ಪುತ್ತೂರು: ಸರ್ಕಾರದ ನಿಯಮಾವಳಿಯನ್ವಯ ೬ನೆ ತರಗತಿಯಿಂದ ೧೦ನೆ ತರಗತಿವರೆಗೆ ಮತ್ತು ದ್ವಿತೀಯ ಪಿ.ಯು.ಸಿ. ತರಗತಿಗಳನ್ನು ಆರಂಭಿಸುವ ಕುರಿತಾಗಿ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಪೋಷಕರ ಸಭೆ ಜರುಗಿತು. ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳ ಕಲಿಕೆ ಯಾವುದೇ ಕಾರಣಕ್ಕೂ ನಿಲ್ಲಬಾರದೆಂಬುದು ನಮ್ಮ ಸಂಸ್ಥೆಯ ಆಶಯ. ಅದರಂತೆ ಸರ್ಕಾರದ ನೀತಿ-ನಿಯಮಾವಳಿಗಳ ಅನುಸಾರವಾಗಿ ನೂರು ಶೇಕಡಾ ಕ್ರಮಗಳನ್ನು ವಹಿಸಿ ತರಗತಿಗಳ ಆರಂಭಕ್ಕೆ ಸರ್ವ ಸಿದ್ಧತೆ ಮಾಡಲಾಗಿದೆ. ಯಾರು ಬೇಕಾದರೂ ಶಾಲಾ ಆವರಣವನ್ನು ವೀಕ್ಷಿಸಬಹುದು ಎಂದು ಹೇಳಿ ಮಕ್ಕಳನ್ನು ನಿಯಮಿತವಾಗಿ ಶಾಲೆಗೆ ಕಳುಹಿಸುವ ಮೂಲಕ ಹೆತ್ತವರು ನಮ್ಮ ಮತ್ತು ಸರ್ಕಾರದ ಈ ಪ್ರಯತ್ನವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿಯವರು ಮಾತನಾಡಿ ವಿದ್ಯಾರಶ್ಮಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ಕೇವಲ ಒಂದು ಸೇವೆಯಾಗಿ ನೀಡಲ್ಪಡುತ್ತಿದೆ. ಮಗುವಿನ ಕಲಿಕೆಯೊಂದೇ ನಮ್ಮ ಮೂಲ ಧ್ಯೇಯ ಎಂದರು. ಪ್ರಾಂಶುಪಾಲ ಸೀತಾರಾಮ ಕೇವಳ ಮಾತನಾಡಿ ಈಗಾಗಲೇ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ವಿವರಿಸಿ ಯಾವುದೇ ಭಯವಿಲ್ಲದೆ ಮಕ್ಕಳನ್ನು ಶಾಲೆಗೆ ಕಳುಹಿಸಬಹುದೆಂದು ತಿಳಿಸಿ ಪೋಷಕರ ಪ್ರಶ್ನೆಗಳಿಗೆ ಉತ್ತರಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ, ನಿರ್ದೇಶಕರಾದ ಯತೀಂದ್ರ ರೈ, ಹೈದರಾಲಿ ಮತ್ತು ಸರಸ್ವತಿ ಅವರು ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ವಂದಿಸಿದರು. ಪೋಷಕರ ಒಪ್ಪಿಗೆ ಪತ್ರದ ಮಾದರಿಯನ್ನು ಎಲ್ಲಾ ಪೋಷಕರಿಗೆ ವಿತರಿಸಲಾಯಿತು.