HomePage_Banner
HomePage_Banner
HomePage_Banner
HomePage_Banner

ಕಾವು: ತುಡರ್ ಭಜನಾ ಸಂಘದ 5ನೇ ವಾರ್ಷಿಕೋತ್ಸವ | ಭಜನೆಯಿಂದ ರಾಷ್ಟ್ರಭಕ್ತಿ ನಿರ್ಮಾಣ-ಆರ್‌ಎಸ್‌ಎಸ್‌ನ ಅಚ್ಚುತ ನಾಯಕ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವರದಿ: ಸುನೀಲ್ ಎನ್. ಕಾವು
ಚಿತ್ರ: ಎನ್.ಎಸ್. ಕಾವು

ಕಾವು: ದೇಶ ಅಭಿವೃದ್ಧಿಯಾಗಬೇಕಾದರೆ ಗ್ರಾಮ ಅಭಿವೃದ್ಧಿಯಾಗಬೇಕು, ಗ್ರಾಮ ಒಳ್ಳೆಯಯದಾಗಬೇಕಾದರೆ ಆ ಊರಿನ ಮನೆಗಳು ಚೆನ್ನಾಗಿರಬೇಕು, ಒಂದು ಮನೆ ಸಂಸ್ಕಾರಯುತವಾಗಿ ಚೆನ್ನಾಗಿರಬೇಕಾದರೆ ಬಹಳ ಮುಖ್ಯ ವ್ಯವಸ್ಥೆ ಎಂದರೆ ಭಜನೆ, ಹಾಗಾಗಿ ನಿತ್ಯಭಜನೆಯ ಮೂಲಕ ಮನೆಯಲ್ಲಿ ದೇವರ ನಾಮ ಸ್ಮರಣೆ ನಡೆದರೆ ಆ ಮನೆ, ಕುಟುಂಬ ಒಳ್ಳೆಯದಾಗುತ್ತದೆ, ಆ ಮೂಲಕ ಭಜನೆಯಿಂದ ರಾಷ್ಟ್ರಭಕ್ತಿ ನಿರ್ಮಾಣವಾಗಲು ಸಾಧ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಭೋಧನ್‌ನ ಮಂಗಳೂರು ವಿಭಾಗ ಪ್ರಮುಖ್ ಅಚ್ಚುತ ನಾಯಕ್‌ರವರು ಹೇಳಿದರು.

ಆರ್‌ಎಸ್‌ಎಸ್‌ನ ಅಚ್ಯುತ ನಾಯಕ್‌ರಿಂದ ಮುಖ್ಯಭಾಷಣ

ಅವರು ನ.೩೦ರಂದು ನನ್ಯ ಹೊನ್ನಪ್ಪ ಆಚಾರ್ಯರವರ ನಿವಾಸದಲ್ಲಿ ನಡೆದ ಕಾವು ನನ್ಯ ತುಡರ್ ಯುವಕ ಮಂಡಲದ ಅಧೀನದಲ್ಲಿರುವ ತುಡರ್ ಭಜನಾ ಸಂಘದ ೫ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯಭಾಷಣ ಮಾಡಿದರು.

