ಪುತ್ತೂರು: ಪದೋನ್ನತಿ ಹೊಂದಿರುವ ಅರಿಯಡ್ಕ ಗ್ರಾಮದ ಪಾಪೆಮಜಲು ಸರಕಾರಿ ಪ್ರೌಢ ಶಾಲೆಯ ನಾಲ್ಕು ಮಂದಿ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಡಿ.೧ರಂದು ಪಾಪೆಮಜಲು ಶಾಲೆಯ ಪ್ರೇರಣಾ ಸಭಾಭವನದಲ್ಲಿ ನಡೆಯಿತು. ಶಾಲಾ ಎಸ್.ಡಿ.ಎಂ.ಸಿ, ಹಿರಿಯ ವಿದ್ಯಾರ್ಥಿ ಸಂಘ, ಪೋಷಕ ವೃಂದ ಹಾಗೂ ವಿದ್ಯಾಭಿಮಾನಿಗಳ ಮುಂದಾಳತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪಾಪೆಮಜಲು ಶಾಲೆಯಲ್ಲಿ ಸೇವೆ ಸಲ್ಲಿಸಿ ಇದೀಗ ಕೊಂಬೆಟ್ಟು ಸ.ಪ್ರೌ.ಶಾಲೆಗೆ ಮುಖ್ಯ ಶಿಕ್ಷಕರಾಗಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವ ವಸಂತ ಮೂಲ್ಯ ಅವರನ್ನು, ನೆಟ್ಟಣಿಗೆ ಮುಡ್ನೂರು ಸ.ಪ್ರೌ.ಶಾಲೆಗೆ ಮುಖ್ಯ ಶಿಕ್ಷಕರಾಗಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವ ಪ್ರೇಮ್ ಕುಮಾರ್ ಅವರನ್ನು ಸುಳ್ಯ ಸರಕಾರಿ ಜೂನಿಯರ್ ಕಾಲೇಜಿಗೆ ಮುಖ್ಯ ಶಿಕ್ಷಕರಾಗಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವ ಪ್ರಕಾಶ್ ಮೂಡಿತ್ತಾಯ ಅವರನ್ನು ಹಾಗೂ ಬಂಟ್ವಾಳ ತಾಲೂಕಿನ ಕಡೇಶಿವಾಲಯ ಸ.ಪ್ರೌ.ಶಾಲೆಗೆ ಮುಖ್ಯ ಶಿಕ್ಷಕರಾಗಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವ ಲೋಕಾನಂದ ಎನ್ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ಫಲಪುಷ್ಪ ನೀಡಿ, ಪೇಟ ತೊಡಿಸಿ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು.
ಇರ್ದೆ ಉಪ್ಪಳಿಗೆ ಪ್ರೌಢ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಮಾತನಾಡಿ ಒಂದೇ ಶಾಲೆಯ ನಾಲ್ಕು ಮಂದಿ ಶಿಕ್ಷಕರು ಭಡ್ತಿಗೊಂಡು ವರ್ಗಾವಣೆಯಾಗಿರುವುದು ವಿಶೇಷ ಎಂದರು. ತಾವು ಪಾಪೆಮಜಲು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ದಿನಗಳ ಬಗ್ಗೆ ಮೆಲು ಹಾಕಿದ ಅವರು ಇಲ್ಲಿ ಉತ್ತಮ ವಾತಾವರಣವಿದೆ, ಈ ಶಾಲೆಯ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ದುಡಿದಿದ್ದಾರೆ, ಪಾಪೆಮಜಲು ಶಾಲೆಗೆ ಒಳ್ಳೆಯ ಹೆಸರಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಭವಾನಿ ಶಂಕರ್ ಮಾತನಾಡಿ ಪಾಪೆಮಜಲು ಶಾಲೆಯ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ, ಇಲ್ಲಿ ಸೇವೆ ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಶಿಕ್ಷಕ ವೃಂದದವರು ಶಾಲಾಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಾರೆ, ಪದೋನ್ನತಿ ಹೊಂದಿರುವ ನಾಲ್ವರು ಶಿಕ್ಷಕರ ಭವಿಷ್ಯವೂ ಉಜ್ವಲವಾಗಲಿ ಎಂದು ಹಾರೈಸಿದರು.
