@ಯೂಸುಫ್ ರೆಂಜಲಾಡಿ
ಪುತ್ತೂರು: ಇತ್ತೀಚೆಗಷ್ಟೇ ಸರ್ವೆ ಗ್ರಾಮದ ಕೂಡುರಸ್ತೆ ಸಮೀಪದ ಎಲಿಯದಲ್ಲಿ ಪ್ರತ್ಯಕ್ಷಗೊಂಡಿದ್ದ ಚಿರತೆ ಸರ್ವೆ ಗ್ರಾಮದಲ್ಲಿ ಸುತ್ತಾಡುತ್ತಿದೆಯಾ ಎನ್ನುವ ಭಯ ಗ್ರಾಮದ ಜನರನ್ನು ಕಾಡುವಂತಾಗಿದೆ. ಇದೀಗ ಸರ್ವೆ ಗ್ರಾಮದ ಕಲ್ಪಣೆ ಶಾಲಾ ಸಮೀಪದ ಪರಾಡ್ ಎಂಬಲ್ಲಿ ಚಿರತೆಯದ್ದು ಎನ್ನಲಾದ ಹೆಜ್ಜೆ ಗುರುತು ಜ.೧ರಂದು ಬೆಳಿಗ್ಗೆ ಕಂಡು ಬಂದಿದ್ದು ಜನತೆ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಹೆಜ್ಜೆ ಗುರುತು ಕಂಡು ಬಂದ ಸ್ಥಳಕ್ಕೆ ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಾಡ್ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಮನೆಯ ಅಂಗಳದಲ್ಲಿ ದೊಡ್ಡದಾದ ಹೆಜ್ಜೆ ಗುರುತು ಕಂಡು ಬಂದಿದ್ದು ಇದು ಚಿರತೆಯ ಹೆಜ್ಜೆ ಗುರುತು ಎನ್ನುವ ಅನುಮಾನ ವ್ಯಕ್ತಗೊಂಡಿದೆ. ಸ್ಥಳಕ್ಕೆ ಅರಣ್ಯ ರಕ್ಷಕ ಸತ್ಯನ್ ಡಿ.ಜಿ ಭೇಟಿ ನೀಡಿ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ.
ಹೆಜ್ಜೆ ಗುರುತು ಇರುವುದು ನಿಜ. ಆದರೆ ಅದು ಚಿರತೆಯದ್ದು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ, ಅದೇ ರೀತಿ ಅಲ್ಲಗಳೆಯುವಂತೆಯೂ ಇಲ್ಲ, ಈ ಬಗ್ಗೆ ಪರಿಶೀಲನೆ ನಡೆಸಿದ್ದೇನೆ ಎಂದು ಅರಣ್ಯ ರಕ್ಷಕ ಸತ್ಯನ್ ಡಿ.ಜಿ ತಿಳಿಸಿದ್ದಾರೆ.
ಚಿರತೆಯೋ…? ನಾಯಿ ಹುಲಿಯೋ…?
ಸರ್ವೆ ಗ್ರಾಮದಲ್ಲಿ ಪ್ರತ್ಯಕ್ಷಗೊಂಡಿರುವುದು ಚಿರತೆಯೋ ಅಥವಾ ನಾಯಿಹುಲಿ(ನಾಯಿಪಿಲಿ)ಯೋ ಎನ್ನುವ ಅನುಮಾನ ಕೂಡಾ ವ್ಯಕ್ತಗೊಂಡಿದೆ. ಅರಣ್ಯಾಧಿಕಾರಿಗಳು ಕೂಡಾ ಈ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ನಾಯಿಹುಲಿ ಕಾಡಿನಲ್ಲಿರುವ ಅಪರೂಪದ ಪ್ರಾಣಿಯಾಗಿದ್ದು ಅದು ಊರಿನಲ್ಲಿ ಅಪರೂಪಕ್ಕೊಮ್ಮೆ ಕಾಣ ಸಿಗುತ್ತದೆ, ಕೋಳಿ, ನಾಯಿಗಳ ಮೇಲೆ ಅದು ಹೆಚ್ಚಾಗಿ ದಾಳಿ ಮಾಡುತ್ತದೆ. ನಾಯಿ ಹುಲಿಯ ಗಾತ್ರ ಚಿರತೆಯಂತಿದ್ದು ಮೈಮೇಲೆ ಹುಲಿಯಂತೆ ಪಟ್ಟೆಗಳಿರುತ್ತದೆ. ಈ ಹಿನ್ನೆಲೆಯಲ್ಲಿ ಸರ್ವೆ ಗ್ರಾಮದಲ್ಲಿ ಸುದ್ದಿಯಾಗುತ್ತಿರುವ ಚಿರತೆ ನಾಯಿ ಹುಲಿಯಾಗಿರಬಹುದೇ ಎನ್ನುವ ಶಂಕೆ ವ್ಯಕ್ತವಾಗಿದೆ.
ಇತ್ತೀಚೆಗೆ ಎಲಿಯದದಲ್ಲಿ ಚಿರತೆ ಪ್ರತ್ಯಕ್ಷಗೊಂಡಿತ್ತು…
ಸರ್ವೆ ಗ್ರಾಮದ ಕೂಡುರಸ್ತೆ ಸಮೀಪದ ಎಲಿಯ ಎಂಬಲ್ಲಿ ಚಿರತೆಯೊಂದು ಡಿ.೨೮ರಂದು ಮುಂಜಾನೆ ಪ್ರತ್ಯಕ್ಷಗೊಂಡಿದ್ದು ಜನರ ಭಯಭೀತಗೊಂಡಿರುವ ಘಟನೆ ನಡೆದಿತ್ತು. ಬಾಳಾಯ ನಿವಾಸಿ ಗುರುಪ್ರಸಾದ್ ಎಂಬವರು ಬೆಳಗ್ಗೆ ೬ ಗಂಟೆಯ ಸುಮಾರಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಯ ಕಡೆಗೆ ತೆರಳುತ್ತಿರುವ ಸಂದರ್ಭದಲ್ಲಿ ಕೂಡುರಸ್ತೆ ಸಮೀಪದ ಎಲಿಯದಲ್ಲಿ ಚಿರತೆ ನೋಡಿದ್ದರು. ಎಲಿಯ ನಿವಾಸಿ ಉಪನ್ಯಾಸಕ ಬಿ.ವಿ ಸೂರ್ಯನಾರಾಯಣ ಅವರ ಮನೆಯ ವಿರುದ್ಧ ದಿಕ್ಕಿನಲ್ಲಿರುವ ಗುಡ್ಡದಿಂದ ರಸ್ತೆಗೆ ಜಿಗಿದ ಚಿರತೆಯು ಇನ್ನೊಂದು ದಿಕ್ಕಿನಲ್ಲಿರುವ ಗುಡ್ಡಕ್ಕೆ ಹೋಗಿದೆ ಎಂದು ಗುರುಪ್ರಸಾದ್ ತಿಳಿಸಿದ್ದರು. ಸ್ಥಳಕ್ಕೆ ಪುತ್ತೂರು ವಲಯಾರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್, ಉಪ ವಲಯಾರಣ್ಯಾಧಿಕಾರಿ ಶಿವಾನಂದ ಆಚಾರ್ಯ, ಅರಣ್ಯ ರಕ್ಷಕರಾದ ಸತ್ಯನ್ ಮತ್ತು ರಾಜು ಭೇಟಿ ನೀಡಿ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದರು.