HomePage_Banner
HomePage_Banner
HomePage_Banner

ಪಾಪೆಮಜಲು: ಚಿಣ್ಣರ ಲೋಕ ಅಂಗನವಾಡಿ ಕಟ್ಟಡ ಲೋಕಾರ್ಪಣೆ | ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು : ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊರೋನಾ ಬಳಿಕ ಕುಂಠಿತವಾಗಿದ್ದ ಅಭಿವೃದ್ದಿ ಕಾರ್ಯಗಳು ನಿಧಾನಕ್ಕೆ ಮತ್ತೆ ಚಾಲನೆಗೆ ಬಂದಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಜನರ ಮೂಲಭೂತ ಸೌಕರ್ಯದ ಕಡೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಅಭಿವೃದ್ದಿ ಕಾರ್ಯಕ್ಕೆ ವೇಗವನ್ನು ನೀಡಲಾಗುತ್ತದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಅರಿಯಡ್ಕ ಗ್ರಾಮದ ಪಾಪೆಮಜಲಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಚಿಣ್ಣರ ಲೋಕ ಅಂಗನವಾಡಿ ಕಟ್ಟಡವನ್ನು ಲೋಕಾರ್ಪಣೆಗೈದು ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಅರಿಯಡ್ಕ ಹಾಗೂ ಕಾವು ಮಾಡ್ನೂರು ಗ್ರಾಮಕ್ಕೆ ವಿಶೇಷ ಒತ್ತು ನೀಡಿ ಒಟ್ಟು ಎರಡು ಕೋಟಿಗೂ ಮಿಕ್ಕಿ ವಿವಿಧ ಕಾಮಗಾರಿಗಳಿಗೆ ಅನುದಾನವನ್ನು ನೀಡಲಾಗಿದೆ. ಕೆಲವೊಂದು ಕಾಮಗಾರಿಗಳು ನಡೆದಿದೆ, ಇನ್ನೂ ಕೆಲವು ಪ್ರಗತಿಯಲ್ಲಿದೆ, ಅನೇಕ ಕಾಮಗಾರಿಗಳಿಗೆ ಇಂದು ಶಿಲನ್ಯಾಸವನ್ನು ನಡೆಸಲಾಗಿದೆ ಎಂದು ಹೇಳಿದರು. ಪಾಪೆಮಜಲು ನಲ್ಲಿ ನಿರ್ಮಾಣವಾದ ಅಂಗನವಾಡಿ ಕಟ್ಟಡ ಪುತ್ತೂರು ತಾಲೂಕಿಗೇ ಮಾದರಿ ಅಂಗನವಾಡಿ ಕಟ್ಟಡವಾಗಿದೆ. ಮನೆಯ ಮಾದರಿಯಲ್ಲೇ ಇಲ್ಲಿ ಕಾಮಗಾರಿ ನಡೆದಿದೆ ಎಂದು ಸಂತಸ ವ್ಯಕ್ತಪಡಿಸಿದರು.ಅಂಗನವಾಡಿಗಳಿಗೆ ಮಕ್ಕಳನ್ನು ಕಳಿಸುವ ಮೂಲಕ ಇದನ್ನು ಉಳಿಸಿ ಬೆಳೆಸುವ ಕಾರ್ಯ ಗ್ರಾಮಸ್ಥರಿಂದ ಆಗಬೇಕು ಎಂದು ಶಾಸಕರು ಹೇಳಿದರು.