ರಾಮಕೃಷ್ಣ ಕಾಟುಕುಕ್ಕೆಯವರಿಂದ ಧಾರ್ಮಿಕ ಭಾಷಣ

ಭಾರತದಿಂದ ಜಗತ್ತಿಗೆ ಮಾರ್ಗದರ್ಶನ:
ಜಗತ್ತಿಗೆ ಮಾರ್ಗದರ್ಶನ ಮಾಡಬಲ್ಲ ಶಕ್ತಿ ಇರುವುದು ಭಾರತಕ್ಕೆ ಮಾತ್ರ, ಭಾರತ ಉಳಿದರೆ ಮಾತ್ರ ಜಗತ್ತು ಉಳಿದಿತು, ಭಾರತ ಉಳಿಯಬೇಕಾದರೆ ನಮ್ಮ ಹಿಂದೂ ಸಮಾಜ ಬೆಳೆಯಬೇಕು, ಹಾಗಾಗಿ ಹಿಂದೂಗಳಾದ ನಾವು ಅಗ್ರೇಸರ್‌ನಲ್ಲಿ ನಿಂತು ಭಾರತವನ್ನು ಉಳಿಸುವ ಕಾರ್ಯದಲ್ಲಿ ಕೈಜೋಡಿಸಬೇಕು, ಅದಕ್ಕಾಗಿ ನಮ್ಮ ಕುಟುಂಬ ಪದ್ಧತಿ, ಜೀವನ ಶೈಲಿ, ಹಿರಿಯರ ಮಾರ್ಗದರ್ಶನ, ಆಚಾರ-ವಿಚಾರಗಳು, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು, ಈ ನಿಟ್ಟಿನಲ್ಲಿ ಯುವಕ ಮಂಡಲವೊಂದು ಭಜನಾ ಸಂಘವನ್ನೇ ಕೇಂದ್ರವಾಗಿರಿಸಿ ಮಾಡುತ್ತಿರುವ ಕಾರ್ಯಕ್ರಮ ಹಿಂದೂ ಸಮಾಜದ ಬೆಳವಣಿಗೆ ಪೂರಕವಾಗಿದೆ ಎಂದು ಅಚ್ಚುತ ನಾಯಕ್ ಹೇಳಿದರು.

ಭಜನಾ ಮಂಗಳೋತ್ಸವ    

ಸಾಮೂಹಿಕ ಪ್ರಾರ್ಥನೆಗೆ ಭಗವಂತನ ಆಶೀರ್ವಾದ-ರಾಮಕೃಷ್ಣ ಕಾಟುಕುಕ್ಕೆ
ಧಾರ್ಮಿಕ ಉಪನ್ಯಾಸ ನೀಡಿದ ಭಜನಾ ಗುರು ರಾಮಕೃಷ್ಣ ಕಾಟುಕ್ಕೆಯವರು ಮಾತನಾಡಿ ಭಗವಂತನಿಗೆ ಅತ್ಯಂತ ಪ್ರಿಯವಾದ ಕಾರ್ಯ ಎಂದರೆ ಅದು ಭಜನೆ, ಸಾಮೂಹಿಕವಾಗಿ ಹಾಡಿದ ಭಜನೆ, ಪ್ರಾರ್ಥನೆಯಿಂದ ಭಗವಂತನ ಆಶೀರ್ವಾದ ಖಂಡಿತವಾಗಿಯೂ ಪ್ರಾಪ್ತಿಯಾಗುತ್ತದೆ, ಯಾವ ಮನೆಯಲ್ಲಿ ನಿತ್ಯಭಜನೆ, ಗುರು ಹಿರಿಯರ ಆಶೀರ್ವಾದ, ಮಕ್ಕಳ ನಲಿವು, ಅತಿಥಿ ಸತ್ಕಾರ ಶಾಶ್ವತವಾಗಿರುತ್ತದೋ ಆ ಮನೆಯಲ್ಲಿ ಭಗವಂತ ನೆಲೆಯಾಗುತ್ತಾನೆ, ತುಡರ್ ಯುವಕ ಮಂಡಲವು ತನ್ನ ಸಾಮಾಜಿಕ ಕಾರ್ಯದ ಜತೆಗೆ ಭಜನಾ ಸಂಘದ ಮೂಲಕ ಧರ್ಮಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ದಶಮಾನೋತ್ಸವ ವಿಜೃಂಭಿಸಲಿ-ನನ್ಯ
ಮುಖ್ಯ ಅತಿಥಿಯಾಗಿದ್ದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ತುಡರ್ ಯುವಕ ಮಂಡಲದ ಮೂಲಕ ಕಳೆದ ೫ ವರ್ಷದ ಹಿಂದೆ ಆರಂಭವಾದ ಭಜನಾ ಸಂಘವು ಪ್ರತಿ ತಿಂಗಳು ಹುಣ್ಣಿಮೆ ರಾತ್ರಿಯಂದು ಗ್ರಾಮದ ಮನೆ ಮನೆಗಳಲ್ಲಿ ಭಜನಾ ಅಭಿಯಾನ ನಡೆಸಿ ಬಹಳ ವ್ಯವಸ್ಥಿತವಾಗಿ ಸಂಘಟಿತವಾಗಿದೆ, ತನ್ನ ಸಮಾಜಮುಖಿ ಕಾರ್ಯದ ಜತೆಗೆ ಭಜನಾ ಕ್ಷೇತ್ರಕ್ಕೂ ಹೆಚ್ಚಿನ ಮಹತ್ವವನ್ನು ನೀಡಿ ರಾಮಕೃಷ್ಣ ಕಾಟುಕುಕ್ಕೆಯವರ ಮೂಲಕ ಭಜನಾ ತರಬೇತಿಯನ್ನು ನಡೆಸಿ ಜತೆಗೆ ಮಕ್ಕಳ ಭಜನಾ ಸಂಘವನ್ನು ಬೆಳೆಸುತ್ತಿರುವುದು ಉತ್ತಮ ಬೆಳವಣಿಯಾಗಿದೆ, ದಶಮಾನೋತ್ಸವ ಸಂಭ್ರಮದಲ್ಲಿರುವ ತುಡರ್ ಯುವಕ ಮಂಡಲದಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆದು ಬರಲಿ ಎಂದು ಶುಭಹಾರೈಸಿದರು.