ಸಹ ಶಿಕ್ಷಕರ ಸಂಘದ ಅಬ್ರಹಾಂ ಮಾತನಾಡಿ ಪಾಪೆಮಜಲು ಶಾಲೆ ಅಭಿವೃದ್ಧಿ ಹೊಂದಿದ ಶಾಲೆ, ಪತ್ರಿಕೆಗಳಲ್ಲಿ ಈ ಶಾಲೆಯ ಬಗ್ಗೆ ಪ್ರಚಾರಗಳು, ಹೆಚ್ಚು ವರದಿಗಳು ಬರುತ್ತಿರುವುದನ್ನು ನಾನು ಗಮನಿಸಿದ್ದೇನೆ, ಈ ಶಾಲೆಯಲ್ಲಿ ಒಳ್ಳೆಯ ಸಂಘಟಕ ಶಿಕ್ಷಕರಿದ್ದಾರೆ, ಅದರ ಫಲವಾಗಿ ಶಾಲೆ ಅಭಿವೃದ್ಧಿ ಕಂಡಿದೆ ಎಂದು ಹೇಳಿದರು. ಪದೋನ್ನತಿ ಹೊಂದಿದ ಶಿಕ್ಷಕರು ಶಾಲೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡರುವುದು ಶ್ಲಾಘನೀಯ ಎಂದರು.
ಶಾಲಾ ಮೇಲುಸ್ತುವಾರಿ ಸಮಿತಿಯ ನಿಕಟಪುರ್ವ ಕಾರ್ಯಾಧ್ಯಕ್ಷ ಅಮ್ಮಣ್ಣ ರೈ ಮಾತನಾಡಿ ನಮ್ಮ ಪಾಪೆಮಜಲು ಪ್ರೌಢ ಶಾಲೆ ತಾಲೂಕಿನಲ್ಲಿ ಹೆಸರು ಪಡೆದಿರುವ ಶಾಲೆಯಾಗಿದೆ, ಇಂದು ಬೀಳ್ಕೊಳ್ಳುತ್ತಿರುವ ನಾಲ್ವರು ಶಿಕ್ಷಕರೂ ಶಾಲಾಭಿವೃದ್ಧಿಗೆ ಸಹಕರಿಸಿದ್ದಾರೆ, ಅದರಲ್ಲೂ ಪ್ರಕಾಶ್ ಮೂಡಿತ್ತಾಯರವರ ಕೊಡುಗೆ ಅದ್ಭುತವಾಗಿದೆ ಎಂದ ಅವರು ಊರವರ ನಾಡಿಮಿಡಿತ ಅರಿತು ಕರ್ತವ್ಯ ನಿರ್ವಹಿಸುವವರು ಪರಿಪೂರ್ಣ ಶಿಕ್ಷಕರಾಗುತ್ತಾರೆ ಎಂದು ಹೇಳಿದರು.
ಅರಿಯಡ್ಕ ಗ್ರಾ.ಪಂ ಆಡಳಿತಾಧಿಕಾರಿ ಸುರೇಶ್ ಕುಮಾರ್ ಮಾತನಾಡಿ ಎಲ್ಲರ ಸಹಕಾರದ ಫಕವಾಗಿ ಪಾಪೆಮಜಲು ಶಾಲೆ ಅಭಿವೃದ್ಧಿ ಕಂಡಿದೆ, ಪ್ರತಿಫಲಾಪೇಕ್ಷೆಯಿಲ್ಲದೇ ಶಿಕ್ಷಕರು ಕಾರ್ಯ ನಿರ್ವಹಿಸಿದಾಗ ಯಶಸ್ಸು ತಾನಾಗಿಯೇ ಲಭಿಸುತ್ತದೆ ಎಂದು ಹೇಳಿದರು.