ಅಧಿಕಾರಿಗಳು ಜನಸ್ನೇಹಿಯಾದರೆ ಜನ ಗೌರವ ಕೊಡುತ್ತಾರೆ
ಪ್ರತೀಯೊಬ್ಬ ಅಧಿಕಾರಿಯೂ ಜನಸ್ನೇಹಿಯಾಗಿ ಕೆಲಸ ಮಾಡಬೇಕೆಂಬುದು ನನ್ನ ಉದ್ದೇಶವಾಗಿದೆ. ಗ್ರಾಮದ ಕಟ್ಟಕಡೇಯ ವ್ಯಕ್ತಿಯ ಕಣ್ಣೀರೊರೆಸುವ ಕೆಲಸವನ್ನು ಅಧಿಕಾರಿಯಾದವರು ಮಾಡಬೇಕು. ಪಾಪೆಮಜಲು ಪಾದಲಡಿಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಹಕ್ಕುಪತ್ರ ಸಿಗದೆ ತೊಂದರೆಗೆ ಸಿಲುಕಿದ್ದ ಸುಮಾರು ೨೦ ಕುಟುಂಬಗಳಿಗೆ ಇವತ್ತು ಹಕ್ಕುಪತ್ರ ವಿತರಣೆ ಕಾರ್ಯ ನಡೆಯುತ್ತಿದೆ. ಇದಕ್ಕೆ ಪುತ್ತೂರು ತಹಶಿಲ್ದಾರ್ ಅವರ ಕಾರ್ಯಕ್ಷಮತೆ ಸಾಕ್ಷಿಯಾಗಿದೆ. ಓರ್ವ ಅಧಿಕಾರಿಯಾಗಿ ತಾನು ಮಾಡಬೇಕಾದ ಕೆಲಸವನ್ನು ಕಾನೂನು ಪ್ರಕಾರವೇ ಮಾಡಿದ್ದರಿಂದ ಇಂದು ಇಪ್ಪತ್ತು ಕುಟುಂಬಕ್ಕೆ ಸಂತೋಷದ ದಿನ ಬಂದಿದೆ. ಇದುವೇ ಅವರಿಗೆ ಸಿಗುವ ದೊಡ್ಡ ಪುರಸ್ಕಾರವಾಗಿದೆ, ಇದೇ ರೀತಿ ಪ್ರತೀಯೊಬ್ಬ ಅಧಿಕಾರಿಯೂ ಜನಸ್ನೇಹಿಯಾಗಿ ಕೆಲಸ ಮಾಡಬೇಕೆಂದು ಹೇಳಿದರು. ತಮ್ಮ ಬಳಿ ನ್ಯಾಯಕೇಳಿಕೊಂಡು ಬರುವ ಯಾವದೇ ವ್ಯಕ್ತಿಯನ್ನು ಕಡೆಗಣಿಸದೆ ಅವರಿಗೆ ನೆರವು ನೀಡುವ ಅಥವಾ ಸಾಂತ್ವನ ನೀಡುವ ಕೆಲಸ ಅಧಿಕಾರಿಯಿಂದ ಆಗಬೇಕು ಎಂದು ಶಾಸಕರು ಹೇಳಿದರು.

11,000 ಅರ್ಜಿಗಳು ಬಾಕಿ
ಅಕ್ರಮಸಕ್ರಮಕ್ಕೆ ಬಂದಿರುವ ೧೧,೦೦೦ ಅರ್ಜಿಗಳು ಪುತ್ತೂರು ತಾಲೂಕಿನಲ್ಲಿ ಬಾಕಿ ಇದೆ,ಅಕ್ರಮ ಅಕ್ರಮಕ್ಕೆ ಕುಮ್ಕಿ ಭೂಮಿಯನ್ನು ಸೇರಿಸಲು ಸಾಧ್ಯವಿಲ್ಲಸರಕಾರಿ ಜಾಗವಾಗಿದ್ದಲ್ಲಿ ಮಾತ್ರ ಅದನ್ನು ಅಕ್ರಮ ಸಕ್ರಮಕ್ಕೆ ಸೇರಿಸಿಕೊಳ್ಳಲಾಗುತ್ತದೆ.೪.೯೯ ಎಕ್ರೆ ಭೂಮಿಯನ್ನು ಮಾತ್ರ ಅಕ್ರಮ ಸಕ್ರಮದಲ್ಲಿ ಮಾಡಿಕೊಡಲಾಗುತ್ತದೆ. ೧೯೬೩ ಹಿಂದಿನ ಖದೀಮ ವರ್ಗಕ್ಕೆ ತಾಗಿಕೊಂಡಿರುವ ಕುಮ್ಕಿ ಭೂಮಿ ಇದ್ದಲ್ಲಿ ೧೦ ಎಕ್ರೆ ತನಕ ಮಾತ್ರ ಅಕ್ರಮ ಸಕ್ರಮದಲ್ಲಿ ಅಕ್ರಮ ಮಾಡಿಕೊಳ್ಳಲು ಅವಕಾಶ ನೀಡುವಂತೆ ಈಗಾಗಲೇ ಕಂದಾಯ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕಾಗಿ ಸಮಿತಿಯನ್ನು ರಚನೆ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದರು.