ಚಂದ್ರಶೇಖರ ರಾವ್ ನಿಧಿಮುಂಡರವರಿಗೆ ಅಭಿನಂದನೆ

ಭಜನೆಯಿಂದ ಧಾರ್ಮಿಕತೆಗೆ ದೊಡ್ಡ ಕೊಡುಗೆ-ಚಂದ್ರಶೇಖರ ರಾವ್
ಅಭಿನಂದನೆ ಸ್ವೀಕರಿಸಿದ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡರವರು ಮಾತನಾಡಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿ ನಿಂತು ತನ್ನ ಸಮಾಜಕಾರ್ಯವನ್ನು ಮಾಡುವ ತುಡರ್ ಯುವಕ ಮಂಡಲವು ವಿಶೇಷವಾಗಿ ಭಜನಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟು ಭಜನಾ ಸಂಘದ ಮೂಲಕ ಮನೆ ಮನೆಗಳಲ್ಲಿ ಭಜನಾ ಕಾರ್ಯ ನಡೆಸಿ, ವರ್ಷಕ್ಕೊಮ್ಮೆ ವಾರ್ಷಿಕೋತ್ಸವವನ್ನು ಆಚರಣೆ ಮಾಡಿ ಧಾರ್ಮಿಕತೆಗೆ ಬಹಳ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ, ಜತೆಗೆ ಎಲ್ಲರನ್ನೂ ಬಹಳ ಆತ್ಮೀಯತೆಯಿಂದ ಗುರುತಿಸುವಲ್ಲಿಯೂ ಯುವಕ ಸಂಘವು ಮಾದರಿಯಾಗಿದೆ, ಇವತ್ತು ಕಾವು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷನ ನೆಲೆಯಲ್ಲಿ ನನ್ನನ್ನು ಮತ್ತು ಸಮಿತಿಯ ಎಲ್ಲಾ ಸದಸ್ಯರನ್ನು ಭಜನಾ ಸಂಘದಿಂದ ಬಹಳ ಪ್ರೀತಿಯಿಂದ ಗೌರವಿಸಿದ್ದೀರಿ ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ, ಯುವಕ ಮಂಡಲಕ್ಕೆ ನನ್ನ ಸಹಕಾರ ಸದಾ ಇದೆ ಎಂದು ಹೇಳಿದರು. ಮನೆಯ ಯಜಮಾನ ಹೊನ್ನಪ್ಪ ಆಚಾರ್ಯ ನನ್ಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾಧ್ಯಕ್ಷತೆ ವಹಿಸಿದ್ದ ತುಡರ್ ಭಜನಾ ಸಂಘದ ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆಯವರು ವಂದಿಸಿದರು. ಯುವಕ ಮಂಡಲದ ಅಧ್ಯಕ್ಷ ಸುನೀಲ್ ನಿಧಿಮುಂಡರವರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು.

