ಉಪ್ಪಿನಂಗಡಿ: ಬೈಕೊಂದಕ್ಕೆ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಕಲ್ಲೇರಿ ಹುಣ್ಸೆಕಟ್ಟೆ ಎಂಬಲ್ಲಿ ನಡೆದಿದೆ. ಉರುವಾಲು ಗ್ರಾಮದ ಶುಂಠಿಪಲ್ಕೆ ದಿ.ಕಿಟ್ಟಣ್ಣ ರೈಯವರ ಮಗ ಕೃಷ್ಣಪ್ರಸಾದ್ ರೈ (೩೬ವ.)ಮತ್ತು ಜೊತೆಗಿದ್ದ ಕಣಿಯೂರು ಗ್ರಾಮದ ನಾರಳಿಕೆ ದಿ.ಚಂದಪ್ಪ ಗೌಡರ ಮಗ ಜಯರಾಮ ಗೌಡ (೨೯ವ.)ಮೃತಪಟ್ಟವರು ಎಂದು ಗುರುತಿಸಲಾಗಿದೆ.
ನ.೨೯ರಂದು ರಾತ್ರಿ ಕೃಷ್ಣಪ್ರಸಾದ್ ರೈ, ಜಯರಾಮ ಗೌಡರು ಉಪ್ಪಿನಂಗಡಿಯಿಂದ ಕಲ್ಲೇರಿ ಕಡೆಗೆ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಎದುರುಕಡೆಯಿಂದ ಬಂದ ಪಿಕಪ್ ಇವರ ಬೈಕ್ಗೆ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ಬೈಕ್ ಸವಾರರೀರ್ವರೂ ರಸ್ತೆಗೆಸೆಯಲ್ಪಟ್ಟು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತ ಕೃಷ್ಣಪ್ರಸಾದ್ ರೈಯವರು ಸೆಂಟ್ರಿಂಗ್ ಗುತ್ತಿಗೆದಾರರಾಗಿದ್ದು ಕೆಲಸ ಮುಗಿಸಿ ಜೊತೆಗಾರ ಜಯರಾಮ ಗೌಡರೊಂದಿಗೆ ಬೈಕ್ನಲ್ಲಿ ಕಲ್ಲೇರಿಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.ಮೃತ ಕೃಷ್ಣಪ್ರಸಾದ್ ರೈಯವರು ತಾಯಿ ದೇವಕಿ ರೈ, ಪತ್ನಿ, ಒಂದು ಗಂಡು ಮಗು ಹಾಗೂ ಸಹೋದರ ಶಿವಪ್ರಸಾದ್ ರೈ, ಸಹೋದರಿಯರಾದ ಪವಿತ್ರ ಮತ್ತು ಪವಿತ ಅವರನ್ನು ಅಗಲಿದ್ದಾರೆ.ಮೃತ ಜಯರಾಮ ಗೌಡರು ಅವಿವಾಹಿತರಾಗಿದ್ದು ತಾಯಿ ಚೆಲುವಮ್ಮ, ಅಣ್ಣ ಹರೀಶ್ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಸಂಚಾರಿ ಠಾಣಾ ಪೊಲೀಸರ ಕಾರ್ಯಾಚರಣೆ ಪಿಕಪ್ ತಣ್ಣೀರುಪಂಥದಲ್ಲಿ ಪತ್ತೆ: ಅಪಘಾತವೆಸಗಿ ಇಬ್ಬರ ಸಾವಿಗೆ ಕಾರಣವಾಗಿ ಬಳಿಕ ಪರಾರಿಯಾಗಿದ್ದ ಪಿಕಪ್ (ಕೆಎ೨೧-ಬಿ.೨೭೬೬)ತಣ್ಣೀರುಪಂಥ ಬಳಿ ಪತ್ತೆಯಾಗಿದೆ.ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ.ರಾಮ ನಾಯ್ಕ್ ಹಾಗೂ ಸಿಬಂದಿಗಳು ಪಿಕಪ್ನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.ಅಪಘಾತವೆಸಗಿದ ಬಳಿಕ ಅಲ್ಲಿಂದ ಪಿಕಪ್ನೊಂದಿಗೆ ಪರಾರಿಯಾಗಿದ್ದ ಚಾಲಕ, ಪಿಕಪ್ನ್ನು ರಸ್ತೆ ಬದಿ ನಿಲ್ಲಿಸಿ ಪರಾರಿಯಾಗಿದ್ದರು.ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಚಾಲಕ, ಬೆಳ್ತಂಗಡಿ ಕೆಯ್ಯೂರಿನ ಹರೀಶ್ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.