- ಮಾನವೀಯತೆ, ಸಹೃದಯಿ ಪಕ್ಷವೇ ಬಿಜೆಪಿ- ಮಲ್ಲಿಕಾ ಪ್ರಸಾದ್
- ಅಸಮಾನ್ಯ ಶಕ್ತಿಯನ್ನು ಹೊರ ತರುವ ಕೆಲಸ ಆಗಲಿದೆ – ಸಂಜೀವ ಮಠಂದೂರು
- ತತ್ವ ಸಿದ್ದಾಂತವನ್ನು ಮುಂದಿನ ಪೀಳಿಗೆಗೆ ಒಯ್ಯಬೇಕು – ರಾಜೇಶ್ ಕುಂದಾಪುರ
- ರಾಷ್ಟ್ರವನ್ನು ಪರಮವೈಭವಕ್ಕೆ ಕೊಂಡೊಯ್ಯವ ಕಾರ್ಯಕರ್ತರಾಗಬೇಕು – ಗೋಪಾಲಕೃಷ್ಣ ಹೇರಳೆ
ಪುತ್ತೂರು: ಪಕ್ಷದ ಅನ್ಯಾನ್ಯ ಜವಾಬ್ದಾರಿ, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರಿಗೆ ಧ್ಯೇಯ ನಿಷ್ಠೆ ಮತ್ತು ದೇಶ ನಿಷ್ಠೆ ಧಾರಣೆ ಮಾಡಿ ರಾಜ್ಯ ಮತ್ತು ದೇಶಕ್ಕೆ ನೇತೃತ್ವ ನೀಡುವ ಸೇವೆಯನ್ನು ತಿಳಿಸುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಬಿಜೆಪಿ ಗ್ರಾಮಾಂತರ ಮತ್ತು ನಗರ ಮಂಡಲದ ಅಪೇಕ್ಷಿತ ಮಂದಿಗೆ ಏಕಕಾಲದಲ್ಲಿ ಎರಡು ಕಡೆ ಎರಡು ದಿನಗಳ ಪ್ರಶಿಕ್ಷಣ ವರ್ಗ ಆರಂಭಗೊಂಡಿದೆ.
ರಾಷ್ಟ್ರೀಯ ಪಕ್ಷವಾದ ಬಿಜೆಪಿ ಸಂಘಟನಾತ್ಮಕವಾಗಿ ಬಲಿಷ್ಠಗೊಳ್ಳಬೇಕು. ಪಂಚಾಯತ್ ಮಟ್ಟದಿಂದ ಕೇಂದ್ರ ಮಟ್ಟದವರೆಗೆ ಸರ್ವಸ್ತರಗಳಲ್ಲಿ ಅಧಿಕಾರಕ್ಕೆ ಬರಬೇಕು. ಯುವಕರು-ಮಹಿಳೆಯರು ಸೇರಿದಂತೆ ಹೊಸ ಕಾರ್ಯಕರ್ತರ ತಂಡ ಸಿದ್ಧಗೊಳ್ಳಬೇಕು. ಹಿರಿಯರ ಮಾರ್ಗದರ್ಶನದೊಂದಿಗೆ ಬಿಜೆಪಿಯ ಸೈದ್ಧಾಂತಿಕ ನೆಲೆಗಟ್ಟಿನೊಂದಿಗೆ ಪಕ್ಷವನ್ನು ಸಂಘಟಿಸಬೇಕು. ಬೂತ್ ಮಟ್ಟದಲ್ಲಿ ಗೆದ್ದರೆ ದೇಶ ಮಟ್ಟದಲ್ಲಿ ಪಕ್ಷ ಗೆಲ್ಲಲು ಸಾಧ್ಯ ಎಂಬ ಚಿಂತನೆಯೊಂದಿಗೆ ಈ ಪ್ರಶಿಕ್ಷಣ ಶಿಬಿರ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೇಶವು ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯು ಇನ್ನಷ್ಟು ಬಲಿಷ್ಠಗೊಳ್ಳುವ ಮತ್ತು ಪಕ್ಷವನ್ನು ಬಲಿಷ್ಠಗೊಳಿಸುವ ಹೊಣೆಗಾರಿಕೆಯ ಕುರಿತು ಕೂಡಾ ಪ್ರಶಿಕ್ಷಣ ವರ್ಗದಲ್ಲಿ ಕಾರ್ಯಕರ್ತರಿಗೆ ಮಾಹಿತಿ ಸಿಗಲಿದೆ.
