ಪುತ್ತೂರು: ಕಳೆದ ಎರಡೂವರೆ ವರ್ಷಗಳಿಂದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿ ಮಂಗಳೂರು ಸೈಬರ್ ಸೆನ್ಗೆ ವರ್ಗಾವಣೆಗೊಂಡಿರುವ ಪಳನಿವೇಲು ಕೆ.ಎಂರವರಿಗೆ ಬೀಳ್ಕೊಡುಗೆ ಸಮಾರಂಭವು ನ.೨೬ರಂದು ಸಂಜೆ ಠಾಣೆಯಲ್ಲಿ ನಡೆಯಿತು.
ಸಂಚಾರಿ ಠಾಣಾ ನಿರೀಕ್ಷಕ ರಾಮ ನಾಯ್ಕ ಸನ್ಮಾನಿಸಿ, ಗೌರವಿಸಿದರು. ಬಳಿಕ ಮಾತನಾಡಿದ ಅವರು, ಕರ್ತವ್ಯ ನಿಷ್ಠೆ ಮೈಗೂಡಿಸಿಕೊಂಡಿದ್ದ ಪಳನಿವೇಲುರವರು ಯಾವುದೇ ಕೆಲಸ ನೀಡಿದರು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದರು. ಪ್ರಕರಣವೊಂದಕ್ಕೆ ಸಂಬಂಧಿಸಿ ತಮಿಳುನಾಡುಗೆ ತೆರಳಬೇಕಾದ ಸಂದರ್ಭದಲ್ಲಿಯೂ ಯಶಸ್ವಿಯಾಗಿ ನಿರ್ವಹಿಸಿದ್ದರು.
ಎಎಸ್ಐ ಸುರೇಶ್ ಶರ್ಮ ಮಾತನಾಡಿ, ವಿವಿಧ ಕಡೆಗಳಲ್ಲಿ ಕೆಲಸ ಮಾಡಿ ಸಾಕಷ್ಟು ಅನುಭವೀಯಾಗಿರುವ ಪಳನಿಯವರು ಇಲಾಖೆ ಸಂಬಂಧಿಸಿ ಎಲ್ಲಾ ರೀತಿಯ ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಅನುಭವಿಯಾಗಿದ್ದರು ಎಂದರು.
ಹೆಡ್ ಕಾನ್ ಸ್ಟೇಬಲ್ ಸ್ಕರಿಯ ಮಾತನಾಡಿ, ಮಾತು ಹಾಗೂ ಕೆಲಸಗಳೆರಡರಲ್ಲಿಯೂ ಪಳನಿಯವರು ನಿಸ್ಸೀಮರು. ಸಮಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆ ಮೈಗೂಡಿಸಿಕೊಂಡಿದ್ದ ಪಳನಿಯವರು ಮುಖ್ಯ ಮಂತ್ರಿಪದಕಕ್ಕೆ ಅರ್ಹರು ಎಂದರು.
ಸಿಬಂದಿ ವೆಂಕಪ್ಪ ಮಾತನಾಡಿ ಅನಿಸಿಕೆ ವ್ಯಕ್ತಪಡಿಸಿದರು. ಸನ್ಮಾನ ಸ್ವೀಕರಿಸಿದ ಪಳನಿವೇಲು ಮಾತನಾಡಿ, ಕರ್ತವ್ಯದ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಎಎಸ್ಐಗಳಾದ ಕುಶಾಲಪ್ಪ ಗೌಡ, ಗಿರಿಯಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೊಲೀಸ್ ಸಂಚಾರಿ ಅರಣ್ಯ ಇಲಾಖೆ ಸಂಚಾರಿ ಠಾಣೆಗೆ ವರ್ಗಾವಣೆಗೊಂಡ ರಾಧಾಕೃಷ್ಣರವರನ್ನು ಈ ಸಂದರ್ಭದಲ್ಲಿ ಸ್ವಾಗತಿಸಲಾಯಿತು. ಮಾರುತಿ ಸ್ವಾಗತಿಸಿದರು. ಸ್ಕರಿಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಿಬಂದಿಗಳು ಹಾಗೂ ಗೃಹರಕ್ಷಕದಳ ಸಿಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು