ವರದಿ: ಸುನೀಲ್ ಎನ್. ಕಾವು
ಚಿತ್ರ: ಎನ್.ಎಸ್ ಕಾವು
ಕಾವು: ಅರಿಯಡ್ಕ ಗ್ರಾಮ ಪಂಚಾಯತ್ನ ಚುನಾವಣೆಯಲ್ಲಿ ಒಟ್ಟು ೨೪ ಸ್ಥಾನಗಳ ಪೈಕಿ ೧೭ರಲ್ಲಿ ಬಿಜೆಪಿ ಬೆಂಬಲಿತರು ವಿಜಯ ಸಾಧಿಸಿ ಸತತ ೨ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಹಿನ್ನಲೆಯಲ್ಲಿ ಮಾಡ್ನೂರು ಬಿಜೆಪಿ ಕಾರ್ಯಕರ್ತರಿಂದ ಕಾವುನಲ್ಲಿ ಬೃಹತ್ ವಿಜಯೋತ್ಸವ ಮೆರವಣಿಗೆಯು ದ.೩೧ರಂದು ಸಂಜೆ ನಡೆಯಿತು.
ಮಾಡ್ನೂರಿನಲ್ಲಿ ಅಚ್ಛೇದಿನ್ ಆರಂಭವಾಗಿದೆ-ನಿತೀಶ್ ಕುಮಾರ್
ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ, ಮಾಡ್ನೂರಿನ ಚುನಾವಣಾ ಉಸ್ತುವಾರಿಯೂ ಆಗಿದ್ದ ನಿತೀಶ್ ಕುಮಾರ್ ಶಾಂತಿವನರವರು ಮಾತನಾಡಿ ಈ ಬಾರಿಯ ಗ್ರಾ.ಪಂ ಚುನಾವಣೆಯ ಸವಾಲನ್ನು ಗೆಲ್ಲುವಲ್ಲಿ ನಮ್ಮ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ಮಾಡ್ನೂರಿನಲ್ಲಿ ಕಳೆದ ಬಾರಿ ೪ ಸ್ಥಾನವನ್ನು ಗೆದ್ದಿದ್ದೇವು, ಈ ಬಾರಿ ೬ ಸ್ಥಾನವನ್ನು ಗೆಲ್ಲುವ ಮೂಲಕ ಉತ್ತಮ ಸಾಧನೆಯನ್ನು ಮಾಡಿದ್ದೇವೆ, ಗೆಲ್ಲಲು ಕಷ್ಟ ಎಂದೇ ಭಾವಿಸಲಾಗಿದ್ದ ವಾರ್ಡ್ನಲ್ಲೂ ಒಂದೊಂದು ಸ್ಥಾನವನ್ನು ಗಳಿಸಿದ್ದೇವೆ, ಜತೆಗೆ ಗ್ರಾ.ಪಂನಲ್ಲೂ ಮತ್ತೆ ನಮ್ಮದೇ ಅಧಿಕಾರ ಬಂದಿದೆ, ಆ ಮೂಲಕ ಮಾಡ್ನೂರಿನಲ್ಲಿ ಅಚ್ಛೇದಿನ್ ಆರಂಭವಾಗಿದೆ ಎಂದು ಹೇಳಿದರು.
ಅಭಿವೃದ್ಧಿಯನ್ನು ಜನ ಮೆಚ್ಚಿದ್ದಾರೆ-ಚಂದ್ರಶೇಖರ ರಾವ್ ನಿಧಿಮುಂಡ
ಅಭಿನಂದನೆ ಸಲ್ಲಿಸಿ ಮಾತನಾಡಿದ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡರವರು ಮಾತನಾಡಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಆಡಳಿತದ ಮೇಲೆ ಸಾಕಷ್ಟು ಅಪಪ್ರಚಾರಗಳನ್ನು ವಿರೋಧ ಪಕ್ಷದವರು ಮಾಡಿದ್ದಾರೆ, ಆದರೆ ಇವೆಲ್ಲವನ್ನೂ ನಮ್ಮ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿ ಬಿಜೆಪಿ ಬೆಂಬಲಿತರ ಗೆಲುವಿಗೆ ಶ್ರಮವಹಿಸಿದ್ದಾರೆ, ಕಳೆದ ಅವಧಿಯಲ್ಲಿ ಲೋಕೇಶ್ ಚಾಕೋಟೆಯವರು ಗ್ರಾ.ಪಂ ಉಪಾಧ್ಯಕ್ಷರಾಗಿ ಮಾಡ್ನೂರು ಭಾಗದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯವನ್ನು ಮತದಾರರು ಮೆಚ್ಚಿ ಮತ್ತೊಮ್ಮೆ ಬಿಜೆಪಿಯನ್ನು ಆಶೀರ್ವದಿಸಿದ್ದಾರೆ, ಹಾಗಾಗಿ ಮುಂದಿನ ಆಡಳಿತದಲ್ಲೂ ನಮ್ಮ ಗ್ರಾಮ ಇನ್ನಷ್ಟು ಅಭಿವೃದ್ಧಿಯನ್ನು ಕಾಣಲಿ ಎಂದು ಶುಭಹಾರೈಸಿದರು.