ಬಿಜೆಪಿ ನಗರ ಮಂಡಲದ ೨೫ ಮಂದಿ ನಗರಸಭಾ ಸದಸ್ಯರು ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಸೇರಿದಂತೆ ೬೨ ಮಂದಿ, ಗ್ರಾಮಾಂತರ ಮಂಡಲದಿಂದ ಪದಾಧಿಕಾರಿಗಳು, ವಿವಿಧ ಜವಾಬ್ದಾರಿಯನ್ನು ಹೊಂದಿರುವ ಕಾರ್ಯಕರ್ತರು, ಬಿಜೆಪಿ ಜನಪ್ರತಿನಿಧಿಗಳು ಸೇರಿದಂತೆ ೭೨ ಮಂದಿ ಪ್ರಮುಖರು ಪಾಲ್ಗೊಂಡಿರುವ ಎರಡು ದಿನಗಳ ಪ್ರಶಿಕ್ಷಣ ವರ್ಗ ಆರಂಭಗೊಂಡಿದೆ. ಬಿಜೆಪಿ ಗ್ರಾಮಾಂತರ ಮಂಡಲದ ಪ್ರಶಿಕ್ಷಣ ವರ್ಗ ಕೆಮ್ಮಾಯಿ ಶ್ರೀ ಮಹಾವಿಷ್ಣು ಮಂಟಪದಲ್ಲಿ ಮತ್ತು ನಗರ ಮಂಡಲದ ಪ್ರಶಿಕ್ಷಣ ವರ್ಗವು ಕಲ್ಲೇಗ ಶ್ರೀ ಭಾರತ್ ಮಾತ ಸಮುದಾಯ ಭವನದಲ್ಲಿ ನಡೆಯುತ್ತಿದೆ.
ಪ್ರಶಿಕ್ಷಣ ವರ್ಗ ಉದ್ಘಾಟನೆ:
ಗ್ರಾಮಾಂತರ ಮಂಡಲದ ಪ್ರಶಿಕ್ಷಣ ವರ್ಗವನ್ನು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಮತ್ತು ಗ್ರಾಮಾಂತರ ಮಂಡಲ ಪ್ರಶಿಕ್ಷಣ ವರ್ಗವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ಬಳಿಕ ಆರಂಭದ ದಿನದಲ್ಲಿ ೧೦ ಅವಧಿಗಳಿಗೆ ಸಂಬಂಧಿಸಿ ಹಲವು ವಿಷಯಗಳ ಕುರಿತು ಪ್ರಶಿಕ್ಷಣ ವರ್ಗ ನಡೆಯಿತು.
ಮಾನವೀಯತೆ, ಸಹೃದಯಿ ಪಕ್ಷವೇ ಬಿಜೆಪಿ:
ನಗರ ಮಂಡಲದ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿದ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಅವರು ಮಾತನಾಡಿ ನಾವೆಲ್ಲ ದೇಶ ಭಕ್ತರು, ನಮ್ಮಲ್ಲಿ ನಿಸ್ವಾರ್ಥ ಮತ್ತು ಪ್ರಾಮಾಣಿಕತೆ ಇರಬೇಕು. ಬಿಜೆಪಿಯಲ್ಲಿ ದೇಶ ಸೇವೆಯೇ ಮುಖ್ಯ ಎಂದ ಅವರು ದೇಶವನ್ನು ಪ್ರೀತಿ ಮಾಡುವ ಪ್ರತಿಯೊಬ್ಬರನ್ನು ಸಮಾನತೆಯನ್ನು ನೋಡುವ ಪಕ್ಷ ಬಿಜೆಪಿ ಹಾಗಾಗಿ ಇಲ್ಲಿ ಮಾನವೀಯತೆ ಮತ್ತು ಸಹೃಯದವಂತಿಕೆ ಇದೆ ಎಂದರು.
ಅಸಮಾನ್ಯ ಶಕ್ತಿಯನ್ನು ಹೊರ ತರುವ ಕೆಲಸ ಆಗಲಿದೆ:
ಗ್ರಾಮಾಂತರ ಮಂಡಲದ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸಾಮಾನ್ಯ ಸ್ತರದಿಂದ ಬಂದ ಕಾರ್ಯಕರ್ತರಲ್ಲಿ ನಾಯಕತ್ವ ಬೆಳೆಸಿ ಅವರಲ್ಲಿ ಅಸಾಮಾನ್ಯ ಶಕ್ತಿಯನ್ನು ಹೊರ ತರುವ ಕೆಲಸವನ್ನು ಬಿಜೆಪಿ ಮಾಡುತ್ತದೆ. ಏಕತಾನತೆಯನ್ನು ಒಗ್ಗೂಡಿಸುವ ಸರ್ದಾರ್ ವಲ್ಲಭಬಾಯಿ ಪಟೇಲರ ನೇತೃತ್ವ ಈ ಸ್ವರೂಪದ ದೇಶ ಉಳಿವಿಗೆ ಸಹಾಯವಾಯಿತು. ದೇಶ ವಿಭಜನೆಯ ದುರಂತವನ್ನು ತಪ್ಪಿಸಿ ಅಖಂಡವಾಗಿ ಉಳಿದದ್ದು ಇಷ್ಟು ಶಕ್ತಿಶಾಲಿಯಾಗಿರಲು ಕಾರಣವಾಯಿತು. ಆದರೆ ಈಗಲೂ ರಾಷ್ಟ್ರವಾದವನ್ನು ದುರ್ಬಲಗೊಳಿಸುವ ಸಂಚು ನಡೆಯುತ್ತಿದೆ. ಇದರ ಭಾಗವಾಗಿ ಸಮಾಜವನ್ನು ಒಡೆಯುವ ಭಾಷೆ, ಪ್ರಾಂತ್ಯದ ಹೆಸರಿನಲ್ಲಿ ಇಬ್ಬಾಗ ಮಾಡುವ ಸಂಚು ಮುಂದುವರಿಸಿದ್ದಾರೆ. ಇದಕ್ಕೆ ಉತ್ತರ ರಾಷ್ಟ್ರವಾದ ಮಾತ್ರ ಎಂದರು. ರಾಷ್ಟ್ರವಾದದ ಫಲವನ್ನು ದೇಶ ಈಗ ಅನುಭವಿಸುತ್ತಿದೆ. ಪ್ರಶಿಕ್ಷಣ ವರ್ಗವು ಪಕ್ಷದ ಅನ್ಯಾನ್ಯ ಜವಾಬ್ದಾರಿ ಹೊಂದಿರುವ ಪ್ರಮುಖರು ಹಾಗೂ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಮತ್ತು ಪಕ್ಷಕ್ಕಾಗಿ ಕೆಲಸ ಮಾಡಲು ಇನ್ನಷ್ಟು ಪ್ರೇರಣೆ ನೀಡುವ ಕೆಲಸ ಮಾಡುತ್ತದೆ. ಸೈದ್ಧಾಂತಿಕವಾಗಿ ಬಿಜೆಪಿಯ ವಿಚಾರಗಳನ್ನು ತಿಳಿಯ ಪಡಿಸುವ ಹಾಗೂ ಜನರನ್ನು ಯಾವ ರೀತಿಯಲ್ಲಿ ತಲುಪಬೇಕು ಎಂಬ ಮಾನಸಿಕತೆಯನ್ನು ಪ್ರಶಿಕ್ಷಣ ವರ್ಗ ಸಿದ್ಧಗೊಳಿಸುತ್ತದೆ ಎಂದರು.
