ಪ್ರಪಂಚವೇ ಬಹಳಷ್ಟು ಸಂಕಟಪಟ್ಟ, ಕೊರೋನಾ ಎಂಬ ಮಹಾಮಾರಿಯಿಂದಾಗಿ ಜಗತ್ತಿನ ಜನರೆಲ್ಲರೂ ಕೊರಗಿದ, ಮರುಗಿದ, ನಮ್ಮ ಸುತ್ತಮುತ್ತಲಿನವರು ಸಹಾ ಚೆನ್ನಾಗಿರಲಿ ಎಂದು ಮನಸಾರೆ ಹಾರೈಸಿದ ಸಿಹಿ ಘಟನೆಗಳಿಗಿಂತ ಕಹಿ ನೆನಪುಗಳೇ ತುಂಬಿರುವ ೨೦೨೦ ಎಂಬ ವರ್ಷಕ್ಕೆ ಬೈ ಹೇಳಿ, ನವ ಅಶಾವಾದವನ್ನು, ಎಲ್ಲ ಸಂಕಟವನ್ನು ‘ಲಸಿಕೆ’ಯ ಮೂಲಕ ಎದುರಿಸುವೆವೆಂಬ ನಂಬಿಕೆಯ ಮೂಲಕ ೨೦೨೧ರ ಹೊಸ್ತಿಲಿನಲ್ಲಿ ನಾವಿzವೆ. ಕಹಿ ಘಟನೆಗಳೇ ತುಂಬಿದ್ದ ಕ್ಯಾಲೆಂಡರ್ ಬದಲಾಯಿಸುವ ಕಾಲಬಂದಿದೆ. ಹೊಸ ಕ್ಯಾಲೆಂಡರ್, ಹೊಸ ಡೈರಿ, ಹೊಸ ಕನಸು, ಹೊಸ ಅಶಾಭಾವ, ಹೊಸತನದತ್ತ ಮುನ್ನೆಡೆಯಿಡಲು ಮನಸ್ಸು ಕಾತರಿಸುವ ಹೊತ್ತುಬಂದಿದೆ. ಬದುಕಿನ ಸಾಧನೆಗೆ ಚ್ಯೆತನ್ಯ ನೀಡಬಲ್ಲಂತಹ ಮತ್ತೊಂದು ಮಗ್ಗಲು, ಬದುಕೆಂಬ ಪುಸ್ತಕವೊಂದರ ಮತ್ತೊಂದು ಹೊಸ ಪುಟ ತೆರೆಯುವ ಕಾಲಬಂದಿದೆ.
ಸಮಯದ ಚಕ್ರ ಉರುಳುತ್ತಿದೆ… ಅನೇಕ ಸಿಹಿ ಕಹಿ ಅನುಭವಗಳನ್ನು ಕೊಡುತ್ತಾ ಅದರ ಗತಿಯಲ್ಲಿ ಅದು ಕ್ರಮಿಸುತ್ತಲೇ ಇದೆ. ಇದು ಹೊಸ ವರ್ಷ ಅಲ್ಲ, ಹೊಸ ವರ್ಷ ಆರಂಭವಾಗುವುದು ಯುಗಾದಿಯಂದು ಎ೦ದು ಸನಾತನ ಭಾರತೀಯ ಸ೦ಸ್ಕೃತಿಯು ತಿಳಿಹೇಳಿದರೂ ನಮ್ಮ ಕಲಿಯುಗದ ಬದುಕಿನಲ್ಲಿ ಇ೦ಗ್ಲಿಷ್ ಕ್ಯಾಲೆ೦ಡರ್ ವರ್ಷವೇ ಬಹುತೇಕ ಎಲ್ಲ ದೇಶದ ಜನರು ಅನುಸರಿಸುವುದರಿಂದ, ಹೊಸ ವರುಷ ಎ೦ದಾಕ್ಷಣ ಅದರದೇ ಮೇಲುಗೈ. ೨೦೨೧ ರ ಹೊಸ ವರ್ಷಕ್ಕೆ ಅಡಿ ಇಡುವ ಮುನ್ನ ಒಮ್ಮೆ ಹಿಂದಿರುಗಿ ನೋಡಿದರೆ, ಗತಿಸುತ್ತಿರುವ ವರ್ಷಕ್ಕೊಂದು ಮೆರುಗು ಕೊಟ್ಟ, ಬೆರಗು ತುಂಬಿದ ಸಾಲುಸಾಲು ಘಟನೆಗಳು ಕಣ್ಣ ಮುಂದೆ ಬರುತ್ತಿದೆ. ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್, ಪಾಸಿಟಿವ್ ಪದಗಳೇ ತುಂಬಿದ್ದ ಕೊರೋನಾ ಮಹಾಮಾರಿಯ ಅಟ್ಟಹಾಸದ ನಡುವೆಯು, ಬಹಳಷ್ಟು ಹೊಸ ಸಾಧ್ಯತೆಗಳನ್ನು ನಾವು ಕಂಡುಹಿಡಿದಿದ್ದೇವೆ. ‘ಮನೆಯಿಂದಲೇ ಕೆಲಸ’, ‘ಆನ್ಲೈನ್ ಕ್ಲಾಸುಗಳು’, ‘ವೆಬಿನಾರ್ಗಳೆಂಬ ವಿಸ್ಮಯಲೋಕ’, ‘ಕೃಷಿಯ ನಾವೀನ್ಯತೆ’ ಮೊದಲಾದ ಹಲವಾರು ಹೊಸ ಸಾಧ್ಯತೆಗಳು ನಮ್ಮ ಮುಂದೆ ತೆರೆದುಕೊಂಡಿದೆ. ಅದೇ ಹೊತ್ತಿಗೆ ಕೆಲಸವಿಲ್ಲದೇ, ಸಂಬಳವಿಲ್ಲದೇ, ‘ಮುಂದೇನು ಎಂಬ’ ಚಿಂತೆಯಿಂದ ಮನಸ್ಸು ಕೆಡಿಸಿಕೊಂಡ ವಿಚಾರಗಳು, ನನಸಾಗದ ಕನಸುಗಳು, ಆಚರಣೆಗೆ ಬರದ ಕಳೆದ ವರ್ಷ ತೆಗೆದುಕೊಂಡ ಹೊಸ ಸಂಕಲ್ಪಗಳು ಮನಸ್ಸಿನ ಮೂಲೆಯಲ್ಲಿ ಮಡುಗಟ್ಟಿವೆ.
