HomePage_Banner
HomePage_Banner
HomePage_Banner
HomePage_Banner

ತಾ|ಸರಕಾರಿ ನೌಕರರ ಸಂಘದ ನಿಕಟಪೂರ್ವ ಅಧ್ಯಕ್ಷ, ರೂ.3 ಕೋಟಿ ಕಟ್ಟಡದ ರೂವಾರಿ ಮೌರಿಸ್ ಮಸ್ಕರೇನ್ಹಸ್‌ರವರಿಗೆ ಶುಭವಿದಾಯ ಸಮಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮೌರಿಸ್‌ರವರ ಶ್ರಮ, ಪ್ರಯತ್ನ, ಕಾಳಜಿಗೆ ನಿಜಕ್ಕೂ ಫಲ ಸಿಕ್ಕಿದೆ-ನಂದಕುಮಾರ್


ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ವೃತ್ತಿಯಲ್ಲಿರುವಾಗ ಮೌರಿಸ್ ಮಸ್ಕರೇನ್ಹಸ್‌ರವರು ಸಾರಥಿ ಭವನ ಹಾಗೂ ಸರಕಾರಿ ನೌಕರರ ಸಮುದಾಯವ ಕಟ್ಟಡ ನಿರ್ಮಿಸುವ ಮೂಲಕ ಅಮೋಘ ಸಾಧನೆಯನ್ನೇ ಮಾಡಿದ್ದಾರೆ. ಮೌರಿಸ್‌ರವರ ಅವಿರತ ಶ್ರಮ, ಪ್ರಯತ್ನ, ಕಾಳಜಿಗೆ ನಿಜಕ್ಕೂ ಫಲ ಸಿಕ್ಕಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಎಂದು ಬೆಂಗಳೂರು ಪಾನೀಯ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ  ನಂದಕುಮಾರ್‌ರವರು ಹೇಳಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ತಾಲೂಕು ಶಾಖೆಯ ವತಿಯಿಂದ ಶಾಖೆಯ ಮೇರಿ ದೇವಾಸಿಯಾ ಸಮುದಾಯ ಭವನದ ಶ್ರೀಮತಿ ಮತ್ತು ಶ್ರೀ ನಂದಕುಮಾರ್ ವೇದಿಕೆಯಲ್ಲಿ ರೂ.೩ ಕೋಟಿ ವೆಚ್ಚದ ತಾಲೂಕು ಸರಕಾರಿ ನೌಕರರ ಸಂಘದ ಸುಸಜ್ಜಿತ ಕಟ್ಟಡದ ನಿರ್ಮಾಣದ ರೂವಾರಿ, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ನಿಕಟಪೂರ್ವ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರಿಗೆ ಶುಭವಿದಾಯ ಸಮಾರಂಭದಲ್ಲಿ ಅವರು ಮೌರಿಸ್ ಮಸ್ಕರೇನ್ಹಸ್ ಹಾಗೂ ಅವರ ಪತ್ನಿ ಶಿಕ್ಷಕಿ ಜ್ಯೂಲಿಯಾನ ಮೊರಾಸ್‌ರವರಿಗೆ ಶಾಲು ಹೊದಿಸಿ, ತಾಲೂಕು ಶಾಖೆಯ ವತಿಯಿಂದ ಮೌರಿಸ್ ಮಸ್ಕರೇನ್ಹಸ್‌ರವರಿಗೆ ಚಿನ್ನದ ಉಂಗುರ ತೊಡಿಸಿ ಸನ್ಮಾನಿಸಿ ಮಾತನಾಡಿದರು. ಸರಕಾರಿ ನೌಕರರ ಸಂಘಕ್ಕೆ ಸುಸಜ್ಜಿತವಾದ ಸ್ವಂತ ಕಟ್ಟಡವಿರಬೇಕು