- ನಾನೇನು ಎನ್ನುವುದನ್ನು ಜನರಿಗೆ ಅಭಿವೃದ್ಧಿಯ ಮೂಲಕ ತೋರಿಸುವುದರಿಂದ ಗೆಲುವು ಸಾಧ್ಯ: ಶಕುಂತಳಾ ಟಿ.ಶೆಟ್ಟಿ
ಪುತ್ತೂರು: ಗ್ರಾಮ ಪಂಚಾಯತ್ ಚುನಾವಣೆ ಎಂದರೆ ಅದು ಪಕ್ಷಕ್ಕಿಂತ ವ್ಯಕ್ತಿಯ ಮೇಲೆ ಹೆಚ್ಚು ಆಧಾರವಾಗಿರುತ್ತದೆ. ವ್ಯಕ್ತಿ ಮಾಡುವ ಅಭಿವೃದ್ಧಿ ಕೆಲಸಗಳೇ ಆತನನಿಗೆ ಗೆಲುವು ತಂದುಕೊಡಬಲ್ಲವು. ಆದ್ದರಿಂದ ನಾನೇನು? ನನ್ನಿಂದ ಸಮಾಜಕ್ಕೆ, ಗ್ರಾಮಕ್ಕೆ ಆಗಿರುವ ಅಭಿವೃದ್ಧಿಗಳೇನು ಎಂಬುದನ್ನು ತೋರಿಸಿಕೊಡುವ ಮೂಲಕ ಗೆಲುವು ಸಾಧಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ತಾವು ಗ್ರಾಮಕ್ಕೆ ಮಾಡಿರುವ ಅಭಿವೃದ್ಧಿ ಮತ್ತು ಪಕ್ಷದಿಂದ ಗ್ರಾಮಕ್ಕೆ ಆಗಿರುವ ಅಭಿವೃದ್ಧಿಗಳನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಡಬೇಕು ಆ ಮೂಲಕ ಗೆಲುವು ಸಾಧಿಸಬೇಕು ಎಂದು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಹೇಳಿದರು.
ಅವರು ಗ್ರಾಮ ಪಂಚಾಯತ್ ಚುನಾವಣೆಯ ಸಿದ್ಧತೆಯ ಬಗ್ಗೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಲಯ ಅಧ್ಯಕ್ಷರ ಮತ್ತು ಪಕ್ಷದ ಮುಖಂಡರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸಭೆಯು ನ.27 ರಂದು ಕುಂಬ್ರ ರೈತ ಸಭಾಭವನದಲ್ಲಿ ನಡೆಯಿತು. ಪಕ್ಷಕ್ಕೆ ಯಾರು ದೊಡ್ಡ ಜನ ಇಲ್ಲ ನಮ್ಮಲ್ಲಿರುವ ವ್ಯಕ್ತಿತ್ವಕ್ಕೆ ಜನರು ಗೌರವ ಕೊಡುತ್ತಾರೆ. ಪಕ್ಷವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗ್ರಾಮಸ್ಥರಿಗೆ ತಿಳಿಸುವ ಕೆಲಸವನ್ನು ಪ್ರತಿಯೊಬ್ಬ ಕಾರ್ಯಕರ್ತರು ಮಾಡಬೇಕು ಎಂದು ಶಕುಂತಳಾ ಟಿ.ಶೆಟ್ಟಿ ಹೇಳಿದರು.
ಗ್ರಾಮಸ್ಥರಿಗೆ ಇಷ್ಟವಾದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ: ಲೋಬೋ
ಗ್ರಾಪಂ ಚುನಾವಣೆಗೆ ಗ್ರಾಮಸ್ಥರಿಗೆ ಇಷ್ಟವಾದ ಮತ್ತು ಗ್ರಾಮಸ್ಥರ ಏಳಿಗೆಗೆ ಶ್ರಮಿಸಿರುವ, ಸೇವೆ ಮಾಡುತ್ತಿರುವ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಬೇಕು ಇದರಿಂ ಅಭ್ಯರ್ಥಿಯ ಗೆಲುವು ಸುಲಭವಾಗುತ್ತದೆ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಜನತೆಗೆ ಮಾಡಿರುವ ಸೇವೆಯನ್ನು ಗ್ರಾಮದ ಪ್ರತಿ ಮನೆಮನೆಗೂ ತೆರಳಿ ವಿವರಣೆ ನೀಡಬೇಕು. ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಯಾಕೆ ಗೆಲ್ಲಿಸಬೇಕು ಎಂಬುದನ್ನು ಗ್ರಾಮಸ್ಥರಿಗೆ ಮನವರಿಗೆ ಮಾಡಿಕೊಡುವ ಕೆಲಸವನ್ನು ಪ್ರತಿಯೊಬ್ಬ ಕಾರ್ಯಕರ್ತ ಹಾಗೂ ನಾಯಕರುಗಳುಮಾಡಬೇಕು. ತಾನು ನಾಯಕ ಎಂಬ ಅಹಂ ಬಿಟ್ಟು ತಳಮಟ್ಟದಲ್ಲಿ ಪಕ್ಷಕ್ಕಾಗಿ ದುಡಿಯುವಂತಾಗಬೇಕು. ನಾಯಕರಾದವರು ಬಣ, ಗುಂಪುಗಾರಿಕೆ ವೈಯುಕ್ತಿಕ ವಿಚಾರವನ್ನು ಬದಿಗಿಟ್ಟು ಪಕ್ಷ ಮತ್ತು ಪಕ್ಷದ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಸರಕಾರ ಮಾಡಿದ ಸಾಧನೆಯನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡಬೇಕು ಆ ಮೂಲಕ ಪಕ್ಷದ ಅಭ್ಯರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ನಮ್ಮಿಂದ ಆಗಬೇಕು ಎಂದು ಸಭಾಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ, ಪುತ್ತೂರು ವಿಧಾನಸಭಾ ಕ್ಷೇತ್ರದ ಗ್ರಾಪಂ ಚುನಾವಣಾ ಜಿಲ್ಲಾ ವೀಕ್ಷಕ ಜೆ.ಆರ್.ಲೋಬೋ ಹೇಳಿದರು.
ಅಭ್ಯರ್ಥಿಯ ಗೆಲುವಿಗೆ ನಾಯಕರು ಫೀಲ್ಡ್ಗೆ ಬರಬೇಕು: ಶಿವನಾಥ ರೈ ಮೇಗಿನಗುತ್ತು
ಗ್ರಾಪಂ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಗಳು ಕಣಕ್ಕೆ ಇಳಿದರೆ ಅವರ ಪರವಾಗಿ ಪ್ರಚಾರ ಮಾಡಲು ಮತ್ತು ಅವರನ್ನು ಗೆಲ್ಲಿಸಲು ಸ್ಥಳೀಯ ನಾಯಕರೆನಿಸಿಕೊಂಡವರು ಮತ್ತು ಮಾಜಿ ಗ್ರಾಪಂ ಸದಸ್ಯರುಗಳು ಫೀಲ್ಡ್ಗೆ ಬರಬೇಕು. ಆ ಮೂಲಕ ಸ್ಪರ್ಧಿಸಿದ ಅಭ್ಯರ್ಥಿಯ ಗೆಲುವಿಗೆ ನಿರಂತರ ಶ್ರಮವಹಿಸಬೇಕು ಹೀಗಾದರೆ ಮಾತ್ರ ಅಭ್ಯರ್ಥಿಗಳ ಗೆಲುವು ಸುಲಭವಾಗುತ್ತದೆ. ಹೊಸ ಮುಖಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದಾಗ ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿದವರು ಮತ್ತು ನಾಯಕರಾದವರು ಅವರ ವಿರುದ್ಧ ಕೆಲಸ ಮಾಡದೆ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುವ ಮೂಲಕ ಅಭ್ಯರ್ಥಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು ಎಂದು ಮುಂಡೂರು ಗ್ರಾಪಂ ಸದಸ್ಯ ಶಿವನಾಥ ರೈ ಮೇಗಿನಗುತ್ತು ಸಭೆಯಲ್ಲಿ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಅನ್ನು ಸೋಲಿಸುವುದು ಕಾಂಗ್ರೆಸ್ಸಿಗರೆ: ನಾರಾಯಣ ನಾಯ್ಕ್ ಪಾಣಾಜೆ
ಚುನಾವಣೆಯ ಸಂದರ್ಭದಲ್ಲಿ ಒಟ್ಟಿಗೆ ಕೆಲಸ ಮಾಡಿ ಫೀಲ್ಡ್ಗೆ ಹೋಗಿ ಕೊನೆಗೆ ಮತದಾನಕ್ಕೆ ದಿನಗಳ ಬಾಕಿ ಇರುವಾಗಲೆ ನಮ್ಮದೇ ಪಕ್ಷದ ಕೆಲ ನಾಯಕರು ಫೀಲ್ಡ್ಗೆ ಇಳಿದು ಹಣದ ಆಮಿಷ ಒಡ್ಡಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಲು ಹುನ್ನಾರ ನಡೆಸುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಶೆಟ್ಟಿಯವರ ಜೊತೆ ಫೀಲ್ಡ್ಗೆ ಹೋದವರು ಅವರಿಗೆ ಓಟು ಕೇಳಿದವರೆ ಕೊನೆ ಕ್ಷಣದಲ್ಲಿ ಶೆಟ್ಟಿಯವರನ್ನು ಸೋಲಿಸಿ ಎಂದು ಸೋಟ್ಕೇಸ್ ತೋರಿಸಿದ್ದಾರೆ. ಇದು ಒಳ್ಳೆಯ ಲಕ್ಷಣವಲ್ಲ ಪಕ್ಷದಲ್ಲಿದ್ದವರು ಪಕ್ಷಕ್ಕಾಗಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಪಾಣಾಜೆ ವಲಯ ಅಧ್ಯಕ್ಷ ನಾರಾಯಣ ನಾಯ್ಕ್ ಪಾಣಾಜೆ ಅಭಿಪ್ರಾಯಪಟ್ಟರು.
ಕಾರ್ಯಕರ್ತರು ಸರಿ ಇದ್ದಾರೆ, ನಾಯಕರುಗಳು ಸರಿಯಾಗಬೇಕು: ಎ.ಕೆ ಜಯರಾಮ ರೈ
ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರು ಸರಿಯಾಗಿಯೇ ಇದ್ದು ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನಾನು ೪೦ ವರ್ಷದಿಂದ ಪಕ್ಷದ ಕಾರ್ಯಕರ್ತನಾಗಿದ್ದು ಪಕ್ಷ ನಿಷ್ಠೆಯನ್ನು ಹೊಂದಿದ್ದೇನೆ. ಇವತ್ತು ನಡೆದ ಸಭೆಗೆ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರನ್ನು ಆಹ್ವಾನಿಸಬೇಕಿತ್ತು ಯಾಕೆ ಅವರನ್ನು ಆಹ್ವಾನಿಸಲಿಲ್ಲ? ನೀವು ಗುಂಪುಗಾರಿಕೆ ಮಾಡುತ್ತಿದ್ದೀರಾ ಎಂದು ವೇದಿಕೆಯಲ್ಲಿ ಜೆ.ಆರ್.ಲೋಬೋರವರನ್ನು ಕೆಯ್ಯೂರು ವಲಯ ಕಾಂಗ್ರೆಸ್ ಅಧ್ಯಕ್ಷ ಎ.ಕೆ ಜಯರಾಮ ರೈಯವರ ತರಾಟೆಗೆ ಎತ್ತಿಕೊಂಡರು. ಪ್ರತಿ ಚುನಾವಣೆಯಲ್ಲೂ ಮೇಲಿನ ನಾಯಕರ ಗುಂಪುಗಾರಿಕೆ ವೈಯುಕ್ತಿಕ ವಿಚಾರವನ್ನು ಪಕ್ಷದ ಸಭೆಗಳಲ್ಲಿ ತೋರ್ಪಡಿಸುವುದು ಉಚಿತವಲ್ಲ, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬುದನ್ನು ನಾಯಕರಾದವರು ಮೊದಲು ಕಲಿತುಕೊಳ್ಳಬೇಕು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸರಿ ಇಲ್ಲ ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ನಾಯಕರೆಲ್ಲರೂ ಒಂದೇ ವೇದಿಕೆಯಲ್ಲಿ ಬಂದು ಕಾರ್ಯಕರ್ತರ ಚರ್ಚಿಸಿ ಪಕ್ಷವನ್ನು ಮುನ್ನೆಡೆಸಿ ಎಂದು ಹೇಳಿದರು. ಇವರ ಮಾತಿಗೆ ಕೆದಂಬಾಡಿ ಗ್ರಾಪಂ ಮಾಜಿ ಸದಸ್ಯ ಬೋಳೋಡಿ ಚಂದ್ರಹಾಸ ರೈ ಹಾಗೂ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ಅಝೀಜ್ ಬುಶ್ರಾ ಧ್ವನಿಗೂಡಿಸಿದರು. ಇದಕ್ಕೆ ಉತ್ತರಿಸಿದ ಲೋಬೋರವರು ಎಲ್ಲವನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುವುದಾಗಿ ಸಭೆಗೆ ತಿಳಿಸಿದರು.
ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡಬೇಕು: ಪಕ್ಕಳ
ಪಕ್ಷದ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು, ಒಬ್ಬ ಅಭ್ಯರ್ಥಿಯ ಗೆಲುವಿನ ಹಿಂದೆ ಪಕ್ಷದ ಕಾರ್ಯಕರ್ತರ, ನಾಯಕರ ಶ್ರಮವಿದೆ ಎಂಬುದನ್ನು ಗಮನಿಸಬೇಕು. ನಮ್ಮೊಳಗಿನ ಭಿನ್ನಮತವನ್ನು ಬದಿಗಿಟ್ಟು ಪಕ್ಷಕ್ಕಾಗಿ ದುಡಿಯುವ ಮನಸ್ಸು ಎಲ್ಲರಿಗೂ ಇರಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾಗಿ ಬರಬಹುದು ಇದಕ್ಕಾಗಿ ನಾಯಕರು ಎಲ್ಲರನ್ನೂ ವಿಶ್ವಾಸದಲ್ಲಿರಿಸಿ ಕೆಲಸ ಮಾಡಿದರೆ ಇಲ್ಲಿ ಪಕ್ಷಕ್ಕೆ ಉತ್ತಮ ಅಸ್ಥಿತ್ವವಿದೆ. ಪಕ್ಷದಲ್ಲಿ ಕಾರ್ಯಕರ್ತರು ಇದ್ದಾರೆ ನಾಯಕರೂ ಇದ್ದಾರೆ ಆದರೆ ಎಲ್ಲರೂ ಒಂದೇ ಕಡೆ ಸೇರುವ ವ್ಯವಸ್ಥೆಯನ್ನು ಅಗತ್ಯವಾಗಿ ಮಾಡಬೇಕಾಗಿ ಎಂದು ನೆ.ಮುಡ್ನೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ ಹೇಳಿದರು.
ವೇದಿಕೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಜಿಲ್ಲಾ ವೀಕ್ಷಕ ಗಿರೀಶ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಉಪಾಧ್ಯಕ್ಷ ಅಬ್ದುಲ್ ಅಝೀಜ್ ಬುಶ್ರಾ, ಕಾಂಗ್ರೆಸ್ ಮುಖಂಡರುಗಳಾದ ಟಿ.ಕೆ ಸುಧೀರ್, ರಮಾನಂದ ಪೂಜಾರಿ, ಕೆಪಿಸಿಸಿ ಸದಸ್ಯ ಎಂ.ಬಿ ವಿಶ್ವನಾಥ ಮತ್ತಿತರರು ಉಪಸ್ಥಿತರಿದ್ದರು. ಕಾಂಗ್ರೆಸ್ ಮುಖಂಡ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀರಾಮ್ ಪಕ್ಕಳ ವಂದಿಸಿದರು.
ಪ್ರಮುಖರ ಗೈರು
ಸಿದ್ಧತಾ ಸಭೆಗೆ ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಸೇರಿದಂತೆ ಜಿಲ್ಲಾ ಕಾರ್ಯಕಾರಿಣಿ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಗ್ರಾಮ ಸಮಿತಿ ಪದಾಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು. ಈ ಬಗ್ಗೆ ಸಭೆಯಲ್ಲಿದ್ದ ಕೆಲವರು ಜಿಲ್ಲಾ ವೀಕ್ಷಕ ಜೆ.ಆರ್.ಲೋಬೋ ಗಮನಕ್ಕೆ ತಂದ ಘಟನೆ ನಡೆಯಿತು.