ಚಿತ್ರ: ಸುಧಾಕರ್ ಕಾಣಿಯೂರು
- ಸೇವಾಮನೋಭಾವದಿಂದ ಮುನ್ನಡೆದಾಗ ಸಮಾಜ ಅಭಿವೃದ್ಧಿ ಸಾಧ್ಯ- ಗಿರಿಶಂಕರ ಸುಲಾಯ
- ಹಿಂದಿನ ನಮ್ಮ ಆಚರಣೆ ಸಂಪ್ರದಾಯ ಉಳಿಸಿ ಬೆಳೆಸುವುದು ಅನಿವಾರ್ಯ- ಪ್ರಮೀಳಾ ಜನಾರ್ದನ
ಕಾಣಿಯೂರು: ಸಂಸ್ಕೃತಿ, ಸಂಸ್ಕಾರಗಳು ನಮ್ಮ ಮುಂದಿನ ಪೀಳಿಗೆಯು ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ ಮಕ್ಕಳಿಗೆ ಸಣ್ಣ ಪ್ರಾಯದಲ್ಲಿಯೇ ಸಂಸ್ಕಾರದ ಬಗ್ಗೆ ಅರಿವು ಮೂಡಿಸುವ ಕೆಲಸ ಅಗತ್ಯವಾಗಿ ಮಾಡಬೇಕಾಗಿದೆ. ಧರ್ಮದ ಜೊತೆಗೆ ನಮ್ಮ ಜೀವನವನ್ನು ಶಾಸ್ವತವಾಗಿ ಜೋಡಿಸಿಕೊಂಡಾಗ ಜೀವನದಲ್ಲಿ ನೆಮ್ಮದಿಯನ್ನು ಕಾಣಲು ಸಾಧ್ಯ ಎಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಗುರು ಗಿರಿಶಂಕರ ಸುಲಾಯ ಹೇಳಿದರು. ಅವರು ನ ೨೯ರಂದು ಬೆಳಂದೂರು ಪಳ್ಳತ್ತಾರು ಶ್ರೀ ವೀರಾಂಜನೇಯ ಗೆಳೆಯರ ಬಳಗದ ವತಿಯಿಂದ ಪಳ್ಳತ್ತಾರು ದೇವರಗುಡ್ಡೆ ಕ್ರೀಡಾಂಗಣದಲ್ಲಿ ನಡೆದ ದೀಪಾವಳಿ ಹಬ್ಬದ ಪ್ರಯುಕ್ತ ೨ನೇ ವರ್ಷದ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೂ ಧರ್ಮದ ಶ್ರೇಷ್ಠತೆಯನ್ನು ಜಗತ್ತಿನೆಲ್ಲೆಡೆ ಪ್ರಚಾರಿಸುವ ಕೆಲಸ ನಮ್ಮಿಂದಾಗಬೇಕು. ಸಮಾಜಮುಖಿ ಚಿಂತನೆಯ ಮೂಲಕ ಉತ್ತಮ ಗುಣಗಳನ್ನು ವೃದ್ಧಿಸಿಕೊಳ್ಳಬೇಕು. ಸೇವಾಮನೋಭಾವದಿಂದ ಮುನ್ನಡೆದಾಗ ಸಮಾಜ ಅಭಿವೃದ್ಧಿ ಸಾಧ್ಯ ಎಂದರು. ಬೆಳಂದೂರು ಕ್ಷೇತ್ರದ ಜಿ.ಪಂ, ಸದಸ್ಯೆ ಪ್ರಮೀಳಾ ಜನಾರ್ದನ ಮಾತನಾಡಿ, ನಮ್ಮ ಸುಂದರ ಬದುಕಿಗೆ ದಾರಿ ದೀಪವಾದ ನಮ್ಮ ತುಳುನಾಡಿನ ಆಚರಣೆಗಳು ಇವತ್ತು ತನ್ನ ಮೂಲಸತ್ವವನ್ನು ಕಳೆದುಕೊಂಡಿದೆ. ಟಿ.ವಿ, ಮೊಬೈಲ್ಗಳ ಹಾವಳಿಯಿಂದ ನಮ್ಮ ಅನೇಕ ಆಚರಣೆಗಳು ನೇಪತ್ಯಕ್ಕೆ ಸರಿಯುತ್ತಿದೆ. ಹಿಂದಿನ ಕಾಲದಲ್ಲಿ ಸೇವಿಸುತ್ತಿದ್ದ ಆಹಾರ ಪದ್ಧತಿ ಬಹಳ ಅಚ್ಚುಕಟ್ಟಿನ ಜೊತೆ ವೈಶಿಷ್ಠತೆಯಿಂದ ಕೂಡಿರುತ್ತಿತ್ತು. ನಮ್ಮ ಹಿರಿಯರು ನಡೆಸಿಕೊಂಡು ಬಂದಂತಹ ಬೇರೆ ಬೇರೆ ಆಚರಣೆಗಳು ಇಂದಿನ ವೈಜ್ಞಾನಿಕ ಸತ್ಯಗಳಿಂದಲೂ ಮಿಗಿಲಾಗಿರುತ್ತದೆ. ಹಿಂದಿನ ನಮ್ಮ ಆಚರಣೆ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ನಮ್ಮ ತುಳುನಾಡಿನ ಸಾಂಸ್ಕೃತಿಕ ವಿಚಾರಗಳನ್ನು ಸಾರ್ವಜನಿಕವಾಗಿ ಆಚರಿಸುವುದರ ಮೂಲಕ ನಮ್ಮೆಲ್ಲರ ಹೆಮ್ಮೆಗೆ ಪಾತ್ರವಾಗಿದೆ. ಪಳ್ಳತ್ತಾರು ವೀರಾಂಜನೇಯ ಭಜನಾ ಮಂದಿರ ಅಭಿವೃದ್ಧಿಗೆ ರೂ ೧ಲಕ್ಷ ಅನುದಾನ ನೀಡುವುದಾಗಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಳ್ಳತ್ತಾರು ಶ್ರೀ ವೀರಾಂಜನೇಯ ಗೆಳೆಯರ ಬಳಗದ ಗೌರವಾಧ್ಯಕ್ಷ ಶ್ರೀಧರ ಗೌಡ ಕೊಯಕ್ಕುಡೆ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ, ಸಮಾಜಮುಖಿ ಚಿಂತನೆಯ ಮೂಲಕ ಉತ್ತಮ ಗುಣಗಳನ್ನು ವೃದ್ಧಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ನರಸಿಂಹ ಪ್ರಸಾದ್ ಪಾಂಗಣ್ಣಾಯ ಕುವೆತ್ತೋಡಿ, ವೀರಾಂಜನೇಯ ಗೆಳೆಯರ ಬಳಗದ ಸದಸ್ಯರಾದ ಕೇಶವ ಗೌಡ ಕೊಯಕ್ಕುಡೆ, ಚಂದ್ರಶೇಖರ ಅಂಬತ್ತಡಿ, ಅಧ್ಯಕ್ಷ ರಾಜೇಶ್ ಬನಾರಿ ಉಪಸ್ಥಿತರಿದ್ದರು. ರಾಜೇಶ್ ಗೌಡ ಬನಾರಿ, ವಸಂತ ಕೂಂಕ್ಯ, ನವೀನ್ ಕೊಯಕ್ಕುಡೆ, ಯಮುನಾ ಕೊಯಕ್ಕುಡೆ, ಮನೋಜ್ ಕೊಯಕ್ಕುಡೆ, ಕಾರ್ತಿಕ್ ಬನಾರಿ ಅತಿಥಿಗಳನ್ನು ಗೌರವಿಸಿದರು. ಶ್ರೀ ವೀರಾಂಜನೇಯ ಗೆಳೆಯರ ಬಳಗದ ಸದಸ್ಯರಾದ ರಾಕೇಶ್ ಆಚಾರ್ಯ ಬನಾರಿ ಪ್ರಾರ್ಥಿಸಿ, ವಿಶ್ವನಾಥ ಕೊಯಕ್ಕುಡೆ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಮೋಹಿನಿ ಕೊಯಕ್ಕುಡೆ ವಂದಿಸಿ, ಅನಿಲ್ ಕೂಂಕ್ಯ ಕಾರ್ಯಕ್ರಮ ನಿರೂಪಿಸಿದರು.