ಎನ್ನುವ ನಿಟ್ಟಿನಲ್ಲಿ ಆರಂಭಿಸಲಾದ ಈ ಕಟ್ಟಡವು ಇಂದು ರಾರಾಜಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಮೌರಿಸ್‌ರವರು ವೃತ್ತಿಯಲ್ಲಿದ್ದ ಸಂದರ್ಭದಲ್ಲಿ ಸರಕಾರಿ ನೌಕರರ ಕುಂದು ಕೊರತೆಗಳಿಗೆ, ಸಮಸ್ಯೆಗಳಿಗೆ ತಮ್ಮ ಕೈಲಾದಷ್ಟು ಸ್ಪಂದನೆ ಹಾಗೂ ಸಹಾಯಹಸ್ತ ನೀಡಿದ್ದಾರೆ ಎಂಬುದಂತೂ ಸತ್ಯ ಎಂದ ಅವರು ನನಗೆ ಮತ್ತು ಇಲ್ಲಿನ ಕಟ್ಟಡಕ್ಕೆ ಭಾವಾನಾತ್ಮಕ ಸಂಬಂಧವಿದೆ. ಯಾಕೆಂದರೆ ನನ್ನ ಮನೆ ಇರುವುದೂ ಈ ಕಟ್ಟಡದ ಪಕ್ಕದಲ್ಲೇ. ಯಾರಿಗಾದರೂ ನನ್ನ ಮನೆಯ ವಿಳಾಸವನ್ನು ನೀಡುವ ಸಮಯದಲ್ಲಿ ಎನ್‌ಜಿಒ ಕಟ್ಟಡದ ಪಕ್ಕದಲ್ಲಿ ಎಂದು ವಿಳಾಸ ಕೊಡುತ್ತಿದ್ದೆ. ಸರಕಾರಿ ನೌಕರರ ಸಂಘಕ್ಕೆ ಒಳ್ಳೆಯ ಆಸ್ತಿಯನ್ನು ಮಾಡಿಕೊಟ್ಟು ನಿವೃತ್ತಿಗೊಂಡಿರುವ ಮೌರಿಸ್ ಮಸ್ಕರೇನ್ಹಸ್‌ರವರ ಮುಂದಿನ ಜೀವನವು ಆಯುರಾರೋಗ್ಯದಿಂದ ಕೂಡಿರಲಿ ಎಂದು ಹಾರೈಸುತ್ತೇನೆ ಎಂದು ಅವರು ಹೇಳಿದರು.

ಮೌರಿಸ್‌ರವರೋರ್ವ ಲಕ್ಕಿ ಮ್ಯಾನ್ ಆಗಿದ್ದಾರೆ-ಪಿ.ಕೆ ಕೃಷ್ಣ:
ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಪಿ.ಕೆ ಕೃಷ್ಣರವರು ಮಾತನಾಡಿ, ಕಳೆದ ೧೫ ವರುಷಗಳಿಂದ ನನ್ನ ಮತ್ತು ಮೌರಿಸ್ ಮಸ್ಕರೇನ್ಹಸ್‌ರವರ ಒಡನಾಟವಿದ್ದು, ಈ ನಡುವೆ ಅವರು ಏನು ಕೆಲಸ ಮಾಡಿದ್ದಾರೆ ಎಂಬುದು ಪುತ್ತೂರಿನ ಜನತೆಗೆ ಜಗಜ್ಜಾಹೀರುವಾಗುವಂತೆ ಮಾಡಿದ್ದಾರೆ ಈ ಸುಸಜ್ಜಿತ ಕಟ್ಟಡದ ಮೂಲಕ. ಪ್ರತೀ ಜಿಲ್ಲೆಗೆ ನಾನು ಭೇಟಿ ಕೊಡ್ತೇನೆ ಆದ್ರೂ, ಇಲ್ಲಿನ ಈ ಕಟ್ಟಡ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ಮೌರಿಸ್ ಮಸ್ಕರೇನ್ಹಸ್‌ರವರಿಗೆ ನಿವೃತ್ತಿ ವಯಸ್ಸು ೬೦ ಆದ್ರೂ, ಮತ್ತೂ ಆರು ತಿಂಗಳು ಹೆಚ್ಚಿನ ಸೇವೆ ಮಾಡಿರುವುದು ಅವರೋರ್ವ ಲಕ್ಕಿ ಮ್ಯಾನ್ ಆಗಿದ್ದಾರೆ ಎಂದು ಮೌರಿಸ್‌ರವರ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲೆಂದು ಹಾರೈಸುತ್ತೇನೆ ಎಂದರು.

