ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಶಾಲಾ ಆರಂಭೋತ್ಸವ ಕಾರ್ಯಕ್ರಮ ಜರಗಿತು. ವಿದ್ಯಾರ್ಥಿಗಳನ್ನು ಸ್ಥಳೀಯ ಜನಪತ್ರಿನಿಧಿ, ಶಾಲಾ ಪೋಷಕರ ಉಪಸ್ಥಿತಿಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಬ್ಯಾಂಡ್ ವಾಲಗದೊಂದಿಗೆ ಭಾವ ಸ್ಪರ್ಶಿಯಾಗಿ ಸ್ವಾಗತಿಸಲಾಗಿ ಕೊರೊನಾ ಮುನ್ನೆಚ್ಚರಿಕಾ ಕ್ರಮದೊಂದಿಗೆ ತರಗತಿಯೊಳಗೆ ಪ್ರವೇಶ ನೀಡಲಾಯಿತು. ವಿದ್ಯಾರ್ಥಿಗಳನ್ನು ಮೆರವಣಿಗೆಯಲ್ಲಿ ಶಾಲಾ ಆವರಣಕ್ಕೆ ಕರೆ ತಂದ ಬಳಿಕ ಶಾಲಾ ಪ್ರಾರಂಭೋತ್ಸವ ಸಭೆ ನಡೆಸಲಾಯಿತು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಎನ್. ಉಮೇಶ್ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಹಿತಕ್ಕಾಗಿ ಸರಕಾರ ಶಾಲೆ ಪ್ರಾರಂಭಿಸಿದ್ದು, ಮುನ್ನೆಚ್ಚರಿಕೆ ವಹಿಸಿಕೊಂಡು ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಬೇಕು ಎಂದು ಹೇಳಿದರು.
ಶಾಲಾ ಉಪ ಪ್ರಾಂಶುಪಾಲ ದಿವಾಕರ ಆಚಾರ್ಯ ಮಾತನಾಡಿ ಶಾಲೆಯಲ್ಲಿ ವಾರದ ೬ ದಿನವೂ ಪೂರ್ವಾಹ್ನದ ಅವಧಿಯನ್ನು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಸೋಮವಾರದಿಂದ ಶುಕ್ರವಾರದ ವರೆಗಿನ ಅಪರಾಹ್ನದ ಅವಧಿಯನ್ನು ೮ ಮತ್ತು ೯ನೇ ತರಗತಿಯ ವಿದ್ಯಾರ್ಥಿಗಳಿಗೆ ವಿದ್ಯಾಗಮ ನಡೆಸಲಾಗುವುದು ಎಂದು ತಿಳಿಸಿದರು. ಹತ್ತನೇ ತರಗತಿಯಲ್ಲಿನ ಒಟ್ಟು ೧೬೭ ವಿದ್ಯಾರ್ಥಿಗಳ ಪೈಕಿ ಶುಕ್ರವಾರದಂದು ೧೧೬ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದು, ಒಂದು ತರಗತಿ ಕೊಠಡಿಯಲ್ಲಿ ೨೦ ವಿದ್ಯಾರ್ಥಿಗಳಂತೆ ೮ ಕೊಠಡಿಗಳನ್ನು ಹತ್ತನೇ ತರಗತಿಗಾಗಿ ಮೀಸಲಿರಿಸಲಾಗಿತ್ತು.
ರೋಟರಿ ವತಿಯಿಂದ ಸ್ಯಾನಿಟೈಸರ್ ಸ್ಟ್ಯಾಂಡ್ ಕೊಡುಗೆ:
ಶಾಲೆಯ ವಿದ್ಯಾರ್ಥಿಗಳ ಅನುಕೂಲತೆಗಾಗಿ ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ದರ್ಬೆ ಸ್ಯಾನಿಟೈಸರ್ ಸ್ಟ್ಯಾಂಡ್ ಶಾಲೆಗೆ ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಸುಜಾತ ಕೃಷ್ಣ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯ ಮಹಮ್ಮದ್ ತೌಶಿಫ್, ಶಾಲಾಭಿವೃದ್ಧಿ ಸದಸ್ಯರಾದ ಕೆ. ಜಗದೀಶ್ ಶೆಟ್ಟಿ, ದುರ್ಗಾಮಣಿ ಎಂ, ಸುಮನ, ಆದಂ ಕೊಪ್ಪಳ, ಚಂದ್ರಾವತಿ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಶೋಭಾ ಸ್ವಾಗತಿಸಿ, ಪ್ರೀತಾ ಟಿ.ಎಂ. ವಂದಿಸಿದರು. ಅಮರ ವಾತ್ಸಲ್ಯ ಕಾರ್ಯಕ್ರಮ ನಿರೂಪಿಸಿದರು.