HomePage_Banner
HomePage_Banner
HomePage_Banner
HomePage_Banner

ಅಕ್ರಮ ಗೋ ಸಾಗಾಟಕ್ಕೆ ಕ್ರಮಕೈಗೊಳ್ಳುವಂತೆ ಪೊಲೀಸರ ಇಲಾಖೆಗೆ ಆಗ್ರಹ – ತಾ.ಪಂ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು; ಅಕ್ರಮ ಗೋ ಸಾಗಾಟವು ತಾಲೂಕಿನಾದ್ಯಂತ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹ ವ್ಯಕ್ತಪಡಿಸಿದರು.

ಸಭೆಯು ನ.೨೬ರಂದು ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ರವರ ಅಧ್ಯಕ್ಷತೆಯಲ್ಲಿ ತಾಪಂ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸದಸ್ಯೆ ಪೌಝಿಯಾ ಇಬ್ರಾಹಿಂ ಮಾತನಾಡಿ, ಸಾಕಲು ದನ ಸಾಗಾಟ ಮಾಡಲು ಸಂಬಂಧಪಟಟ್ ದಾಖಲೆಗಳನ್ನು ಹೊಂದಿದ್ದರೂ ಈಶ್ವರಮಂಗಲ ಹೊರ ಠಾಣಾ ಪೊಲೀಸರು ತೊಂದರೆ ನೀಡುತ್ತಿದ್ದಾರೆ. ಯಾವ ಠಾಣಾ ಪೊಲೀಸರು ತೊಂದರೆ ಕೊಟ್ಟಿಲ್ಲ. ಆದರೆ ಈಶ್ವರಮಂಗಲದಲ್ಲಿ ದಾಖಲೆಗಳಿದ್ದರೂ ಇದ್ದರೂ ದಂಡ ಕಟ್ಟುವಂತೆ ಹೇಳುತ್ತಾರೆ. ಆದರೆ ರಶೀದಿ ಕೊಡುವುದಿಲ್ಲ. ಕೇಳಿದರೆ ಬೆದರಿಕೆ ಹಾಕುತ್ತಾರೆ ಎಂದು ಆರೋಪಿಸಿದರು. ದಾಖಲೆಗಳಿದ್ದು ದಂಡ ಪಾವತಿಸಲು ಪೊಲೀಸರು ತಿಳಿಸಿದರೆ ನೇರವಾಗಿ ಸಹಾಯಕ ಪೊಲೀಸ್ ಅಧೀಕ್ಷರಿಗೆ ದೂರು ನೀಡುವಂತೆ ನಗರ ಠಾಣಾ ಎಸ್.ಐ ಜಂಬೂರಾಜ್ ಮಹಾಜನ್ ತಿಳಿಸಿದರು. ಸದಸ್ಯ ಹರೀಶ್ ಬಿಜತ್ರೆ ಮಾತನಾಡಿ, ತಾಲೂಕಿನ ವಿವಿಧ ಭಾಗಗಳಲ್ಲಿ ಈ ಅಕ್ರಮ ಗೋ ಸಾಗಾಟ ನಡೆಸಲಾಗುತ್ತಿದ್ದು, ಇದರಲ್ಲಿ ಪರವಾನಿಗೆ ನೀಡುವ ಅಧಿಕಾರಿಗಳು ಹಾಗೂ ಕೆಲ ಪೊಲೀಸರು ಶಾಮೀಲಾಗಿದ್ದಾರೆ. ಹಣದಾಸೆಗೆ ಸುಳ್ಳು ಪರವಾನಿಗೆ ನೀಡಿ ಅಕ್ರಮ ಗೋಸಾಗಾಟಗಾರರಿಗೆ ಬೆಂಬಲ ನೀಡುತ್ತಿರುವ ಅಧಿಕಾರಿಗಳ ವಿರುದ್ದ ಕಠಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಒಂದು ಪರವಾನಿಗೆಯಲ್ಲಿ ಹಲವು ಸಲ ಗೋ ಸಾಗಾಟ ನಡೆಸಲಾಗುತ್ತಿದೆ. ಕರ್ನಾಟಕ ಕೇರಳ ಗಡಿ ಭಾಗವಾದ ಈಶ್ವರಮಂಗಲ ತನಕ ವಾಹನದಲ್ಲಿ ದನಗಳನ್ನು ಒಯ್ದು ನಂತರ ಅಲ್ಲಿಂದ ಕಾಡು ದಾರಿಯ ಮೂಲಕ ನಡೆಸಿಕೊಂಡು ದನ ಸಾಗಾಟ ನಡೆಸಲಾಗುತ್ತಿದೆ ಎಂದು ಸದಸ್ಯರಾದ ಹರೀಶ್ ಬಿಜತ್ರೆ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಶಿವರಂಜನ್ ಮೊದಲಾದವರು ಆರೋಪಿಸಿದರು. ಪ್ರತಿಕ್ರಿಯಿಸಿದ ಎಸ್.ಐ ಜಂಬೂರಾಜ್ ಮಹಾಜನ್‌ರವರು, ಅಕ್ರಮ ಗೋ ಸಾಗಾಟದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸಮರ್ಪಕವಾದ ದಾಖಲೆಗಳನ್ನು ಇಟ್ಟುಕೊಂಡು ದನ ಸಾಗಾಟಕ್ಕೆ ಹೈನುಗಾರಿಕೆ ಮತ್ತು ಕೃಷಿಕರಿಗೆ ಅವಕಾಶ ಇದೆ. ಪೊಲೀಸರು ಅಕ್ರಮಕ್ಕೆ ಬೆಂಬಲ ನೀಡುತ್ತಿದ್ದರೆ, ಅಂತವರ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಬೇಕು ಎಂದರು.

ಶಾಸಕರ ನೇತೃತ್ವದಲ್ಲಿ ಸಾರಿಗೆ ಅದಾಲತ್;
ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಸಭೆ ನಡೆಸಿ ಗ್ರಾಮಾಂತರ ಪ್ರದೇಶಗಳಿಗೆ ಬಸ್ ಓಡಾಟ ನಡೆಸುವಂತೆ ಸೂಚನೆ ನೀಡಿದರೂ ಎಲ್ಲಾ ಪ್ರದೇಶಗಳಿಗೆ ಬಸ್ ಓಡಾಟವಿಲ್ಲ. ಹಾಗಾದರೆ ಶಾಸಕ ಸೂಚನೆಗೆ ಬೆಲೆ ಇಲ್ಲವೇ? ಅಧಿಕಾರಿಗಳಲ್ಲಿ ವಿಚಾರಿಸಿದರೆ ಜನ ಸಿಗುತ್ತಿಲ್ಲ. ಹಾಗಾಗಿ ಬಸ್ ಓಡಾಟ ಅಸಾಧ್ಯ ಎಂಬ ಉತ್ತರ ಬರುತ್ತಿದೆ ಎಂದು ಶಿವರಂಜನ್ ಆರೋಪಿಸಿದರು. ಇದಕ್ಕೆ ಸದಸ್ಯರಾದ ಮುಕುಂದ, ಪರಮೇಶ್ವರ ಮೊದಲಾದವರು ಧ್ವನಿಗೂಡಿಸಿ ದಿನ ನಿತ್ಯದ ಓಡಾಟಕ್ಕೆ ಸಾರ್ವಜನಿಕರು ಬಸ್ ಇಲ್ಲದೆ ಅಧಿಕ ಹಣ ಪಾವತಿಸಿ ಖಾಸಗಿ ವಾಹನಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಬಸ್ ಓಡಾಟ ನಡೆಸಿದರಷ್ಟೇ ಜನ ಬರುವುದು. ಬಸ್ ಓಡಾಟ ನಡೆಸದೇ ಜನರು ಬರುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕೋವಿಡ್ ಬಳಿಕ ಶೇ.೮೦ ರಷ್ಟು ಸಾರಿಗೆ ವ್ಯವಸ್ಥೆ ಸುಧಾರಿಸಲಾಗಿದೆ ಎಂದರು. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಗ್ರಾಮಾಂತರ ಪ್ರದೇಶಗಳಿಗೆ ಉಂಟಾಗಿರುವ ಸಾರಿಗೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ೧೫ ದಿನಗಳಲ್ಲಿ ಸಾರಿಗೆ ಅದಾಲತ್ ನಡೆಸಬೇಕು. ಈ ಸಭೆಯಲ್ಲಿ ನಿಗಮದ ಎಲ್ಲಾ ಅಧಿಕಾರಿಗಳು ಭಾಗವಹಿಸಬೇಕು ಹಾಗೂ ಅದಾಲತ್ ಕುರಿತು ತಾ.ಪಂ ಹಾಗೂ ಜಿ.ಪಂ ಸದಸ್ಯರಿಗೆ ಮಾಹಿತಿ ನೀಡುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಮೆಸ್ಕಾಂ ದರ ಏರಿಕೆ ಜೊತೆ, ಬಡ್ಡಿ ಹೊರೆ:
ಮೆಸ್ಕಾಂ ಇಲಾಖೆ ಗ್ರಾಹಕರಿಗೆ ಸರಿಯಾಗಿ ಬಿಲ್ ನೀಡುತ್ತಿಲ್ಲ. ಎರಡು ಮೂರು ತಿಂಗಳಿಗೊಮ್ಮೆ ಬಿಲ್ ನೀಡುವುದರಿಂದ ಅದರ ಮೇಲೆ ಬಡ್ಡಿ ವಿಧಿಸಲಾಗುತ್ತಿದೆ. ಇದರಿಂದ ಜನತೆಗೆ ಯೂನಿಟ್‌ಗೆ ದರ ಏರಿಕೆಯ ಜೊತೆಗೆ ಬಡ್ಡಿಯ ಹೊರೆಯಾಗುತ್ತಿದೆ. ಇದನ್ನು ತಕ್ಷಣ ಸಮರ್ಪಕಗೊಳಿಸುವಂತೆ ಸದಸ್ಯ ಹರೀಶ್ ಬಿಜತ್ರೆ ಆಗ್ರಹಿಸಿದರು. ಈ ಬಗ್ಗೆ ಮಾತನಾಡಿದ ಮೆಸ್ಕಾಂ ಅಧಿಕಾರಿಗಳಾದ ಶಿಲ್ಪಾ ಶೆಟ್ಟಿ ಮತ್ತು ರಾಮಚಂದ್ರ ಅವರು ಬಡ್ಡಿ ವಿಧಿಸಲಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು. ಹೊಸದಾಗಿ ಮೀಟರ್ ರೀಡರ್ ಗಳನ್ನು ಆಯ್ಕೆಯಾಗಿರುವುದರಿಂದ ಇಂತಹ ಸಮಸ್ಯೆ ಉಂಟಾಗಿದೆ ಎಂದು ಹೇಳಿದರು.

ಹುಡುಗಿಯರಿಗೆ ಕಿರುಕುಳ ನಿರಂತರ:
ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಕೆಳ ಅಂತಸ್ತಿನಲ್ಲಿ ವಾಣಿಜ್ಯ ಮಳಿಗೆಗಳ ಬಳಿ ಹುಡುಗಿಯರಿಗೆ ಕಿರುಕುಳ ನೀಡುವ ಹಾಗೂ ಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯ ಶಿವರಂಜನ್ ಆರೋಪಿಸಿದರು. ಪ್ರತಿಕ್ರಿಯಿಸಿದ ಎಸ್.ಐ ಜಂಬೂರಾಜ್‌ರವರು ಪೊಲೀಸರು ಮಫ್ತಿಯಲ್ಲಿ ಕಣ್ಗಾವಲು ಇರಿಸುತ್ತಿದ್ದು, ಬೆಳಿಗ್ಗೆ ೮ ಗಂಟೆಯಿಂದ ರಾತ್ರಿ ೮ ಗಂಟೆ ತನಕ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಭಾಗದಲ್ಲೂ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗುವುದು ಎಂದು ತಿಳಿಸಿದರು.