ನಾಲ್ಕು ಮಂದಿ ಮುತ್ತುಗಳನ್ನು ಬೀಳ್ಕೊಡುತ್ತಿದ್ದೇವೆ-ಪ್ರವೀಣಾ ರೈ
ಬೀಳ್ಕೊಡುಗೆ ಸ್ವೀಕರಿಸಿದ ಶಿಕ್ಷಕರ ಕುರಿತು ಪಾಪೆಮಜಲು ಶಾಲಾ ದೈ.ಶಿ.ಶಿಕ್ಷಕಿ ಪ್ರವೀಣಾ ರೈ ಬಿ ಮಾತನಾಡಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವ ಶಿಕ್ಷಕ ವಸಂತರವರು ಬಹಳ ಸೆನ್ಸಿಟಿವ್ ಮೈಂಡ್ನ ಶಿಕ್ಷಕರಾಗಿದ್ದರು, ಎಲ್ಲರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದ ಅವರು ಎಲ್ಲರ ಪ್ರೀತಿ, ವಿಶ್ವಾಸ ಸಂಪಾದಿಸಿದ್ದರು ಎಂದು ಹೇಳಿದರು. ಶಿಕ್ಷಕ ಪ್ರಕಾಶ್ ಮೂಡಿತ್ತಾಯರವರು ಎಲ್ಲರನ್ನು ಅರ್ಥೈಸಿಕೊಂಡು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಪ್ರವೃತ್ತರಾಗುವ ಶಿಕ್ಷಕರಾಗಿದ್ದರು ಎಂದು ಹೇಳಿದರು. ಶಿಕ್ಷಕ ಪ್ರೇಮ್ಕುಮಾರ್ ಅವರು ಸರಳ ಮತ್ತು ಶಾಂತ ಸ್ವಭಾವದ ವ್ಯಕ್ತಿಯಾಗಿದ್ದರು ಯಾವುದೇ ಸದ್ದು ಗದ್ದಲಗಳಿಲ್ಲದೇ ಪ್ರಾಮಾಣಿಕ ಸೇವೆ ಸಲ್ಲಿಸಿದವರಾಗಿದ್ದಾರೆ ಎಂದು ಹೇಳಿದರು. ವಸಂತ ಮೂಲ್ಯರವರು ನೋಡಲು ಸಣ್ಣಗಿದ್ದರೂ ಶಕ್ತಿಯುತವಾದ, ಮೌಲ್ಯಯುತವಾದ ಶಿಕ್ಷಕರಾಗಿದ್ದರು ಎಂದರು. ನಾಲ್ಕು ಮಂದಿ ಮುತ್ತುಗಳು ನಮ್ಮ ಶಾಲೆಯನ್ನು ಬಿಟ್ಟು ಹೋಗುತ್ತಿರುವುದು ದುಃಖ ಮತ್ತು ಸಂತೋಷವನ್ನು ತಂದಿದೆ, ಅವರ ಭವಿಷ್ಯದ ಬದುಕು ಉಜ್ವಲವಾಗಲಿ ಎಂದು ಅವರು ಹಾರೈಸಿದರು.
ಒಗ್ಗಟ್ಟಿನಲ್ಲಿ ಯಶಸ್ಸು ಪ್ರಾಪ್ತಿ-ಮೋನಪ್ಪ ಬಿ
ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಬಿ ಮಾತನಾಡಿ ಶಿಕ್ಷಕರು, ಊರವರು, ಶಾಲಾಭಿವೃದ್ಧಿ ಸಮಿತಿಯವರು ಒಗ್ಗಟ್ಟಿನಲ್ಲಿ ಕಾರ್ಯ ನಿರ್ವಹಿಸಿದರೆ ಶಾಲೆಯ ಅಭಿವೃದ್ಧಿ ಸುಲಭವಾಗುತ್ತದೆ, ಈ ಶಾಲೆಯ ನಾಲ್ವರು ಶಿಕ್ಷಕರು ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವುದು ಖುಷಿಯ ವಿಚಾರ, ಇವರೆಲ್ಲರ ಭವಿಷ್ಯದ ಜೀವನ ಸಂತೋಷಕರವಾಗಿರಲಿ ಎಂದ ಅವರು ಶಾಲೆಯ ಅಭಿವೃದ್ಧಿಗಾಗಿ ನಮ್ಮ ಜೊತೆ ಮುಂದಕ್ಕೂ ಎಲ್ಲರೂ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ವರ್ಗಾವಣೆಗೊಂಡ ಶಿಕ್ಷಕರ ಮಾತು:
ವರ್ಗಾವಣೆಗೊಂಡ ಶಿಕ್ಷಕ ವಸಂತ ಮೂಲ್ಯ ಮಾತನಾಡಿ ೨೨ ವರ್ಷ ಈ ಶಾಲೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ತೃಪ್ತಿ ನನಗಿದೆ, ಇಲ್ಲಿಂದ ಬೇರೆಡೆ ಹೋಗುತ್ತಿರುವುದು ಬೇಸರ ತರಿಸಿದೆಯಾದರೂ ವೃತ್ತಿಯಲ್ಲಿ ಇದು ಸಹಜವಾಗಿದೆ, ಸಹಕರಿಸಿದ ಎಲ್ಲರಿಗೂ ಶುಭವಾಗಲಿ ಎಂದು ಹೇಳಿದರು.