೧೬೨ ಕಿ ಮೀ ಲೋಕೋಪಯೋಗಿ ರಸ್ತೆಯಾಗಿ ಮೇಲ್ದರ್ಜೆಗೆ
೩೦ ಕಿ ಮೀ ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆ
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೧೬೨ ಕಿ ಮೀ ಗ್ರಾಮೀಣ ರಸ್ತೆಗಗಳನ್ನು ಲೋಕೋಪಯೋಗಿ ರಸ್ತೆಯಾಗಿ ಮತ್ತು ೩೦ ಕಿ ಮೀ ರಸ್ತೆಯನ್ನು ರಾಜ್ಯ ಹೆದ್ದರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಗ್ರಾಮೀಣ ರಸ್ತೆಗಳನ್ನು ಸಿ ಸಿ ರಸ್ತೆಯಾಗಿ ಮಾರ್ಪಾಡು ಮಾಡಲಾಗುವುದು. ಗ್ರಾಮೀಣ ಭಗದ ಪ್ರತೀ ಒಳ ರಸ್ತೆಗಳು ಮುಂದಿನ ದಿನಗಳಲ್ಲಿ ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ದಿಯಾಗಲಿದೆ. ಅಭಿವೃದ್ದಿಯನ್ನು ಯಾವುದೇ ರಾಜಕೀಯವಿಲ್ಲ, ಪಕ್ಷ, ಜಾತಿ, ಧರ್ಮ ಬೇದಬಾವವಿಲ್ಲ ಸರ್ವರ ಅಭಿವೃದ್ದಿ, ಸರ್ವ ರಸ್ತೆಯ ಅಭಿವೃದ್ದಿಯೊಂದೇ ನಮ್ಮ ಗುರಿಯಾಗಿದೆ ಎಂದು ಶಾಸಕರು ಹೇಳಿದರು.

ಪ್ರತೀ ಗ್ರಾಮಕ್ಕೆ ೨೦ ಮನೆ
ಕೋವಿಡ್ ಬಳಿಕ ನಿವೇಶನದ ಜೊತೆ ಮನೆ ಹಂಚುವ ಕಾರ್ಯಕ್ಕೆ ಸರಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮಕ್ಕೆ ೨೦ ಮನೆಗಳನ್ನು ಸರಕಾರ ನೀಡಲಿದೆ. ಮನೆ ಹಂಚುವ ಕಾರ್ಯವನ್ನು ಅಯಾ ಗ್ರಾಪಂ ಮಾಡಲಿದೆ. ಮೀನು ಕೃಷಿಕರಿಗೆ ವಿಶೇಷ ಸೌಲಭ್ಯವನ್ನು ಸರಕಾರ ನೀಡಲಿದೆ. ಜಲಜೀವನ ಯೋಜನೆಯಡಿ ಪುತ್ತೂರು ತಾಲೂಕಿಗೆ ೩.೭೬ ಕೋಟಿ ಅನುದಾನ ಕೆಂದ್ರದಿಂದ ಬಂದಿದ್ದು ಗ್ರಾಮದ ಪ್ರತೀ ಮನೆಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುವುದು. ಆತ್ಮ ನಿರ್ಭರ ಯೋಜನೆಯಿಂದ ಸಾವಿರಾರು ಕುಟುಂಬಗಳು ಸ್ವಾಲಂಬನೆಯ ಬದುಕು ಸಾಗಿಸುತ್ತಿರುವುದು ಆಶಾದಾಯಕ ಸಂಗತಿಯಾಗಿದೆ ಎಂದು ಹೇಳಿದರು.

