ಪುತ್ತೂರು: ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 8 ವಿದ್ಯಾರ್ಥಿಗಳ ಪ್ರಬಂಧ “ಕಣಾದ” ವಾರ್ಷಿಕ ವಿಜ್ಞಾನ ಪತ್ರಿಕೆಯಲ್ಲಿ ಆಯ್ಕೆಯಾಗಿದ್ದು, ಸುಮಾರು ಎರಡು ಸಾವಿರ ವರ್ಷಗಳಿಗೂ ಹಿಂದೆಯೇ ಅಣು ತತ್ವವನ್ನು ಪ್ರತಿಪಾದಿಸಿ, ಚಿರಸ್ಮರಣೀಯವಾಗಿರುವ ಭಾರತದ ಪ್ರಾಚೀನ ವಿಜ್ಞಾನಿ ಕಣಾದ ನ ಹೆಸರಿನಲ್ಲಿರುವ ೪೬ನೇ ಸಂಚಿಕೆ ಈ ವರ್ಷ ಪ್ರಕಟವಾಯಿತು. ಈ ಸಂಚಿಕೆಯಲ್ಲಿ ಪ್ರೊ. ಸುಧೀಂದ್ರ ಹಾಲ್ದೊಡ್ಡೇರಿ, ಡಾ||ಉದಯ ಶಂಕರ ಪುರಾಣಿಕ, ಡಾ||ನಾ.ಸೋಮೇಶ್ವರ, ಶ್ರೀ ಕೊಳ್ಳೇಗಾಲ ಶರ್ಮ, ಡಾ|| ಮುರಳಿ ಮೋಹನ ಚೂಂತಾರು, ಡಾ|| ಶ್ರೀಧರ ಭಟ್ ಬಡೆಕ್ಕಿಲ ಮೊದಲಾದ ವಿಜ್ಞಾನಿ ಸಾಹಿತಿಗಳ ಅತ್ಯಮೂಲ್ಯ ಲೇಖನಗಳಿವೆ. ಈ ಕನ್ನಡ ಸಾಂಸ್ಕೃತಿಕ ಸಂಘದವರು ಪ್ರತೀ ವರ್ಷ ಪ್ರೌಢಶಾಲೆ, ಕಾಲೇಜು ಮತ್ತು ಸಾರ್ವಜನಿಕ ವಿಭಾಗಗಳಲ್ಲಿ ವಿಜ್ಞಾನ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಬಹುಮಾನಿತ ಲೇಖನಗಳನ್ನು ಕಣಾದ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟವಾಗಿದ್ದು, ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ವರ್ಷಂಪ್ರತಿ ಅಧಿಕ ಸಂಖ್ಯೆಯಲ್ಲಿ ಪ್ರಬಂಧ ಬರೆದು ಈ ಸ್ಪರ್ಧೆಗೆ ಕಳುಹಿಸುತ್ತಾರೆ. ಈ ಬಾರಿ ಕಳುಹಿಸಿದ ೧೩ ಪ್ರಬಂಧಗಳಲ್ಲಿ ೮ ಪ್ರಬಂಧ ಆಯ್ಕೆಯಾಗಿದ್ದು, ಇದರಲ್ಲಿ ಆಧುನಿಕ ಕೃಷಿಯಲ್ಲಿ ಡಿಜಿಟಲ್ ಸಾಧನ ಈ ವಿಷಯದಲ್ಲಿ ಪ್ರಬಂಧ ಬರೆದು ೧೦ನೇ ತರಗತಿಯ ಎಸ್. ಮಂಜುನಾಥ (ಸಂಗಪ್ಪ ಮತ್ತು ಮಲ್ಲವ್ವ ರವರ ಪುತ್ರ) ಮತ್ತು ರಕ್ಷಿತಾ ಪ್ರಭು (ರಾಧಾಕೃಷ್ಣ ಮತ್ತು ವನಿತಾ ರವರ ಪುತ್ರಿ) ಪ್ರಥಮ ಬಹುಮಾನ ಪಡೆದಿರುತ್ತಾರೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳು ಈ ವಿಷಯದಲ್ಲಿ ೧೦ನೇ ತರಗತಿಯ ವೇದಾಕ್ಷ ಎಂ (ರಮೇಶ್ ಎಂ ಮತ್ತು ಬೇಬಿ ಯವರ ಪುತ್ರ), ೮ನೇ ತರಗತಿಯ ಬಿ ಪ್ರಾರ್ಥನಾ (ಡಾ. ಶ್ರೀಪ್ರಕಾಶ್ ಬಿ ಯವರ ಪುತ್ರಿ) ಮತ್ತು ನಿಶಾ (ರಮೇಶ್ ಎಂ ಮತ್ತು ಬೇಬಿ ಯವರ ಪುತ್ರಿ) ದ್ವಿತೀಯ ಬಹುಮಾನ ಪಡೆದಿರುತ್ತಾರೆ.
ಜಲಾಂತರ್ಗಾಮಿ ನೌಕೆಗಳ ವಿಸ್ಮಯಲೋಕ ಈ ವಿಷಯದಲ್ಲಿ ಹತ್ತನೇ ತರಗತಿಯ ಜಿ ಯಿಷಿತ್ ವಿಲಾಸ್ (ಗಣೇಶ್ ಆಚಾರ್ಯ ಮತ್ತು ಚಂದ್ರಕಲಾ ಜಿ ಯವರ ಪುತ್ರ) ಮತ್ತು ಶ್ರಾವ್ಯ (ಕೇಶವ ಕುಲಾಲ್ ಮತ್ತು ಕುಶಾಲಾಕ್ಷಿ ಯವರ ಪುತ್ರಿ) ಹಾಗೂ ೯ನೇ ತರಗತಿಯ ಸೌಮ್ಯಾ ಕೆ (ಸುರೇಶ್ ಕೆ ಮತ್ತು ಗಾಯತ್ರಿ ಯವರ ಪುತ್ರಿ) ಪ್ರಥಮ ಬಹುಮಾನ ಪಡೆದಿರುತ್ತಾರೆ ಎಂದು ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹಾಗೂ ಮುಖ್ಯ ಶಿಕ್ಷಕಿ ರೂಪಕಲಾರವರು ತಿಳಿಸಿದ್ದಾರೆ.