪೦೦ ಅಡಿಕೆ ಗಿಡಗಳನ್ನು ಹಾಕಲಾಗಿದೆ. ಗಿಡಗಳಿಗೆ ಎರಡು ವರ್ಷ ತುಂಬಿದ್ದು ಎಲ್ಲಾ ಗಿಡಗಳು ಬಹಳ ಸೊಂಪಾಗಿ ಬೆಳೆದಿವೆ. ಈಗಾಗಲೇ ಕೆಲವು ಗಿಡಗಳು ಹಿಂಗಾರ ಬಿಟ್ಟಿದ್ದು ಇನ್ನೆರಡು ವರ್ಷಗಳಲ್ಲಿ ಫಸಲು ಬರುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಸುವರ್ಣ ಮಹೋತ್ಸವದ ಸವಿ ನೆನಪಲ್ಲಿ ನೆಟ್ಟ ಅಡಿಕೆ ಗಿಡಗಳು ಬರಡು ಭೂಮಿಗೆ ಹೊಸ ಚೈತನ್ಯ ನೀಡುವ ಜೊತೆಗೆ ಶಾಲೆಗೊಂದು ಆದಾಯ ಮಾಡಿಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಉದ್ಯೋಗ ಖಾತರಿ ಯೋಜನೆ ಬಳಕೆ
ಶಾಲಾ ಸುವರ್ಣ ಮಹೋತ್ಸವ ಸಮಿತಿ (ತೆಗ್ಗು ತೇರು)ಯ ಅಧ್ಯಕ್ಷರಾಗಿದ್ದವರು ಕೆಯ್ಯೂರು ಗ್ರಾಪಂ ಮಾಜಿ ಸದಸ್ಯ ಅಬ್ದುಲ್ ಖಾದರ್ ಮೇರ್ಲರವರು. ಕನಸಲ್ಲೂ ತೆಗ್ಗು ಶಾಲೆ ಎಂದೇ ಕನವರಿಸುತ್ತಿದ್ದ ಇವರು ಸುವರ್ಣ ಮಹೋತ್ಸವದ ನೆನಪು ಶಾಶ್ವತವಾಗಿ ಉಳಿಯಬೇಕು ಎಂಬ ಚಿಂತನೆಯೊಂದಿಗೆ ಸಮಿತಿಯವರ ಮತ್ತು ಊರವರ ಸಹಕಾರ ಪಡೆದುಕೊಂಡು ಅಡಿಕೆ ಕೃಷಿಗೆ ಮುಂದಡಿ ಇಟ್ಟಿದ್ದರು. ಪಂಚಾಯತ್‌ನ ಉದ್ಯೋಗ ಖಾತರಿ ಯೋಜನೆಯ ಮೂಲಕ ಅಡಿಕೆ ಗುಂಡಿಗಳನ್ನು ತೆಗೆಸಿದರು, ಇದಲ್ಲದೆ ತನ್ನ ಮನೆಯಲ್ಲೇ ನಾಟಿ ಮಾಡಿದ್ದ ಸುಮಂಗಳ ಅಡಿಕೆ ಸಸಿಗಳಲ್ಲಿ ೪೦೦ ಸಸಿಗಳನ್ನು ಶಾಲೆಗೆ ಉಚಿತವಾಗಿ ನೀಡಿದ್ದಾರೆ. ಸಸಿಗಳನ್ನು ನೋಡಿಕೊಳ್ಳಲು ನೀರು, ಗೊಬ್ಬರ ಹಾಕಲು ಸ್ಥಳೀಯ ಬಾಬು ಎಂಬವರನ್ನು ನೇಮಕ ಮಾಡಲಾಗಿದೆ. ಈಗಾಗಲೇ ಸ್ಥಳೀಯ ದಾನಿಗಳಾದ ಮೋಹನ್ ರೈ ಓಲೆಮುಂಡೋವುರವರು ಗೊಬ್ಬರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ದಾನಿಗಳು, ಊರವರು ಮನಸ್ಸು ಮಾಡಿದರೆ ಶಾಲೆಗೊಂದು ಆದಾಯ ತರುವಲ್ಲಿ ಈ ಅಡಿಕೆ ಗಿಡಗಳು ನೆರವಾಗಲಿವೆ.