ಕಾಲ ಓಡುತ್ತಿದೆ. ಕಳೆದು ಹೋದ ದಿನಗಳನ್ನು ಮರೆತು ದುಮ್ಮಿಕ್ಕಿ ಬರುವ ಅಮೃತಘಳಿಗೆಯನ್ನು ಸದ್ವಿನಿಯೋಗ ಮಾಡಿದರೆ ಭವಿಷ್ಯಕ್ಕೆ ಭದ್ರ ಬುನಾದಿಯಾದೀತು. ಈ ಯಾ೦ತ್ರಿಕ ಯುಗದಲ್ಲಿ ಹಗಲು ರಾತ್ರಿ ಸರಿಯುವುದೇ ತಿಳಿಯುತ್ತಿಲ್ಲ, ದಿನ, ವಾರ, ತಿಂಗಳು, ವರ್ಷ, ಎಲ್ಲವೂ ಆತುರಾತುರದಲ್ಲಿ ಮುನ್ನಡೆಯುತ್ತಿವೆ. ನಿನ್ನೆ ಮೊನ್ನೆಯ೦ತೆ ತೋರುವ, ನೆನಪಿನ೦ಗಳದಲ್ಲಿ ಹಚ್ಚ ಹಸಿರಾಗಿರುವ ದೃಶ್ಯಗಳೆಲ್ಲ ಹಳೆಯವು ಎ೦ದರೆ ನ೦ಬಲಾಗುತ್ತಿಲ್ಲ. ಯಾರಿಗೂ ಬಿಡುವಿಲ್ಲ, ಬದುಕಿನ ಉತ್ಕರ್ಷದ ಹುಡುಕಾಟದಲ್ಲಿ ಎಲ್ಲರೂ ವ್ಯಸ್ತವಾಗಿದ್ದಾರೆ. ಆದರೆ ಈ ಸುತ್ತಲ ಸಮಾಜ ಅದೆಷ್ಟು ಅಸ್ತವ್ಯಸ್ತ ಎ೦ಬುದರತ್ತ ಗಮನಹರಿಸಲು ಸಮಯದ ಅಭಾವ. ಹೊಸ ವರ್ಷದಲ್ಲಿ ತಾನು ಏನು ಮಾಡಬೇಕು, ಹೇಗಿರಬೇಕು, ಯಾವ ಸಾಧನೆಗೈಯ್ಯಬೇಕು ಎ೦ಬ ಜಿಜ್ಞಾಸೆ ಮಾಡುವ ನಾವು, ಕಳೆದ ಸಾಲಿನಲ್ಲಿ ಕೈಗೊ೦ಡ ತೀರ್ಮಾನ ಎಷ್ಟರ ಮಟ್ಟಿಗೆ ಸಾಧಕವಾಯಿತು ಎ೦ಬುದರ ಮೌಲ್ಯಮಾಪನವನ್ನೇ ಮಾಡದ ಆರಂಭಶೂರರಾಗಿzವೆ. ಈ ಪರಿಸ್ಥಿತಿ ಬದಲಾಗಬೇಕಾದರೆ ವರ್ಷಗಳು ಬದಲಾದರೆ ಸಾಲದು. ನಮ್ಮ ಮನಸ್ಸುಗಳು ಬದಲಾಗಬೇಕು. ಮನಸ್ಸು ಮಾಡಿದರೆ ನಮ್ಮ ಬದಲಾವಣೆಯೊಂದಿಗೆ ನಮ್ಮ ದೇಶವೇ ಬದಲಾಗುತ್ತದೆ. ನನ್ನ ನೆಚ್ಚಿನ ಕಾದಂಬರಿಕಾರರಾದ ಯಂಡಮೂರಿ ವೀರೇಂದ್ರನಾಥರು ಹೇಳುವಂತೆ ಯಾವುದೇ ಕೆಲಸವನ್ನು ಕಷ್ಟಪಟ್ಟು ಮಾಡದೆ ಇಷ್ಟ ಪಟ್ಟು ಮಾಡಿದರೆ ಮಾತ್ರ ನಾವು ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರಬಹುದು ಎಂಬುದು ಅಕ್ಷರಶ: ನಿಜ. ಅಂತಹ ಬದಲಾವಣೆಗೆ ಈ ಹೊಸ ವರ್ಷ ಸಾಕ್ಷಿಯಾಗಲಿ.