ಕೊಳ್ತಿಗೆ ೧೮ ಕುಟುಂಬಗಳಿಗೆ ಹೊಸ ನಿವೇಶನ
ಕೊಳ್ತಿಗೆ ಗ್ರಾಮದ ಚಿಮಲಗುಂಡಿಯ ೧೮ ಬಡ ಕುಟುಂಬಗಳಿಗೆ ಸರ್ಕಾರಿ ನಿವೇಶನ ಗುರುತಿಸಲು ಅಧ್ಯಕ್ಷರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ೧೮ ಕುಟುಂಬಗಳ ಈಗಾಗಲೇ ಹಕ್ಕುಪತ್ರ ಪಡೆದುಕೊಂಡಿದ್ದರೂ, ಈ ಸ್ಥಳ ರಕ್ಷಿತಾರಣ್ಯಕ್ಕೆ ಸೇರಿರುವ ಹಿನ್ನಲೆಯಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ-೧೯೮೦ರ ಅಡಿಯಲ್ಲಿ ಅರ್ಜಿ ಸಲ್ಲಿಸಿ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಾಗಿದೆ ಎಂದು ಅರಣ್ಯಾಧಿಕಾರಿ ತಿಳಿಸಿದರು. ಈ ಸಂದರ್ಭದಲ್ಲಿ ಸದಸ್ಯ ರಾಮ ಪಾಂಬಾರು ಅಲ್ಲಿರುವ ಕುಟುಂಬಗಳು ಅದೇ ಭಾಗದಲ್ಲಿ ಬೇರೆ ಸರ್ಕಾರಿ ಸ್ಥಳವನ್ನು ಗುರುತಿಸಿಕೊಟ್ಟರೆ ಹೋಗಲು ಸಿದ್ಧವಾಗಿದ್ದಾರೆ ಎಂದು ತಿಳಿಸಿದರು. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಹೊಸದಾಗಿ ಸರ್ಕಾರಿ ನಿವೇಶನ ಗುರುತಿಸುವ ಕೆಲಸ ತಕ್ಷಣ ನಡೆಯಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಭಕ್ತಕೋಡಿಭಜನಾ ಮಂದಿರ ಅವ್ಯಹಾರದ ಕುರಿತು ತನಿಖೆಗೆ ನಿರ್ಣಯ;
ಸರ್ವೆ ಗ್ರಾಮದ ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದಲ್ಲಿ ಒಂದೇ ಕುಟುಂಬದ ಏಳು ಮಂದಿ ಆಡಳಿತ ನಡೆಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಲೆಕ್ಕಪರಿಶೋಧನೆ ಅಗಿಲ್ಲ. ಹಣಕಾಸು ಅವ್ಯವಹಾರ ಅಗಿರುವುದಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು ಅವ್ಯವಹಾರದ ಕುರಿತು ತನಿಖೆ ನಡೆಸುವಂತೆ ಸದಸ್ಯ ಶಿವರಂಜನ್ ಆಗ್ರಹಿಸಿದ್ದು ಅದರಂತೆ ನಿರ್ಣಯ ಕೈಗೊಳ್ಳಲಾಗಿದೆ.

ಖಾಸಗಿ ಆಸ್ಪತ್ರೆಗಳ ನಿರ್ಲಕ್ಷವೇ?
