ಪುತ್ತೂರು: ಕೋಡಿಂಬಾಡಿಯಲ್ಲಿ ವಯೋವೃದ್ಧೆಯೋರ್ವರಿಗೆ ಡಿಕ್ಕಿ ಹೊಡೆದು ಪರಾರಿಯಾದ ದ್ವಿಚಕ್ರ ವಾಹನದ ಚಾಲಕನನ್ನು ಉಪ್ಪಿನಂಗಡಿಯಲ್ಲಿ ಪತ್ತೆ ಹಚ್ಚಿದ ಘಟನೆ ಜ.೧ರಂದು ಬೆಳಿಗ್ಗೆ ನಡೆದಿದೆ.
ಕೋಡಿಂಬಾಡಿಯ ದಾರಂದಕುಕ್ಕು ನಿವಾಸಿ ವಯೋವೃದ್ಧೆ ಲಕ್ಷ್ಮಿ ಎಂಬವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಗಾಯಗೊಂಡ ಲಕ್ಷ್ಮಿಯವರನ್ನು ಕೂಡಲೇ ಸ್ಥಳೀಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಲಕ್ಷ್ಮಿಯವರಿಗೆ ಡಿಕ್ಕಿ ಹೊಡೆದ ಆಕ್ಟೀವಾ ಉಪ್ಪಿನಂಗಡಿ ಕಡೆಗೆ ಹೋಗಿದೆ ಎಂದು ಮಾಹಿತಿ ಪಡೆದ ಕೋಡಿಂಬಾಡಿ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರುರವರು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ಆವರಣದಲ್ಲಿ ನಿಂತಿದ್ದ ಆಕ್ಟೀವಾವನ್ನು ಗುರುತಿಸಿ ಅದರ ಚಾಲಕನನ್ನು ವಿಚಾರಿಸಿದರು. ಈ ವೇಳೆ ಚಾಲಕ ತನ್ನ ವಾಹನದಿಂದ ಅಪಘಾತ ನಡೆದೇ ಇಲ್ಲ ಎಂದು ವಾದಿಸಿದರು.
ನಿಮ್ಮದೇ ವಾಹನ ಡಿಕ್ಕಿ ಹೊಡೆದಿದ್ದು, ನೀವು ಆ ಸಮಯದಲ್ಲಿ ಕೋಟು ಹಾಕಿಕೊಂಡಿದ್ದಿರಿ ಎಂದು ಜಯಪ್ರಕಾಶ್ ಬದಿನಾರುರವರು ಹೇಳಿದಾಗ ಚಾಲಕ ತನ್ನ ದ್ವಿ ಚಕ್ರ ವಾಹನ ಡಿಕ್ಕಿ ಹೊಡೆದಿದ್ದು ಹೌದು ಎಂದು ಒಪ್ಪಿಕೊಂಡರು. ಅಲ್ಲದೆ ಪುತ್ತೂರು ಆಸ್ಪತ್ರೆಗೆ ಬಂದು ಗಾಯಾಳುವಿನ ಖರ್ಚು ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು. ಘಟನೆಯ ಬಗ್ಗೆ ಪುತ್ತೂರು ಸಂಚಾರ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ದ್ವಿಚಕ್ರ ವಾಹನದ ಸವಾರ ಕೊಡಿಪ್ಪಾಡಿಯ ವಿಷ್ಣುಮೂರ್ತಿ ಕಾರಂತ್ ಎಂದು ಮಾಹಿತಿ ಲಭ್ಯವಾಗಿದ್ದು ಇವರು ಅರ್ಚಕ ವೃತ್ತಿ ಮಾಡುತ್ತಿರುವವರು ಎಂದು ತಿಳಿದು ಬಂದಿದೆ.