- ಮುಂದಿನ ವರ್ಷ ಜನವರಿ 25 ರಂದು ಆಚರಿಸಲು ನಿರ್ಧಾರ
ಪುತ್ತೂರು: ಸರಿಸುಮಾರು ೩೮೦ ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ, ಹಾಗೂ ಮೂಲ ಶಿಲಾ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವವನ್ನು ನಡೆಸುವ ಕುರಿತಾಗಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರ ಅಧ್ಯಕ್ಷತೆಯಲ್ಲಿ ಕೆಮ್ಮಿಂಜೆ-ಮಣ್ಣಾಪು ಎಂಬಲ್ಲಿ ನ.೨೯ ರಂದು ಪೂರ್ವಭಾವಿ ಸಭೆ ನಡೆಯಿತು.
ಜ.25 ರಂದು ಆಚರಿಸಲು ನಿರ್ಧಾರ:
೨೦೨೦, ಮಾರ್ಚ್ ೨೮ ರಂದು ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ, ಹಾಗೂ ಮೂಲ ಶಿಲಾ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವ ನಡೆಯಬೇಕಾಗಿದ್ದು, ಮಹಾಮಾರಿ ಕೋವಿಡ್-೧೯ ನಿಂದಾಗಿ ಈ ಕಾರ್ಯಕ್ರಮ ಮುಂದೂಡಲ್ಪಟ್ಟಿತ್ತು. ಇದೀಗ ಮಣ್ಣಾಪು ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ, ಮೂಲ ಶಿಲಾ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವವನ್ನು ಮುಂದಿನ ವರ್ಷ ಜನವರಿ ೨೫ರಂದು ಶಿಸ್ತುಬದ್ಧವಾಗಿ ಮತ್ತು ಸರಳ ರೀತಿಯಲ್ಲಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ನೆರವೇರಿಸಲು ಶಾಸಕರಾದ ಸಂಜೀವ ಮಠಂದೂರುರವರಲ್ಲಿ ಕೇಳಿಕೊಳ್ಳಲಾಗುವುದು ಮತ್ತು ಸಭಾ ಕಾರ್ಯಕ್ರಮದ ಉಳಿದ ಅತಿಥಿಗಳನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದೆಂದು ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲುರವರು ಸಭೆಯಲ್ಲಿ ತಿಳಿಸಿದರು.
ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವ ಜವಾಬ್ದಾರಿಯನ್ನು ವಿಘ್ನೇಶ್ ಆರ್ಟ್ಸ್ನ ಕೇಶವ ಮಣ್ಣಾಪುರವರಿಗೆ ನೇತೃತ್ವ ವಹಿಸಿಕೊಡಲಾಯಿತು. ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿಶ್ವನಾಥ್ ಮಣ್ಣಾಪು-ಕೆಮ್ಮಿಂಜೆ, ಮಧ್ಯಸ್ತರು ಗಣೇಶ್ ಪೂಜಾರಿ ಕೆಮ್ಮಿಂಜೆ, ಅರ್ಚಕರಾದ ಕುಂಡ ಮಣ್ಣಾಪು ಹಾಗೂ ಅಣ್ಣು ಮಣ್ಣಾಪುರವರು ಉಪಸ್ಥಿತರಿದ್ದರು. ಪುತ್ತೂರು ನಗರಸಭೆಯ ಸಿಬ್ಬಂದಿ ಲಕ್ಷ್ಮೀ ಮಣ್ಣಾಪು, ಬಾಲಕೃಷ್ಣ ರೈ ಕೈಕಾರ ಪುಂಡಿಕಾ, ಸುಜೀರ್ ಕುಮಾರ್ ಶೆಟ್ಟಿ ನುಳಿಯಾಲು, ಯೋಗೀಶ್ ಆಚಾರ್ ಮೊಟ್ಟೆತ್ತಡ್ಕ ಹಾಗೂ ಕೆಮ್ಮಿಂಜೆ-ಮಣ್ಣಾಪು ಪರಿಸರದ ಸ್ಥಳೀಯರು ಸಭೆಯಲ್ಲಿ ಭಾಗವಹಿಸಿದರು. ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಮೊಟ್ಟೆತ್ತಡ್ಕ ಸ್ವಾಗತಿಸಿ, ಗಂಗಾಧರ್ ಮಣ್ಣಾಪು ವಂದಿಸಿದರು.
ಸರಳ ರೀತಿಯಲ್ಲಿ ಆಚರಣೆ…
ಈ ವರ್ಷದ ಆರಂಭದಲ್ಲಿಯೇ ಕಾರ್ಯಕ್ರಮ ವಿಜ್ರಂಭಣೆಯಲ್ಲಿ ನಡೆಯಬೇಕಾಗಿತ್ತು ಮಾತ್ರವಲ್ಲದೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆದರೆ ಮಹಾಮಾರಿ ಕೋವಿಡ್ನಿಂದಾಗಿ ಸ್ಥಗಿತಗೊಂಡಿತು. ಮುಂದಿನ ವರ್ಷ ಜನವರಿಯಲ್ಲಿ ಆಚರಿಸುವುದೆಂದು ತೀರ್ಮಾನಿಸಲಾಗಿದ್ದು ಇನ್ನು ಒಂದೂವರೆ ತಿಂಗಳ ಕಾಲಾವಕಾಶ ಮಾತ್ರ ಇದೆ. ಒಟ್ಟು ರೂ.೫ ಲಕ್ಷದ ಬಜೆಟ್ ಇದ್ದು, ಇದರಲ್ಲಿ ರೂ.೩.೫ ಲಕ್ಷದ ಕೆಲಸ ಈಗಾಗಲೇ ಆಗಿದೆ. ಇನ್ನುಳಿದ ಒಂದೂವರೆ ಲಕ್ಷ ಹಣದಲ್ಲಿ ಉಳಿದ ಕಾರ್ಯಕ್ರಮಗಳು ಆಗಬೇಕಿದೆ. ಆರ್ಥಿಕ ಕ್ರೋಢೀಕರಣಕ್ಕೆ ಪ್ರತಿಯೋರ್ವರು ಸಹಕಾರ ನೀಡಬೇಕಾಗಿದ್ದು, ಕಾರ್ಯಕ್ರಮವನ್ನು ಆಡಂಬರವಿಲ್ಲದೆ ಶಿಸ್ತುಬದ್ಧವಾಗಿ ಹಾಗೂ ಸರಳ ರೀತಿಯಲ್ಲಿ ಆಚರಿಸಲಿದ್ದೇವೆ –ಎನ್ ರವೀಂದ್ರ ಶೆಟ್ಟಿ ನುಳಿಯಾಲು, ಗೌರವಾಧ್ಯಕ್ಷರು, ಜೀರ್ಣೋದ್ಧಾರ ಸಮಿತಿ