ಇತ್ತೀಚಿನ ಕೆಲ ಸಮಯಗಳಿಂದ ಹೆರಿಗೆ ವೇಳೆ ಬಾಣಂತಿಯರು ರಕ್ತ ಸ್ರಾವದಿಂದ ಸಾವನ್ನಪ್ಪುವ ಪ್ರಕರಣಗಳು ಅಧಿಕವಾಗುತ್ತಿದೆ. ಆಸ್ಪತ್ರೆಗಳಲ್ಲಿ ವೈದ್ಯರುಗಳು ಕೊನೆ ಕ್ಷಣದಲ್ಲಿ ರೋಗಿ ಸ್ಪಂಧಿಸುವುದಿಲ್ಲ ಎಂಬ ಉತ್ತರ ನೀಡಿ, ಬೇರೆ ಆಸ್ಪತ್ರೆಗಳಿಗೆ ಹೋಗುವಂತೆ ಸೂಚಿಸುತ್ತಾರೆ. ಇದರಿಂದಾಗಿ ಸಾನ್ನಪ್ಪುವ ಪ್ರಸಂಗಗಳು ಕಂಡು ಬರುತ್ತಿದೆ. ಕೆಲ ದಿನಗಳ ಹಿಂದೆ ಬಂಟ್ವಾಳದಲ್ಲಿ ನಡೆದ ಪ್ರಕರಣದಲ್ಲಿ ಬಾಣಮತಿಗೆ ಸಾಕಷ್ಟು ರಕ್ತ ನೀಡಿದರೂ ಉಳಿಸಿಕೊಳ್ಳಲಾಗಿಲ್ಲ. ಖಾಸಗಿ ಆಸ್ಪತ್ರೆಗಳ ವೈದ್ಯ ನಿರ್ಲಕ್ಷದಿಂದ ಹೀಗಾಗುತ್ತದಾ ಎಂದು ಸದಸ್ಯ ಹರೀಶ್ ಪ್ರಶ್ನಿಸಿದರು. ಹೆರಿಗೆಗೆ ದಾಖಲಾಗುವ ಗರ್ಭಿಣಿಯರ ಸ್ಥಿತಿಗತಿಗಳ ಬಗ್ಗೆ ವೈದ್ಯರುಗಳಿಗೆ ತಿಳಿದಿರುತ್ತದೆ. ಹಾಗಾಗಿ ಹೆರಿಗೆಗೆ ಮೊದಲೇ ಸಂಬಂಧಿಸಿದ ತಾಂತ್ರಿಕವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿಲ್ಲವೇ ಎಂದು ಅಧ್ಯಕ್ಷರು ವೈದ್ಯಾಧಿಕಾರಿಗಳಲ್ಲಿ ಪ್ರಶ್ನಿಸಿದರು. ಕೆಲವು ಮಹಿಳೆಯಲ್ಲಿ ಇಂತಹ ಸಮಸ್ಯೆಗಳು ಉಂಟಾಗುತ್ತಿದ್ದು ಹೆರಿಗೆ ವೇಳೆ ರಕ್ತಸ್ರಾವ ಉಂಟಾದರೆ ಏನೂ ಮಾಡಲು ಸಾಧ್ಯವಿಲ್ಲ ಎಂದು ವೈದ್ಯಾಧಿಕಾರಿ ಅಶೋಕ್ ರೈ ತಿಳಿಸಿದರು.