ಶಿಕ್ಷಕ ಪ್ರೇಮ್ಕುಮಾರ್ ಮಾತನಾಡಿ ಹಳ್ಳಿ ಪರಿಸರದಲ್ಲಿರುವ ಪಾಪೆಮಜಲು ಶಾಲೆಯಲ್ಲಿ ಸೇವೆ ಸಲ್ಲಿಸಿರುವುದು ಬಹಳ ಸಂತೋಷದ ವಿಚಾರ, ಈ ಸಂಸ್ಥೆ ನನಗೆ ಸಾಕಷ್ಟು ನೀಡಿದೆ, ಸಹೋದ್ಯೋಗಿಗಳು, ಊರವರು, ಸಹಕರಿಸಿದ್ದಾರೆ, ಎಲ್ಲರ ಪ್ರೀತಿ ವಿಶ್ವಾಸ ಲಭಿಸಿದೆ ಎಂದು ಹೇಳಿದರು.
ಶಿಕ್ಷಕ ಲೋಕಾನಂದ ಮಾತನಾಡಿ ಎಲ್ಲರೊಂದಿಗೆ ಬೆರೆತು ಈ ಶಾಲೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿರುವ ತೃಪ್ತಿ ನನಗಿದೆ, ಮನುಷ್ಯ ಹುಟ್ಟುವಾಗ ಏನೂ ತಂದಿಲ್ಲ, ಸತ್ತಾಗ ಏನೂ ಕೊಂಡು ಹೋಗುವುದಿಲ್ಲ, ಅದರ ಮಧ್ಯೆ ನಾವು ಹೇಗಿದ್ದೇವೆ, ಏನು ಮಾಡಿದ್ದೇವೆ ಎನ್ನುವುದು ಮುಖ್ಯ, ಎಲ್ಲರ ಪ್ರೀತಿ ವಿಶ್ವಾಸ ಗಳಿಸುವುದಕ್ಕಿಂತ ದೊಡ್ಡದು ಇನ್ನೊಂದಿಲ್ಲ ಎಂದು ಹೇಳಿದರು. ಶಿಕ್ಷಕ ಪ್ರಕಾಶ್ ಮೂಡಿತ್ತಾಯ ಮಾತನಾಡಿ ಇಲ್ಲಿಂದ ಬೇರೆ ಶಾಲೆಗೆ ಕೃತಜ್ಞತಾ ಪೂರ್ವಕವಾಗಿ ಹೋಗುತ್ತಿದ್ದೇನೆಯೇ ವಿನಃ ಯಾವುದೇ ಬೇಸರ ನನಗಿಲ್ಲ, ಇಲ್ಲಿನ ಅದ್ಭುತ ಪರಿಸರ ಇಷ್ಟವಾಗಿತ್ತು, ಇಲ್ಲಿನ ಶಿಕ್ಷಕ ವೃಂದದವರ ಒಗ್ಗಟ್ಟಿನ ಫಲವಾಗಿ ಈ ಶಾಲೆ ಅಭಿವೃದ್ಧಿಯ ಜೊತೆಗೆ ಸಾಧನೆ ಮಾಡಿದೆ ಎಂದ ಅವರು ಇಲ್ಲಿ ಕಲಿತ ಮಕ್ಕಳು ಎಲ್ಲೇ ಹೋದರೂ ಈ ಶಾಲೆಯನ್ನು ಮರೆಯಬೇಡಿ ಎಂದು ಹೇಳಿದರು.
