ಪುತ್ತೂರು: ರಾಜ್ಯ ಚುನಾವಣಾ ಅಯೋಗವು ರಾಜ್ಯಾದ್ಯಂತ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಗೆ ದಿನಾಂಕ ಪ್ರಕಟಿಸಿದೆ. ಒಟ್ಟು ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಪ್ರಥಮ ಹಂತದ ಚುನಾವಣೆ ಡಿ.22 ಮತ್ತು 27 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.
ದ.ಕ ಜಿಲ್ಲೆಗೆ ಸಂಬಂಧಿಸಿ ಪ್ರಥಮ ಹಂತದಲ್ಲಿ ಮಂಗಳೂರು, ಮೂಡಬಿದ್ರೆ, ಬಂಟ್ವಾಳ ತಾಲೂಕಿನಲಿ ಪ್ರಥಮ ಹಂತದಲ್ಲಿ ಡಿ.22ರಂದು ಚುನಾವಣೆ ನಡೆಯಲಿದ್ದು ಡಿ.27 ರಂದು ಬೆಡಳ್ತಂಗಡಿ, ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಚುನಾವಣೆ ನಡೆಯಲಿದೆ.
ಬೆಳ್ತಂಗಡಿಯ 46, ಪುತ್ತೂರಿನ 22, ಸುಳ್ಯದ 25 ಮತ್ತು ಕಡಬದ 21 ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆಯಲಿದ್ದು ನ.30 ರಿಂದಲೇ ನೀತಿ ಸಂಹಿತೆ ಜಾರಿಗೊಂಡಿದೆ. ಪುತ್ತೂರು ಮತ್ತು ಕಡಬ ತಾಲೂಕಿಗೆ ಸಂಬಂಧಿಸಿ ಡಿ.11ರಂದು ಜಿಲ್ಲಾ ಅಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು ಅಂದೇ ನಾಮ ಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಳ್ಳಲಿದೆ. ಆಯಾಯಾ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಲಿದ್ದು ನಾಮ ಪತ್ರ ಸಲ್ಲಿಕೆಗೆ ಡಿ.16 ಅಂತಿಮ ದಿನವಾಗಿರುತ್ತದೆ.
ಡಿ.17 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಡಿ.19 ಕೊನೆಯ ದಿನಾಂಕವಾಗಿರುತ್ತದೆ. ಡಿ.27ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು, ಮತಎಣಿಕೆ ಡಿ.30ರಂದು ತಾಲೂಕು ಕೇಂದ್ರದಲ್ಲಿ ನಡೆಯಲಿದೆ. ಡಿ.31ರಂದು ನೀತಿ ಸಂಹಿತೆ ಮುಕ್ತಾಯಗೊಳ್ಳಲಿದೆ. ನೀತಿ ಸಂಹಿತೆಯು ಪಟ್ಟಣ ಪಂಚಾಯತಿ ಪುರಸಭೆ ನಗರಸಭೆ, ನಗರಪಾಲಿಕೆ, ಮಹಾನಗರ ಪಾಲಿಕೆ, ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ. ಪಕ್ಷ ರಹಿತವಾಗಿ ಗ್ರಾ.ಪಂ ಚುನಾವಣೆ ನಡೆಯಲಿದೆ.