ಬರಡು ಭೂಮಿಗೆ ಜೀವ ಕಳೆ
ಸರಕಾರಿ ಶಾಲೆಗಳಿಗೆ ಎಕರೆಗಟ್ಟಲೆ ಜಾಗವಿರುತ್ತದೆ. ಹೆಚ್ಚಿನ ಶಾಲೆಗಳಿಗೆ 1 ಎಕರೆಗಿಂತ ಹೆಚ್ಚು ಜಾಗವಿರುತ್ತದೆ. ಇಂತಹ ಖಾಲಿ ಜಾಗದಲ್ಲಿ ಕೃಷಿ ಮಾಡಿದರೆ ಶಾಲೆಗೂ ಆದಾಯ ಬರುತ್ತದೆ. ಈ ಬಗ್ಗೆ ಶಾಲಾಭಿವೃದ್ಧಿ ಸಮಿತಿ ಮತ್ತು ಊರವರು ಮನಸ್ಸು ಮಾಡಬೇಕಾಗಿದೆ. ತೆಗ್ಗು ಶಾಲೆಯ ಖಾಲಿ ಜಾಗದಲ್ಲಿ ನೆಟ್ಟ ಅಡಿಕೆ ಸಸಿಗಳಿಂದ ಮುಂದಿನ ದಿನಗಳಲ್ಲಿ ಶಾಲೆಗೆ ಆದಾಯ ಇದ್ದೆ ಇರುತ್ತದೆ. ಒಂದೊಮ್ಮೆ ವಿವಿಧ ಕಾರಣಗಳಿಂದ ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡಿದ್ದ ತೆಗ್ಗು ಸರಕಾರಿ ಶಾಲೆ ಇದೀಗ ಮತ್ತೆ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವುದು ಖುಷಿ ಕೊಟ್ಟಿದೆ ಎನ್ನುತ್ತಾರೆ ಸಾರ್ವಜನಿಕರು.

ತೆಗ್ಗು ಶಾಲೆಯ 2 ಎಕರೆ ೩೪ ಸೆಂಟ್ಸ್ ಜಾಗದಲ್ಲಿ 1 ಎಕರೆಯಲ್ಲಿ ಅಡಿಕೆ ಕೃಷಿ ಮಾಡಿದ್ದೇವೆ. ಸುವರ್ಣ ಮಹೋತ್ಸವದ ನೆನಪಲ್ಲಿ ಈ ಕಾರ್ಯ ಮಾಡಲಾಗಿದೆ. ತೆಗ್ಗು ಶಾಲೆಯನ್ನು ರಾಜ್ಯಕ್ಕೆ ಮಾದರಿ ಶಾಲೆ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಸಮಿತಿಯವರ ಮತ್ತು ಊರವರ ಸಹಕಾರ ಪಡೆದುಕೊಂಡು ಕೃಷಿ ಮಾಡಿದ್ದೇವೆ. ೪೦೦ ಅಡಿಕೆ ಗಿಡಗಳನ್ನು ನಾನೇ ಉಚಿತವಾಗಿ ಶಾಲೆಗೆ ನೀಡಿದ್ದೇನೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಗುಂಡಿಗಳನ್ನು ತೆಗೆಯಲಾಗಿದೆ. ಈಗ ಸಸಿಗಳನ್ನು ನೋಡಿಕೊಳ್ಳುವ ಸ್ಥಳೀಯ ವ್ಯಕ್ತಿಯೋರ್ವರಿಗೆ ಕೊಟ್ಟಿದ್ದೇವೆ. ಅವರು ನೀರು, ಗೊಬ್ಬರ ಹಾಕುವ ಕೆಲಸ ಮಾಡುತ್ತಿದ್ದಾರೆ. ದಾನಿಗಳು ಗೊಬ್ಬರ ನೀಡುತ್ತಿದ್ದಾರೆ. – ಅಬ್ದುಲ್ ಖಾದರ್ ಮೇರ್ಲ, ಕೆಯ್ಯೂರು ಗ್ರಾಪಂ ಮಾಜಿ ಸದಸ್ಯರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.