ವಿದ್ಯಾರ್ಥಿಗಳಿಂದ ಅನಿಸಿಕೆ:
ವಿದ್ಯಾರ್ಥಿಗಳಾದ ಸ್ವಾತಿ ಪಿ, ಅನನ್ಯ ಎಚ್, ನವನೀತ ಹಾಗೂ ಧನ್ಯಶ್ರೀ ಅವರು ವರ್ಗಾವಣೆಗೊಂಡಿರುವ ಶಿಕ್ಷಕರ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ನಾಲ್ವರು ಶಿಕ್ಷಕರು ಶಾಲಾಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ-ತಿಲಕ್ ರೈ
ಅಧ್ಯಕ್ಷತೆ ವಹಿಸಿದ್ದ ಶಾಲಾ ಮೇಲುಸ್ತುವಾರಿ ಸಮಿತಿ ಕಾರ್ಯಾಧ್ಯಕ್ಷ ತಿಲಕ್ ರೈ ಕುತ್ಯಾಡಿ ಮಾತನಾಡಿ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವ ನಾಲ್ವರು ಶಿಕ್ಷಕರೂ ಪಾಪೆಮಜಲು ಶಾಲೆಯ ಅಭಿವೃದ್ಧಿಗೆ ತಮ್ಮಿಂದಾಗುವ ಕೊಡುಗೆ ನೀಡಿದ್ದಾರೆ, ನಮ್ಮ ಶಾಲೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು ಈ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಇದೆಲ್ಲವೂ ನಮಗೆ ಹೆಮ್ಮೆ ಮತ್ತು ಅಭಿಮಾನದ ವಿಚಾರವಾಗಿದೆ ಎಂದು ಹೇಳಿದರು. ಇಂದು ನಾಲ್ಕು ಮಂದಿ ಶಿಕ್ಷಕರನ್ನು ಬೀಳ್ಕೊಡುತ್ತಿರುವುದು ಬೇಸರದ ಸಂಗತಿಯಾದರೂ ಇಲಾಖಾ ನಿಯಮಾವಳಿ ಪ್ರಕಾರ ಇದು ಸಹಜ ಪ್ರಕ್ರಿಯೆಯಾಗಿದೆ, ಆದರೂ ಒಂದೇ ಶಾಲೆಯಿಂದ ನಾಲ್ಕು ಮಂದಿ ಏಕಕಾಲದಲ್ಲಿ ಪದೋನ್ನತಿ ಹೊಂದಿ ವರ್ಗಾವಣೆಯಾಗಿರುವುದು ವಿಶೇಷವಾಗಿದೆ ಎಂದು ಅವರು ಹೇಳಿದರು.
ಗಮನೆ ಸೆಳೆದ `ಚಪ್ಪಾಳೆ’ ಹಾಡು:
ನಾಲ್ಕು ಮಂದಿ ಶಿಕ್ಷಕರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯುವ ವೇಳೆ ವಿದ್ಯಾರ್ಥಿಗಳು ಹಾಡಿದ `ಚಪ್ಪಾಳೆ ಚಪ್ಪಾಳೆ’ ಹಾಡು ಗಮನ ಸೆಳೆಯಿತು. ವೇದಿಕೆಯ ಎದುರು ಸಾಲಾಗಿ ನಿಂತು ಹಾಡು ಹಾಡಿದ ವಿದ್ಯಾರ್ಥಿನಿಯರು ತಮ್ಮ ಶಾಲೆಯಿಂದ ನಿರ್ಗಮಿಸುತ್ತಿರುವ ಶಿಕ್ಷಕರ ಬಗ್ಗೆ ಹಾಡಿನ ಮೂಲಕ ಗುಣಗಾನ ಮಾಡಿದರು. ವಿದ್ಯಾರ್ಥಿಗಳ ಹಾಡಿಗೆ ಶಿಕ್ಷಕರು ಸಂತಸಪಟ್ಟರು.
ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ಭಂಡಾರಿ, ಕುಂಬ್ರ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಉಮೇಶ್ ಗೌಡ ಕನ್ನಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ಊರವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿನಿಯರಾದ ಅನನ್ಯ, ಪವಿತ್ರ ಹಾಗೂ ಯಶಸ್ವಿನಿ ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಬಿ ಸ್ವಾಗತಿಸಿದರು. ಶಿಕ್ಷಕಿ ಶಾಲೆಟ್ ಜೇನ್ ರೆಬೆಲ್ಲೋ ವಂದಿಸಿದರು. ಸಮಾಜ ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಕುಸುಮಾವತಿ ಬಿ, ಶಿಕ್ಷಕ ರಾಜೇಶ್ ಎನ್.ಎಂ ಹಾಗೂ ಅಡುಗೆ ಸಿಬ್ಬಂದಿಗಳಾದ ಜಯಂತಿ, ವಾಣಿ, ಗಿರಿಜ ಸಹಕರಿಸಿದರು.
ರಾಜ್ಯದಲ್ಲೇ ಗುರುತಿಸುವ ಶಾಲೆ:
ನಮ್ಮ ಪಾಪೆಮಜಲು ಪ್ರೌಢ ಶಾಲೆ ಅಭಿವೃದ್ಧಿ ಹೊಂದಿದ ಶಾಲೆಯಾಗಿದ್ದು ರಾಜ್ಯದಲ್ಲೇ ಗುರುತಿಸಲ್ಪಡಬೇಕಾದ ಶಾಲೆಯಾಗಿದೆ. ಇಲ್ಲಿನ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಮಿಂಚಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ. ಎಸ್.ಡಿ.ಎಂ.ಸಿಯವರ, ಹಿರಿಯ ವಿದ್ಯಾರ್ಥಿಗಳ, ಶಿಕ್ಷಕ ವೃಂದದವರ, ಊರವರ ಹಾಗೂ ವಿದ್ಯಾಭಿಮಾನಿಗಳ ಸಹಕಾರದಿಂದ ನಮ್ಮ ಶಾಲೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಎಲ್ಲರ ಸಹಕಾರದೊಂದಿಗೆ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಪ್ರಯತ್ನಿಸಲಾಗುವುದು -ತಿಲಕ್ ರೈ ಕುತ್ಯಾಡಿ, ಕಾರ್ಯಾಧ್ಯಕ್ಷರು ಪಾಪೆಮಜಲು ಸ.ಪ್ರೌ.ಶಾಲೆ
ಶಿಕ್ಷಕ ವಸಂತರಿಂದ ರೂ.೨೫ ಸಾವಿರ ದೇಣಿಗೆ:
ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿದ ಶಿಕ್ಷಕ ವಸಂತ ಮೂಲ್ಯ ಅವರು ರೂ.೨೫ ಸಾವಿರದ ಚೆಕ್ನ್ನು ಶಾಲಾ ಕಾರ್ಯಾಧ್ಯಕ್ಷ ತಿಲಕ್ ರೈ ಕುತ್ಯಾಡಿಯವರಿಗೆ ಹಸ್ತಾಂತರಿಸಿ ಶಾಲೆಯ ಯಾವ ಉದ್ದೇಶಕ್ಕಾದರೂ ಇದನ್ನು ಬಳಸಿಕೊಳ್ಳಿ ಎಂದು ಹೇಳಿದರು. ಉಳಿದ ಶಿಕ್ಷಕರಾದ ಪ್ರೇಮ್ಕುಮಾರ್, ಲೋಕಾನಂದ ಹಾಗೂ ಪ್ರಕಾಶ್ ಮೂಡಿತ್ತಾಯ ಅವರು ಶಾಲೆಗೆ ಮಿಕ್ಸಿ, ಸೌಂಡ್ ಸಿಸ್ಟಮ್ಸ್ನ್ನು ಕೊಡುಗೆಯಾಗಿ ನೀಡಿದರು.