ಪುತ್ತೂರು: ಸ್ವಚ್ಛತೆಯ ದೃಷ್ಟಿಯಿಂದ ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಕೊಡಬೇಕೆಂದು ವಿವಿಧ ರೀತಿಯಲ್ಲಿ ಪ್ರಚಾರ ಕಾರ್ಯ ನಡೆಸಿದ ಬಳಿಕವೂ ಕೆಲವೊಂದು ಕಡೆ ಮನೆಗಳಿಂದ ಹಸಿ ಮತ್ತು ಒಣ ಕಸವನ್ನು ವಿಂಗಡಣೆ ಮಾಡದೆ ಕೊಡುತ್ತಿದ್ದಾರೆ. ಈ ಕುರಿತು ಪೌರ ಕಾರ್ಮಿಕರು ವಿಚಾರಿಸಿದ ಅವರನ್ನೇ ನಿಂಧಿಸುವ ಕೆಲಸ ನಡೆಯುತ್ತದೆ. ಆದರೆ ಇಲ್ಲೊಂದು ಕಡೆ ಪೌರ ಕಾರ್ಮಿಕರನ್ನು ನಿಂಧಿಸಿದಲ್ಲದೆ ಅವರಿಗೆ ಹಲ್ಲೆಯನ್ನು ನಡೆಸಿದ ಅಮಾನವೀಯ ಘಟನೆ ಮೊಟ್ಟೆತ್ತಡ್ಕದಲ್ಲಿ ನಡೆದಿದೆ.
ನ.23ರಂದು ಮೊಟ್ಟೆತ್ತಡ್ಕದ ಜನತಾ ಕಾಲೋನಿಯಲ್ಲಿ ಮನೆಯೊಂದರ ಎದುರು ಇರಿಸಿದ್ದ ಕಸವನ್ನು ವಿಂಗಡಣೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಮೇಲಾಧಿಕಾರಿಗಳ ಸೂಚನೆಯಂತೆ ಕಸವನ್ನು ವಿಲೇವಾರಿ ಮಾಡುವುದಿಲ್ಲ ಎಂದಿದ್ದಕ್ಕೆ ಮನೆಯ ವ್ಯಕ್ತಿಯೊಬ್ಬರು ಕಸ ಸಂಗ್ರಹಕಾರರನ್ನು ನಿಂಧಿಸಿದಲ್ಲದೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಕಸ ಸಂಗ್ರಹಕಾರರು ತಮ್ಮ ವಾಹನವನ್ನು ಅಲ್ಲೇ ನಿಲ್ಲಿಸಿ ನ್ಯಾಯಕ್ಕಾಗಿ ಧರಣಿ ನಿರತರಾದರು.
ಘಟನಾ ಸ್ಥಳಕ್ಕೆ ನಗರಸಭೆ ಪೌರಾಯುಕ್ತರು, ಅಧಿಕಾರಿಗಳು ಬಂದು ಕಸಸಂಗ್ರಹಕಾರರಿಗೆ ಹಲ್ಲೆ ನಡೆಸಿರುವುದನ್ನು ಆಕ್ಷೇಪಿಸಿದ್ದಾರೆ. ಜೊತೆಗೆ ಪೊಲೀಸರಿಗೂ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪೌರಕಾರ್ಮಿಕರಿಗೆ ಹಲ್ಲೆ ನಡೆಸಿದವರೆನ್ನಲಾದ ವ್ಯಕ್ತಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಈ ಸಂದರ್ಭದಲ್ಲಿ ನಗರಸಭೆ ಸ್ಥಳೀಯ ಸದಸ್ಯೆ ಶೈಲಾ ಪೈ ಉಪಸ್ಥಿತರಿದ್ದರು.