HomePage_Banner
HomePage_Banner
HomePage_Banner
HomePage_Banner

ವಿಚ್ಛೇದಿತ ಪತ್ನಿಯ ಮಾನಹಾನಿಗೈದ ಪ್ರಕರಣ: ಪುತ್ತೂರಿನಲ್ಲಿ ಕೆಪಿಟಿಸಿಎಲ್ ಇಂಜಿನಿಯರ್ ಆಗಿದ್ದ ಕೋಚು ಶೆಟ್ಟಿಗೆ ಜೈಲು ಶಿಕ್ಷೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಅನಾಮಧೇಯ ಪತ್ರಗಳ ಮೂಲಕ ಮಾನಹಾನಿಗೊಳಿಸುವುದು ಅಪರಾಧ

ಭಗವದ್ಗೀತೆಯ  ಶ್ಲೋಕ ಉಲ್ಲೇಖಿಸಿ ತೀರ್ಪು ನೀಡಿದ ಹೈಕೋರ್ಟ್

ಪುತ್ತೂರು: ವಿಚ್ಛೇದಿತ ಪತ್ನಿಯ ಮಾನಹಾನಿ ಗೈದಿರುವ ಆರೋಪದಡಿ ಪುತ್ತೂರಿನಲ್ಲಿ ಕೆಪಿಟಿಸಿಎಲ್ ಇಂಜಿನಿಯರ್ ಆಗಿದ್ದ ಕೋಚು ಶೆಟ್ಟಿ ಎಂಬವರಿಗೆ ಕರ್ನಾಟಕ ಉಚ್ಚ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪಿರ್ಯಾದಿದಾರರಾದ ಮಹಿಳೆಯ ಪರವಾಗಿ ಪಿ ಪಿ ಹೆಗ್ಡೆ & ಅಸೋಸಿಯೇಟ್ಸ್‌ನ ವಕೀಲರು ಮಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಗೂ ಉಚ್ಚ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಪುತ್ತೂರಿನಲ್ಲಿ ಕಾರ್ಯನಿರ್ವಹಿಸಿದ್ದ ಕೋಚು ಶೆಟ್ಟಿ:
ಮಂಗಳೂರು ಎಲಿಂಜೆ ನಿವಾಸಿಯಾಗಿರುವ ಕೋಚು ಶೆಟ್ಟಿಯವರು ಕೆಪಿಟಿಸಿಎಲ್‌ನಲ್ಲಿ ಎಂಜಿನಿಯರ್ ಆಗಿ ಮಂಗಳೂರಿನಲ್ಲಿ ಹಾಗೂ ಪುತ್ತೂರಿನಲ್ಲಿ ಕರ್ತವ್ಯದಲ್ಲಿದ್ದರು. ಅವರ ವಿಚ್ಛೇದಿತ ಪತ್ನಿ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಉದ್ಯೋಗದಲ್ಲಿದ್ದರು. ಇವರ ವಿವಾಹವು ವಿಚ್ಛೇದನದೊಂದಿಗೆ ಮುಕ್ತಾಯವಾಗಿತ್ತು. ವಿಚ್ಛೇದನವಾದ ಬಳಿಕವೂ ಆಕೆಗೆ ನಾನಾ ರೀತಿಯ ಕಿರುಕುಳ ನೀಡುವುದನ್ನು ಕೋಚು ಶೆಟ್ಟಿ ಮುಂದುವರಿಸಿದ್ದರು. ಈ ಸಂದರ್ಭದಲ್ಲಿ ವಿಚ್ಛೇದಿತ ಪತ್ನಿಗೆ ಅನಾಮಧೇಯ ಪತ್ರಗಳನ್ನು ಬೇರೆಬೇರೆ ಹೆಸರಿನಲ್ಲಿ ಬರೆದು ಸುಳ್ಳು ಕಥೆಗಳನ್ನು ಕಟ್ಟಿ ಚಾರಿತ್ರ್ಯಕ್ಕೆ ಧಕ್ಕೆ ತರುವಂತಹ ರೀತಿಯಲ್ಲಿ ಪತ್ರಗಳನ್ನು ಬರೆಯುವ ಮೂಲಕ ಪ್ರಸಾರ ಮಾಡುತ್ತಿದ್ದರು. ಈ ರೀತಿ ಹತ್ತಕ್ಕೂ ಅಧಿಕವಾದ ಪತ್ರಗಳನ್ನು ಬೇರೆ ಬೇರೆ ಹೆಸರಿನಲ್ಲಿ ಬರೆದು ಕಳುಹಿಸುತ್ತಿದ್ದು ಕೆಲವೊಂದು ಪತ್ರಗಳನ್ನು ತೆರೆದ ಅಂಚೆ ಪತ್ರದ ಮೂಲಕ ರವಾನಿಸುತ್ತಿದ್ದರು. ಪತ್ರಗಳಲ್ಲಿ ಅಶ್ಲೀಲವಾದ ಸುಳ್ಳು ಕಥೆಗಳನ್ನು ಮತ್ತು ಚಾರಿತ್ರ್ಯದ ಬಗ್ಗೆ ಬರೆಯುತ್ತಿದ್ದರು. ಈ ರೀತಿಯ ಪತ್ರಗಳನ್ನು ಆಕೆಯ ಮನೆಯ ವಿಳಾಸಕ್ಕೂ ಕಳುಹಿಸುತ್ತಿದ್ದರು. ಬ್ಯಾಂಕಿನ ತೆರೆದ ಅಂಚೆ ಪತ್ರದಲ್ಲಿ ಇರುವ ಸಂದೇಶವನ್ನು ಪೋಸ್ಟ್ ಮ್ಯಾನ್, ಬ್ಯಾಂಕಿನ ಸಿಬ್ಬಂದಿಗಳು ಮತ್ತು ನೆರೆಕರೆಯವರು ಓದಬೇಕೆಂಬ ದುರುದ್ದೇಶದಿಂದಲೇ ಆರೋಪಿಯು ತೆರೆದ ಅಂಚೆಗಳ ಮೂಲಕ ಪತ್ರಗಳನ್ನು ಬರೆದು ಕಳುಹಿಸುತ್ತಿದ್ದರು. ಈ ಪತ್ರಗಳನ್ನು ಕಂಡಾಗ ವಿಚ್ಛೇದಿತ ಪತಿಯ ಕೈ ಬರಹದಲ್ಲಿ ಇರುವುದಾಗಿ ಮನಗಂಡ ನೊಂದ ಮಹಿಳೆ ವಕೀಲರ ಮೂಲಕ ನೋಟೀಸು ಜಾರಿಗೊಳಿಸಿದ್ದರು. ನನಗೂ ಆ ಪತ್ರಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ನಿರಾಕರಿಸಿ ಆರೋಪಿಯು ಪ್ರತ್ಯುತ್ತರವನ್ನು ನೀಡಿದ್ದರು. ನಂತರದ ದಿನಗಳಲ್ಲಿಯೂ ಅದೇ ರೀತಿಯ ಪತ್ರಗಳನ್ನು ಬರೆದು ಅಂಚೆಯ ಮೂಲಕ ಬ್ಯಾಂಕ್ ಸಿಬ್ಬಂದಿಗಳಿಗೆ ಕಳುಹಿಸುವುದನ್ನು ಮುಂದುವರಿಸಿದ್ದರು. ಈ ಪತ್ರಗಳಲ್ಲಿ ಅಸಹ್ಯ ಮತ್ತು ಸುಳ್ಳು ಆರೋಪಗಳು ಇದ್ದುದ್ದರಿಂದ ವಿಚ್ಛೇದಿತ ಮಹಿಳೆ ಮಾನಹಾನಿ ಹಾಗೂ ಮಾನಸಿಕ ದುಃಖಕ್ಕೆ ಒಳಗಾದರು. ತೀರಾ ಮನನೊಂದ ವಿಚ್ಛೇದಿತ ಪತ್ನಿ ವಕೀಲರ ಮೂಲಕ ಮಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಆರೋಪಿಯ ವಿರುದ್ಧ ಮಾನಹಾನಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿದ್ದರು. ನ್ಯಾಯಾಲಯದಲ್ಲಿ ಆರೋಪಿಯು ಆ ಪತ್ರಗಳಲ್ಲಿರುವ ಕೈಬರಹಗಳು ಆತನದಲ್ಲ ಎನ್ನುವ ವಾದವನ್ನು ಹಾಗೂ ಆ ಪತ್ರಗಳಿಗೂ ಆತನಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬ ವಾದವನ್ನು ಮುಂದುವರಿಸಿದ್ದರು. ಆರೋಪಿಯು ಕೆಪಿಟಿಸಿಎಲ್ ಇಂಜಿನಿಯರ್ ಆಗಿದ್ದು ಮಂಗಳೂರು ಮತ್ತು ಪುತ್ತೂರಿನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಡೆಸಿರುವ ಆತನ ಕೈ ಬರವಣಿಗೆಯಲ್ಲಿರುವ ಕಚೇರಿ ಪತ್ರವ್ಯವಹಾರಗಳು ಮತ್ತು ಆತನ ರಜಾ ಅರ್ಜಿಗಳು ಇಲಾಖೆಯಿಂದ ನೇರವಾಗಿ ನ್ಯಾಯಾಲಯಕ್ಕೆ ತರಿಸಿಕೊಂಡು ಮಾನಹಾನಿಕರ ಪತ್ರಗಳ ಜೊತೆ ಹೋಲಿಸಿ ವರದಿ ಸಲ್ಲಿಸಲು ಬೆಂಗಳೂರಿನ ವಿಧಿವಿಜ್ಞಾನ ಇಲಾಖೆಯ ಪ್ರಯೋಗಾಲಯಕ್ಕೆ ಆದೇಶ ನೀಡಿತ್ತು. ದಾಖಲೆಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿದ ತಜ್ಞರು ಮಾನಹಾನಿಕರ ಪತ್ರಗಳೆಲ್ಲವೂ ಆರೋಪಿಯದೇ ಕೈ ಬರಹದಲ್ಲಿವೆ ಎಂದು ತಜ್ಞ ವರದಿಯನ್ನು ಕೋರ್ಟಿಗೆ ಸಲ್ಲಿಸಿದ್ದರು.
