HomePage_Banner
HomePage_Banner
HomePage_Banner
HomePage_Banner

ಹೊಸ ವರುಷದಲ್ಲಿ ಗ್ರಾಮ ಪಂಚಾಯತ್‌ಗಳಿಗೆ ಹೊಸ ಆಡಳಿತ | ಹಳ್ಳಿ ಸರಕಾರ’ದ ಚುಕ್ಕಾಣಿ ಹಿಡಿಯಲು `ಮೀಸಲಾತಿ’ ಕುತೂಹಲ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

✍🏻ಸಂತೋಷ್ ಕುಮಾರ್‌ ಶಾಂತಿನಗರ

  • ಸ್ಥಳೀಯ ಸರಕಾರದಲ್ಲಿ  ಜನಪ್ರತಿನಿಧಿಗಳ ಸಾರಥ್ಯಕ್ಕೆ ದಿನಗಣನೆ
  • ರೊಟೇಶನ್  ಪದ್ಧತಿಯಲ್ಲಿ ಅಧ್ಯಕ್ಷ,  ಉಪಾಧ್ಯಕ್ಷರ ಮೀಸಲಾತಿ ನಿಗದಿ
  • ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಎರಡೂವರೆ ವರ್ಷ

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕಿನ ೪೩ ಗ್ರಾಮ ಪಂಚಾಯತ್‌ಗಳ ಹೊಸ ಆಡಳಿತ ಮಂಡಳಿ ಹೊಸ ವರುಷದ ಪ್ರಥಮ ತಿಂಗಳಿನಲ್ಲಿ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ. ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿಗೊಳಿಸುವ ಪ್ರಕ್ರಿಯೆ ನಡೆದ ತಕ್ಷಣ `ಹಳ್ಳಿ ಸರಕಾರ’ದ ಚುಕ್ಕಾಣಿ ಜನಪ್ರತಿನಿಧಿಗಳ ಪಾಲಾಗಲಿದೆ. ಆವರೆಗೆ ಗ್ರಾಮ ಪಂಚಾಯತ್‌ಗಳಲ್ಲಿ ಆಡಳಿತಾಧಿಕಾರಗಳದ್ದೆ ಅಧಿಕಾರ ಇರಲಿದೆ. ನಿಯಮ ಪ್ರಕಾರ ಚುನಾವಣೆ ನಡೆದ ೩೦ ದಿನಗಳೊಳಗೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ನಿಗದಿ ಪಡಿಸಬೇಕಿದೆ.

ಸ್ಥಳೀಯ ಸರಕಾರದಲ್ಲಿ ಜನಪ್ರತಿನಿಧಿಗಳ ಸಾರಥ್ಯಕ್ಕೆ ದಿನಗಣನೆ: ಪುತ್ತೂರು ಮತ್ತು ಕಡಬ ತಾಲೂಕು ಪ್ರತ್ಯೇಕಗೊಂಡ ಬಳಿಕ ಪ್ರಥಮ ಬಾರಿ ಗ್ರಾಮ ಪಂಚಾಯತ್ ಚುನಾವಣೆ ನಡೆದಿದೆ. ಅಧಿಕಾರ ವಿಕೇಂದ್ರೀಕರಣಕ್ಕಾಗಿ ತ್ರಿಸ್ತರ ಪದ್ಧತಿಯಲ್ಲಿ ಮೇಲ್ಮಟ್ಟದಲ್ಲಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ `ಸೆಮಿಫೈನಲ್’ ಎಂಬಂತೆ ನಡೆದ ತಳ ಮಟ್ಟದ ಗ್ರಾಮ ಪಂಚಾಯತ್ ಚುನಾವಣೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. `ಹಳ್ಳಿಯ ವಿಧಾನಸಭೆ’ ಎಂದೇ ಕರೆಯಲ್ಪಡುವ ಗ್ರಾಮ ಪಂಚಾಯತ್‌ಗಳಲ್ಲಿ ಜನಪ್ರತಿನಿಧಿಗಳ ಸಾರಥ್ಯಕ್ಕೆ ಇದೀಗ ದಿನಗಣನೆ ಆರಂಭಗೊಂಡಿದೆ. ಪುತ್ತೂರು ತಾಲೂಕಿನ ೨೨ ಮತ್ತು ಕಡಬ ತಾಲೂಕಿನ ೨೧ ಗ್ರಾಮ ಪಂಚಾಯತ್‌ಗಳಿಗೆ ದ.೨೭ರಂದು ಚುನಾವಣೆ ಜರಗಿದೆ. ಪುತ್ತೂರು ತಾಲೂಕಿಗೆ ಸಂಬಂಧಿಸಿ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ಮತ್ತು ಕಡಬ ತಾಲೂಕಿಗೆ ಸಂಬಂಧಿಸಿ ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆಯಲ್ಲಿ ದ.೩೦ರಂದು ಮತ ಎಣಿಕೆ ನಡೆದು ವಿಜೇತರ ಘೋಷಣೆಯಾಗಿದೆ. ಪುತ್ತೂರು ತಾಲೂಕಿನ ೩೪೩ ಸದಸ್ಯ ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು ೨೨೫, ಕಾಂಗ್ರೆಸ್ ಬೆಂಬಲಿತರು ೧೦೦, ಎಸ್‌ಡಿಪಿಐ ಬೆಂಬಲಿತರು ೧೦, ಜೆಡಿಎಸ್ ಬೆಂಬಲಿತ ಓರ್ವರು, ೭ ಮಂದಿ ಪಕ್ಷೇತರ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಕಡಬ ತಾಲೂಕಿನ ೨೮೫ ಸದಸ್ಯ ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು ೨೦೨, ಕಾಂಗ್ರೆಸ್ ಬೆಂಬಲಿತರು ೭೦, ಎಸ್‌ಡಿಪಿಐ ಬೆಂಬಲಿತರು ೮ ಮತ್ತು ಐವರು ಪಕ್ಷೇತರರು ಗ್ರಾಮ ಪಂಚಾಯತ್ ಪ್ರವೇಶಿಸಿದ್ದಾರೆ. ಪುತ್ತೂರು ತಾಲೂಕಿನ ಕಬಕ, ಕುಡಿಪ್ಪಾಡಿ, ಬನ್ನೂರು, ಕೋಡಿಂಬಾಡಿ, ೩೪ನೇ ನೆಕ್ಕಿಲಾಡಿ, ಉಪ್ಪಿನಂಗಡಿ, ಬಜತ್ತೂರು, ಹಿರೇಬಂಡಾಡಿ, ನರಿಮೊಗ್ರು, ಬಲ್ನಾಡು, ಆರ್ಯಾಪು, ಮುಂಡೂರು, ಕೆದಂಬಾಡಿ, ಕೆಯ್ಯೂರು, ಬೆಟ್ಟಂಪಾಡಿ, ಪಾಣಾಜೆ, ನಿಡ್ಪಳ್ಳಿ, ಅರಿಯಡ್ಕ, ಬಡಗನ್ನೂರು, ಕಡಬ ತಾಲೂಕಿನ ಎಡಮಂಗಲ, ಬಳ್ಪ, ಸುಬ್ರಹ್ಮಣ್ಯ, ಗೋಳಿತ್ತೊಟ್ಟು, ಕೌಕ್ರಾಡಿ, ನೂಜಿಬಾಳ್ತಿಲ, ಕೊಂಬಾರು, ಐತ್ತೂರು, ಕೊಣಾಜೆ, ಮರ್ದಾಳ, ಕುಟ್ರುಪ್ಪಾಡಿ, ಪೆರಾಬೆ, ರಾಮಕುಂಜ, ಕೊಯಿಲ, ಆಲಂಕಾರು, ಸವಣೂರು, ಕಾಣಿಯೂರು ಮತ್ತು ಬೆಳಂದೂರು ಗ್ರಾಮ ಪಂಚಾಯತ್‌ಗಳು ಬಿಜೆಪಿ ಬೆಂಬಲಿತರ ಪಾಲಾಗಿದೆ. ಪುತ್ತೂರು ತಾಲೂಕಿನ ಒಳಮೊಗ್ರು, ಕೊಳ್ತಿಗೆ, ನೆಟ್ಟಣಿಗೆ ಮುಡ್ನೂರು, ಕಡಬ ತಾಲೂಕಿನ ನೆಲ್ಯಾಡಿ, ಶಿರಾಡಿ ಮತ್ತು ಬಿಳಿನೆಲೆ ಗ್ರಾಮ ಪಂಚಾಯತ್‌ಗಳು ಕಾಂಗ್ರೆಸ್ ಬೆಂಬಲಿತರ `ಕೈ’ ವಶವಾಗಿದೆ. ಇನ್ನು ಯಾವ ಗ್ರಾಮ ಪಂಚಾಯತ್‌ಗಳಲ್ಲಿ ಯಾರು ಅಧ್ಯಕ್ಷ, ಉಪಾಧ್ಯಕ್ಷರಾಗುತ್ತಾರೆ ಎಂಬ ಕುತೂಹಲ ಉಳಿದಿದೆ. ಸ್ಥಳೀಯ ಸರಕಾರದ ಮುಖ್ಯಸ್ಥರು ಯಾರಾಗುತ್ತಾರೆ ಎಂಬ ಕುತೂಹಲಕ್ಕೆ ಈ ತಿಂಗಳಾಂತ್ಯಕ್ಕೆ ತೆರೆ ಬೀಳುವ ನಿರೀಕ್ಷೆ ಇದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿ ಗ್ರಾಮ ಪಂಚಾಯತ್‌ನ ಪ್ರಥಮ ಸಾಮಾನ್ಯ ಸಭೆ ನಡೆಯುವವರೆಗೆ ಆಡಳಿತಾಧಿಕಾರಿಗಳದ್ದು ಆಡಳಿತ ನಡೆಯಲಿದೆ.

ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ ರೊಟೇಶನ್ ಪದ್ಧತಿಯಲ್ಲಿ ನಡೆಯಲಿದೆ: ಗ್ರಾಮ ಪಂಚಾಯತ್‌ಗಳ ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಸಲು ಸರಕಾರ ಆದೇಶ ಪ್ರಕಟಿಸಿದ ಕೂಡಲೇ ಜಿಲ್ಲಾಧಿಕಾರಿಗಳು ಈ ಪ್ರಕ್ರಿಯೆಯನ್ನು ಜಾರಿಗೊಳಿಸಲಿದ್ದಾರೆ. ೧೯೯೪ರ ಬಳಿಕ ಗ್ರಾಮ ಪಂಚಾಯತ್‌ಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಇದ್ದ ಮೀಸಲಾತಿಯನ್ನು ರೊಟೇಶನ್ ಪದ್ಧತಿಯಲ್ಲಿ ಬದಲಾವಣೆ ನಡೆಸುವ ನಿಯಮ ಜಾರಿಯಾಗಲಿದೆ. ಗ್ರಾಮ ಪಂಚಾಯತ್‌ಗಳಲ್ಲಿ ಈ ಹಿಂದೆ ಯಾವ ಮೀಸಲಾತಿಯ ಆಧಾರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆ ಅಲಂಕರಿಸಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಂಡು ಹೊಸ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಲಿದೆ. ಈ ಸಂದರ್ಭದಲ್ಲಿ ಆಯಾಯ ಗ್ರಾಮ ಪಂಚಾಯತ್‌ಗಳ ಜನ ಸಂಖ್ಯೆಯನ್ನೂ ಪರಿಗಣಿಸಲಾಗುತ್ತದೆ. ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್‌ಗಳ ನೇತೃತ್ವದಲ್ಲಿ ತಾಲೂಕು ಕೇಂದ್ರಗಳಲ್ಲಿ ಮೀಸಲಾತಿಯನ್ನು ಘೋಷಿಸುವ ಕಾರ್ಯ ಗ್ರಾ.ಪಂ. ಸದಸ್ಯರ ಸಮ್ಮುಖದಲ್ಲಿ ನಡೆಯಲಿದೆ. ಮೀಸಲಾತಿಯನ್ವಯ ಅಧಿಕಾರ ಸ್ವೀಕರಿಸುವ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ನಿಗದಿ ಪಡಿಸಿದ ದಿನದಂದು ಪಂಚಾಯತ್‌ನ ಹೊಸ ಆಡಳಿತ ಮಂಡಳಿಯ ಪ್ರಥಮ ಸಾಮಾನ್ಯ ನಡೆದು ಅಧಿಕಾರ ಚಲಾವಣೆ ಆರಂಭಗೊಳ್ಳಲಿದೆ.

ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಎರಡೂವರೆ ವರ್ಷ: ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿಯಾದ ಬಳಿಕ ಕೆಲವು ಬದಲಾವಣೆಯೊಂದಿಗೆ ಗ್ರಾ.ಪಂ. ಆಡಳಿತ ನಡೆಯಲಿದೆ. ೧೯೯೩ರಲ್ಲಿ ಪಂಚಾಯತ್‌ರಾಜ್ ಕಾಯ್ದೆ ಜಾರಿಯಾದ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಡಳಿತ ಅವಧಿ ಎರಡೂವರೆ ವರ್ಷ ಇತ್ತು. ಸದಸ್ಯ ಸ್ಥಾನದ ಮೀಸಲಾತಿ ಐದು ವರ್ಷ ಇತ್ತು. ಕಳೆದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಮೇಶ್ ಕುಮಾರ್ ಸಮಿತಿಯ ವರದಿಯನ್ನು ಜಾರಿಗೊಳಿಸಿ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಈ ತಿದ್ದುಪಡಿಯ ಪ್ರಕಾರ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಡಳಿತ ಅವಧಿಯನ್ನು ಐದು ವರ್ಷಕ್ಕೆ ಏರಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಅವಧಿಯಲ್ಲಿ ಬಹುತೇಕ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ, ಉಪಾಧ್ಯಕ್ಷರು ಐದು ವರ್ಷ ದರ್ಬಾರ್ ನಡೆಸಿದ್ದರು. ಸದಸ್ಯರ ಮೀಸಲಾತಿಯನ್ನು ಐದು ವರ್ಷದಿಂದ ಹತ್ತು ವರ್ಷಕ್ಕೆ ಏರಿಕೆ ಮಾಡಲಾಗಿತ್ತು. ನಂತರದ ಅವಧಿಯಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿ.ಯಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಪಂಚಾಯತ್‌ರಾಜ್ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರ ಅವಧಿಯನ್ನು ಎರಡೂವರೆ ವರ್ಷಕ್ಕೆ ಮೊಟಕುಗೊಳಿಸಲಾಗಿದ್ದು ಸದಸ್ಯರ ಮೀಸಲಾತಿಯನ್ನು ೧೦ರಿಂದ ೫ ವರ್ಷಕ್ಕೆ ಇಳಿಕೆ ಮಾಡಲಾಗಿದೆ. ಹೊಸ ಕಾಯ್ದೆಯ ಮಾರ್ಗಸೂಚಿ ಪ್ರಕಾರ ಜಿ.ಪಂ, ತಾ.ಪಂ. ಮತ್ತು ಗ್ರಾ.ಪಂ. ಆಡಳಿತ ವ್ಯವಸ್ಥೆ ನಡೆಯಲಿದೆ.

ಮಹಿಳೆಯರಿಗೆ ಎಲ್ಲಾ ಸ್ಥಾನದಲ್ಲೂ ಅವಕಾಶ !
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳನ್ನು ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿಯೂ ಅಲಂಕರಿಸಲು ಮಹಿಳೆಯರಿಗೆ ಅವಕಾಶ ಇದೆ. ಆದರೆ, ಪುರುಷರಿಗೆ ಆ ಭಾಗ್ಯ ಒಲಿಯುವುದಿಲ್ಲ. ಮೀಸಲಾತಿ ನಿಗದಿ ಪಡಿಸುವ ವೇಳೆ ಸಾಮಾನ್ಯ, ಸಾಮಾನ್ಯ ಮಹಿಳೆ ಎಂದು ವಿಭಜಿಸಲಾಗುತ್ತದೆ. ಇಲ್ಲಿ ಸಾಮಾನ್ಯದಲ್ಲೂ, ಸಾಮಾನ್ಯ ಮಹಿಳೆಯ ಸ್ಥಾನದಲ್ಲಿಯೂ ಮಹಿಳೆಯರು ಹುದ್ದೆ ಅಲಂಕರಿಸಬಹುದಾಗಿದೆ. ಆದರೆ, ಪುರುಷರು ಸಾಮಾನ್ಯ ಕ್ಷೇತ್ರಕ್ಕೆ ಮಾತ್ರ ಅರ್ಹರಾಗುತ್ತಾರೆ. ಅದೇ ರೀತಿ, ಹಿಂದುಳಿದ ವರ್ಗ ಎ, ಹಿಂದುಳಿದ ವರ್ಗ ಎ ಮಹಿಳೆ, ಹಿಂದುಳಿದ ವರ್ಗ ಬಿ, ಹಿಂದುಳಿದ ವರ್ಗ ಬಿ ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಜಾತಿ ಮಹಿಳೆ, ಪರಿಶಿಷ್ಟ ಪಂಗಡ, ಪರಿಶಿಷ್ಟ ಪಂಗಡ ಮಹಿಳೆ ಎಂದು ಮೀಸಲಾತಿಯನ್ನು ನಿಗದಿಪಡಿಸುವಾಗಲೂ ಈ ಎಲ್ಲಾ ಮೀಸಲಾತಿ ಕ್ಷೇತ್ರದಲ್ಲಿ ಮಹಿಳೆಯರು ಸ್ಪರ್ಧಿಸಬಹುದಾಗಿದೆ. ಯಾವುದೇ ಮೀಸಲಾತಿಯಲ್ಲಿ `ಪುರುಷ’ ಎಂಬುದು ಇರುವುದಿಲ್ಲ, ಆದ್ದರಿಂದ ಆ ಸ್ಥಾನಗಳನ್ನು ಮಹಿಳೆಯರೂ ಅಲಂಕರಿಸಬಹುದು, ಆದರೆ, `ಮಹಿಳೆ’ಗೆ ಮೀಸಲಾದ ಜಾಗದಲ್ಲಿ ಮಹಿಳೆ ಮಾತ್ರ ಸ್ಪರ್ಧಿಸಬಹುದೇ ಹೊರತು ಪುರುಷರಿಗೆ ಅವಕಾಶ ಇರುವುದಿಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.