HomePage_Banner
HomePage_Banner
HomePage_Banner

ಪಶ್ಚಿಮ ವಲಯದಲ್ಲಿ ಮಾದರಿ ಠಾಣೆಯಾಗಿ ಗುರುತಿಸಿಕೊಂಡ ಕಡಬ ಪೊಲೀಸ್ ಠಾಣೆ | ಉಪನಿರೀಕ್ಷಕ ರುಕ್ಮ ನಾಯ್ಕ್‌ರವರ ಯಶಸ್ವಿ ಕರ್ತವ್ಯ ನಿರ್ವಹಣೆಗೆ ವರ್ಷದ ಸಂಭ್ರಮ

Puttur_Advt_NewsUnder_1
Puttur_Advt_NewsUnder_1

– ವಿಜಯ ಕುಮಾರ್ ಕಡಬ



ಕಡಬ: ದ.ಕ., ಉಡುಪಿ, ಚಿಕ್ಕಮಗಳೂರು ಮತ್ತು ಉತ್ತರಕನ್ನಡ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿರುವ ಪಶ್ವಿಮ ವಲಯದಲ್ಲಿ ಕಡಬ ಪೊಲೀಸ್ ಠಾಣೆ ಮಾದರಿ ಠಾಣೆಯಾಗಿ ಈಗಾಗಲೇ ಇಲಾಖೆಯ ಮಟ್ಟದಲ್ಲಿ ಗುರುತಿಸಿಕೊಂಡಿದೆ,  ಕಡಬ ಪೋಲಿಸ್ ಠಾಣೆಗೆ ತನ್ನದೇ ಆದ ಇತಿಹಾಸವಿದೆ. ಕೇವಲ ಕಾನೂನು ಭಂಜಕರಿಗೆ ಸಿಂಹ ಸ್ವಪ್ನವಾಗಿರುವುದಲ್ಲದೆ ಕಡಬದ ಜನತೆಯ ಜತೆ ಉತ್ತಮ ಸಂಬಂಧ ಹಾಗೂ ಭರವಸೆಯ ಕೇಂದ್ರವಾಗುವ ಮೂಲಕ ಕಡಬ ಠಾಣೆ ಹೆಚ್ಚು ಗುರುತಿಸಿಕೊಂಡಿದೆ. ಸರಿ ಸುಮಾರು 6 ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಕಡಬ ಠಾಣೆಯಲ್ಲಿ ಇದುವರೆಗೆ 29 ಪೊಲೀಸ್ ಉಪನಿರೀಕ್ಷಕರುಗಳು ಕಾರ್ಯನಿರ್ವಹಿಸಿದ್ದು, 30 ನೇ ಎಸ್.ಐ ಆಗಿ ಕಡಬ ಠಾಣೆಗೆ 2019ನೇ ನವೆಂಬರ್ 21ರಂದು ಆಗಮಿಸಿದ ರುಕ್ಮ ನಾಯ್ಕ್ ಅವರ ಕರ್ತವ್ಯ ನಿರ್ವಹಣೆಗೆ ಇಂದಿಗೆ ಒಂದು ವರ್ಷ ಆಗುತ್ತಿದೆ.