ಪ್ರಕರಣದ ಎಲ್ಲಾ ಸಾಕ್ಷ್ಯಾಧಾರಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನ್ಯಾಯಾಲಯವು ಆರೋಪಿ ವಿಚ್ಛೇದಿತ ಪತ್ನಿಯ ತೇಜೋವಧೆ ಮಾಡುವ ದುರುದ್ದೇಶದಿಂದ ಮಾನಹಾನಿಕರ ಪತ್ರಗಳನ್ನು ಬರೆದು ಅಂಚೆ ಮೂಲಕ ಕಳುಹಿಸಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿ ಭಾರತೀಯ ದಂಡ ಸಂಹಿತೆಯ ಕಲಂ ೫೦೦ ಮತ್ತು ೫೦೧ ರನ್ವಯ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಶಿಕ್ಷೆಯ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿ ಕೇವಲ ಬೆರಳಚ್ಚು ತಜ್ಞರ ವರದಿಯ ಆಧಾರದಲ್ಲಿ ಶಿಕ್ಷೆಯನ್ನು ವಿಧಿಸಿರುವುದು ತಪ್ಪು ಹಾಗೂ ಪತ್ರಗಳ ಮೂಲಕ ಮಾನ ಹಾನಿಯಾಗಿದೆ ಎನ್ನುವ ಬಗ್ಗೆ ಯಾವುದೇ ಪುರಾವೆ ಇರುವುದಿಲ್ಲ ಎಂದು ಆರೋಪಿ ಕೋಚು ಶೆಟ್ಟಿ ಪರ ವಕೀಲರು ವಾದಿಸಿದ್ದರು. ಆರೋಪಿಯ ವಾದವನ್ನು ತಳ್ಳಿಹಾಕಿರುವ ಉಚ್ಚ ನ್ಯಾಯಾಲಯ, ಸಂವಿಧಾನವು ದೇಶದ ಪ್ರತಿ ಪ್ರಜೆಗೆ ಆತನ ಹೆಸರು ಮತ್ತು ಗೌರವ ಅತ್ಯಮೂಲ್ಯ ಆಸ್ತಿಯಾಗಿದ್ದು ಅದು ಮೂಲಭೂತ ಹಕ್ಕಿನ ಅವಿಭಾಜ್ಯ ಅಂಗವಾಗಿದೆ ಎಂದು ಮಹತ್ತರ ತೀರ್ಪು ನೀಡಿದೆ. ಭಾರತ ದೇಶದಲ್ಲಿ ಜೀವಕ್ಕಿಂತಲೂ ಮಾನಕ್ಕೆ ಅಧಿಕವಾದ ಮೌಲ್ಯವಿದೆ, ಮಾನಕ್ಕಾಗಿ ಜೀವವನ್ನೇ ಪಣಕ್ಕಿಟ್ಟ ಸಾವಿರಾರು ಉದಾಹರಣೆಗಳು ಈ ದೇಶದ ಸಂಸ್ಕೃತಿ ದೇಶದ ಚರಿತ್ರೆಯಲ್ಲಿದೆ. ವ್ಯಕ್ತಿಯ ಮಾನಕ್ಕೆ ಹಾನಿಯಾದರೆ ಬದುಕಿದ್ದು ಸತ್ತಂತೆ ಎಂಬ ಭಗವದ್ಗೀತೆಯ ಶ್ಲೋಕವನ್ನು ಉಲ್ಲೇಖಿಸಿರುವ ನ್ಯಾಯಾಲಯವು ಗೌರವಾನ್ವಿತ ಮಹಿಳೆಯ ಮಾನವನ್ನು ಅನಾಮಧೇಯ ಪತ್ರಗಳ ಮೂಲಕ ಹಾನಿಗೊಳಿಸುವುದು ಗಂಭೀರವಾದ ಶಿಕ್ಷಾರ್ಹ ಅಪರಾಧವೆಂದು ಘೋಷಿಸಿದೆ. ಆರೋಪಿಯು ಯಾವುದೇ ರೀತಿಯ ಕನಿಕರಕ್ಕೆ ಅರ್ಹನಲ್ಲ ಎಂದು ತೀರ್ಮಾನಿಸಿ ಮಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿರುವ ಒಂದು ವರ್ಷ ಜೈಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ ಹಾಗೂ ಆರೋಪಿಯನ್ನು ತಕ್ಷಣವೇ ಬಂಧಿಸಿ ಜೈಲು ಶಿಕ್ಷೆಗೆ ಗುರಿ ಪಡಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅದೇಶ ನೀಡಿದೆ.
ಪತ್ರಗಳ ಮೂಲಕ ಮಾನಹಾನಿಗೈದಿವುದಕ್ಕಾಗಿ ಕ್ರಿಮಿನಲ್ ಮೊಕದ್ದಮೆಯಲ್ಲಿ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ ಆಗಿರುವುದು ಅತ್ಯಂತ ಅಪರೂಪದ ಪ್ರಕರಣವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.