ಹೃದಯವಂತಿಕೆ, ಸುಪ್ತ ಮನಸ್ಸು ಮೌರಿಸ್‌ರವರಿಗಿದೆ-ರಮೇಶ್ ಬಾಬು:
ಪುತ್ತೂರು ತಹಶೀಲ್ದಾರ್ ಆಗಿರುವ ಟಿ.ರಮೇಶ್ ಬಾಬುರವರು ಮಾತನಾಡಿ, ನಾನು ಪುತ್ತೂರಿಗೆ ವರ್ಗಾವಣೆಯಾಗಿ ಬಂದ ಸಂದರ್ಭದಲ್ಲಿ ಮೌರಿಸ್ ಮಸ್ಕರೇನ್ಹಸ್‌ರವರ ಪರಿಚಯವಾಗಿದ್ದು. ರೂ.೩ ಕೋಟಿ ವೆಚ್ಚದ ಸರಕಾರಿ ನೌಕರರ ಸಂಘದ ಈ ಕಟ್ಟಡ ನಿರ್ಮಿಸುತ್ತಾರೆ ಎಂಬುದು ನಾನು ಎಲ್ಲಿಯೂ ನೋಡಿಲ್ಲ. ಹಸನ್ಮುಖಿ ವ್ಯಕ್ತಿತ್ವದ ಮೌರಿಸ್ ಮಸ್ಕರೇನ್ಹಸ್‌ರವರ ಹೃದಯವಂತಿಕೆ ಮತ್ತು ಸುಪ್ತ ಮನಸ್ಸಿನಿಂದ ಇದನ್ನು ಸಾಧಿಸಿ ತೋರಿಸಿರುವುದು ಶ್ಲಾಘನೀಯವಾಗಿದೆ. ನಿರಂತರ ಶ್ರಮ, ಸಾಧಿಸಬಲ್ಲೆನೆಂಬ ಹಠ, ಎಲ್ಲರ ಪ್ರೀತಿ-ವಿಶ್ವಾಸದಿಂದ ಈ ಸುಸಜ್ಜಿತ ಕಟ್ಟಡ ನಿರ್ಮಿಸುವಲ್ಲಿ ಸಹಕಾರಿಯಾಗಿದೆ ಎಂದರೆ ತಪ್ಪೇನಿಲ್ಲ ಎಂದ ಅವರು ಮೌರಿಸ್ ಮಸ್ಕರೇನ್ಹಸ್‌ರವರು ವೃತ್ತಿಯಿಂದ ನಿವೃತ್ತಿಯಾದರೂ ಸರಕಾರಿ ನೌಕರರ ಸಂಘದಿಂದ ನಿವೃತ್ತಿಯಾಗೋದಿಲ್ಲ. ಯಾಕೆಂದರೆ ಅವರ ಮಾರ್ಗದರ್ಶನದಿಂದ ಕಿರಿಯರಿಗೆ ಸಂಘದ ಅಭಿವೃದ್ಧಿಗೆ ಬಹಳ ಮುಖ್ಯವಾಗುತ್ತದೆ. ನೂತನ ಅಧ್ಯಕ್ಷರಾದ ಶಿವಾನಂದ ಆಚಾರ್ಯರವರು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕೆಲಸ-ಕಾರ್ಯಗಳನ್ನು ಮಾಡುವ ಮೂಲಕ ಸಂಘದ ಹೆಸರನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಅವರು ಹೇಳಿದರು.

ಹಿರಿತನದ ಜೊತೆಗೆ ಸಾಧು ಸ್ವಭಾವದ ವ್ಯಕ್ತಿತ್ವ ಮೌರಿಸ್‌ರವರದ್ದು-ಸಿ.ಲೋಕೇಶ್:
ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ಸಿ.ಲೋಕೇಶ್‌ರವರು ಮಾತನಾಡಿ, ಸರಕಾರಿ ನೌಕರರ ಸಂಘದ ನೂತನ ಕಟ್ಟಡವನ್ನು ಸ್ಥಾಪಿಸಲು ಮೌರಿಸ್ ಮಸ್ಕರೇನ್ಹಸ್‌ರವರು ಎಷ್ಟು ಶ್ರಮ ಪಟ್ಟಿದರೆಂದರೆ ತುಂಬಾ ಹತ್ತಿರದಿಂದ ತನ್ನ ಸಿಬ್ಬಂದಿ ಗಿರಿಧರ್‌ರವರಿಂದ ನನಗೆ ತಿಳ್ಕೊಂಡಿದ್ದೇನೆ ಮಾತ್ರವಲ್ಲದೆ ಈ ಕಟ್ಟಡ ನಿಜಕ್ಕೂ ಎಲ್ಲರಿಗೂ ಮಾದರಿ ಕಟ್ಟಡವೆನಿಸಿದೆ. ಈ ಸರಕಾರಿ ನೌಕರರ ಸಂಘದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರಿರುವುದು ಶ್ಲಾಘನೀಯತಕ್ಕ ಅಂಶವಾಗಿದೆ. ಈ ಸುಸಜ್ಜಿತ ಕಟ್ಟಡ ನಿರ್ಮಿಸುವಲ್ಲಿ ಜೀವಮಾನದ ಸಾಧನೆಯನ್ನು ತನ್ನ ವೃತ್ತಿಯಲ್ಲಿ ಮಾಡಿ ತೋರಿಸಿದ್ದಾರೆ ಮೌರಿಸ್ ಮಸ್ಕರೇನ್ಹಸ್‌ರವರು ಎಂದ ಅವರು ಮೌರಿಸ್‌ರವರು ಮಾಡಿದ ಸಾಧನೆಯನ್ನು ಹಿಂದಿಕ್ಕುವ ಕೆಲಸವನ್ನು ನೂತನ ಅಧ್ಯಕ್ಷರಾದ ಶಿವಾನಂದ ಆಚಾರ್ಯರವರು ಸರ್ವರ ಸಹಕಾರದೊಂದಿಗೆ ಮಾಡಬೇಕಾಗಿದೆ. ಹಿರಿತನದ ಜೊತೆಗೆ ಸಾಧು ಸ್ವಭಾವದ ವ್ಯಕ್ತಿತ್ವವುಳ್ಳ ಮೌರಿಸ್‌ರವರು ಮುಂದಿನ ದಿನಗಳಲ್ಲಿ ಸಂಘದ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವಂತಾಗಲಿ ಎಂದು ಅವರು ಹೇಳಿದರು.

ಆರೋಗ್ಯ ಇಲಾಖೆಯಲ್ಲಿನ ಮೌರಿಸ್‌ರವರ ಸೇವೆಗೆ ಹ್ಯಾಟ್ಸಾಫ್-ಡಾ.ಅಶೋಕ್ ಕುಮಾರ್ ರೈ:
ತಾಲೂಕು ಆರೋಗ್ಯಾಧಿಕಾರಿಯಾಗಿರುವ ಡಾ.ಅಶೋಕ್ ಕುಮಾರ್‌ಯವರು ಮಾತನಾಡಿ, ಮೌರಿಸ್ ಮಸ್ಕರೇನ್ಹಸ್‌ರವರು ಹುಟ್ಟು ಹೋರಾಟಗಾರ ಎನ್ನುವುದಕ್ಕೆ ಅವರ ಅವಧಿಯಲ್ಲಿ ಆಗಿರುವ ಸಾರಥಿ ಭವನ ಕಟ್ಟಡ ಹಾಗೂ ಈ ಸರಕಾರಿ ನೌಕರರ ಸಮುದಾಯ ಭವನ ಕಟ್ಟಡವೇ ಸಾಕ್ಷಿಯಾಗಿದೆ. ೧೯೮೮ರಲ್ಲಿಯೇ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ಸೇರಿದ ಈ ಮೌರಿಸ್‌ರವರು ತನ್ನದು ಅಲ್ಲದೆ ಇತರರ ನೌಕರರ ಕೆಲಸವನ್ನು ಪರ್ಮನೆಂಟ್ ಮಾಡಲು ಅಂದೇ ಹೋರಾಟ ಮಾಡಿದ್ದರು ಕೂಡ ಎಂದ ಅವರು ಇಂತಹ ಸಾಧನೆ ಮಾಡಿದ ಇದೇ ಮೌರಿಸ್‌ರವರು ನಮ್ಮ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿರುವುದು ಹ್ಯಾಟ್ಸಾಫ್ ಎನ್ನಬೇಕಾಗಿದೆ ಮಾತ್ರವಲ್ಲದೆ ಸರಕಾರಿ ನೌಕರರ ಪಾಲಿಗೆ ಓರ್ವ ಶಿಲ್ಪಿ ಎನಿಸಿಕೊಂಡಿದ್ದಾರೆ. ಮೌರಿಸ್‌ರವರ ಮುಂದಿನ ನಿವೃತ್ತ ಜೀವನವು ಸದಾ ಹಸನ್ಮುಖಿಯಾಗಿರಲೆಂದು ಹಾರೈಸುತ್ತೇನೆ ಎಂದು ಅವರು ಹೇಳಿದರು.

