ಪುತ್ತೂರು: ಗ್ರಾ.ಪಂ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ, ವಾಣಿಜ್ಯ ಕಟ್ಟಡಗಳು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಮಾಡಿಕೊಳ್ಳಬೇಕು. ಇದಕ್ಕಾಗಿ ಜಿಲ್ಲಾ ಪಂಚಾಯಿತಿನಿಂದ ೩ ತಿಂಗಳ ಗಡು ನೀಡಲಾಗಿದ್ದು, ಅವಧಿ ಮೀರಿದ ಬಳಿಕವೂ ವ್ಯವಸ್ಥೆ ಮಾಡಿಕೊಳ್ಳದ ಕಟ್ಟಡಗಳ ಪರವಾನಗಿ ರದ್ದು ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ತಾಪಂ ಕಾರ್ಯ ನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ ತಿಳಿಸಿದ್ದಾರೆ.
ಗ್ರಾ.ಪಂ ವ್ಯಾಪ್ತಿಯಲ್ಲಿರುವ ವಾಣಿಜ್ಯ ಸಹಿತ ಎಲ್ಲಾ ಕಟ್ಟಡಗಳ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯನ್ನು ಆಯಾ ಕಟ್ಟಡ ಮಾಲಿಕರೇ ಮಾಡಬೇಕು. ಇಲ್ಲವಾದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಜಾಗೃತಿ ತಂಡ ಭೇಟಿ ನೀಡಿ ನಿಯಮ ಉಲ್ಲಂಘನೆ ಮಾಡುವ ಮಾಲಿಕರ ವಿರುದ್ಧ ಕಾನೂನು ಕ್ರಮ ಜರಗಿಸಿ ಕಟ್ಟಡವನ್ನು ಮುಟ್ಟುಗೋಲು ಹಾಕಲಾಗುವುದು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸೂಚನೆಯಂತೆ ಗ್ರಾಪಂ ವ್ಯಾಪ್ತಿಯಲ್ಲಿ ಹಳೆ ಕಟ್ಟಡಗಳಿಗೆ ಸಂಬಂಧಿಸಿ, ಒಳಚರಂಡಿ ಸಂಸ್ಕರಣಾ ಘಟಕ (ಎಸ್.ಟಿ.ಪಿ- ಸೀವೇಜ್ ಟ್ರೀಟ್ಮೆಂಟ್ ಪ್ಲ್ಯಾಂಟ್) ವ್ಯವಸ್ಥೆ ಕಡ್ಡಾಯಗೊಳಿಸಿ, ಅನುಷ್ಟಾನಕ್ಕೆ ೩ ತಿಂಗಳ ಕಾಲಾವಕಾಶ ನೀಡಲಾಗಿದೆ. ನಂತರವೂ ರಸ್ತೆ ಅಥವಾ ಚರಂಡಿಗೆ ತ್ಯಾಜ್ಯ ನೀರು ಹರಿಯಲು ಬಿಡುತ್ತಿದ್ದಲ್ಲಿ ಅದ ಮಾದರಿಯ ಪರೀಕ್ಷಾ ವರದಿಯನ್ನು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಿ ಕಟ್ಟಡ ಮುಟ್ಟುಗೋಲು ಮಾಡಲು ಕ್ರಮ ವಹಿಸಲಾಗುವುದು.
ಪುತ್ತೂರು ಮತ್ತು ಕಡಬ ತಾಲೂಕಿನ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದಂತೆ ಈ ಸೂಚನೆ ನೀಡಲಾಗಿದೆ. ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಂತ-೨ರ ಮಾರ್ಗಸೂಚಿಯಂತೆ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲ್ಪಟ್ಟ ಎಲ್ಲ ಗ್ರಾಪಂಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವ ಮೂಲಕ ನೈರ್ಮಲ್ಯದಡಿ ಸುಸ್ಥಿರತೆ ಕಾಯ್ದುಕೊಳ್ಳುವುದು ಗ್ರಾಪಂಗಳ ಪ್ರಮುಖ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ. ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತ್ರಾಜ್ ಅಧಿನಿಯಮ ೧೯೯೩ ಪ್ರಕರಣ ಸಂಖ್ಯೆ ೭೫ರಂತೆ ಘನ ಮತ್ತು ದ್ರವ ತ್ಯಾಜ್ಯವನ್ನು ಸಂಬಂಧಪಟ್ಟ ಕಟ್ಟಡ ಮಾಲೀಕರೇ ವಿಲೇವಾರಿಗೊಳಿಸುವ ಷರತ್ತಿಗೆ ಬದ್ಧವಾಗಿ ಪರವಾನಿಗೆ ನೀಡಲು ಗ್ರಾ.ಪಂ.ಗಳಿಗೆ ಈಗಾಗಲೇ ಸೂಚಿಸಲಾಗಿರುತ್ತದೆ.