- ಪಿಕಪ್ ಜೀಪು ಚಾಲಕನ ವಿರುದ್ಧ ಕೊಲೆಯಲ್ಲದ ಅಪರಾಧಿತ ನರಹತ್ಯ ಪ್ರಕರಣ ದಾಖಲು
- ಅಮಲು ಪದಾರ್ಥ ಸೇವಿಸಿ ವಾಹನ ಚಲಾನೆ ಮಾಡಿದ್ದಲ್ಲಿ ಕಠಿಣ ಕ್ರಮ – ಪೊಲೀಸರಿಂದ ಎಚ್ಚರಿಕೆ
ಪುತ್ತೂರು: ಉಪ್ಪಿನಂಗಡಿ ಸಮೀಪದ ಕಲ್ಲೇರಿ ಬಳಿ ಬೈಕೊಂದಕ್ಕೆ ಪಿಕಪ್ ಜೀಪು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆಗೆ ಸಂಬಂಧಿಸಿ ಅಮಲು ಪದಾರ್ಥ ನಶೆಯಲ್ಲಿ ವಾಹನ ಚಲಾಯಿಸಿ ಕೃತ್ಯ ಎಸಗಿದ ಪಿಕಪ್ ಜೀಪು ಚಾಲಕನ ವಿರುದ್ಧ ಜೀವಾವಧಿ ಶಿಕ್ಷೆ ಅಥವಾ ಹತ್ತು ವರ್ಷಗಳ ತನಕ ವಿಸ್ತರಿಸಬಹುದಾದ ಕೊಲೆಯಲ್ಲದ ಅಪರಾಧಿತ ನರಹತ್ಯೆಯ ಪ್ರಕರಣ ದಾಖಲಿಸಲಾಗಿದೆ.
ಪಿಕಪ್ ಜೀಪು ಚಾಲಕ ಕೊಯ್ಯುರು ಗ್ರಾಮದ ಹರೀಶ್ ಎಂಬವರು ಬೆಳ್ತಂಗಡಿಯ ಕರಾಯ ಗ್ರಾಮದ ಹುಣಸೆಕಟ್ಟೆಯಲ್ಲಿ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ರಸ್ತೆಯ ರಾಂಗ್ ಸೈಡಿಗೆ ಜೀಪನ್ನು ಚಲಾಯಿಸಿ ಜಯರಾಮ ಮತ್ತು ಕೃಷ್ಣಪ್ರಸಾದ ಎಂಬವರು ಹೋಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ ಗಂಭೀರ ಗಾಯಗೊಂಡ ಜಯರಾಮ ಮತ್ತು ಕೃಷ್ಣಪ್ರಸಾದ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತ ಮಾಡಿದ ಪಿಕ್ ಅಪ್ ಚಾಲಕ ಸ್ಥಳದಿಂದ ವಾಹನ ಸಹಿತ ಪರಾರಿಯಾದವನನ್ನು ಸಾರ್ವಜನಿಕರು ಕಲ್ಲೇರಿ ಜನತಾ ಕಾಲೋನಿ ಬಳಿ ತಡೆದಿದ್ದರು. ಚಾಲಕ ಹರೀಶ್ ಅವರು ಅಮಲು ಪದಾರ್ಥ ಸೇವಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಅತನ ವಿರುದ್ಧ ಪುತ್ತೂರು ಸಂಚಾರ ಪೊಲೀಸರು ೨೭೯, & ಕಲಂ: ೧೩೪(ಎ) & (ಬಿ), ೧೮೫ ಐಎಂವಿ ಕಾಯ್ದೆ ಹಾಗೂ ಅಮಲು ಪದಾರ್ಥದ ನಶೆಯಲ್ಲಿ ವಾಹನ ಚಾಲನೆ ಮಾಡಿದರೆ ಇನ್ನೊಂದು ಜೀವಕ್ಕೆ ಹಾನಿ ಅಥವಾ ಮರಣ ಉಂಟಾಗಬಹುದು ಎಂಬ ಜ್ಞಾನವಿದ್ದು, ಅಮಲು ಪದಾರ್ಥದ ನಶೆಯಲ್ಲಿ ವಾಹನ ಚಲಾಯಿಸಿ ಕೃತ್ಯವೆಸಗಿರುವುದರಿಂದ ಜೀವಾವಧಿ ಶಿಕ್ಷೆ ಅಥವಾ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಕೊಲೆಯಲ್ಲದ ಅಪರಾಧಿಕ ನರಹತ್ಯೆಯ ಕಲಂ.೩೦೪ ಐಪಿಸಿ ದಾಖಲಿಸಿದ್ದಾರೆ. ಮುಂದಿನ ದಿನಗಳಲ್ಲೂ ಸಾರ್ವಜನಿಕರು ವಾಹನ ಚಾಲನೆಯ ವೇಳೆ ಅಮಲು ಪದಾರ್ಥ ಸೇವನೆ ಮಾಡಿದ್ದಲ್ಲಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.