ಆದರ, ಗೌರವದಿಂದ ಬರಮಾಡಿಕೊಳ್ಳು ಸ್ವಭಾವದವರು ಮೌರಿಸ್‌ರವರು-ಶರ್‍ಲಿ ಸುಮಾಲಿನಿ:
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ರಾಜ್ಯ ಪರಿಷತ್ ಸದಸ್ಯೆ ಶರ್‍ಲಿ ಸುಮಾಲಿನಿಯವರು ಮಾತನಾಡಿ, ನಿವೃತ್ತಿಗೊಂಡ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿರುವ ಮೌರಿಸ್ ಮಸ್ಕರೇನ್ಹಸ್‌ರವರ ಅಭಿಮಾನಕ್ಕೋಸ್ಕರ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಯಾಕೆಂದರೆ ಯಾವುದೇ ಕಾರ್ಯಕ್ರಮದಲ್ಲಾಗಲಿ ಮೌರಿಸ್‌ರವರು ಪ್ರತಿಯೋರ್ವರನ್ನೂ ಆದರದಿಂದ, ಗೌರವದಿಂದ ಬರಮಾಡಿಕೊಳ್ಳುತ್ತಿರುವ ಸ್ವಭಾವವುಳ್ಳವರು. ಮೌರಿಸ್ ಮಸ್ಕರೇನ್ಹಸ್‌ರವರ ಪತ್ನಿ ಓರ್ವ ಶಿಕ್ಷಕಿಯಾಗಿದ್ದು ಮಾತ್ರವಲ್ಲದೆ ನಾವು ಪರಸ್ಪರ ಸಹಪಾಠಿಗಳಾಗಿದ್ದು ಬಹಳ ಆತ್ಮೀಯರೆನೆಸಿಕೊಂಡಿದ್ದೇವೆ. ಯಾವುದೇ ವಿಷಯವಾಗಲಿ, ಕೇವಲ ಮಾತನಾಡುವುದು ಅಲ್ಲ, ಬದಲಾಗಿ ನಮ್ಮ ಕೆಲಸ ಕಾರ್ಯಗಳು ಮಾತನಾಡಬೇಕಿದೆ ಎಂಬುದಕ್ಕೆ ಮೌರಿಸ್ ಮಸ್ಕರೇನ್ಹಸ್‌ರವರ ಕೆಲಸ ಕಾರ್ಯಗಳೇ ಸಾಕ್ಷಿಯಾಗಿದೆ ಎಂದ ಅವರು ಓರ್ವ ಯಶಸ್ವಿ ಗಂಡನ ಹಿಂದೆ ಪತ್ನಿ ಇದ್ದಾರೆ ಎಂಬುದಕ್ಕೆ ಮೌರಿಸ್‌ರವರ ನಡೆಯೇ ಸಾಕ್ಷಿಯಾಗಿದೆ. ಆದ್ದರಿಂದ ನಿವೃತ್ತಿಗೊಂಡ ಮೌರಿಸ್ ಮಸ್ಕರೇನ್ಹಸ್‌ರವರ ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲೆಂದು ಸದಾ ಹಾರೈಸುತ್ತೇವೆ ಎಂದರು.

ಸನ್ಮಾನ/ಅಭಿನಂದನೆ:
ಸರಕಾರಿ ನೌಕರರ ಸಂಘದ ನೂತನ ಕಟ್ಟಡದ ನಿರ್ಮಾಣದ ಆರಂಭದಿಂದ ಹಿಡಿದು ಇಲ್ಲಿಯವರೆಗೆ ಬಹಳಷ್ಟು ಪ್ರೋತ್ಸಾಹ ಹಾಗೂ ಸಹಕಾರ ನೀಡಿದ ಬೆಂಗಳೂರು ಪಾನೀಯ ನಿಗಮದ ಕಾರ್ಯನಿರ್ವಹಣಾಧಿಕಾರಿ ನಂದಕುಮಾರ್‌ರವರನ್ನು ತಾಲೂಕು ಸರಕಾರಿ ನೌಕರರ ಸಂಘದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಜೊತೆಗೆ ತಾಲೂಕು ಶಾಖೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಯಾಗಿರುವ ಶಿವಾನಂದ ಆಚಾರ್ಯರವರನ್ನು ಮತ್ತು ತಾಲೂಕು ಶಾಖೆಯ ಕಾರ್ಯಕಾರಿ ಸಮಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಕಡಬ ತಾಲೂಕಿಗೆ ವರ್ಗಾವಣೆಗೊಂಡಿರುವ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಎಂ.ರವರಿಗೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಂಗಳೂರು ಇಲ್ಲಿಗೆ ವರ್ಗಾವಣೆಗೊಂಡಿರುವ ಮತ್ತೋರ್ವ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್‌ರವರಿಗೆ ಶಾಲು ಹೊದಿಸಿ ಅಭಿನಂದನೆ ಸಲ್ಲಿಸಲಾಯಿತು.