ಪ್ರತೀ ಅಂಗನವಾಡಿ ಕಟ್ಟಡ ಸುರಕ್ಷಿತವಾಗಿಬೇಕು
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ ಪ್ರತೀ ಅಂಗನವಾಡಿ ಕಟ್ಟಡಗಳು ಸುರಕ್ಷಿತ ಕಟ್ಟಡವನ್ನು ಹೊಂದಿರಬೇಕು. ಗ್ರಾಮೀಣ ಭಾಗದ ಬಹುತೇಕ ಅಂಗನವಾಡಿ ಕಟ್ಟಡಗಳು ಸ್ವಂತ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿದೆ. ಗ್ರಾಮದ ಪ್ರತೀಯೊಬ್ಬರು ಅಂಗನವಾಡಿಗೆ ಮಕ್ಕಳನ್ನು ಕಳುಹಿಸುವ ಮೂಲಕ ಇದರ ಬೆಳವಣಿಗೆಗೆ ಕಾರಣರಾಗಬೇಕು ಎಂದು ಹೇಳಿದರು.ಭಾರೀ ಸಾಹಸದ ಮೂಲಕ ಅಂಗನವಾಡಿ ಕಟ್ಟಡ ನಿರ್ಮಾಣವಾಗಿದೆ.
 
ಪ್ರಾಸ್ತಾವಿಕವಾಗಿ ಮಾತನಾಡಿದ ಪಾಪೆಮಜಲು ಪ್ರೌಢ ಶಾಲೆಯ ಕಾರ್ಯಾಧ್ಯಕ್ಷ ತಿಲಕ್ ರೈ ಕುತ್ಯಾಡಿ ಮಾತನಾಡಿ ಪಾಪೆಮಜಲು ಅಂಗನವಾಡಿ ಕಟ್ಟಡಕ್ಕೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವಧಿಯಲ್ಲೇ ೧೫ ಲಕ್ಷ ಅನುದಾನ ಮಂಜೂರಾಗಿತ್ತು. ಆದರೆ ಈಗ ನಿರ್ಮಾಣವಾದ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಕೆಲವರಿಂದ ವಿರೋಧ ಉಂಟಾಗಿತ್ತು ಈ ಕಾರಣಕ್ಕೆ ಅನುದಾನ ಬೇರೆ ಕಡೆ ಶಿಫ್ಟಾಗಿತ್ತು. ಆದರೆ ನಾವು ಇದೇ ಸ್ಥಳದಲ್ಲಿ ನಿರ್ಮಿಸಿಯೇ ಸಿದ್ದ ಎಂದು ಶಪಥ ಮಾಡಿದ್ದೆವು. ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮತ್ತು ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ನಾವು ಸೇರಿಕೊಂಡು ಶಾಸಕರ ಮೂಲಕ ನಮ್ಮ ಶಪಥವನ್ನು ಈಡೇರಿಸಿದ್ದೇವೆ. ಅಂದು ವಿರೋಧ ಮಾಡಿದವರು ಯಾಕೆ ವಿರೋಧ ಮಾಡಿದ್ದಾರೆ ಎಂದು ಜನ ತಿಳಿದುಕೊಂಡಿದ್ದಾರೆ ಎಂದು ಹೇಳಿದರು. ಕೌಡಿಚ್ಚಾರ್‌ನಲ್ಲಿ ಬಸ್ ತಂಗುದಾಣ ನಿರ್ಮಾಣದ ವೇಳೆ, ಪಾದಲಾಡಿಯಲ್ಲಿ ಕೊಳವೆ ಬಾವಿ ತೆಗೆಯುವ ವೇಳೆ ಯೂ ವಿರೋಧ ಉಂಟಾಗಿತ್ತು ಆದರೆ ನಾವು ಅದರ ವಿರುದ್ದ ಹೋರಾಟ ಮಾಡಿ ಎಲ್ಲದರಲ್ಲೂ ಗೆದ್ದಿದ್ದೇವೆ ಎಂದು ಹೇಳಿ ಅಭಿವೃದ್ದಿ ಕಾರ್ಯಕ್ಕೆ ಯಾರೂ ಅಡ್ಡಿಪಡಿಸಬಾರದು ಅದನ್ನು ಜನ ಇಷ್ಟಪಡುವುದಿಲ್ಲ ಎಂದು ಹೇಳಿದರು.

ವಿರೋಧ ಮಾಡಿದ್ದು ಬಿಜೆಪಿಯವರೇ ಅಗಿದ್ದರು
ಅಂಗನವಾಡಿ ಕಟ್ಟಡ ಪಾಪೆಮಜಲು ಸರಕಾರಿ ಪ್ರಾಥಮಿಕ ಶಾಲೆಯ ಬಳಿ ಬೇಡ ಹಿಂದೆ ಇರುವ ಸ್ಥಳದಲ್ಲೇ ಮಾಡಿ ಎಂದು ವಿರೋಧ ಮಾಡಿದವರು ಬಿಜೆಪಿಯವರೇ ಅಗಿದ್ದರು. ಕೌಡಿಚ್ಚಾರ್‌ನಲ್ಲಿ ಪಾನಿಪೂರಿ ಅಂಗಡಿಯವನ ಅನ್ನಕ್ಕೆ ಕಲ್ಲು ಹಾಕಿ ಬಸ್ ತಂಗುದಾಣ ಮಾಡುವುದು ಬೇಡ ಎಂಬ ಕಾರಣಕ್ಕೆ ವಿರೋಧ ವ್ಯಕ್ತವಾಗಿತ್ತು, ಪಾದಲಾಡಿಯಲ್ಲಿ ಕೃಷಿಕರೋರ್ವರ ಕೊಳವೆ ಬಾವಿಯ ಪಕ್ಕದಲ್ಲೇ ಇನ್ನೊಂದು ಕೊಳವೆ ಬಾವಿ ತೆಗೆಯುವುದು ಬೇಡ ಎಂದು ಸ್ಥಳೀಯ ವ್ಯಕ್ತಿ ಆಕ್ಷೇಪ ಮಾಡಿದ್ದರೇ ವಿನ ಇಲ್ಲಿ ಯಾರೂ ಅಭಿವೃದ್ದಿಗೆ ವಿರೋಧ ಮಾಡಿರಲಿಲ್ಲ. ಅಭಿವೃದ್ದಿಗೆ ವಿರೋಧ ಯಾರೂ ಮಾಡುವುದೂ ಇಲ್ಲ ಎಂದು ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು.

