HomePage_Banner
HomePage_Banner
HomePage_Banner
HomePage_Banner

ರೋಟರಿ ಯುವ, ಫಿಲೋಮಿನಾ ಕಾಲೇಜಿನ ಆಶ್ರಯದಲ್ಲಿ ನಡೆದ 21 ದಿನಗಳ `ಫಿಟ್ ಪುತ್ತೂರು ಮಿಶನ್’ ಯಶಸ್ವಿ ತೆರೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

-ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಮಾನವನ ದೈನಂದಿನ ಒತ್ತಡ ಹಾಗೂ ಅನಿಯಮಿತ ಆಹಾರಕ್ರಮದಿಂದಾಗಿ ತನ್ನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವಲ್ಲಿ ಎಡಹುವುದು ಸಹಜ. ಎಲ್ಲಿ ತನಕ ಆರೋಗ್ಯ ಉತ್ತಮವಾಗಿರುವುದೋ ಅಲ್ಲಿತನಕ ಮನುಷ್ಯನ ಆಯುಷ್ಯವೂ ವೃದ್ಧಿಸಿಕೊಳ್ಳುತ್ತದೆ ಎಂಬುದು ವೈದ್ಯಕೀಯ ಅಂಕಿ ಅಂಶಗಳಿಂದ ದೃಢಪಟ್ಟಿದೆ. ಈ ನಿಟ್ಟಿನಲ್ಲಿ ಯುವಸಮೂಹದಿಂದ ಕೂಡಿದ ಪುತ್ತೂರಿನ ಯುವ ಸಂಸ್ಥೆಯೊಂದು, ಸ್ಥಳೀಯ ಕಾಲೇಜೊಂದರ ಸಹಯೋಗದಲ್ಲಿ ಮಾನವನ ದೈಹಿಕ ಆರೋಗ್ಯಕ್ಕೆ ವ್ಯಾಯಾಮವೊಂದೇ ಮಾರ್ಗ ಎನ್ನುವಂತೆ ಅಪೂರ್ವವಾದ ಹೆಜ್ಜೆಯನ್ನಿಟ್ಟಿದೆ ಮಾತ್ರವಲ್ಲ, ಇದೀಗ ಕಾರ್ಯಕ್ರಮ ಯಶಸ್ವಿ ತೆರೆಯನ್ನೂ ಕಂಡಿದೆ.

ಹೌದು, ರೋಟರಿ ಕ್ಲಬ್ ಪುತ್ತೂರು ಯುವ ಎಂಬ ಸಂಸ್ಥೆಯೊಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಸಹಯೋಗದೊಂದಿಗೆ ನವೆಂಬರ್ ಒಂದು ಕನ್ನಡ ರಾಜ್ಯೋತ್ಸವ ದಿನದಂದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ದೃಢತೆಗೆ ೨೧ ದಿನಗಳ `ಫಿಟ್ ಪುತ್ತೂರು ಮಿಶನ್’ ಎನ್ನುವ ಹೆಸರಿನೊಂದಿಗೆ ಚಾಲನೆ ನೀಡಿತ್ತು. ಹಲವಾರು ಕ್ರೀಡಾಪಟುಗಳನ್ನು ಪರಿಚಯಿಸಿದ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಬೆಳ್ಳಂ ಬೆಳಿಗ್ಗೆ ನಡಿಗೆ, ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಯೋಗ ಮತ್ತು ದೈಹಿಕ ಆರೋಗ್ಯಕ್ಕೆ ಸಂಬಂಧಪಟ್ಟಂತೆ ತಜ್ಞ ವೈದ್ಯರುಗಳ ಮಾತು ಇವೆಲ್ಲವೂ ಕಳೆದ ೨೧ ದಿನಗಳಿಂದ ನಿತ್ಯವೂ ಅಲ್ಲಿ ಮೂಡಿ ಬಂದಿತ್ತು. ಮಾತ್ರವಲ್ಲದೆ ನಿತ್ಯವೂ ಸುಮಾರು ೧೦೦ಕ್ಕೂ ಮಿಕ್ಕಿ ಸಾರ್ವಜನಿಕರು ವ್ಯಾಯಾಮವನ್ನು ಮಾಡುವುದರೊಂದಿಗೆ ಬೆವರನ್ನು ಹರಿಸುತ್ತಿರುವುದು ನೋಡಿದಾಗ ಸಂಘಟನೆಯವರು ಹಮ್ಮಿಕೊಂಡ ಈ ವಿಶಿಷ್ಟ ಕಾರ್ಯಕ್ಕೆ ವಿಶೇಷ ಮೆರುಗು ತಂದಿತ್ತು.

