- ಯೇಸುಕ್ರಿಸ್ತರು ಮಾನವೀಯತೆಯ ಸಾಕಾರಮೂರ್ತಿ-ವಂ|ಲಾರೆನ್ಸ್ ಮಸ್ಕರೇನ್ಹಸ್
ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ
ಪುತ್ತೂರು: ಯೇಸುಕ್ರಿಸ್ತರು ದೇವರ ಪುತ್ರನಾದರೂ ಬಡವರಲ್ಲಿ ಬಡವನಾಗಿ ಗೋದಲಿಯಲ್ಲಿ ಹುಟ್ಟಿ ಮನುಷ್ಯ ಹಾಗೂ ದೇವರ ನಡುವೆ ಪ್ರೀತಿ, ಸೇವಾ ಮನೋಭಾವ, ಕ್ಷಮಾಪಣಗುಣ ಸಾರುವ ಮೂಲಕ ಮಾನವೀಯತೆಯನ್ನು ಮೆರೆದ ಸಾಕಾರಮೂರ್ತಿಯಾಗಿದ್ದಾರೆ ಎಂದು ಮಾಯಿದೆ ದೇವುಸ್ ಚರ್ಚ್ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ರವರು ಹೇಳಿದರು.
ಅವರು ಜ.೧ ರಂದು ಎಪಿಎಂಸಿ ರಸ್ತೆ ಕ್ರಿಸ್ಟೋಫರ್ ಕಾಂಪ್ಲೆಕ್ಸ್ನಲ್ಲಿನ ಕ್ರಿಸ್ಟೋಫರ್ ಬ್ಯಾಂಕ್ವೆಟ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಜರಗಿದ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಯೇಸುಕ್ರಿಸ್ತರ ಜನನದ ಸಂದೇಶವನ್ನು ನೀಡುತ್ತಾ ಮಾತನಾಡಿದರು. ಯೇಸುಕ್ರಿಸ್ತರು ಮಾನವ ರೂಪದಲ್ಲಿ ಭುವಿಗೆ ಬಂದದ್ದು ನಮ್ಮನ್ನು ಪ್ರೀತಿಸಲು. ಯಾವುದೇ ಕಲ್ಮಶವಿಲ್ಲದೆ ದೇವರು ಯೇಸುಕ್ರಿಸ್ತರನ್ನು ಸೃಷ್ಟಿಸಿದರು. ತಮ್ಮ ನೆರೆಹೊರೆಯವರನ್ನೂ ಪ್ರೀತಿಸಿ, ವೈರಿಗಳನ್ನೂ ಪ್ರೀತಿಸಿ ಆದರೆ ದ್ವೇಷ, ಮತ್ಸರ ಬೇಡ ಎಂದು ಪ್ರೀತಿಯ ಸಂದೇಶವನ್ನು ಸಾರಿದವರು. ದೇವರು ಯಾವಾಗಲೂ ಕೆಟ್ಟದ್ದನ್ನು ಮಾಡಲು ಸಾಧ್ಯವಿಲ್ಲ, ಅದು ಮಾಡುವುದಿದ್ದರೆ ಮಾನವ ಮಾತ್ರ ಎಂದ ಅವರು ಸಮಾಜಕ್ಕೆ ಒಳಿತಾಗುವ ಕಾರ್ಯವನ್ನು ಮಾಡುವುದೇ ಕ್ರಿಸ್ಮಸ್ ಸಂದೇಶವಾಗಿದ್ದು, ಈ ನಿಟ್ಟಿನಲ್ಲಿ ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮುಖೇನ ಸಮಾಜಕ್ಕೆ ಒಳಿತನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜರವರು ಸ್ವಾಗತಿಸಿ, ಮಾತನಾಡಿ, ನಾಡಿನ ಸಮಸ್ತ ಜನರಿಗೂ ಕ್ರಿಸ್ತ ಜಯಂತಿಯ ಹಾಗೂ ಹೊಸ ವರುಷದ ಶುಭಾಶಯವನ್ನು ಕೋರುತ್ತೇನೆ. ನಾವೆಲ್ಲರೂ ಶಾಂತಿಗಾಗಿ ಹೋರಾಡಿ ಸೌಹಾರ್ದತೆಯೊಂದಿಗೆ ಮಾನವೀಯತೆಯನ್ನು ಕಾಪಾಡಿ ಹೊಸ ಸಮಾಜವನ್ನು ರೂಪಿಸೋಣ. ಇದೇ ತಿಂಗಳ ಅಂತ್ಯದೊಳಗೆ ಡಯಾಲಿಸಿಸ್ನ ಸುಸಜ್ಜಿತ ಘಟಕ ಉದ್ಘಾಟನೆಗೊಳ್ಳಲಿದೆ ಎಂದರು.