ಕಾರ್ಯಕರ್ತರ ಶ್ರಮ-ಸಂಘಟಿತ ಪ್ರಯತ್ನವೇ ಗೆಲುವಿಗೆ ಕಾರಣ-ಲೋಕೇಶ್ ಚಾಕೋಟೆ
ಮಾಡ್ನೂರು ಶಕ್ತಿ ಕೇಂದ್ರದ ಸಂಚಾಲಕ ಲೋಕೇಶ್ ಚಾಕೋಟೆಯವರು ಮಾತನಾಡಿ ಕಾರ್ಯಕರ್ತರ ಅವಿರತ ಶ್ರಮ, ಸಂಘಟಿತ ಪ್ರಯತ್ನ, ಹಿರಿಯರ ಮಾರ್ಗದರ್ಶನ, ಮತದಾರರ ಆಶೀರ್ವಾದದಿಂದ ಗ್ರಾ.ಪಂನಲ್ಲಿ ನಾವು ಮತ್ತೊಮ್ಮೆ ಅಧಿಕಾರವನ್ನು ಪಡೆದಿದ್ದೇವೆ, ಪಕ್ಷದ ಗೆಲುವಿಗಾಗಿ ಶ್ರಮಿಸಿದ, ಸಹಕರಿಸಿದ ಎಲ್ಲರಿಗೂ ನಾವು ಋಣಿಯಾಗಿದ್ದೇವೆ, ನಮ್ಮ ಗ್ರಾಮವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವುದೇ ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಸೋತವರು ನಮ್ಮ ಸದಸ್ಯರಾಗಿ ಕೆಲಸ ಮಾಡುತ್ತಾರೆ-ಪೂವಪ್ಪ ನಾಯ್ಕ
ಪ್ರಾಸ್ತಾವಿಕವಾಗಿ ಸ್ವಾಗತಿಸಿದ ಮಾಡ್ನೂರು ನನ್ಯ ಬೂತ್ನ ಅಧ್ಯಕ್ಷ ಪೂವಪ್ಪ ನಾಯ್ಕ ಕುಂಞಿಕುಮೇರುರವರು ಮಾತನಾಡಿ ಈ ಬಾರಿಯ ಚುನಾವಣೆಯಲ್ಲಿ ಮಾಡ್ನೂರಿನ ೧೨ ಸ್ಥಾನಗಳಲ್ಲಿ ೬ ಸ್ಥಾನ ಗೆದ್ದು, ಉಳಿದ ೬ ಜನ ಅಭ್ಯರ್ಥಿಗಳು ಸೋತಿರಬಹುದು, ಆದರೆ ನಮ್ಮ ಪಾಲಿಗೆ ಅವರು ಸೋತಿಲ್ಲ, ನಮ್ಮ ಸೋತ ಅಭ್ಯರ್ಥಿಗಳು ಪಡೆದ ಮತಗಳಿಕೆಯನ್ನು ನೋಡಿದರೆ ಅವರು ಗೆದ್ದಿದ್ದಾರೆ, ಕಳೆದ ಬಾರಿಗಿಂತ ಮತಗಳಿಕೆಯಲ್ಲಿ ಸಾಕಷ್ಟು ಏರಿಕೆಯಾಗಿದೆ ಹಾಗಾಗಿ ಅವರು ಕೂಡ ಗೆದ್ದಂತೆ, ಪಂಚಾಯತ್ನಲ್ಲಿ ನಮ್ಮದೇ ಅಧಿಕಾರ ಇರವುದರಿಂದ ನಮ್ಮ ಪಾಲಿಗೆ ಅವರೇ ಸದಸ್ಯರಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು.
ನೂತನ ಸದಸ್ಯರಿಗೆ, ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ಅಭಿನಂದನೆ:
ನೂತನ ಸದಸ್ಯರಾಗಿ ಆಯ್ಕೆಯಾದ ಮಾಡ್ನೂರು ೧ನೇ ವಾರ್ಡಿನ ಲೋಕೇಶ್ ಚಾಕೋಟೆ, ಹೇಮಾವತಿ ಚಾಕೋಟೆ, ಅನಿತಾ ಜಗದೀಶ ಆಚಾರಿಮೂಲೆ, ಸೌಮ್ಯ ಬಾಲಸುಬ್ರಹ್ಮಣ್ಯ ಮುಂಡಕೊಚ್ಚಿ, ಮಾಡ್ನೂರು ೨ನೇ ವಾರ್ಡಿನ ವಿಜಿತ್ ಕೆರೆಮಾರು, ಮಾಡ್ನೂರು ೩ನೇ ವಾರ್ಡಿನ ಪ್ರವೀಣ್ ಅಮ್ಚಿನಡ್ಕ, ಅರಿಯಡ್ಕ ೨ನೇ ವಾರ್ಡಿನ ಭಾರತಿ ವಸಂತರವರಿಗೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಿ ಉತ್ತಮ ಪೈಪೋಟಿಯನ್ನು ನೀಡಿದ ಮಾಡ್ನೂರು ೨ನೇ ವಾರ್ಡಿನ ಲೋಹೀತ್ ಕೆರೆಮಾರು, ವಿಜಯ ಪಿಲಿಪಂಜರ, ಉಮೇಶ್ ಮಾಡನ್ನೂರು, ಮಡ್ನೂರು ೩ನೇ ವಾರ್ಡಿನ ಯೋಗೀಶ್ ಕಾವು, ಗಣೇಶ್ ಪೂವಂದೂರು, ನಿರ್ಮಲ ಪೂವಂದೂರುರವರಿಗೆ ಚಂದ್ರಶೇಖರ ರಾವ್ ನಿಧಿಮುಂಡರವರು ಹಾರ ಹಾಕಿ ಅಭಿನಂದಿಸಿದರು.
ಚುನಾವಣಾ ಉಸ್ತುವಾರಿಗಳಿಗೆ ಅಭಿನಂದನೆ:
ಮಾಡ್ನೂರು ಗ್ರಾಮದ ಚುನಾವಣಾ ಉಸ್ತುವಾರಿಯಾಗಿ ಸೂಕ್ತ ಮಾರ್ಗದರ್ಶನ ಮಾಡಿದ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಪ್ರಭಾರಿಯಾಗಿದ್ದ ಬಿಜೆಪಿ ನಗರ ಮಂಡಲದ ಉಪಾಧ್ಯಕ್ಷ ರಾಧಾಕೃಷ್ಣ ನಂದಿಲರವರಿಗೆ ಮಾಡ್ನೂರು ಬಿಜೆಪಿ ಕಾರ್ಯಕರ್ತರ ಪರವಾಗಿ ಹಾರ ಹಾಕಿ ಅಭಿನಂದಿಸಲಾಯಿತು.
ಶಕ್ತಿ ಕೇಂದ್ರದ ಪ್ರಮುಖರಿಗೆ ಸನ್ಮಾನ:
ಮಾಡ್ನೂರು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕರಾಗಿ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿ ಮಾಡ್ನೂರಿನಲ್ಲಿ ೬ ಸ್ಥಾನ ಗೆಲ್ಲುವಂತಾಗಲು ನಾಯಕತ್ವ ವಹಿಸಿ ಜತೆಗೆ ನನ್ಯ ವಾರ್ಡಿನಿಂದ ೨ನೇ ಬಾರಿಗೆ ಸ್ಪರ್ಧೆಗಿಳಿದು ದಾಖಲೆ ಅಂತರದಿಂದ ಜಯಭೇರಿ ಬಾರಿಸಿದ ಲೋಕೇಶ್ ಚಾಕೋಟೆಯವರಿಗೆ ಕಾರ್ಯಕರ್ತರ ಪರವಾಗಿ ಭಾಸ್ಕರ ಬಲ್ಯಾಯರವರು ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು.
ವಿಜಯೋತ್ಸವ-ಮೆರವಣಿಗೆ:
ಅಭಿನಂದನಾ ಕಾರ್ಯಕ್ರಮದ ಬಳಿಕ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಮೆರವಣಿಗೆ ನಡೆಸಿದರು. ಕಾವು ಪಂಚವಟಿ ನಗರದ ಬಳಿಯಿಂದ ಹೊರಟ ಮೆರವಣಿಗೆಯು ಕಾವು ಜಂಕ್ಷನ್, ಅಮ್ಚಿನಡ್ಕ, ಮಾಣಿಯಡ್ಕ, ಸಿಆರ್ಸಿ ಕಾಲೋನಿ, ಮದ್ಲ, ಕೌಡಿಚ್ಚಾರ್ ಭಾಗದಲ್ಲಿ ವಿಜಯೋತ್ಸವ ನಡೆಸಿದರು. ತೆರೆದ ಪಿಕಪ್ನಲ್ಲಿ ಚುನಾಯಿತ ನೂತನ ಸದಸ್ಯರು ರೋಡ್ಷೋ ನಡೆಸಿದರು, ಡಿಜೆ ಸೌಂಡ್ಸ್ಗೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಜೈಕಾರ ಕೂಗಿದರು, ಅಲ್ಲಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಸಂಭ್ರಮಿಸಿದರು.