ಸಮಾರೋಪ ಸಮಾರಂಭ:
ನ.೨೨ ರಂದು ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಜರಗಿದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪುತ್ತೂರು ಸಹಾಯಕ ಆಯುಕ್ತರಾದ ಡಾ.ಯತೀಶ್ ಉಳ್ಳಾಲ್‌ರವರು, ರೋಟರಿ ಸಂಸ್ಥೆಯು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಸಮಾಜದ ಶಕ್ತಿಯಾಗಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ರೋಟರಿ ಯುವ ಸಂಸ್ಥೆಯು ಮಾನವನ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯೋಗ, ಅರೋಬಿಕ್ ವ್ಯಾಯಾಮಗಳನ್ನು ಕಲಿಸಿಕೊಡುವ ಮೂಲಕ ಉತ್ತಮ ಹೆಜ್ಜೆಯನ್ನಿಟ್ಟಿದೆ ಎಂದರೆ ತಪ್ಪಾಗಲ್ಲ. ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಕ್ರಮಗಳು ನಡೆದು ಜನರ ಮೆಚ್ಚುಗೆಯನ್ನು ಪಡೆಯಲಿ ಎಂದರು.

ರೋಟರಿ ಜಿಲ್ಲಾ ಗವರ್ನರ್ ರಂಗನಾಥ್ ಭಟ್‌ರವರು ಮಾತನಾಡಿ, ರೋಟರಿ ಜಿಲ್ಲಾ ಯೋಜನೆಗಳಾದ ಶಿಕ್ಷಣ, ನೀರು, ಪರಿಸರ ಮತ್ತು ಆರೋಗ್ಯ ಇವುಗಳಿಗೆ ಮೊದಲು ಆದ್ಯತೆ ನೀಡಬೇಕಾಗಿದೆ. ಆರೋಗ್ಯದ ದೃಷ್ಟಿಯಿಂದ ಜನರು ಒಂದು ಚಮಚ ಸಕ್ಕರೆ, ಉಪ್ಪು, ಎಣ್ಣೆ ಅಂಶವನ್ನು ಕಡಿಮೆ ಮಾಡಿಕೊಂಡು, ಅರ್ಧ ಗಂಟೆ ವ್ಯಾಯಾಮವನ್ನು ನಿತ್ಯವೂ ಮಾಡಿದಾಗ ನಮ್ಮ ಆರೋಗ್ಯ ಸ್ಥಿರವಿರಬಲ್ಲುದು. ಈ ನಿಟ್ಟಿನಲ್ಲಿ ರೋಟರಿ ಯುವ ಸಂಸ್ಥೆಯು ಫಿಲೋಮಿನಾ ಕಾಲೇಜಿನೊಂದಿಗೆ ಸೇರಿಕೊಂಡು ಫಿಟ್ ಮಿಶನ್ ಪುತ್ತೂರು ಎನ್ನುವ ಹೆಸರಿನಲ್ಲಿ ಕಳೆದ ೨೧ ದಿನಗಳಿಂದ ಹಮ್ಮಿಕೊಂಡ ಈ ಕಾರ್ಯಕ್ರಮ ಮೆಚ್ಚುಗೆಯನ್ನು ಪಡೆಯುವಂತಹುದು ಎಂದರು.

