ಉಪ್ಪಿನಂಗಡಿ: ಇತ್ತೀಚೆಗೆ ನಿಧನರಾದ ಉಪ್ಪಿನಂಗಡಿ ಸೈಂಟ್ ಮೇರಿಸ್ ಆಂಗ್ಲಮಾಧ್ಯಮ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪುರುಷೋತ್ತಮ ಗೌಡರವರಿಗೆ ಶಾಲಾ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನ.27ರಂದು ನಡೆಯಿತು.
ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಹಾಗೂ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಾಲಾ ಸಂಚಾಲಕರಾದ ವಂದನೀಯ ಫಾ. ಅಬೆಲ್ ಲೋಬೋರವರು ನುಡಿನಮನ ಸಲ್ಲಿಸಿ, ಕಳೆದ 11 ವರ್ಷಗಳಿಂದ ನಮ್ಮ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ದುಡಿಯುತ್ತಿದ್ದ ಪುರುಷೋತ್ತಮ ಗೌಡರವರು ತನ್ನ ಕರ್ತವ್ಯದ ಮೂಲಕ ಶಿಕ್ಷಕರ, ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು. ಉತ್ತಮ ದೈಹಿಕ ಶಿಕ್ಷಣ ಶಿಕ್ಷಕರೆಂದು ಗುರುತಿಸಿಕೊಂಡಿದ್ದ ಅವರ ಅಕಾಲಿಕ ನಿಧನವು ನೋವುಂಟು ಮಾಡಿದೆ. ಅಗಲಿದ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ. ಅವರ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತನು ಕುಟುಂಬಸ್ಥರಿಗೆ ನೀಡಲಿ ಎಂದು ಪ್ರಾರ್ಥಿಸಿದರು. ದೀನರ ಕನ್ಯಾಮಾತೆ ಚರ್ಚ್ನ ಪಾಲನಾ ಸಮಿತಿಯ ಉಪಾಧ್ಯಕ್ಷ ನವೀನ್ ಬ್ರ್ಯಾಗ್ಸ್, ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ವಾಣಿಶ್ರೀ, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವಿಶಂಕರ್, ವಠಾರದ ಮೂರೂ ಸಂಸ್ಥೆಗಳ ಮುಖ್ಯಸ್ಥರು, ಶಾಲಾ ಶಿಕ್ಷಕರ ಪರವಾಗಿ ಶಶಿಧರ್, ಶ್ರೀಮತಿ ಪವಿತ್ರಾ, ಹಳೆ ವಿದ್ಯಾರ್ಥಿಗಳ ಪರವಾಗಿ ಶರಣ್, ವಿದ್ಯಾರ್ಥಿಗಳ ಪರವಾಗಿ ಭೂಮಿಕಾರವರು ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು. ಸಭೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಮೂರೂ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಶಾಲಾ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ಮೃತ ಪುರುಷೋತ್ತಮ ಗೌಡರ ಕುಟುಂಬಸ್ಥರು, ಸ್ಕೌಟ್- ಗೈಡ್, ಕಬ್-ಬುಲ್-ಬುಲ್ ದಳಗಳ ಆಯ್ದ ವಿದ್ಯಾರ್ಥಿಗಳು, ಶಾಲಾ ಹಳೆವಿದ್ಯಾರ್ಥಿಗಳು, ಪೋಷಕರು, ನೆರೆಯ ಶಾಲೆಯ ಸಿಬ್ಬಂದಿಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಕುಮಾರಿ ಅಕ್ಷಯ ಪ್ರಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ನಮಿತ ನಿರೂಪಿಸಿ, ಶ್ರೀಮತಿ ಜಾಸ್ಮಿನ್ ವಂದಿಸಿದರು.