HomePage_Banner
HomePage_Banner
HomePage_Banner

ವಿ.ಕೃ. ಗೋಕಾಕ್ ಪ್ರಶಸ್ತಿಗೆ ಹಿರಿಯ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಆಯ್ಕೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ವಿ.ಕೃ. ಗೋಕಾಕ್ ವಾಙ್ಮಯ ಟ್ರಸ್ಟ್ ಮತ್ತು ಭಾರತೀಯ ವಿದ್ಯಾಭವನವು ಕೊಡುವ ‘ವಿ.ಕೃ. ಗೋಕಾಕ್ ಪ್ರಶಸ್ತಿಗೆ ಹಿರಿಯ ಚಿಂತಕ ಪುತ್ತೂರಿನ ಲಕ್ಷ್ಮೀಶ ತೋಳ್ಪಾಡಿ ಭಾಜನರಾಗಿದ್ದಾರೆ.  ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನದ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಟ್ರಸ್ಟ್‌ನ ಕಾರ್ಯದರ್ಶಿ ಅನಿಲ್ ಗೋಕಾಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು 1991 ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಅಂತಹ ಶ್ರೇಷ್ಟ ಕವಿಯ ಸ್ಮರಣಾರ್ಥವಾಗಿ ನೀಡಲಾಗುತ್ತಿರುವ ಪ್ರಶಸ್ತಿ ಪುತ್ತೂರಿನ ವ್ಯಕ್ತಿಗೆ ದೊರೆಯುತ್ತಿರುವುದು ಪುತ್ತೂರಿನ ಕೀರ್ತಿಯನ್ನು ಹೆಚ್ಚಿಸಿದೆ.

ಲಕ್ಷ್ಮೀಶ ತೋಳ್ಪಾಡಿಯವರ ಪರಿಚಯ:
ಪುತ್ತೂರಿನ ಶಾಂತಿಗೋಡು ವಿಷ್ಣುಮೂರ್ತಿ ತೋಳ್ಪಾಡಿ ಮತ್ತು ರತ್ನಮ್ಮ ದಂಪತಿ ಪುತ್ರನಾಗಿ ನವಂಬರ್ 12, 1947 ರಲ್ಲಿ ಜನಿಸಿರುವ ಲಕ್ಷ್ಮೀಶ ತೋಳ್ಪಾಡಿಯವರು ಪುತ್ತೂರು ಬೋರ್ಡ್ ಹೈಸ್ಕೂಲ್, ಮಂಗಳೂರು ಸರಕಾರಿ ಕಾಲೇಜುನಲ್ಲಿ ಶಿಕ್ಷಣ ಪೂರೈಸಿ ಬಳಿಕ ಶ್ರೀ ವಿದ್ಯಾಭೂಷಣರ ಜೊತೆ ಮತ್ತು ಶ್ರೀ ಪೇಜಾವರ ಶ್ರೀಗಳಲ್ಲಿ ಸಂಸ್ಕೃತ ವೇದಾಂತ ಅಧ್ಯಯನ ಮಾಡುತ್ತಾರೆ. ವೃತ್ತಿಯಲ್ಲಿ ಕೃಷಿಕರಾಗಿ ಪತ್ನಿ ವಿಜಯಲಕ್ಷ್ಮಿ ಮತ್ತು ಮಕ್ಕಳಾದ ಪರೀಕ್ಷಿತ್, ಮಾಲವಿಕಾ ರೊಂದಿಗೆ ಶಾಂತಿಗೋಡು ಗ್ರಾಮದ ಕೆಂಬ್ಲಾಜೆ ಎಂಬಲ್ಲಿ ವಾಸವಾಗಿದ್ದಾರೆ.