ಕಾಲೇಜಿನ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ, ನಾವೆಲ್ಲರೂ ಸಂತೋಷದಿಂದ ಬಾಳಲು ಆಶಿಸುವುದು ಸಹಜ. ನಮಗೆ ಸಂತೋಷ ಬೇಕಿದ್ದರೆ ನಮ್ಮಲ್ಲಿ ಉತ್ತಮ ಆರೋಗ್ಯ ಬೇಕಾಗುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ವ್ಯಾಯಾಮ ಅಗತ್ಯ. ಕೇವಲ ಶರೀರ ಮಾತ್ರ ಗಟ್ಟಿಯಾದರೆ ಸಾಲದು ನಮ್ಮ ಮನಸ್ಸನ್ನು ಕೂಡ ಒಳ್ಳೆಯ ವಿಚಾರಗಳಿಂದ ಗಟ್ಟಿಗೊಳಿಸಬೇಕಾಗಿದೆ. ಮನಸ್ಸು ಕೆಟ್ಟದಾದರೆ ನಮ್ಮಲ್ಲಿ ಯಾವುದೇ ಸಕಾರಾತ್ಮಕ ಚಿಂತನೆಗಳು ಹುಟ್ಟಿಕೊಳ್ಳಲು ಸಾಧ್ಯವಾಗದು ಮತ್ತು ಪರರಿಗೂ ಒಳ್ಳೆಯದಾಗುವುದಿಲ್ಲ ಎಂದರು.

ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ರೋಟರಿ ಯುವ ಹಾಗೂ ಫಿಲೋಮಿನಾ ಕಾಲೇಜು ವಿದ್ಯಾಸಂಸ್ಥೆಯನ್ನು ಶ್ಲಾಘಿಸಬೇಕಾಗಿದೆ. ಕೋವಿಡ್ ಕಾಲಘಟ್ಟದಲ್ಲಿ ಜನರಿಗೆ ಹೊರಗೆ ಹೋಗಲು ಹೆದರುವ ಸಂದರ್ಭದಲ್ಲಿ ತಮ್ಮ ಆರೋಗ್ಯದ ಬಗ್ಗೆ ವ್ಯತಿರಿಕ್ತ ಪರಿಣಾಮ ಆಗುವುದು ಸಹಜ. ಹಲವಾರು ಮಂದಿಗೆ ಸಣ್ಣ ಪ್ರಾಯದಲ್ಲಿಯೇ ಮಧುಮೇಹ ಕಾಣಿಸಿಕೊಳ್ಳುತ್ತಿರುವುದು ವ್ಯಾಯಾಮದ ಕೊರತೆಯಿಂದಲೇ ಆಗಿದೆ. ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇಂತಹ ದೈಹಿಕ ವ್ಯಾಯಾಮವುಳ್ಳ ಕಾರ್ಯಕ್ರಮಗಳು ನಡೆಸಿರುವುದು ಅರ್ಥಪೂರ್ಣವಾಗಿದೆ ಎಂದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ರತ್ನಾಕರ್ ರೈ ಕೆದಂಬಾಡಿಗುತ್ತು ಮಾತನಾಡಿ, ಮಾನವನ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರೋಟರಿ ಯುವ ಸಂಸ್ಥೆಯು, ಫಿಲೋಮಿನಾ ಕಾಲೇಜಿನ ಸಹಯೋಗದೊಂದಿಗೆ ಒಂದೊಳ್ಳೆಯ ಮುನ್ನುಡಿಯನ್ನು ಇಟ್ಟಿದೆ ಎಂದರೆ ತಪ್ಪಾಗೋದಿಲ್ಲ. ರೋಟರಿ ಯುವದ ಸದಸ್ಯರ ಸತತ ಪರಿಶ್ರಮದಿಂದ ಈ ಫಿಟ್ ಪುತ್ತೂರು ಮಿಶನ್ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

ರೋಟರಿ ವಲಯ ಸೇನಾನಿ ಎ.ಜೆ ರೈ, ರೋಟರಿ ಜಿಲ್ಲಾ ಕಾರ್ಯದರ್ಶಿ ಆಸ್ಕರ್ ಆನಂದ್, ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ, ರೋಟರಿ ಯುವದ ಸದಸ್ಯರು ಮತ್ತು ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒಂದು ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಯುವದ ಅಧ್ಯಕ್ಷ ಡಾ|ಹರ್ಷಕುಮಾರ್ ರೈ ಮಾಡಾವು ಸ್ವಾಗತಿಸಿ, ಕಾರ್ಯದರ್ಶಿ ಉಮೇಶ್ ನಾಯಕ್ ವಂದಿಸಿದರು.