ವಿವಿಧ ಸಂಘಗಳಿಂದ ಅಭಿನಂದನೆ:
ಡಿಸಿಸಿ ಬ್ಯಾಂಕ್‌ನ ಮಾಜಿ ಪ್ರಬಂಧಕರಾದ ಸುಧಾಕರ್ ರೈ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜಯಂತ್ ನಡುಬೈಲು, ಪುತ್ತೂರು ವಾಣಿಜ್ಯ ತೆರಿಗೆ ಅಧಿಕಾರಿ ಜಗದೀಶ್, ಸುಳ್ಯ ಸರಕಾರಿ ನೌಕರರ ಸಂಘ, ಬೆಳ್ತಂಗಡಿ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಮೌರಿಸ್ ಮಸ್ಕರೇನ್ಹಸ್‌ರವರ ಅಭಿಮಾನಿಗಳು ಮೌರಿಸ್ ಮಸ್ಕರೇನ್ಹಸ್‌ರವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ನವೀನ್ ಕುಮಾರ್ ಸಂದರ್ಭೋಚಿತವಾಗಿ ಮಾತನಾಡಿದರು. ಸಹಶಿಕ್ಷಕಿ ಸುನೀತಾ ಪ್ರಾರ್ಥಿಸಿದರು. ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ನೂತನ ಅಧ್ಯಕ್ಷ ಶಿವಾನಂದ ಆಚಾರ್ಯರವರು ಸ್ವಾಗತಿಸಿ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ ವಂದಿಸಿದರು. ಸಹಶಿಕ್ಷಕಿ ಸ್ಮಿತಾಶ್ರೀ ಹಾಗೂ ಪ್ರೌಢಶಾಲಾ ವಿಭಾಗಕ್ಕೆ ಪದೋನ್ನತಿ ಹೊಂದಿದ ದೈಹಿಕ ಶಿಕ್ಷಣ ನಿರ್ದೇಶಕ ಮಾಮಚ್ಚನ್ ಎಂ.ರವರು ಸನ್ಮಾನಿತರ ಸನ್ಮಾನ ಪತ್ರವನ್ನು ವಾಚಿಸಿದರು. ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ಕಾರ್ಯದರ್ಶಿ ರಾಮಚಂದ್ರ, ಕಂದಾಯ ಇಲಾಖೆಯ ಚಂದ್ರ ನಾಯ್ಕ್, ಆರೋಗ್ಯ ಇಲಾಖೆಯ ಪದ್ಮನಾಭ ಶಿಂಧೆ, ನ್ಯಾಯಾಂಗ ಇಲಾಖೆಯ ವೆಂಕಟೇಶ್, ಕಡಬ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರರವರು ಅತಿಥಿಗಳಿಗೆ ಹೂಗುಚ್ಚ ನೀಡಿ ಗೌರವಿಸಿದರು. ಸಂಘದ ಕೋಶಾಧಿಕಾರಿ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಸರಕಾರಿ ನೌಕರರ ಸಂಘದ ತಾಲೂಕು ಶಾಖೆಯ ಮಾಜಿ ಅಧ್ಯಕ್ಷ ವಿಠಲ ಆಚಾರಿ, ಮಾಜಿ ಗೌರವಾಧ್ಯಕ್ಷ ಅಬೂಬಕ್ಕರ್, ಜಿಲ್ಲಾ ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಪ್ರವೀಣ್, ನಿವೃತ್ತಿ ಸನ್ಮಾನ ಸ್ವೀಕರಿಸಿದ ಮೌರಿಸ್ ಮಸ್ಕರೇನ್ಹಸ್‌ರವರ ಪತ್ನಿ ಜ್ಯೂಲಿಯಾನಾ ಮೊರಾಸ್, ಪುತ್ರ, ಪುತ್ರಿ, ಅಳಿಯ ಅಲ್ಲದೆ ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಹಕಾರ ನೀಡಿದ ಪ್ರತಿಯೋರ್ವರಿಗೆ ನನ್ನ ವಂದನೆಗಳು…