ವಿಶೇಷವೆಂದರೆ ಉಪನಿರೀಕ್ಷಕ ರುಕ್ಮ ನಾಯ್ಕ್ ಅವರ ಉತ್ತಮ ಕಾರ್ಯನಿರ್ವಹಣೆಯಿಂದ ಪಶ್ಚಿಮ ವಲಯದಲ್ಲಿ ಕಡಬ ಠಾಣೆ ಮಾದರಿ ಠಾಣೆಯಾಗಿ ಗುರುತಿಸಿಕೊಳ್ಳುವಂತಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ರಾತ್ರಿ ಹಗಲೆನ್ನದೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಹಿರಿಮೆ ರುಕ್ಮನಾಯ್ಕ್ ಅವರಿಗೆ ಸಲ್ಲುತ್ತದೆ. ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಜತೆಗೆ ರುಕ್ಮನಾಯ್ಕ್ ಅವರ ಮಾನವೀಯ ವರ್ತನೆಯನ್ನು ಜನರು ಗುರುತಿಸಿಕೊಂಡಿದ್ದಾರೆ. ಕೊರೋನಾ ಲಾಕ್‌ಡೌನ್ ಸಂದರ್ಭ ರುಕ್ಮ ನಾಯ್ಕ್ ಅವರು ಸರಕಾರ ಹೊರಡಿಸಿದ್ದ ಕಟ್ಟು ನಿಟ್ಟಿನ ಕಾನೂನುಗಳನ್ನು ಪಾಲನೆ ಮಾಡಿದ್ದರು, ಬೇರೆ ಊರಿನಲ್ಲಿ ಕಡಬದ ಪೋಲಿಸರ ಬಗ್ಗೆ ಮಾತನಾಡುವಷ್ಟರ ಮಟ್ಟಿಗೆ ರುಕ್ಮನಾಯ್ಕ್ ಅವರ ಕಾರ್ಯ ವೈಖರಿ ಇತ್ತು ಎಂದರೂ ತಪ್ಪಾಗದು.

ಜನಸ್ನೇಹಿ ಅಧಿಕಾರಿಯಾಗಿರುವ ರುಕ್ಮ ನಾಯ್ಕ್ ಅವರು ಠಾಣಾ ವ್ಯಾಪ್ತಿಯಲ್ಲಿ ಸ್ವತಃ ಅವರೇ ಗಸ್ತು ತಿರುಗುತ್ತಾರೆ. ವಿಶ್ರಾಂತಿ ಕಡಿಮೆ ಕೆಲಸ ಹೆಚ್ಚು ಮಾಡುವ ಇವರು ರಾಮಕುಂಜದ ಪಂಚಾಯತ್, ಅಂಗಡಿ, ಬ್ಯಾಂಕ್, ಶಾಲೆ, ಅಕ್ರಮ ನಾಡ ಪಿಸ್ತೂಲ್ ಪತ್ತೆ ಪ್ರಕರಣ, ಗಾಂಜಾ ಸೇವನೆ ಪತ್ತೆ, ಅಲ್ಲದೆ ಮಹಿಳೆ, ಯುವತಿಯರ ನಾಪತ್ತೆ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ.

12 ಲಕ್ಷ ದಂಡ ವಸೂಲಿ: 19 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಕಡಬ ಠಾಣೆಯಲ್ಲಿ ಕಳೆದ ಒಂದು ವರ್ಷದಲ್ಲಿ ಕಾನೂನು ಉಲ್ಲಂಘನೆ ಮಾಡುವವರಿಂದ ಸುಮಾರು 12 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಈಗಾಗಲೇ ಮುಖ್ಯವಾಗಿ ಕಡಬ ಹಾಗೂ ಆಲಂಕಾರುಗಳಲ್ಲಿ ಪಾರ್ಕಿಂಗ್ ಸಮಸ್ಯೆಗಳು ಎದುರಾದಾಗ ಕಾನೂನು ಮತ್ತು ಸೌಹಾರ್ದಯುತವಾಗಿ ಅದಕ್ಕೆ ಪರಿಹಾರವನ್ನು ರುಕ್ಮ ನಾಯ್ಕ್ ಅವರ ನೇತೃತ್ವದಲ್ಲಿ ಕಂಡುಕೊಳ್ಳಲಾಗಿದೆ.