ಸನ್ಮಾನ…ಗುರುತಿಸುವಿಕೆ…
ಕೊವಿಡ್ ೧೯ ಸಂದರ್ಭದಲ್ಲಿ ಕೊರೋನಾ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್, ರೋಟರಿ ಜಿಲ್ಲಾ ಗವರ್ನರ್ ರಂಗನಾಥ್ ಭಟ್, ಕಳೆದ ೨೧ ದಿನಗಳ ಫಿಟ್ ಪುತ್ತೂರು ಮಿಶನ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದ ಕಾರ್ಯಕ್ರಮದ ಚೇರ್‌ಮ್ಯಾನ್ ಪಶುಪತಿ ಶರ್ಮ, ಫಿಟ್ನೆಸ್ ಟ್ರೈನರ್ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಯೋಗ ಗುರು ಕಿಶೋರ್ ಕುಮಾರ್‌ರವರನ್ನು ಗುರುತಿಸಿ ಸನ್ಮಾನಿಸಲಾಯಿತು. ಸಹಕಾರ ನೀಡಿದ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ ಹಾಗೂ ರೋಟರಿ ಯುವದ ಅನ್ನಪೂರ್ಣ ಶರ್ಮರವರನ್ನು ಹೂಗುಚ್ಛ ನೀಡುವ ಮೂಲಕ ಗುರುತಿಸಿಕೊಳ್ಳಲಾಯಿತು.

ಕಿರುಚಿತ್ರ ಬಿಡುಗಡೆ..
ರೋಟರಿ ಜಿಲ್ಲಾ ಪ್ರಾಜೆಕ್ಟ್ ಆಗಿರುವ `ಏಕ್ ಚಮಚ್ ಕಮ್(ಸಕ್ಕರೆ/ಉಪ್ಪು/ಎಣ್ಣೆ), ಚಾರ್ ಕದಮ್ ಆಗೇ(ವ್ಯಾಯಾಮ)’ ಇದರ ಕುರಿತು ಚಿತ್ರೀಕರಣ ಮಾಡಿರುವ ಕಿರುಚಿತ್ರವನ್ನು ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ರಂಗನಾಥ್ ಭಟ್‌ರವರು ಬಿಡುಗಡೆಗೊಳಿಸಿದರು.

ಬಿಪಿ, ಶುಗರ್, ಬಾಡಿ ಮಾಸ್ ಇಂಡೆಕ್ಸ್ ದಾಖಲೀಕರಣ…
ಶಿಬಿರದ ಆರಂಭದಲ್ಲಿ ಬಂದಂತಹ ಪ್ರತಿಯೋರ್ವ ಶಿಬಿರಾರ್ಥಿಗಳ ಬಿಪಿ, ಶುಗರ್ ಹಾಗೂ ತೂಕ/ಎತ್ತರ/ಪ್ರಾಯವನ್ನೊಳಗೊಂಡ ಬಾಡಿ ಮಾಸ್ ಇಂಡೆಕ್ಸ್‌ನ್ನು ದಾಖಲು ಮಾಡಲಾಗಿತ್ತು. ೨೧ ದಿನಗಳ ಬಳಿಕವೂ ಬಿಪಿ, ಶುಗರ್ ಮತ್ತು ಬಾಡಿ ಮಾಸ್ ಇಂಡೆಕ್ಸ್‌ನ್ನು ಮಾಡಲಾಗಿದ್ದು, ಮೊದಲಿನ ಮತ್ತು ಬಳಿಕದ ಅಂತರವನ್ನು ಪರೀಕ್ಷಿಸಲಾಗಿತ್ತು. ಕೆಲವರು ಮೂರು/ಎರಡು/ಒಂದು ಕೆ.ಜಿ ತೂಕ ಕಡಿಮೆಯಾಗಿರುವುದು ಕಂಡು ಬಂದಿತ್ತು ಮತ್ತು ಕೆಲವರು ಯಥಾಸ್ಥಿತಿಯಲ್ಲಿ ತೂಕವನ್ನು ಕಾಯ್ದುಕೊಂಡಿದ್ದರು. ಆಗಮಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.