ಅರಿಯಡ್ಕ ಗ್ರಾಮದಲ್ಲಿ ಭಯಂಕರ ರಾಜಕೀಯ
ಅರಿಯಡ್ಕ ಗ್ರಾಮದಲ್ಲಿ ಇರುವಷ್ಟು ರಾಜಕೀಯ ಯಾವ ಗ್ರಾಮದಲ್ಲೂ ಇಲ್ಲ. ಇಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಅಡ್ಡಿಪಡಿಸುವವರೇ ಹೆಚ್ಚು ಎಂದು ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು.ದೇವರಾಜು ಎಂಬವರು ಬಿಜೆಪಿ ಕಾರ್ಯಕರ್ತ ಎಂಬ ಕಾರಣಕ್ಕೆ ಅವರಿಗೆ ಹಕ್ಕು ಪತ್ರ ನೀಡಲೇ ಇಲ್ಲ, ಇವತ್ತು ಅವರಿಗೆ ಹಕ್ಕುಪತ್ರ ನೀಡಿದ್ದೇವೆ. ಇವತ್ತು ಲೋಕಾರ್ಪಣೆಗೊಂಡಿರುವ ಅಂಗನವಾಡಿಗೆ ಮೂರು ವರ್ಷದ ಹಿಂದೆ ಕಲ್ಲು ಹಾಕಿದ್ದೆವು ಅದೇ ಕಲ್ಲಿನಿಂದ ಪಂಚಾಂಗ ಮಾಡಿ ಇಂದು ಕಟ್ಟಡವನ್ನು ಕಟ್ಟಿದ್ದೇವೆ. ನಾವು ಅಭಿವೃದ್ದಿಯಲ್ಲಿ ರಾಜಕೀಯ ಮಾಡಲಿಲ್ಲ, ಮಾಡುವುದೂ ಇಲ್ಲ. ನಾವು ಮಾಡುವ ಪ್ರತೀಯೊಂದು ಕಾರ್ಯವೂ ಅದು ಜನರಿಗೋಸ್ಕರ ಇರುತ್ತದೆ. ರಾಜಕೀಯ ಮಾಡಿದರೆ ಅದನ್ನು ರಾಜಕೀಯವಾಗಿಯೇ ಎದುರಿಸಲು ನನಗೂ ಗೊತ್ತಿದೆ. ಪಾಪೆಮಜಲು ಶಾಲೆಗೆ ಶೌಚಾಲಯಕ್ಕೆ ಅನುದಾನ ನೀಡುವುದಾಗಿ ಹೇಳಿದಾಗ ಅಲ್ಲಿನ ಮುಖ್ಯ ಶಿಕ್ಷಕರು ಅನುದಾನ ಬೇಡ ಎಂದು ಹೇಳಿದ್ದರು ಎಂದು ಬೋರ್ಕರ್ ಅಚ್ಚರಿ ವ್ಯಕ್ತಪಡಿಸಿದರು. ೨೦ ವರ್ಷಗಳಿಂದ ಯಾರಿಂದಲೂ ಸಾಧ್ಯವಾಗದ ಹಕ್ಕುಪತ್ರ ನೀಡುವ ಕಾರ್ಯವನ್ನು ಶಾಸಕರ ನೇತೃತ್ವದಲ್ಲಿ ಮಾಡಿ ತೋರಿಸಿದ್ದೇವೆ, ೨೦ ಬಡ ಕುಟುಂಬಗಳ ಕಣ್ಣೀರು ಒರೆಸಿದ ತ್ರಪ್ತಿ ನಮಗಿದೆ ಎಂದು ಬೋರ್ಕರ್ ಹೇಳಿದರು.

ತಹಶಿಲ್ದಾರ್‌ಗೆ ನಮಿಸಿದ ಗ್ರಾಮಸ್ಥರು
ಗ್ರಾಮದ ಪಾದಲಾಡಿಯಲ್ಲಿರುವ ೨೦ ಕುಟುಂಬಗಳು ಕಳೆದ ೨೦ ವರ್ಷಗಳಿಂದ ಹಕ್ಕುಪತ್ರ ಪಡೆಯಲು ಹೋರಾಟವನ್ನೇ ಮಾಡಿದ್ದರು. ಆದರೆ ಯಾರಿಂದಲೂ ಹಕ್ಕುಪತ್ರ ನೀಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಶಾಸಕರ ನೇತೃತ್ವದಲ್ಲಿ ೨೦ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ನಡೆದಿದೆ. ಇದಕ್ಕೆ ಪುತ್ತೂರು ತಹಶಿಲ್ದಾರ್ ರಮೇಶ್ ಬಾಬು ಅವರ ಮಾನವೀಯ ಸೇವೆಯೇ ಕಾರಣವಾಗಿದೆ. ಕಾನೂನಿನ ತೊಡಕುಗಳನ್ನು ನಿವಾರಣೆ ಮಾಡಿ ಹಕ್ಕುಪತ್ರವನ್ನು ನೀಡಿದ್ದಾರೆ ಎಂದು ಶಾಸಕರು ಸಭೆಯಲ್ಲಿ ತಿಳಿಸಿದರು. ಈ ವೇಳೆ ಸಭೆಯಲ್ಲಿದ್ದ ಫಲಾನುಭವಿಗಳು ಸಹಿತ ಗ್ರಾಮಸ್ಥರು ತಹಶಿಲ್ದಾರ್ ಅವರ ಮಾನವೀಯ ಗುಣವನ್ನು ಕೊಂಡಾಡಿದರು ಮತ್ತು ಅವರಿಗೆ ಸಭೆಯಿಂದಲೇ ಕೃತಜ್ಞತೆ ಸಲ್ಲಿಸಿದ ಘಟನೆಯೂ ನಡೆಯಿತು. ಇದಕ್ಕೆ ಉತ್ತರಿಸಿದ ತಹಶಿಲ್ದಾರ್ ರಮೇಶ್ ಬಾಬು ಹಕ್ಕುಪತ್ರ ಪಡೆದುಕೊಂಡಿದ್ದೀರಿ, ಸರೋಜಾ ಭಟ್ ಎಂಬವರು ತಮ್ಮ ಸ್ವಾಧೀನದಲ್ಲಿದ್ದ ಜಾಗವನ್ನು ಬಿಟ್ಟು ಕೊಟ್ಟಿದ್ದಾರೆ. ಹಕ್ಕುಪತ್ರ ಸಿಕ್ಕಿದೆ ಎಂದು ಮನೆಯನ್ನು ಮಾರಾಟ ಮಾಡಬೇಡಿ ಸುಖವಾಗಿ ಬಾಳಿ ಬದುಕಿ ಎಂದು ಹೇಳಿದರು.