ತತ್ವ ಸಿದ್ದಾಂತವನ್ನು ಮುಂದಿನ ಪೀಳಿಗೆಗೆ ಒಯ್ಯಬೇಕು:
ಬಿಜೆಪಿ ಜಿಲ್ಲಾ ಸಹಪ್ರಭಾರಿ ರಾಜೇಶ್ ಕುಂದಾಪುರ ಅವರು ಮಾತನಾಡಿ ಇವತ್ತು ನಾವು ಒಳ್ಳೆಯ ಸ್ಥಿತಿಯಲ್ಲಿದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ಹಿರಿಯ ಕಾರ್ಯಕರ್ತರ ಶ್ರಮ. ಹಾಗಾಗಿ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಮುಂದೆ ಸಾಗಬೇಕು. ೨ ದಿನದ ಶಿಕ್ಷಣ ಚೆನ್ನಾಗಿ ಪಡೆಯಬೇಕು. ಇದರ ಜೊತೆಗೆ ಪಕ್ಷದ ತತ್ವ ಸಿದ್ಧಾಂತವನ್ನು ಮುಂದಿನ ಪೀಳಿಗೆಗೆ ಒಯ್ಯಬೇಕೆಂದರು.
ರಾಷ್ಟ್ರವನ್ನು ಪರಮವೈಭವಕ್ಕೆ ಕೊಂಡೊಯ್ಯವ ಕಾರ್ಯಕರ್ತರಾಗಬೇಕು:
ಬಿಜೆಪಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ಅವರು ಮಾತನಾಡಿ ಆಡಳಿತ ವ್ಯವಸ್ಥೆ ಮತ್ತು ಸಿದ್ದಾಂತಕ್ಕೆ ಟಚ್ ಕೊಡುವ ಮೂಲಕ ಅಭ್ಯಾಸ ವರ್ಗ ನಡೆಯುತ್ತದೆ. ನಾವು ಪರಿಪೂರ್ಣತೆಯಾಗಿ ಪಕ್ಷದ ಸಿದ್ಧಾಂತವನ್ನು ಗ್ರಹಿಸಿಕೊಂಡು ಒಳ್ಳೆಯ ಕಾರ್ಯತರಾಗಬೇಕು. ವ್ಯಕ್ತಿ ನಿರ್ಮಾಣ ಕಾರ್ಯದಲ್ಲಿ ಪಕ್ಷ ಇವತ್ತು ಏನು ನಿರ್ಣಾಯಕ ತೆಗೆದು ಕೊಂಡಿಯೋ ಅದಕ್ಕೆ ಪೂರಕವಾಗಿ ನಮ್ಮಕೆಲಸ ಕಾರ್ಯ ಇರಬೇಕೆಂದು ಅಭ್ಯಾಸ ವರ್ಗ ನಿಶ್ಚಯಿಸಲಾಗಿದೆ. ಒಟ್ಟಿನಲ್ಲಿ ಅಭ್ಯಾಸ ವರ್ಗದ ಮೂಲಕ ನಮ್ಮ ಧಾರೆಯನ್ನು ಗಟ್ಟಿ ಮಾಡಿಕೊಂಡು ಹೋಗಬೇಕು. ವಿಚಾರ ಧಾರೆಯನ್ನು ತಿಳಿದು ಕೊಳ್ಳಬೇಕು. ಸಾಂಸ್ಕೃತಿಕ ಆಧಾರಲ್ಲಿ ರಾಷ್ಟ್ರವನ್ನು ಪರಮವೈಭವಕ್ಕೆ ಕೊಂಡೊಯ್ಯುವ ಕಾರ್ಯಕರ್ತರಾಗಬೇಕು ಎಂದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ನಗರ ಮಂಡಲದ ಉಪಾಧ್ಯಕ್ಷೆ ಜ್ಯೋತಿ ಆರ್ ನಾಯಕ್ ಆಶಯ ಗೀತೆ ಹಾಡಿದರು. ಪ್ರಶಿಕ್ಷಣ ಸಮಿತಿ ಸಂಚಾಲಕ ರಾಮ್ ದಾಸ್ ಹಾರಾಡಿ ಸ್ವಾಗತಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಪ್ರಕೋಷ್ಠಚಾ ಸಂಚಾಲಕ ವಿನಯ ಭಂಡಾರಿ ವಂದಿಸಿದರು. ಗ್ರಾಮಾಂತರ ಮಂಡಲದ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಹತ್ತು ಅವಧಿಯ ಅಭ್ಯಾಸ ವರ್ಗ ನಡೆಯಿತು.