ಈ ಸುಸಜ್ಜಿತ ಕಟ್ಟಡ ನಿರ್ಮಿಸಲು ನನ್ನ ನೇತೃತ್ವದ ಸಮಿತಿ ಕಾರಣವಾಗಿರಬಹುದು ಆದರೆ ಇದಕ್ಕೆ ಮೂಲ ಕಾರಣ ನಂದಕುಮಾರ್ ಸರ್‌ರವರು. ನೂತನ ಕಟ್ಟಡ ನಿರ್ಮಾಣ ಮಾಡುವ ಕುರಿತು ಅವರಲ್ಲಿ ಮಾತಾಡಿದಾಗ ಅವರು ಖುಶಿಯಲ್ಲಿ ನಮಗೆ ಬಹಳಷ್ಟು ಸಹಕಾರ ಮಾಡಿದ್ದಾರೆ. ನಾನು ನೇರವಾಗಿ ಇಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಂದಿಲ್ಲ, ಕಾರ್ಯದರ್ಶಿಯಾಗಿ, ರಾಜ್ಯ ಪರಿಷತ್ ಸದಸ್ಯನಾಗಿ ಕಾರ್ಯ ನಿರ್ವಹಿಸಿ ಅಧ್ಯಕ್ಷ ಪದವಿಗೆ ಬಂದಿರುತ್ತೇನೆ. ಕಟ್ಟಡ ನಿರ್ಮಿಸುವಲ್ಲಿ ಎಲ್ಲಾ ಸರಕಾರಿ ಇಲಾಖೆಗಳ ನೌಕರರು, ಅಧಿಕಾರಿ ವರ್ಗದವರು, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ಪಿಡಬ್ಲ್ಯೂಡಿ ಇಲಾಖೆ, ದಾನಿಗಳು, ಗುತ್ತಿಗೆದಾರರು ಸಹಕಾರ ನೀಡಿರುವುದಕ್ಕೆ ವಂದನೆಗಳನ್ನು ಸಲ್ಲಿಸುತ್ತೇನೆ. ಅಲ್ಲದೆ ಕಟ್ಟಡ ನಿರ್ಮಿಸುವಲ್ಲಿ ರೂ.ಹತ್ತು ಸಾವಿರಕ್ಕಿಂತ ಮೇಲ್ಪಟ್ಟು ನೀಡಿದವರಿಗೆ ಒಂದು ದಿನದ ಸಭಾಂಗಣವನ್ನು ಉಚಿತವಾಗಿ ನೀಡಲಿದ್ದೇವೆ ಎಂದು ಈ ಮೊದಲೇ ದಾನಿಗಳಿಗೆ ಭರವಸೆ ನೀಡಿದ್ದೇವೆ.
-ಮೌರಿಸ್ ಮಸ್ಕರೇನ್ಹಸ್, ಸನ್ಮಾನಿತ ನಿಕಟಪೂರ್ವ ಅಧ್ಯಕ್ಷರು, ತಾ|ಸರಕಾರಿ ನೌಕರರ ಸಂಘ

ವಿಜ್ಞಾಪನೆ..
ತಾಲೂಕಿನ ಸರಕಾರಿ ನೌಕರರ ಇಲಾಖೆಯ ಪೈಕಿ ಶಿಕ್ಷಣ ಇಲಾಖೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಶಿಕ್ಷಕ ಬಂಧುಗಳಿದ್ದು, ಸರಕಾರಿ ನೌಕರರ ಸಂಘದಿಂದ ನಿರ್ಮಾಣಗೊಂಡ ಈ ಕಟ್ಟಡದ ಅಭಿವೃದ್ಧಿಗೆ ಒಂದು ದಿನದ ವೇತನ ನೀಡಿ ನಮ್ಮೊಂದಿಗೆ ಸಹಕರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್‌ರವರಲ್ಲಿ ಸಂಘದ ಕೋಶಾಧಿಕಾರಿ ನಾಗೇಶ್‌ರವರು ಸಂಘದ ಪರವಾಗಿ ವಿಜ್ಞಾಪನೆ ಮಾಡಿದರು.