ಕಡಬ ಠಾಣೆ ಸ್ವಚ್ಛ ಠಾಣೆ ಮಾಡುವ ಕನಸು..: ಕಡಬ ಠಾಣೆ ಕಡಬದ ಅಧಿದೇವತೆ ಶ್ರೀ ದುರ್ಗಾಂಬಿಕೆಯ ಸಾನಿಧ್ಯ ಎದುರು ಇದ್ದು ಠಾಣೆಗೂ ಸಂಬಂಧ ಕಲ್ಪಿಸಿದೆ, ದೇವಸ್ಥಾನದಲ್ಲಿ ನಡೆಯುವ ಪ್ರಸಿದ್ಧ ಏಕಾಹ ಭಜನೆಯನ್ನು ಪ್ರಾರಂಭಿಸಿದವರೇ ಮೊದಲ ಎಸ್.ಐ ದೂಮಣ್ಣ ಅವರು, ಅಂದಿನಿಂದ ಇಂದಿನವರೆಗೆ ದೇವಸ್ಥಾನದಲ್ಲಿ ನಡೆಯುವ ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಠಾಣೆಯಿಂದ ಪಾಲ್ಗೊಳ್ಳಲಾಗುತ್ತದೆ. ಅಲ್ಲದೆ ಠಾಣೆಯ ಸಮೀಪದಲ್ಲಿ ನಾಗ ಸಾನಿಧ್ಯವೂ ಇದೆ, ಇಂತಹ ಇತಿಹಾಸ ಇರುವ ಠಾಣೆಯ ಪರಿಸರ ರುಕ್ಮ ನಾಯ್ಕ್ ಅವಧಿಯಲ್ಲಿ ಸುಂದರ, ಸ್ವಚ್ಛಗೊಳ್ಳುತ್ತಿದೆ, ಈಗಾಗಲೇ ಆವರಣ ಗೋಡೆಯ ಕಾಮಗಾರಿಗಳು ನಡೆಯುತ್ತಿದೆ, ಠಾಣೆಗೆ ಗೇಟು, ಶೆಡ್ ನಿರ್ಮಾಣಗಳು ನಡೆಯುತ್ತಿದೆ. ಠಾಣೆಯ ಪರಿಸರವನ್ನು ಅದೆಷ್ಟೋ ಬಾರಿ ಎಸ್.ಐ.ಅವರ ನೇತೃತ್ವದಲ್ಲಿ ಸ್ವಚ್ಚಗೊಳಿಸಲಾಗಿತ್ತು.
ರಾಮಕುಂಜದಲ್ಲಿ ಹೊರ ಠಾಣೆ ಮಾಡುವ ಇಂಗಿತ:: ಈಗಾಗಲೇ ಕಡಬ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಸಂಘಸಂಸ್ಥೆಗಳ ನೆರವಿನೊಂದಿಗೆ ಬ್ಯಾರಿಕೇಡ್ ಅಳವಡಿಕೆ ಮಾಡಿರುವ ಇವರು ರಾಮಕುಂಜದಲ್ಲಿ ಹೊರ ಠಾಣೆಯನ್ನು ಪ್ರಾರಂಭಿಸುವ ಬಗ್ಗೆ ಈಗಾಗಲೇ ಸ್ಥಳೀಯ ಆಡಳಿತದೊಂದಿಗೆ ಮಾತುಕತೆ ನಡೆಸಿದ್ದಾರೆ. ರಾಮಕುಂಜ, ಆತೂರು ಜಂಕ್ಷನ್, ಕಡಬ ಕಾಲೇಜು ರಸ್ತೆ ಕ್ರಾಸ್ ಭಾಗದಲ್ಲಿ ಸಿಸಿ ಟಿವಿ ಅಳವಡಿಸುವ ಗುರಿಯನ್ನು ರುಕ್ಮ ನಾಯ್ಕ್ ಅವರು ಹೊಂದಿದ್ದಾರೆ.

ಜನಸ್ನೇಹಿ ಅಧಿಕಾರಿ ರುಕ್ಮನಾಯ್ಕ್ : ಒಂದೆಡೆ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಯಾವುದೇ ಒತ್ತಡಗಳು ಬಂದರೂ ಮುಲಾಜಿ ಇಲ್ಲದೆ ಕ್ರಮ ಕೈಗೊಳ್ಳುವ ರುಕ್ಮ ನಾಯ್ಕ್ ಅವರಲ್ಲಿ ಕೆಲವು ಮಾನವಿಯ ಗುಣಗಳೂ ಅಡಕವಾಗಿದೆ, ಎಲ್ಲರೊಡನೆ ತಾನೊಬ್ಬ ಅಧಿಕಾರಿ ಎಂಬಂತೆ ವರ್ತಿಸಿಕೊಳ್ಳದೆ, ಸಾಮಾನ್ಯ ಜನರನ್ನೂ ಅಣ್ಣಾ ಎಂದು ಸಂಬೋಧಿಸುತ್ತಿರುವುದನ್ನು ನಾವು ಕಂಡಿದ್ದೇವೆ, ಕೊರೋನಾ ಲಾಕ್ ಡೌನ್ ಸಂದರ್ಭಗಳಲ್ಲಿ ಹಲವಾರು ಮಂದಿ ಆಹಾರಕ್ಕಾಗಿ ಪರದಾಟ ಮಾಡುತ್ತಿದ್ದಾಗ ಅವರಿಗೆ ತನ್ನ ಸ್ವಂತ ಹಣದಿಂದಲೇ ಸಾಮಾಗ್ರಿಗಳನ್ನು ನೀಡಿದ್ದರು. ಅಲ್ಲದೆ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ವ್ಯವಸ್ಥೆಗಳನ್ನು ಮಾಡಿದ್ದರು, ಈಗಾಗಲೇ ಅನೇಕ ಸಿವಿಲ್ ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡು ಎರಡು ತಂಡಗಳ ಮಧ್ಯೆ ಯಾವುದೇ ಅಶಾಂತಿ ನಿರ್ಮಾಣಗೊಳ್ಳದಂತೆ ನೋಡಿಕೊಳ್ಳುವ ಇವರು ಹಲವಾರು ಕುಟುಂಬ ಕಲಹಗಳನ್ನು ಯಶಸ್ವಿಯಾಗಿ ಬಗೆಹರಿಸಿಕೊಟ್ಟ ಉದಾಹರಣೆಗಳು ಇದೆ. ಯಾವುದೇ ಸಮಯದಲ್ಲಿ ಠಾಣೆಗೆ ಸಾರ್ವಜನಿಕರು ಯಾವುದೇ ಭಯವಿಲ್ಲದೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಬರಬಹುದು ಎಂಬ ವಾತಾವರಣವನ್ನುಇಲ್ಲಿ ನಿರ್ಮಿಸಲಾಗಿದೆ ಎಂಬ ಪ್ರಶಂಸೆಯ ಮಾತುಗಳು ನಾಗರಿಕ ವಲಯದಿಂದ ಕೇಳಿ ಬರುತ್ತಿವೆ.

ರುಕ್ಮ ನಾಯ್ಕ್ ಪರಿಚಯ: ಪೊಲೀಸ್ ಇಲಾಖೆಯಲ್ಲಿ ಕಳೆದ ೨೮ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರುಕ್ಮನಾಯ್ಕ್ ಅವರು ಮಂಗಳೂರಿನ ಸಂಚಾರ ಪೂರ್ವ, ಪುತ್ತೂರು ಗ್ರಾಮಾಂತರ ಬಳಿಕ ಹೆಡ್ ಕಾನ್ಸ್‌ಸ್ಟೇಬಲ್ ಆಗಿ ಸುರತ್ಕಲ್, ಪುಂಜಾಲಕಟ್ಟೆ, ಎ.ಎಸ್.ಐ ಆಗಿ ಪುತ್ತೂರು ಗ್ರಾಮಾಂತರ, ಉಪ್ಪಿನಂಗಡಿಯಲ್ಲಿ ಕರ್ತವ್ಯ ನಿರ್ವಹಿಸಿ ಎಸ್.ಐ.ಆಗಿ ಕಡಬ ಠಾಣೆಗೆ ವರ್ಗಾವಣೆಗೊಂಡಿದ್ದರು. ಪ್ರಸ್ತುತ ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ಕೃಷ್ಣಗಿರಿ ನಿವಾಸಿಯಾಗಿರುವ ಇವರು ಪತ್ನಿ ಲಕ್ಷ್ಮೀ ಹಾಗೂ ಪುತ್ರ ರೋಹಿತ್ ಪುತ್ರಿ ಲತಾಶ್ರೀ ಅವರೊಂದಿಗೆ ಸಂಸಾರ ನಡೆಸುತ್ತಿದ್ದಾರೆ.

