ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ನ.೨೭ ರಂದು ಪುತ್ತೂರು ಬ್ಲಡ್ಬ್ಯಾಂಕ್ನ ರೂಫ್ಟಾಪ್ ಸಭಾಂಗಣದಲ್ಲಿ ದೀಪಾವಳಿ ಹಬ್ಬದ ಆಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ|ಪೂವಪ್ಪ ಕಣಿಯೂರುರವರು ಮಾತನಾಡಿ, ನಮ್ಮ ಹಿರಿಯರು ಕೂಡು ಕುಟುಂಬ ಹಾಗೂ ಕೃಷಿ ಪದ್ಧತಿಯನ್ನು ಆರಾಧಿಸಿಕೊಂಡು ಬಂದಿರುವುದರ ಜೊತೆಗೆ ಬಹಳ ಶ್ರೀಮಂತವಾದ ಸಂಸ್ಕೃತಿ ಹಾಗೂ ಕೃಷಿ ಪರಿಕರಗಳನ್ನು ಕೃತಜ್ಞತಾಪೂರ್ವಕವಾಗಿ ಪೂಜಿಸುವುದೇ ದೀಪಾವಳಿ ಹಬ್ಬದ ಆಚರಣೆಯ ಮಹತ್ವವಾಗಿದೆ. ಬಲೀಂದ್ರನನ್ನು ಕರೆಯುವ ಪದ್ಧತಿ, ಸಂಬಂಧಿಕರ ಒಳಗಿರುವ ಸಂಬಂಧದ ಗಟ್ಟಿಗೊಳಿಸುವಿಕೆ, ತ್ಯಾಗ, ಪರಸ್ಪರ ಹೊಂದಾಣಿಕೆ, ಸಹಕರಾದ ಜೀವನವನ್ನು ದೀಪಾವಳಿ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಕಾಣಬಹುದು. ಇಂದಿನ ಮಕ್ಕಳಿಗೆ ನಮ್ಮ ನೆಲ, ಸಂಸ್ಕೃತಿಯ ಪರಿಚಯವೇ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲವೆನ್ನುವುದು ವಿಷಾದನೀಯ ಎಂದ ಅವರು ಬಂಧುತ್ವದ ಪಾತ್ರವೂ ಕೂಡು ಕುಟುಂಬದಲ್ಲಿ ಮಹತ್ತರ ಪಾತ್ರವನ್ನು ವಹಿಸಿತ್ತು. ಕೃಷಿ ಪದ್ಧತಿಯೂ ದೀಪಾವಳಿ ಅಥವಾ ಇತರ ಹಬ್ಬಗಳ ಆಚರಣೆಗಳೂ ಒಂದಕ್ಕೊಂದು ಪೂರಕವಾಗಿ ನಮ್ಮ ನೆಲದ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ ಎಂದರು.
ಕ್ಲಬ್ನ ಅಧ್ಯಕ್ಷರಾದ ಪ್ರೊ|ಝೇವಿಯರ್ ಡಿ’ಸೋಜರವರು ಅಧ್ಯಕ್ಷತೆ ವಹಿಸಿದ್ದರು. ಸುದಾನ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಜರಗಿದ ಕಲಾ ಸಂಭ್ರಮ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಸಂಘಟಕರಾದ ಸುಜೀತ್ ರೈ, ನಿಕಟಪೂರ್ವ ಅಧ್ಯಕ್ಷ ಭುಜಂಗ ಆಚಾರ್ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು|ಅನಘ ಪ್ರಾರ್ಥಿಸಿದರು. ದೀಪಾವಳಿ ಹಬ್ಬದ ಸಂಘಟಕರಾದ ಮಧು ನರಿಯೂರುರವರು ಅತಿಥಿಗಳ ಪರಿಚಯ ಮಾಡಿದರು. ಮತ್ತೋರ್ವ ಸಂಘಟಕ ಸುನೀಲ್ ಶೆಟ್ಟಿ ವಂದಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು, ಕ್ಲಬ್ನ ಪದಾಧಿಕಾರಿಗಳು ಸೇರಿಕೊಂಡು ಬಲಿಯೇಂದ್ರನ ಪೂಜೆ, ಬಲಿಯನ್ನು ಕರೆಯುವುದು ಹಾಗೂ ದೀಪಗಳನ್ನು ಹಣತೆಗಳಲ್ಲಿ ಬೆಳಗಿಸುವ ಕಾರ್ಯಕ್ರಮ ಜರಗಿಸಲಾಯಿತು.