ಉಪ್ಪಿನಂಗಡಿ: ಕೇಂದ್ರ ಸರಕಾರವು ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ಮಂಡಿಸಿದ ಕಾಯ್ದೆಗಳು ರೈತ ವಿರೋಧಿ ಕಾಯ್ದೆಗಳಾಗಿದ್ದು, ಇದನ್ನು ವಿರೋಧಿಸಿ ಡಿ.೮ರಂದು ನಡೆಯುವ ಭಾರತ್ ಬಂದ್ ಚಳವಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಸಂಪೂರ್ಣ ಬೆಂಬಲ ನೀಡಲಿದ್ದು, ಆ ದಿನ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ)ಯ ದ.ಕ. ಜಿಲ್ಲಾ ಅಧ್ಯಕ್ಷ ಸುರೇಶ್ ಭಟ್ ಕೋಜಂಬೆ ತಿಳಿಸಿದರು.
ಈ ಬಗ್ಗೆ ಶನಿವಾರ ಉಪ್ಪಿನಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೇಂದ್ರ ಸರಕಾರ ಜಾರಿಗೆ ತಂದಿರುವ ಬೀಜ ಕಾಯ್ದೆಯಿಂದಾಗಿ ನಮ್ಮಲ್ಲಿರುವ ಪಾರಂಪಾರಿಕ ಬೆಳೆಗಳು ವಿನಾಶದತ್ತ ಸಾಗಲಿದೆ. ಅಂದು ಬಿ.ಟಿ. ಬದನೆ ಬಂದ ಬಳಿಕ ನಮ್ಮ ನೆಲದ ಪಾರಂಪರಿಕ ಬದನೆ ತಳಿಗಳು ನಾಶವಾದ ಹಾಗೆ ಎಲ್ಲಾ ಪಾರಂಪರಿಕ ಕೃಷಿಗಳು ಈ ಕಾಯ್ದೆಯಿಂದ ನಾಶವಾಗಲಿವೆ. ಕಾಂಟ್ರಾಕ್ಟ್ ಫಾರ್ಮಿಂಗ್ ಕಾಯ್ದೆಯ ಮೂಲಕ ಕೃಷಿಯನ್ನೇ ಈ ದೇಶದಿಂದ ಕಿತ್ತೊಗೆಯುವ ಹುನ್ನಾರ ಕೇಂದ್ರ ಸರಕಾರ ನಡೆಸಿದೆ. ಈ ಕಾಯ್ದೆಯ ಪ್ರಕಾರ ಐದು ಎಕರೆಗಿಂತ ಕಡಿಮೆ ಇರುವ ಕೃಷಿಕನನ್ನು ಕೃಷಿ ಮಾಡಲು ಹಣವಿಲ್ಲದವ ಎಂದು ಪರಿಗಣಿಸಿದ್ದು, ಆತ ಕಾರ್ಪೋರೇಟ್ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಕಾರ್ಪೋರೇಟ್ ಕಂಪೆನಿಗಳು ಹೇಳಿದ ಕೃಷಿ ಮಾಡಬೇಕು. ಅಲ್ಲಿ ಬೆಳೆದ ಉತ್ಪನ್ನವನ್ನು ಅದೇ ಕಂಪೆನಿಗಳಿಗೆ ಮಾರಬೇಕು. ಇಲ್ಲಿ ರೈತನಿಗೆ ಆತ ಬೆಳೆದ ಕೃಷಿ ಉತ್ಪಾದನೆಯಲ್ಲಿ ಯಾವುದೇ ಹಕ್ಕಿಲ್ಲ. ಅಲ್ಲಿ ಬೆಲೆ ನಿರ್ಧಾರ ಮಾಡುವುದು ಆತನಲ್ಲಿ ಒಪ್ಪಂದ ಮಾಡಿಕೊಂಡ ಕಾರ್ಪೋರೇಟ್ ಕಂಪೆನಿ. ಕ್ವಾಲಿಟಿಯ ನೆಪ ಸೇರಿದಂತೆ ಇನ್ಯಾವುದೋ ಕಾರಣ ನೀಡಿ ಕಂಪೆನಿ ಬೆಲೆ ಕಡಿಮೆ ನೀಡಿದರೆ ಕೃಷಿಕನ ಅಸ್ತಿತ್ವವೇ ನಾಶವಾಗುವ ಸಂಭವವಿದೆ. ಕೃಷಿಕ ಇಲ್ಲಿ ಯಾವುದನ್ನೂ ಪ್ರಶ್ನಿಸುವಂತಿಲ್ಲ. ಕಾರ್ಪೋರೇಟ್ ಕಂಪೆನಿಗಳ ಗುಲಾಮ ಅಷ್ಟೇ. ಆಹಾರ ಸರಕುಗಳ ದಾಸ್ತಾನು ಕಾಯ್ದೆಯೆಂಬುದು ಕೇಂದ್ರ ಜಾರಿಗೆ ತಂದ ಇನ್ನೊಂದು ಕಾಯ್ದೆಯಾಗಿದ್ದು, ಇಲ್ಲಿ ರೈತ ಬೆಳೆದ ಉತ್ಪನ್ನಗಳನ್ನು ದಾಸ್ತಾನಿಡುವ ಹಕ್ಕು ರೈತನಿಗಿಲ್ಲ. ಆ ಹಕ್ಕು ಇರುವುದು ಕಾರ್ಪೋರೇಟ್ ಕಂಪೆನಿಗಳಿಗೆ ಮಾತ್ರ. ಮೊದಲೆಲ್ಲಾ ರೈತರಿಗೆ ಹಾಗೂ ಪರವಾನಿಗೆ ಪಡೆದ ರೈತರ ಉತ್ಪನ್ನ ಖರೀದಿ ಮಾಡುವವರಿಗೆ ಅದರ ದಾಸ್ತಾನಿಡುವ ಹಕ್ಕಿತ್ತು. ರೈತನಿಗೆ ಬೆಲೆ ಕಡಿಮೆ ಇರುವಾಗ ತಾನು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡದೇ ಬೆಲೆ ಜಾಸ್ತಿ ಇರುವಾಗ ಆ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುತ್ತಿತ್ತು. ಆದರೆ ಈ ಕಾಯ್ದೆಯಿಂದ ರೈತ ಉತ್ಪಾದನೆ ಮಾಡುವ ಹಕ್ಕನ್ನು ಮಾತ್ರ ಪಡೆದುಕೊಂಡು ಅದನ್ನು ವೈಜ್ಞಾನಿಕ ಬೆಲೆಗೆ ಮಾರಾಟ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತಾನೆ. ನಮ್ಮೂರಿನ ರೈತ ಉತ್ಪನ್ನಗಳ ಖರೀದಿ ಕೇಂದ್ರಗಳೂ ನಾಶವಾಗುತ್ತವೆ. ಈ ಕಾಯ್ದೆಯಿಂದ ಕಾರ್ಪೋರೇಟ್ ಕಂಪೆನಿಗಳು ಮಾತ್ರ ಸರ್ವಾಧಿಕಾರಿಗಳಂತೆ ಮೆರೆಯುತ್ತವೆ ಎಂದರು.
೧೯೭೪ರ ಹಸಿರು ಕ್ರಾಂತಿ ಬಳಿಕ ನಮ್ಮ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುತ್ತಿದೆ. ಈವರೆಗೆ ಆಹಾರ ಉತ್ಪಾದನೆಯನ್ನು ಆಮದುಮಾಡಿಕೊಳ್ಳದ ಚೀನಾವು ಇತ್ತೀಚೆಗೆ ನಮ್ಮ ದೇಶದಿಂದ ೨೦ ಲಕ್ಷ ಟನ್ ಆಮದು ಮಾಡಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಕೃಷಿ ಉದ್ಯೋಗದಲ್ಲಿ ನಮ್ಮ ದೇಶ ನಂಬರ್ ೧ ಸ್ಥಾನದಲ್ಲಿದೆ. ಆದರೆ ಕೇಂದ್ರವು ಇತ್ತೀಚೆಗೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ ಕಾಯ್ದೆಗಳಿಂದಾಗಿ ಇದೆಲ್ಲವೂ ನಾಶವಾಗಿ ರೈತ ಕಾರ್ಪೋರೇಟರ್ ಕಂಪೆನಿಗಳು ಜೀತದಾಳು ಆಗುತ್ತಾನೆ. ದೈತ್ಯ ಕಂಪೆನಿಗಳ ಎದುರು ರೈತ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ರೈತ ಸಂಘಟನೆಗಳ ಒಕ್ಕೂಟಗಳು ಈಗಾಗಲೇ ದೆಹಲಿಯಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತಿದ್ದು, ಡಿ.೮ರಂದು ಭಾರತ ಬಂದ್ಗೆ ಕರೆ ಕೊಟ್ಟಿವೆ. ಇದು ರೈತನ ಅಳಿವು- ಉಳಿವಿನ ಪ್ರಶ್ನೆಯಾಗಿದ್ದು, ರೈತರ ಉಳಿವಿಗೋಸ್ಕರ ಪ್ರತಿಯೋರ್ವರೂ ಅಂದು ಸ್ವಯಂ ಪ್ರೇರಿತವಾಗಿ ಬಂದ್ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಉಪ್ಪಿನಂಗಡಿಯಲ್ಲಿ ಹೆದ್ದಾರಿ ತಡೆ: ರೈತ ಸಂಘದ ದ.ಕ. ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್ ಅವರು ಮಾತನಾಡಿ, ಡಿ.೮ರಂದು ಉಪ್ಪಿನಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ನಾವು ಪ್ರತಿಭಟನೆ ನಡೆಸಲಿದ್ದು, ಪಕ್ಷ ಬೇಧ ಮರೆತು ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ನಝೀರ್ ಮಠ ಮಾತನಾಡಿ, ಈ ರೈತ ವಿರೋಧಿ ಕಾಯ್ದೆಯ ಮೂಲಕ ಉಳುವವನೇ ಭೂಮಿಯ ಒಡೆಯ ಅನ್ನೋದನ್ನು ಸರಕಾರ ಈಗ ಉಳ್ಳವನೇ ಭೂಮಿಯ ಒಡೆಯ ಅಂತ ಬದಲಾವಣೆ ಮಾಡಲು ಹೊರಟಿದ್ದು, ರೈತನ ಬದುಕಿಗೆ ಕೊಳ್ಳಿ ಇಡುವ ಪ್ರಯತ್ನ ಮಾಡುತ್ತಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ರೈತ ಸಂಘ (ಹಸಿರು ಸೇನೆ)ದ ಜಿಲ್ಲಾ ಕಾರ್ಯದರ್ಶಿ ಇಬ್ರಾಹೀಂ ಖಲೀಲ್ ಪಿ., ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಯುವ ಕಾಂಗ್ರೆಸ್ ಅಧ್ಯಕ್ಷ ತೌಸೀಫ್ ಯು.ಟಿ. ಇದ್ದರು.