ಸಾಹಿತ್ಯ ತತ್ವಶಾಸ್ತ್ರಗಳ ಅಧ್ಯಯನಗಳ ಜೊತೆಗೆ ಭಾಷಣೆಗಳು ಪ್ರವಚನಗಳು, ಕೃತಿರಚನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರು ವಿವಿಧ ವಿಚಾರಗಳ ಬಗೆಗಿನ ಶ್ರೇಷ್ಠ ಚಿಂತನೆಯ ಬರಹ ರೂಪಗಳನ್ನು ಹೊರ ತಂದಿದ್ದಾರೆ. ಪರಿಸರ ಜಾಗೃತಿ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿದ್ದ ಇವರು ತುರ್ತುಪರಿಸ್ಥಿತಿಯ ಕಾಲದಲ್ಲಿ ಮಂಗಳೂರಿನಲ್ಲಿ ಐದು ತಿಂಗಳು ಸೆರೆವಾಸ ಅನುಭವಿಸಿದ್ದರು. ಪಶ್ಚಿಮಘಟ್ಟ ಉಳಿಸಿ ಹೋರಾಟದ ಕಾಲದಿಂದಲೂ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ನೊಂದಿಗೆ ನಿಕಟಸಂಪರ್ಕ ಹೊಂದಿ ಅದರ ಸದಸ್ಯನಾಗಿ 1995- 96ರಲ್ಲಿ ಕುಮಾರಧಾರ ಹೊಳೆಯಲ್ಲಿ ಅಣೆಕಟ್ಟು ಕಟ್ಟಲು ಉದ್ದೇಶಿಸಿರುವ ಬೊರೂಕಾ ಕಂಪೆನಿಯ ವಿರುದ್ಧ ‘ಕುಮಾರಧಾರ ಉಳಿಸಿ’ ಹೋರಾಟದಲ್ಲಿ ಭಾಗಿಯಾಗಿದ್ದರು. ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಹೋರಾಟ ಸಮಿತಿಯ ಅಧ್ಯಕನಾಗಿ ಯಶಸ್ವಿ ಹೋರಾಟ ನಡೆಸಿದ್ದರು. ಸುಮಾರು 10 ವರ್ಷಗಳ ಕಾಲ ಭಾರತೀಯ ಕಿಸಾನ್ ಸಂಘದ ರಾಜ್ಯ ಮಟ್ಟದ ಅನೇಕ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾಲ್ಗೊಂಡಿದ್ದರು. ಎಂಭತ್ತರ ದಶಕದಲ್ಲಿ ತಾಳಮದ್ದಳೆ ಕ್ಷೇತ್ರದ ಉನ್ನತ ಸ್ತಂಭಗಳಾದ ದೇರಾಜೆ ಮತ್ತು ಶೇಣಿಯವರ ಆಪ್ತ ಒಡನಾಟವನ್ನೂ ಹೊಂದಿದ್ದರು.

ರಚಿಸಿರುವ ಕೃತಿಗಳು: `ಮಹಾಯುದ್ಧಕ್ಕೆಮುನ್ನ’ (ಭಗವದ್ಗೀತೆಯ ಕುರಿತ ಒಂದು ಟಿಪ್ಪಣಿ), `ಸಂಪಿಗೆ ಭಾಗವತ’, `ಬೆಟ್ಟ ಮಹಮ್ಮದನ ಬಳಿಗೆ ಬಾರದಿದ್ದರೆ’ (ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ), `ಆನಂದಲಹರಿ’, `ಭವ ತಲ್ಲಣ’, `ಭಕ್ತಿಯ ನೆಪದಲಿ’, `ಭಾರತಯಾತ್ರೆ’ -ಮಹಾಭಾರತವನ್ನು ಕುರಿತ ಲೇಖನಗಳು. (ರಾ.ಸಾ. ಅ ದತ್ತಿನಿಧಿ ಪ್ರಶಸ್ತಿ), 2020 ರಲ್ಲಿ `ಮಾತಿಗೆ ಮುನ್ನ’ (ಅಡಿಗರ ಕಾವ್ಯ ಕುರಿತ ಲೇಖನಗಳು) ಕೃತಿಗಳನ್ನು ರಚಿಸಿದ್ದಾರೆ.

ಪ್ರವಚನಗಳು ಉಪನ್ಯಾಸಗಳು: ಪುತ್ತೂರಿನ ಕರ್ನಾಟಕ ಸಂಘದ ಆಶ್ರಯದಲ್ಲಿ ಕಳೆದ 18 ವರ್ಷಗಳಿಂದ ಪ್ರತಿ ವಾರದ ಉಪನ್ಯಾಸ ವೆಂಬಂತೆ -ಭಗವದ್ಗೀತೆ -ವಚನಸಾಹಿತ್ಯ- ಯೋಗವಾಸಿಷ್ಠ -ಮಂಕುತಿಮ್ಮನ ಕಗ್ಗ-ಇತ್ಯಾದಿ ಅನೇಕ ವಿಷಯಗಳ ಕುರಿತು ಸರಣಿ ಪ್ರವಚನ ನಡೆಸುತ್ತಾ ಬಂದಿದ್ದಾರೆ. ಮಂಗಳೂರು -ಮೈಸೂರು ವಿಶ್ವವಿದ್ಯಾಲಯದ ವಿವಿಧ ಪೀಠಗಳ ಆಶ್ರಯದಲ್ಲಿ ನಡೆದ ಸಭೆಗಳಲ್ಲಿ, ಗೋಷ್ಠಿಗಳಲ್ಲಿ ನಾಡಿನ ಅನೇಕ ಕಾಲೇಜು ವಿದ್ಯಾಸಂಸ್ಥೆಗಳಲ್ಲಿ, ಸಾಗರದ ನೀನಾಸಂ, ಮೈಸೂರಿನ ರಂಗಾಯಣ, ಬೆಂಗಳೂರಿನ ಗೋಖಲೆ ಸಂಸ್ಥೆ, ಇಸ್ಕಾನ್, ರಾಯಚೂರಿನ ‘ಸುದ್ದಿಮೂಲ’ ಪತ್ರಿಕೆಯವರು ಪ್ರತಿವರ್ಷ ನಡೆಸುವ ವಚನಾನುಭಾವ ಗೋಷ್ಠಿಗಳು- ಇತ್ಯಾದಿ ವಿಚಾರ ಸಂಕಿರಣಗಳಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದಾರೆ.

ವಿದೇಶದಲ್ಲಿಯೂ ಕನ್ನಡದ ದುಡಿಮೆ: 2017ರಲ್ಲಿ ಅಮೆರಿಕೆಯ ಕನ್ನಡ ಸಾಹಿತ್ಯ ರಂಗ (ಕೆಎಸ್‌ಆರ್) ದವರು ಎರಡು ವರ್ಷಗಳಿಗೊಮ್ಮೆ ಏರ್ಪಡಿಸುವ ಸಾಹಿತ್ಯ ಸಮ್ಮೇಳನದಲ್ಲಿ ಆಹ್ವಾನಿತರಾಗಿ ಪಾಲ್ಗೊಂಡು- ಬೋಸ್ಟನ್, ನ್ಯೂ ಜೆರ್ಸಿ, ಚಿಕಾಗೊ, ಲಾಸ್ ಏಂಜಲೀಸ್ ಮುಂತಾದ ಅನೇಕ ನಗರಗಳಲ್ಲಿ ಕನ್ನಡಿಗರ ಸಂಘ-ಸಂಸ್ಥೆಗಳಲ್ಲಿ, ನ್ಯೂಯಾರ್ಕ್ ವಿಶ್ವವಿದ್ಯಾಲಯದ ಕನ್ನಡ ಪೀಠದಲ್ಲಿ -ಉಪನ್ಯಾಸ ನಡೆಸಿಕೊಟ್ಟಿರುವ ಹೆಗ್ಗಳಿಕೆ ಇವರಿಗಿದೆ.

ಪ್ರಶಸ್ತಿಗಳು: ಪೊಳಲಿ ಶಾಸ್ತ್ರೀ ಪ್ರಶಸ್ತಿ – 2009, ಕಡವ ಶಂಭು ಶರ್ಮ ಪ್ರಶಸ್ತಿ – 2013, ಕಾಂತಾವರ ಸಾಹಿತ್ಯ ಪುರಸ್ಕಾರ- 2013, ರಾಮ ವಿಠಲ ಪ್ರಶಸ್ತಿ- (ಪೇಜಾವರ ಅಧೋಕ್ಷಜ ಮಠ )-2013, ರಮಾ ಗೋವಿಂದ ಪುರಸ್ಕಾರ, ಮೈಸೂರು -2016, ಅರಣ್ಯ ಮಿತ್ರ ಪ್ರಶಸ್ತಿ, ಅರಣ್ಯ ಇಲಾಖೆ , ಮಂಗಳೂರು.- 2016, ಭಾ-ರತ ಪುರಸ್ಕಾರ- ಪರ್ಯಾಯ ಪಲಿಮಾರು ಮಠ -2020 ಸೇರಿದಂತೆ ಅನೇಕ ಕಡೆ ಪ್ರಶಸ್ತಿ ಸನ್ಮಾನಗಳು ಇವರ ಸಾಹಿತ್ಯ ದುಡಿಮೆಗೆ ಸಂದ ಪ್ರತಿಫಲಗಳಾಗಿವೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.