ಸಮರ್ಪಕ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಿ:
ಸರಕಾರಿ ಅಸ್ಪತ್ರೆಗೆ ಸಂಬಂಧಿಸಿ ಮಾಹಿತಿ ಕೇಳಿದಾಗ ಸಭೆಯಲ್ಲಿ ಭಾಗವಹಿಸಿದ್ದ ಆಸ್ಪತ್ರೆಯ ಅಧೀಕ್ಷರಲ್ಲಿ ಸಮಪರ್ಕವಾದ ಮಾಹಿತಿ ದೊರೆಯಲಿಲ್ಲ. ಇದಕ್ಕೆ ಪ್ರತಿತಿಕ್ರಿಯಿಸಿದ ಅಧ್ಯಕ್ಷರು, ತಾ.ಪಂ ಸಾಮಾನ್ಯ ಸಭೆಯಲ್ಲಿ ತಾಲೂಕಿನ ಜನತೆ ಪರವಾಗಿ ೧೩ ಮಂದಿ ತಾ.ಪಂ ಸದಸ್ಯರು ಹಾಗೂ ಜಿ.ಪಂ ಸದಸ್ಯರು ಭಾಗವಹಿಸುತ್ತಾರೆ. ಹೀಗಾಗಿ ಇಲಾಖೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡೇ ಸಭೆಗೆ ಹಾಜರಾಗಬೇಕು. ಇಲ್ಲಿ ನನಗೆ ಗೊತ್ತಿಲ್ಲ ಎಂಬ ಉತ್ತರ ಬರಬಾರದು ಸರಕಾರಿ ಆಸ್ಪತ್ರೆಯ ಅಧೀಕ್ಷರಿಗೆ ಸೂಚಿಸಿದರು.

ನರಿಮೊಗರಿಗೆ ಖಾಯಂ ವಿ.ಎ ನೀಡಿ:
ಬಹುದೊಡ್ಡ ಗ್ರಾಮವಾಗಿರುವ ನರಿಮೊಗರಿಗೆ ಖಾಯಂ ನೆಲೆಯಲ್ಲಿ ಗ್ರಾಮಕರಣಿಕರಿಲ್ಲ. ನಿಯೋಜನೆಯಲ್ಲಿ ಎರಡು ಗ್ರಾಮಗಳಲ್ಲಿ ಗ್ರಾಮಕರಣಿಕರು ಕರ್ತವ್ಯ ನಿರ್ವಹಿಸುತ್ತಿದ್ದು ನರಿಮೊಗರು ಗ್ರಾಮದ ಜನತೆಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಖಾಯಂ ನೆಲೆಯಲ್ಲಿ ಗ್ರಾಮಕರಣಿಕರನ್ನು ನೇಮಕ ಮಾಡುವಂತೆ ಸದಸ್ಯ ಪರಮೇಶ್ವರ ಭಂಡಾರಿ ಆಗ್ರಹಿಸಿದರು.

ಇರ್ದೆಯಲ್ಲಿರುವ ಉಪ ಪ್ರಾಥಮಿಕ ಆರೋಗ್ಯ ಕೇಂದ್ರವು ಶಿಥಿಲಾವಸ್ಥೆಯಲ್ಲಿದೆ. ಉಪಕೇಂದ್ರದವಿಲ್ಲದೆ ಪ್ರತಿ ತಿಂಗಳು ಮಕ್ಕಳಿಗೆ ಚುಚ್ಚುಮದ್ದು ಲಸಿಕೆ ನೀಡಲು ಬೆಟ್ಟಂಪಾಡಿ ಗ್ರಾ.ಪಂ ಕಚೇರಿಯನ್ನು ಅವಲಂಭಿಸುವಂತಾಗಿದೆ. ಇದರಿಂದಾಗಿ ತುಂಬಾ ತೊಂದರೆ ಉಂಟಾಗುತ್ತಿದ್ದು ಶೀಘ್ರವೇ ಉಪಕೇಂದ್ರ ನಿರ್ಮಿಸುವಂತೆ ಸದಸ್ಯೆ ಮೀನಾಕ್ಷಿ ಮಂಜುನಾಥ ಆಗ್ರಹಿಸಿದರು.

ಸಂವಿಧಾನ ದಿನದ ಅಂಗವಾಗಿ ಸಭೆಯಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಹಶೀಲ್ದಾರ್ ರಮೇಶ್ ಬಾಬು ಉಪಸ್ಥಿತರಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.