ವರ್ಷವಿಡೀ ಠಾಣೆಯಲ್ಲಿಡಬೇಕಾದರೆ ಕೋವಿಯ ಅಗತ್ಯವೇನು?
ಗ್ರಾ.ಪಂ., ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ವಿಧಾನಸಭಾ, ಲೋಕಸಭಾ ಹೀಗೆ ಹಲವು ಹಂತದಲ್ಲಿ ನಮ್ಮ ದೇಶದಲ್ಲಿ ಚುನಾವಣೆಗಳು ನಡೆಯುತ್ತವೆ. ಈ ಎಲ್ಲಾ ಸಂದರ್ಭದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭವಾಗಿ ಅದು ಮುಗಿಯುವವರೆಗೆ ಕೋವಿಗಳನ್ನು ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡಬೇಕೆಂಬ ನಿಯಮವನ್ನು ದ.ಕ. ಜಿಲ್ಲಾಡಳಿತ ಮಾಡುತ್ತಿದೆ. ರೈತರು ಕಾಡು ಪ್ರಾಣಿಗಳ, ಕಳ್ಳರ ಹಾವಳಿಯಿಂದ ರಕ್ಷಿಸಿಕೊಳ್ಳಲು ಕೋವಿಗಳನ್ನು ಪಡೆದಿರುತ್ತಾರೆ. 20 ರೂಪಾಯಿ ಇದ್ದ ನವೀಕರಣ ಶುಲ್ಕ ಈಗ ಎರಡು ಸಾವಿರ ರೂ. ಆಗಿದೆ. ನಮ್ಮಲ್ಲಿ ವರ್ಷಂಪ್ರತಿ ಯಾವುದಾದರೊಂದು ಚುನಾವಣೆಗಳು ಬರುತ್ತಿರುತ್ತವೆ. ಆದರೆ ಅಗ ಕೋವಿಯನ್ನು ಠಾಣೆಯಲ್ಲಿಡಬೇಕಾಗಿರುವುದರಿಂದ ವರ್ಷದ ಹೆಚ್ಚಿನ ಸಮಯ ರೈತನ ಕೈಯಲ್ಲಿ ಕೋವಿ ಇರುವುದಿಲ್ಲ. ಹೀಗಿರುವಾಗ ರೈತರ ಕೈಯಲ್ಲಿ ಕೋವಿ ಇದ್ದಾದರೂ ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು, ಈಗ ದ.ಕ. ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಈಗ ಅಡಿಕೆ, ತೆಂಗಿನಕಾಯಿ ಧಾರಣೆ ಉತ್ತಮವಿದೆ. ಕಳ್ಳರಿಗೆ ರೈತರ ಕೋವಿಗಳು ಠಾಣೆಯಲ್ಲಿವೆ ಅನ್ನೋದು ಗೊತ್ತಿವೆ. ಆದ್ದರಿಂದ ಯಾವುದೇ ಭೀತಿಯಿಲ್ಲದೆ ಕಳ್ಳತನ ನಡೆಯುವ ಸಾಧ್ಯತೆಯಿದೆ. ಆದ್ದರಿಂದ ಜಿಲ್ಲಾಡಳಿತವು ರೌಡಿ ಶೀಟರ್ಗಳ ಕೋವಿಯನ್ನು ಬೇಕಾದರೆ ಕೊಂಡು ಹೋಗಲಿ. ಆದರೆ ರೈತರ ಕೋವಿಗಳನ್ನು ಠಾಣೆಯಲ್ಲಿಡುವುದರ ಅಗತ್ಯವೇನು? ಎಂದು ಪ್ರಶ್ನಿಸಿದರು.