ನಿಡ್ಪಳ್ಳಿ; ಇಲ್ಲಿಯ ಮುಂಡೂರು ದೇವರ ಸಾನಿಧ್ಯದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ಕಳೆದ ನ.18 ರಿಂದ ಆರಂಭವಾಗಿ ಮುಂದುವರಿದು ನಡೆಯುತ್ತಿದೆ.ಇನ್ನೂ ಕೆಲವು ದಿನಗಳು ಪ್ರಶ್ನಾ ಚಿಂತನೆ ಮುಂದುವರಿಯಲಿದೆ.

ಪ್ರಶ್ನಾ ಚಿಂತನೆ ನಡೆಸುತ್ತಾ ಹೋದ ಹಾಗೆ ದೇವರ ಸಾನಿಧ್ಯ ಸುಮಾರು 800 ವರ್ಷಗಳ ಇತಿಹಾಸವಿರುವ ದೇವಸ್ಥಾನ ಎಂದು ಕಂಡು ಬರುತ್ತದೆ. ಅಲ್ಲದೆ ಈ ಸಾನಿಧ್ಯ ಕೇವಲ ನಿಡ್ಪಳ್ಳಿ ಗ್ರಾಮಕ್ಕೆ ಮಾತ್ರ ಸೀಮಿತವಾಗದೆ ಸುತ್ತ ಮುತ್ತಲಿನ ಸುಮಾರು 8 ಗ್ರಾಮಕ್ಕೆ (ಮಾಗಣೆ) ಇದು ಒಳಗೊಂಡಿದೆ ಎಂದೂ ಚಿಂತನೆಯಲ್ಲಿ ಕಂಡು ಬಂದಿದೆ. ದೇವಸ್ಥಾನ ಅಂತರ ಮಾಡಿನ ರೂಪ ಹೊಂದಿರುವ ಸಾಧ್ಯತೆ ಇದ್ದು ದೊಡ್ಡ ಗಾತ್ರದ ಶಿಲ್ಪಾಕಾರ ಹೊಂದಿತ್ತು ಎಂದೂ ಕಂಡು ಬಂದಿದೆ.ಬಹಳ ಕಾರಣಿಕ ಕ್ಷೇತ್ರವಾಗಿ ಇದು ಕಂಗೊಳಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತದೆ.

ಖ್ಯಾತ ಜ್ಯೋತಿಷ್ಯರಾದ ವಳಕುಂಜ ವೆಂಕಟ್ರಮಣ ಭಟ್ ಇವರ ನೇತೃತ್ವದಲ್ಲಿ ಒಟ್ಟು 5 ಮಂದಿ ಜ್ಯೋತಿಷ್ಯರುಗಳ ತಂಡದಿಂದ ಪ್ರಶ್ನಾ ಚಿಂತನೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಖ್ಯಾತ ವಾಸ್ತುಶಿಲ್ಪಿಗಳೂ ಪಾಲ್ಗೊಳ್ಳಲಿದ್ದಾರೆ ಎಂದು ಮುರಳೀಕೃಷ್ಣ ಮುಂಡೂರು ತಿಳಿಸಿದ್ದಾರೆ. ಮುಂಡೂರು ವಾಸುದೇವ ಭಟ್ ಮತ್ತು ಕುಟುಂಬಸ್ಥರು, ಶ್ರೀ ಉಳ್ಳಾಕುಲು ಪರಿವಾರ ದೈವಗಳ ದೈವಸ್ಥಾನ ಶ್ರೀ ಕ್ಷೇತ್ರ ನಿಡ್ಪಳ್ಳಿ ಇದರ ಅನುವಂಶಿಕ ಆಡಳಿತ ಮೊಕ್ತೇಸರ ಪ್ರವೀಣ ಎನ್.ಆರಿಗ, ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ ಸೇರಿದಂತೆ ಊರ ಪರವೂರ ನೂರಾರು ಭಕ್ತಾದಿಗಳು ದಿನಂಪ್ರತಿ ಬಂದು ಪಾಲ್ಗೊಳ್ಳುತ್ತಿದ್ದಾರೆ.