ಪುತ್ತೂರು: ಕಳೆದ ಮಾರ್ಚ್ 23ರ 9 ತಿಂಗಳು ಮತ್ತು 9 ದಿನಗಳ ಬಳಿಕ ರಾಜ್ಯ ಸರಕಾರದ ಸೂಚನೆಯಂತೆ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಜ.೧ರಂದು ಆರಂಭಗೊಂಡಿದೆ. ೬ರಿಂದ ೯ನೇ ತರಗತಿ ವರೆಗಿನ ಮಕ್ಕಳು ‘ವಿದ್ಯಾಗಮ’ ಕಾರ್ಯಕ್ರಮಕ್ಕಾಗಿ ಶಾಲೆಗಳಲ್ಲಿ ಹಾಜರಾಗಿದ್ದಾರೆ. ತಾಲೂಕಿನ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳು ೨೦೨೧ರ ಹೊಸ ವರ್ಷದ ಆರಂಭದ ದಿನದಿಂದ ಹುರುಪಿನಿಂದಲೇ ಶಾಲಾ ಕಾಲೇಜು ಆವರಣ ಪ್ರವೇಶಿಸಿದ್ದಾರೆ. ಮಕ್ಕಳನ್ನು ಸ್ವಾಗತಿಸುವ ಸಲುವಾಗಿ ಕಳೆದ ಕೆಲ ದಿನಗಳ ಹಿಂದಿನಿಂದಲೇ ಶಾಲಾ ಕಾಲೇಜು ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸಿದ್ಧತೆ ನಡೆಸಿದ್ದರು. ಕೆಲವು ಸರಕಾರಿ ಶಾಲೆಗಳನ್ನು ತಳಿರು ತೋರಣ, ಸ್ವಾಗತ ಕಮಾನುಗಳೊಂದಿಗೆ ಸಜ್ಜುಗೊಂಡಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಪುತ್ತೂರು ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲೆಯ ಆವರಣದ ದ್ವಾರದಲ್ಲಿ ಶಿಕ್ಷಕರು ಮಕ್ಕಳಿಗೆ ಆರತಿ ಬೆಳಗಿ, ಚಾಕಲೇಟ್ ನೀಡಿ ಶಾಲೆಗೆ ಬರಮಾಡಿಕೊಂಡರು. ಮಕ್ಕಳು ಶಾಲಾ ತರಗತಿಗೆ ಹೋಗುವ ಮುಂದೆ ಅವರನ್ನು ಕೋವಿಡ್ ಮುನ್ನೆಚ್ಚರಿಕೆ ಸಲುವಾಗಿ ತರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ನೀಡಲಾಯಿತು. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಶಾಲಾ ಕೊಠಡಿಗಳು, ಶಾಲಾ ಆವರಣ ಹಾಗೂ ಶೌಚಾಲಯಗಳ ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಲಾಗಿತ್ತು. ಇದೇ ಸಂದರ್ಭದಲ್ಲಿ ತರಗತಿಯ ವಿದ್ಯಾರ್ಥಿಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಮಾತನಾಡಿ ಏನೆ ಭಯ, ಆತಂಕವಿದ್ದರೆ ತಕ್ಷಣ ಸಂಬಂಧಿಸಿದ ಶಿಕ್ಷಕರ ಗಮನಕ್ಕೆ ತರುವಂತೆ ತಿಳಿಸಿದರು. ಬಳಿಕ ಎಲ್ಲಾ ತರಗತಿ ಕೊಠಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಕೊಂಬೆಟ್ಟು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಮಾತನಾಡಿ ಮಕ್ಕಳು ಸಮವಸ್ತ್ರ ಇಲ್ಲದಿದ್ದರೂ ಸುಸಂಸ್ಕೃತರಾಗಿ ಶಾಲೆಗೆ ಬರಬೇಕು. ಸಮವಸ್ತ್ರ ಇದ್ದವರು ಸಮವಸ್ತ್ರ ಧರಿಸಿಯೇ ಶಾಲೆಗೆ ಬಂದರೆ ಶಾಲೆಯ ಶಿಸ್ತು ಉತ್ತಮವಾಗಿ ಇರುತ್ತದೆ. ಯಾವುದೆ ಸಮಸ್ಯೆ ಎದುರಾದರೂ ನಮಗೆ ತಿಳಿಸಿ ಎಂದರು.
ಶಾಲೆಯ ಉಪಪ್ರಾಂಶುಪಾಲ ವಸಂತ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಶಾಲೆಯ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.