ಕುಮಾರಿ ಪ್ರೀತಿಕಾ ಚಾಕೋಟೆ ಪ್ರಾರ್ಥಿಸಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಭಾಸ್ಕರ ಬಲ್ಯಾಯ ಮತ್ತು ಗಂಗಾಧರ ನಾಯ್ಕರವರು ಕಾರ್ಯಕ್ರಮ ನಿರ್ವಹಿಸಿದರು. ಭಜನಾ ಸಂಘದ ಗೌರವಾಧ್ಯಕ್ಷ ರಾಮಣ್ಣ ನಾಯ್ಕ ಆಚಾರಿಮೂಲೆಯವರು ಭಜನಾ ಗುರು ರಾಮಕೃಷ್ಣ ಕಾಟುಕುಕ್ಕೆಯವರಿಗೆ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಫ ನೀಡಿ ಗೌರವಾರ್ಪಣೆ ಸಲ್ಲಿಸಿದರು. ಯುವಕ ಮಂಡಲ ಕಾರ್ಯದರ್ಶಿ ಸತೀಶ ಮದ್ಲ, ಭಜನಾ ಸಂಘದ ಕಾರ್ಯದರ್ಶಿ ಧನಂಜಯ ನಾಯ್ಕ, ಕಾಟುಕುಕ್ಕೆ ಭಜನಾ ಶಿಷ್ಯವೃಂದದ ಸದಸ್ಯರಾದ ಕುಶಾಲಪ್ಪ ಗೌಡ ಬದಿಯಡ್ಕ, ದೇವಣ್ಣ ರೈ ಮುದರ್‌ಪಳ್ಳರವರು ಅತಿಥಿಗಳಿಗೆ ಶಾಲು ಹಾಕಿ, ಹೂ ನೀಡಿ ಸ್ವಾಗತಿಸಿದರು. ಯುವಕ ಮಂಡಲದ ಸದಸ್ಯರು ಸಹಕರಿಸಿದರು. ಕಾರ್ಯಕ್ರಮದ ಬಳಿಕ ಮನೆಯವರಿಂದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ರಾಮಕೃಷ್ಣ ಕಾಟುಕುಕ್ಕೆಯವರ ಉಪಸ್ಥಿತಿಯಲ್ಲಿ ಮೇಳೈಸಿದ ಭಜನಾ ಕಾರ್ಯಕ್ರಮ:
ವಾರ್ಷಿಕೋತ್ಸವದ ಅಂಗವಾಗಿ ಸಂಜೆ ಗಂಟೆ ೬ರಿಂದ ರಾತ್ರಿ ಗಂಟೆ ೮ರವರೆಗೆ ನಡೆದ ಭಜನಾ ಕಾರ್ಯಕ್ರಮವು ದಾಸ ಸಾಹಿತ್ಯ ಸಂಕೀರ್ತನಕಾರ ಮತ್ತು ಪ್ರಚಾರಕರೂ ಆಗಿರುವ ಭಜನಾ ಗುರು ರಾಮಕೃಷ್ಣ ಕಾಟುಕುಕ್ಕೆಯವರ ಉಪಸ್ಥಿತಿಯಲ್ಲಿ ನಡೆಯಿತು. ಕಾಟುಕುಕ್ಕೆಯವರು ಹಾಡಿದ ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣಾ ಭಜನೆ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಭಜನಾ ಕಾರ್ಯಕ್ರಮದಲ್ಲಿ ತುಡರ್ ಭಜನಾ ಸಂಘದ ಸದಸ್ಯರು, ತುಡರ್ ಮಹಿಳಾ ಭಜನಾ ಸಂಘದ ಸದಸ್ಯರು, ಸುಜ್ಞಾನ ಮಕ್ಕಳ ಭಜನಾ ಸಂಘದ ಸದಸ್ಯರು, ಕಾಟುಕುಕ್ಕೆ ಭಜನಾ ಶಿಷ್ಯವೃಂದ ನನ್ಯ ಇದರ ಸದಸ್ಯರು, ಮನೆಯವರು ಸೇರಿದಂತೆ ಊರಿನ ಭಜನಾಭಿಮಾನಿಗಳು ಪಾಲ್ಗೊಂಡಿದ್ದರು.