ಉತ್ತಮ ಕರ್ತವ್ಯ ನಿರ್ವಹಣೆಗೆ ಸಾರ್ವಜನಿಕರ, ಸಿಬ್ಬಂದಿಗಳ ಸಹಕಾರವೇ ಕಾರಣ
ಕಡಬ ಠಾಣೆಗೆ ಎಸ್.ಐ, ಆಗಿ ಆಗಮಿಸಿ ಇಂದಿಗೆ ಒಂದು ವರ್ಷ ಆಗುತ್ತಿರುವ ಸಂದರ್ಭದಲ್ಲಿ `ಸುದ್ದಿ’ ಜತೆ ಮಾತನಾಡಿದ ರುಕ್ಮ ನಾಯ್ಕ್ ಅವರು, ನನ್ನ ಕರ್ತವ್ಯ ನಿರ್ವಹಣೆಗೆ ಇಲ್ಲಿನ ಜನತೆ ಹಾಗೂ ಠಾಣೆಯ ಸಿಬ್ಬಂದಿಗಳು ಕಾರಣ. ಕಡಬ ಠಾಣೆ ಮಾದರಿ ಠಾಣೆ ಎಂಬುದಾಗಿ ನಮ್ಮ ಇಲಾಖೆಯಿಂದಲೇ ಗೌರವ ದೊರೆತಿದ್ದು ಇದು ನಮಗೆ ಹೆಮ್ಮೆಯಾಗಿದೆ. ಕಾನೂನು ಉಲ್ಲಂಘನೆ ಮಾಡುವವರ ಜತೆ ನನ್ನ ಯಾವುದೇ ರಾಜಿ ಇಲ್ಲ, ಕಾನೂನು ಪಾಲನೆ ಮಾಡುವವರಿಗೆ ನಮ್ಮ ರಕ್ಷಣೆ ಎಂದೂ ಇರುತ್ತದೆ, ಕಡಬ ಠಾಣೆಗೆ ಸಾರ್ವಜನಿಕರು ಯಾವುದೇ ಸಮಯದಲ್ಲಿ ಭೇಟಿ ನೀಡಬಹುದು, ಯಾವುದೇ ಸಮಯದಲ್ಲಿ ಏನೇ ತೊಂದರೆ ಆದರೂ ನೇರವಾಗಿ ನನಗೆ ಮಾಹಿತಿ ನೀಡಿದರೆ ಕಾನೂನು ಪಾಲನೆ ಮಾಡುವ ಜವಾಬ್ದಾರಿ ನಮ್ಮದು, ಕರ್ತವ್ಯ ಜತೆಗೆ ನಮ್ಮ ಠಾಣೆಯನ್ನು ಇನ್ನಷ್ಟು ಜನಸ್ನೇಹಿ ಠಾಣೆಯನ್ನಾಗಿ ಮಾಡುವ ಕನಸು ಹೊತ್ತಿzನೆ, ಮೇಲಾಧಿಕಾರಿಗಳ ಮಾರ್ಗದರ್ಶನ ಸಹೋದ್ಯೋಗಿಗಳ ಸಹಕಾರ, ಜನರ ಆಶೀರ್ವಾದದಿಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.