ವಿಟ್ಲ: ವಿಟ್ಲ ಪರಿಸರದಲ್ಲಿ ಹುಚ್ಚು ನಾಯಿಯೊಂದು ಮಕ್ಕಳು ಸಹಿತ ಒಟ್ಟು ಏಳು ಮಂದಿಗೆ ಕಚ್ಚಿ ಗಾಯಗೊಳಿಸಿದ ಘಟನೆ ಡಿ.೪ರಂದು ನಡೆದಿದೆ.
ಚಂದಳಿಕೆ ನಿವಾಸಿ ಅಹರಾಜ್(೬ ವ.), ಬೊಬ್ಬೆಕೇರಿ ನಿವಾಸಿ ಮೌಸೀಫ್(೧೬ ವ.), ಇರಾ ನಿವಾಸಿ ಮುಸ್ತಫಾ(೩೧ ವ.), ವಿಟ್ಲ ಕಸಬಾ ನಿವಾಸಿ ಅನಿರುದ್ದ (೨೭ ವ.), ಕಡಂಬು ನಿವಾಸಿ ರಾಧಾಕೃಷ್ಣ(೫೨ ವ.), ಅಳಿಕೆ ನಿವಾಸಿ ಭಾಸ್ಕರ್(೪೯ ವ.) ರವರು ನಾಯಿ ಕಡಿತದಿಂದ ಗಾಯಗೊಂಡು ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಆರು ಮಂದಿಯಲ್ಲಿ ಇಬ್ಬರು ಗಂಭೀರ ಗಾಯಗೊಂಡಿದ್ದು, ಅವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಣ್ಣಮಟ್ಟಿನ ಗಾಯಗೊಂಡವರು ವಿಟ್ಲದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ವಿಟ್ಲ ದೇವಸ್ಥಾನ ರಸ್ತೆಯಿಂದ ಬೊಬ್ಬೆಕೇರಿ ಮೂಲಕ ಬಂದ ಹುಚ್ಚು ನಾಯಿ ಪೇಟೆವರೆಗೆ ಓಡಾಡಿ ದಾರಿಯಲ್ಲಿ ಸಿಕ್ಕಿದವರಿಗೆಲ್ಲ ಕಚ್ಚಿ ಗಾಯಗೊಳಿಸಿದೆ. ತಕ್ಷಣವೇ ಕಾರ್ಯಾಚರಣೆಗೆ ಇಳಿದ ಫ್ರೆಂಡ್ಸ್ ವಿಟ್ಲ ತಂಡದ ಮುರಳೀಧರ ಅವರ ತಂಡ ಹುಚ್ಚು ನಾಯಿಯನ್ನು ಸಂಹಾರ ಮಾಡುವಲ್ಲಿ ಯಶಶ್ವಿಯಾಗಿದ್ದಾರೆ.