ರಾಮಕೃಷ್ಣ ಕಾಟುಕುಕ್ಕೆಯವರ ಉಪಸ್ಥಿತಿಯಲ್ಲಿ ಭಜನಾ ಕಾರ್ಯಕ್ರಮ

ಕಾವು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಅಭಿನಂದನೆ:
ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ತುಡರ್ ಭಜನಾ ಸಂಘದ ಗೌರವ ಮಾರ್ಗದರ್ಶಕರೂ ಆಗಿರುವ ಚಂದ್ರಶೇಖರ ರಾವ್ ನಿಧಿಮುಂಡರವರಿಗೆ ತುಡರ್ ಭಜನಾ ಸಂಘದ ವತಿಯಿಂದ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಫ, ಸ್ಮರಣಿಕೆ ನೀಡಿ ಗೌರವಿಸಿ ಅಭಿನಂದಿಸಲಾಯಿತು. ವ್ಯವಸ್ಥಾಪನಾ ಸಮಿತಿಗೆ ಸದಸ್ಯರುಗಳಾಗಿ ಆಯ್ಕೆಯಾಗಿರುವ ಯುವಕ ಮಂಡಲದ ಮಾಜಿ ಅಧ್ಯಕ್ಷರೂ ಆಗಿರುವ ಭಾಸ್ಕರ ಬಲ್ಯಾಯ, ಭಜನಾ ಸಂಘದ ಕಾರ್ಯದರ್ಶಿಯಾಗಿರುವ ಧನಂಜಯ ನಾಯ್ಕ ಕುಂಞಿಕುಮೇರು, ನಿರ್ಮಲಾ ರೈ, ಹೊನ್ನಪ್ಪ ಪೂಜಾರಿ ಪಿಲಿಪಂಜರ, ಪ್ರೇಮಾ ಗಂಗಾಧರ ಚಾಕೋಟೆಯವರನ್ನು ಶಾಲು ಹಾಕಿ, ಹೂ ನೀಡಿ ಅಭಿನಂದಿಸಲಾಯಿತು.

ಭಜನೆಯ ಮೂಲಕ ಹುಟ್ಟುಹಬ್ಬ ಆಚರಣೆ:
ಯುವಕ ಮಂಡಲದ ಸಕ್ರಿಯ ಸದಸ್ಯ ಪುರುಷೋತ್ತಮ ಆಚಾರ್ಯರವರು ತನ್ನ ಮಗಳು ಮಾನ್ವಿಯವರ ೨ನೇ ವರ್ಷದ ಹುಟ್ಟುಹಬ್ಬವನ್ನು ಭಜನಾ ಕಾರ್ಯಕ್ರಮದ ಮೂಲಕ ಆಚರಿಸಿದರು, ತುಡರ್ ಭಜನಾ ಸಂಘದ ಮೂಲಕ ತನ್ನ ಮನೆಯಲ್ಲಿಯೇ ಭಜನಾ ಕಾರ್ಯಕ್ರಮ, ಭಜನಾ ಸಂಘದ ೫ನೇ ವಾರ್ಷಿಕೋತ್ಸವವನ್ನು ನಡೆಸುವ ಆತಿಥ್ಯ ನೀಡಿ ಆ ಮೂಲಕ ಮಗಳ ಹುಟ್ಟುಹಬ್ಬವನ್ನು ಸಂಭ್ರಮಿಸಿದರು. ಯುವಕ ಮಂಡಲದ ಸದಸ್ಯನ ಈ ಕಾರ್ಯಕ್ಕೆ ಅತಿಥಿಗಳೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.