ರೋಟರಿಯ ಅಸಿಸ್ಟೆಂಟ್ ಗವರ್ನರ್ ರತ್ನಾಕರ್ ರೈ ಕೆದಂಬಾಡಿಗುತ್ತುರವರು ಮಾತನಾಡಿ, ಹಾಸ್ಯ ಪ್ರವೃತ್ತಿಯುಳ್ಳ ರೋಟರಿ ಪುತ್ತೂರು ಅಧ್ಯಕ್ಷರಾದ ಝೇವಿಯರ್ ಡಿ’ಸೋಜರವರು ಜವಾಬ್ದಾರಿಯುತವಾಗಿ ಕಾರ್ಯವನ್ನು ನಿರ್ವಹಿಸುವಲ್ಲಿ ಜಿಲ್ಲೆಯಲ್ಲಿಯೇ ಮೆಚ್ಚುಗೆಗೆ ಪಾತ್ರವಾಗಿದೆ. ರೋಟರಿಯು ಅವಕಾಶಗಳನ್ನು ತೆರೆಯಿಸುತ್ತದೆ ಎಂಬ ರೋಟರಿಯ ಧ್ಯೇಯವಾಕ್ಯದಂತೆ ನಮ್ಮ ಪ್ರತಿಯೊಂದು ಕ್ಷಣವೂ ಆಶಾದಾಯಕವಾಗಿರಲಿ ಎಂದರಲ್ಲದೆ ಮತ್ತು ಏಪ್ರಿಲ್ನಲ್ಲಿ ನಡೆಯುವ ಜಿಲ್ಲಾ ಕಾನ್ಫರೆನ್ಸ್ಗೆ ರೋಟರಿ ಸದಸ್ಯರು ಭಾಗವಹಿಸುವಂತೆ ಅವರು ಸಹಕಾರ ಕೋರಿದರು.
ಕಾರ್ಯಕ್ರಮಕ್ಕೆ ದೇಣಿಗೆ ನೀಡಿದವರಿಗೆ ಈ ಸಂದರ್ಭದಲ್ಲಿ ಹೂ ನೀಡಿ ಗೌರವಿಸಲಾಯಿತು. ಕ್ಲಬ್ ಕಾರ್ಯದರ್ಶಿ ಪ್ರೊ|ದತ್ತಾತ್ರೇಯ ರಾವ್ ಕ್ಲಬ್ನ ವರದಿ ಮಂಡಿಸಿದರು. ನಿಯೋಜಿತ ಅಧ್ಯಕ್ಷ ಮಧು ನರಿಯೂರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಸದಸ್ಯ ವಿ.ಜೆ ಫೆರ್ನಾಂಡೀಸ್ರವರು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಕ್ರಿಸ್ಮಸ್ ಕ್ಯಾರಲ್ಸ್..ಸಾಂತಾಕ್ಲಾಸ್..ಗೇಮ್ಸ್..
ವಿಶೇಷ ಆಕರ್ಷಣೆಯಾಗಿ ಮಾಯಿದೆ ದೇವುಸ್ ಚರ್ಚ್ನ ಗಾಯನ ಮಂಡಳಿಯಿಂದ ಕ್ಯಾರಲ್ಸ್ ಗೀತೆಗಳು, ಚಾಕಲೇಟ್ಗಳ ಬುಟ್ಟಿಯೊಂದಿಗೆ ಆಗಮಿಸಿದ ಸಾಂತಾಕ್ಲಾಸ್ ನೃತ್ಯದೊಂದಿಗೆ ಪ್ರೀತಿಯಿಂದ ಮಕ್ಕಳಿಗೆ, ನೆರೆದಿದ್ದವರಿಗೆ ಚಾಕಲೇಟ್ಗಳನ್ನು ನೀಡುವುದರೊಂದಿಗೆ ಮನರಂಜನೆ ಮಾಡುವ ಮೂಲಕ ಕ್ರಿಸ್ಮಸ್ ಹಬ್ಬಕ್ಕೆ ವಿಶೇಷ ಕಳೆ ನೀಡಲಾಯಿತು. ಜನವರಿ ಒಂದರಂದು ಹುಟ್ಟುಹಬ್ಬವನ್ನು ಆಚರಿಸಿದ ಸದಸ್ಯರಾದ ಹೆರಾಲ್ಡ್ ಮಾಡ್ತಾ ಹಾಗೂ ಗೋವಿಂದ ಪ್ರಕಾಶ್ ಸಾಯರವರು ಜೊತೆಗೂಡಿ ಕೇಕ್ ಕತ್ತರಿಸಿ, ನೆರೆದಿದ್ದವರಿಗೆ ಸಿಹಿಯ ಪ್ರತೀಕವಾದ ಕೇಕ್ನ್ನು ಹಂಚಲಾಯಿತು ಅಲ್ಲದೆ ಹಬ್ಬದ ಪ್ರಯುಕ್ತ ಕೆಲವು ಮನೋರಂಜನಾ ಗೇಮ್ಸ್ಗಳನ್ನು ಆಡಿಸಲಾಯಿತು.