ಸನ್ಮಾನ
ಸಭೆಯಲ್ಲಿ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಗುತ್ತಿಗೆದಾರ ಲೋಕೇಶ್ ರೈ ಅಮೈ, ಪಾಪೆಮಜಲು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಪ್ಪಯ್ಯ ನಾಯ್ಕ, ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿಯವರನ್ನು ಸನ್ಮಾನಿಸಲಾಯಿತು.
ಹಕ್ಕು ಪತ್ರ ವಿತರಣೆ ಮಾಡಿರುವ ಶಾಸಕರನ್ನು ಗ್ರಾಮಸ್ಥರ ಪರವಾಗಿ ಸನ್ಮಾನಿಸಲಾಯಿತು. ಸರೋಜಿನಿ ಭಟ್ ಅವರಿಗೂ ವೇದಿಕೆಯಲ್ಲಿ ಸನ್ಮಾನ ನಡೆಯಿತು.

ವೇದಿಕೆಯಲ್ಲಿ ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ,ಜಿಪಂ ಇಂಜಿನಿಯರ್ ಭರತ್ ಬಿ ಎಂ, ಶಿಶುಕಲ್ಯಾಣ ಅಧಿಕಾರಿ ಶ್ರೀಲತಾ, ಅರಿಯಡ್ಕ ಗ್ರಾಪಂ ಆಡಳಿತಾಧಿಕಾರಿ ಸುರೇಶ್ ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಅಪ್ಪಯ್ಯನಾಯ್ಕ, ಲೋಕೋಪಯೋಗಿ ಇಂಜನಿಯರ್ ರಾಜಾರಾಮ್, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಗುತ್ತಿಗೆದಾರ ಲೋಕೇಶ್ ರೈ ಅಮೈ ಉಪಸ್ಥಿತರಿದ್ದರು.

ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ವಿಮಲಾ ವಂದಿಸಿದರು. ಮಾಜಿ ಗ್ರಾಪಂ ಸದಸ್ಯ ಸದಾನಂದ ಮಣಿಯಾಣಿ ಕಾರ್ಯಕ್ರಮ ನಿರೂಪಿಸಿದರು.ನಾರಾಯಣ ಚಾಕೊಟೆ, ತಿಮ್ಮಪ್ಪ ನಾಯ್ಕ ಪೈಲಕಲ್ಲು, ಜ್ಯೋತಿ ಪಾಪೆಮಜಲು, ಬೇಬಿ ಸುಬಾಸ್, ಕೊರಗಪ್ಪ ನಾಯ್ಕ ಬಪ್ಪಪುಂಡೇಲು, ಉಪನ್ಯಾಸಕ ಗೌರಿ ಶಂಕರ, ದಿನೇಶ್ ಬಪ್ಪಪುಂಡೇಲು, ಅಂಗನವಾಡಿ ಸಹಾಯಕಿ ಮಮತಾ, ಹರಿಪ್ರಕಾಶ್ ಮಾಯಿಲಕೊಚ್ಚಿ, ಹರೀಶ್ ನಾಯ್ಕ, ಹರಿಪ್ರಸಾದ್ ಕೌಡಿಚ್ಚಾರ್, ರಮೇಶ್ ಎನ್, ಹರೀಶ್ ಮಾಯಿಲಕೊಚ್ಚಿ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.