- ಕಾರ್ಯಕಾರಿ ಸಮಿತಿಗೆ ಚಂದ್ರಕಾಂತ್, ಶ್ಯಾಮ್ಪ್ರಸಾದ್, ಕವಿತಾ ಕೆ,
ಚಿದಾನಂದ ಬಿ, ಚಂದ್ರ ನಾಯ್ಕ್, ಬಸವರಾಜ ಹಡಪದ







ಪುತ್ತೂರು: ಮಿನಿ ವಿಧಾನಸೌಧದ ಬಳಿಯಲ್ಲಿನ ತಾಲೂಕು ಸರಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಪುತ್ತೂರು ಶಾಖೆಯ ೨೦೨೦-೨೪ರ ಅವಧಿಗೆ ನೂತನ ಅಧ್ಯಕ್ಷರಾಗಿ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಯಾಗಿರುವ ಶಿವಾನಂದ ಆಚಾರ್ಯರವರು ನೇಮಕಗೊಂಡಿದ್ದಾರೆ.
ತಾಲೂಕು ಸರಕಾರಿ ನೌಕರರ ಸಂಘದಲ್ಲಿ ಎರಡು ಅವಧಿಗೆ ಅಧ್ಯಕ್ಷರಾಗಿದ್ದು ಮಾತ್ರವಲ್ಲದೆ ಸುಸಜ್ಜಿತ ಸರಕಾರಿ ನೌಕರರ ಸಂಘದ ಕಟ್ಟಡದ ರೂವಾರಿಯೂ ಆಗಿರುವ, ಪ್ರಸ್ತುತ ಡಿಸೆಂಬರ್ ೩೧ ರಂದು ಸೇವಾ ನಿವೃತ್ತಿ ಹೊಂದಿರುವ ಆರೋಗ್ಯ ಇಲಾಖೆಯ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಮೌರಿಸ್ ಮಸ್ಕರೇನ್ಹಸ್ರವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಆಚಾರ್ಯರವರು ಅಧ್ಯಕ್ಷರಾಗಿ ೨೦೨೦-೨೪ರ ಅವಧಿಗೆ ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ. ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್ರವರ ಸೂಚನೆ ಮಾಡಿದ್ದು, ಉಪಾಧ್ಯಕ್ಷ ರಾಮಚಂದ್ರ ಭಟ್ ಹಾಗೂ ಸಿ.ಸೀತಾರಾಮ್ರವರು ಅನುಮೋದನೆ ಮಾಡಿರುತ್ತಾರೆ.
ಕಾರ್ಯಾಕಾರಿ ಸಮಿತಿಗೆ ಚುನಾಯಿತ ಪ್ರತಿನಿಧಿಗಳಾಗಿ ಸಹಕಾರ ಇಲಾಖೆಯಿಂದ ಕವಿತಾ ಕೆ, ಕಂದಾಯ ಇಲಾಖೆಯಿಂದ ಚಂದ್ರ ನಾಯ್ಕ್, ತೋಟಗಾರಿಕಾ ಇಲಾಖೆಯಿಂದ ಪ್ರಥಮ ದರ್ಜೆ ಸಹಾಯಕ ಬಸವರಾಜ ಹಡಪದರವರು ಆಯ್ಕೆಯಾಗಿದ್ದಾರೆ. ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಪಿ.ಕೆ ಕೃಷ್ಣ, ಜಿಲ್ಲಾ ಕಾರ್ಯದರ್ಶಿ ನವೀನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷೆ ಸುಜಾತಾ, ಜಿಲ್ಲಾ `ಡಿ’ ಗ್ರೂಪ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರವೀಣ್ರವರ ಸಮ್ಮುಖದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿರುತ್ತದೆ. ಚುನಾವಣಾಧಿಕಾರಿಗಳಾಗಿ ಮಾಜಿ ಉಪ ತಹಶೀಲ್ದಾರ್ ಸೂರಪ್ಪ ಗೌಡ ಹಾಗೂ ತಾಲೂಕು ಪಂಚಾಯತ್ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ ನಾಯ್ಕ್ರವರು ಆಯ್ಕೆ ಪ್ರಕ್ರಿಯೆನ್ನು ನಡೆಸಿಕೊಟ್ಟಿರುತ್ತಾರೆ.
ಉಳಿದಂತೆ ನಿಕಟಪೂರ್ವ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ರವರು ಆರೋಗ್ಯ ಇಲಾಖೆಯ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಪ್ರಥಮ ದರ್ಜೆ ಸಹಾಯಕ ಚಂದ್ರಕಾಂತ್, ಶಿಕ್ಷಣ ಇಲಾಖೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ವ್ಯವಸ್ಥಾಪಕರಾದ ಶ್ಯಾಮ್ ಪ್ರಸಾದ್, ಅರಣ್ಯ ಇಲಾಖೆಯಿಂದ ಅರಣ್ಯ ರಕ್ಷಕ ಚಿದಾನಂದ್ ಬಿ.ರವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿರುತ್ತಾರೆ. ಕಾರ್ಯಾಕಾರಿ ಸಮಿತಿಯಲ್ಲಿನ ವರ್ಗಾವಣೆ, ನಿಧನ, ಪದೋನ್ನತಿಯಿಂದ ತೆರವಾದ ಸ್ಥಾನಕ್ಕೆ ನಾಮ ನಿರ್ದೇಶಿತ ಹಾಗೂ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆಗೊಳಿಸುವ ಪ್ರಕ್ರಿಯೆಯನ್ನು ನೆರವೇರಿಸಲಾಯಿತು.
ನೂತನ ಅಧ್ಯಕ್ಷರ ಪರಿಚಯ:
ಪುತ್ತೂರು ವಲಯದ ಉಪ ವಲಯಾರಣ್ಯಾಧಿಕಾರಿಯಾಗಿರುವ ನೂತನ ಅಧ್ಯಕ್ಷ ಶಿವಾನಂದ ಆಚಾರ್ಯರವರು ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಮುಗ್ರೋಡಿ ನಾರಾಯಣ ಆಚಾರ್ಯ ಹಾಗೂ ಸುಬ್ಬಮ್ಮ ದಂಪತಿ ಪುತ್ರನಾಗಿ ೧೯೮೧,ಜೂನ್ ೬ ರಂದು ಜನಿಸಿದ್ದು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡುಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಹಾಗೂ ಪಿಯು ಶಿಕ್ಷಣವನ್ನು ನೆಲ್ಯಾಡಿ ಸೈಂಟ್ ಜಾರ್ಜ್ ಪದವಿ ಪೂರ್ವ ಕಾಲೇಜು, ಪದವಿ ಶಿಕ್ಷಣವನ್ನು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಮುಗಿಸಿದ್ದರು. ೨೦೦೩ರಲ್ಲಿ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ ನೇಮಕಾತಿ ಹೊಂದಿದ್ದು, ಬಳಿಕ ಹುಣಸೂರು ವಿಭಾಗದ ಪಿರಿಯಾಪಟ್ಟಣ ವಲಯದಲ್ಲಿಸೇವೆ ಸಲ್ಲಿಸಿ, ೨೦೧೩ರಲ್ಲಿ ಉಪ ವಲಯಾರಣ್ಯಾಧಿಕಾರಿಯಾಗಿ ಮುಂಭಡ್ತಿ ಹೊಂದಿದ್ದರು. ಪಿಯುಸಿ ಶಿಕ್ಷಣ ಸಂದರ್ಭದಲ್ಲಿ ಜ್ಯೂನಿಯರ್ ಜೇಸಿ(ಜೆಜೆಸಿ)ಯಲ್ಲಿ ಅಧ್ಯಕ್ಷರಾಗಿ, ೨೦೧೨-೧೩ರಲ್ಲಿ ಕರ್ನಾಟಕ ಅರಣ್ಯ ರಕ್ಷಕ ಮತ್ತು ವೀಕ್ಷಕ ಸಂಘ ಮಂಗಳೂರು ಇದರ ಅಧ್ಯಕ್ಷರಾಗಿ, ಪ್ರಸ್ತುತ ೨೦೧೭ರಿಂದ ಪುತ್ತೂರು ರೋಟರಿ ಈಸ್ಟ್ ಸಂಸ್ಥೆಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಶಿವಾನಂದ ಆಚಾರ್ಯರವರು ಪತ್ನಿ ಆರ್ಲಪದವು ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿ ಆಗಿರುವ ಸುನೀತಾ ಕೆ, ಪುತ್ರಿ ಕೀರ್ತಿಕಾ, ಪುತ್ರ ಆಯುಷ್ರವರೊಂದಿಗೆ ಕೆಮ್ಮಾಯಿ-ಕೃಷ್ಣನಗರದಲ್ಲಿ ವಾಸವಾಗಿದ್ದಾರೆ.
ಸಂಘದ ಬಲವರ್ಧನೆಯೇ ಗುರಿಯಾಗಲಿ…
ತಾಲೂಕು ಸರಕಾರಿ ನೌಕರರ ಸಂಘದಲ್ಲಿ ಜೊತೆ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ನನಗೆ ಸಂಘದ ನಿಕಟಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿರುವುದಕ್ಕೆ ಸಂತೋಷ ಹೊಂದಿದ್ದೇನೆ. ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಮೌರಿಸ್ ಮಸ್ಕರೇನಸ್ ಹಾಗೂ ಅವರ ತಂಡ ಈ ಸುಸಜ್ಜಿತ ಕಟ್ಟಡ ನಿರ್ಮಿಸಿರುವುದು ಸಂಘದ ಬೆಳವಣಿಗೆಗೆ ಮುನ್ನುಡಿಯಾಗಿದೆ ಮಾತ್ರವಲ್ಲದೆ ಉತ್ತಮವಾಗಿ ಮುನ್ನೆಡೆಸಿದ್ದಾರೆ ಕೂಡ. ಸಂಘವನ್ನು ಮತ್ತಷ್ಟು ಬಲಿಷ್ಟಗೊಳಿಸಲು ಸಂಘದ ಪ್ರತಿಯೋರ್ವರ ಸಹಕಾರದಿಂದ ಯಾವುದೇ ಚ್ಯುತಿ ಬಾರದಂತೆ ತನ್ನಿಂದಾದ ಪ್ರಯತ್ನವನ್ನು ಮಾಡುತ್ತೇನೆ. ಸಂಘದ ಬಲವರ್ಧನೆಯೇ ನಮ್ಮ ಗುರಿಯಾಗಲಿ, ಆಶಯವಾಗಲಿ.
-ಶಿವಾನಂದ ಆಚಾರ್ಯ, ನೂತನ ಅಧ್ಯಕ್ಷರು, ತಾ|ಸರಕಾರಿ ನೌಕರರ ಸಂಘ