ಸುಸಜ್ಜಿತ ಕಟ್ಟಡದ ಪ್ರಮುಖ ರೂವಾರಿ…
೧೯೬೬ರಲ್ಲಿ ಅಂದು ಕೇವಲ ರೂ.೭೦ ಸಾವಿರ ಖರ್ಚಿನಲ್ಲಿ ಈ ಹದಿನೈದು ಸೆಂಟ್ಸ್ ಜಾಗದಲ್ಲಿ ಅಂದಿನ ಅಧ್ಯಕ್ಷ ಸಿ.ಮಸ್ಕರೇನ್ಹಸ್‌ರವರು ಎನ್‌ಜಿಒ ಹೆಸರಿನಲ್ಲಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಪ್ರಸ್ತುತ ಅದೇ ಕಟ್ಟಡವನ್ನು ಕೆಡವಿ ಕೇವಲ ರೂ.೩ ಲಕ್ಷ ಕೈಯಲಿಟ್ಟುಕೊಂಡು ಪ್ರತಿಯೋರ್ವರ ಸಹಕಾರದಿಂದ ರೂ.೩ ಕೋಟಿ ವೆಚ್ಚದ ವಾಣಿಜ್ಯ ಸಂಕೀರ್ಣ, ವಸತಿ ಕೊಠಡಿ, ಸಮುದಾಯ ಭವನ ಹೀಗೆ ಒಂದು ಸುಸಜ್ಜಿತ ಕಟ್ಟಡವನ್ನು ಕಟ್ಟಲು ಪ್ರಮುಖ ರೂವಾರಿಯಾದವರು ಮೌರಿಸ್ ಮಸ್ಕರೇನ್ಹಸ್‌ರವರು. ತಾಲೂಕಿನ ೨೩ ಇಲಾಖೆಗಳ ಸಹಕಾರದಿಂದ ಮೌರಿಸ್ ಮಸ್ಕರೇನ್ಹಸ್‌ರವರು ೨೦೧೩ರಲ್ಲಿ ಅಧ್ಯಕ್ಷರಾಗಿ ಎರಡು ಅವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
-ಕೆ.ಕೃಷ್ಣಪ್ಪ, ಮಾಜಿ ರಾಜ್ಯಪರಿಷತ್ ಸದಸ್ಯರು, ಸರಕಾರಿ ನೌಕರರ ಸಂಘ ಪುತ್ತೂರು ಶಾಖೆ

ನಿವೃತ್ತ ಸರಕಾರಿ ನೌಕರರ ಸಂಘಕ್ಕೆ ಆಹ್ವಾನಿಸುತ್ತಿದೆ…
ನಿವೃತ್ತಿಗೊಂಡ ಮೌರಿಸ್ ಮಸ್ಕರೇನ್ಹಸ್‌ರವರು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಕೂರಿಸಿಕೊಂಡು ಕೊಂಡೊಯ್ಯುವ ಸ್ವಭಾವುಳ್ಳವರಾಗಿದ್ದಾರೆ. ಯಾರೂ ಕೂಡ ತನ್ನಷ್ಟಕ್ಕೆ ಹೆಸರನ್ನು ಗಳಿಸಲು ಸಾಧ್ಯವಿಲ್ಲ. ಸ್ವ-ಪ್ರಯತ್ನ, ಚಾಕಚಾಕ್ಯತೆಯಿಂದ ಏನಾದರೂ ಸಾಧನೆ ಮಾಡಿದರೇ ಮಾತ್ರ ಹೆಸರನ್ನು ಗಳಿಸಲು ಸಾಧ್ಯವಾಗುತ್ತದೆ. ಇದಕ್ಕೆ ಮುಖ್ಯ ಉದಾಹರಣೆ ಇಂದಿಲ್ಲಿ ನಿವೃತ್ತಿ ಸನ್ಮಾನಗೊಂಡ ಮೌರಿಸ್ ಮಸ್ಕರೇನ್ಹಸ್‌ರವರು. ಬೆನ್ನು ಬಿಡದ ಭೂತದಂತೆ ಸದಾ ಸಕ್ರಿಯರಾಗಿ ಸಂಘದ ಅಭಿವೃದ್ಧಿಯಲ್ಲಿ ಚಿಂತನೆ ಮಾಡುವವರು ಮೌರಿಸ್‌ರವರು. ಸಜ್ಜನ ವ್ಯಕ್ತಿಯಾಗಿರುವ ಶಿವಾನಂದ ಆಚಾರ್ಯರವರು ಈ ಸಂಘದ ಚುಕ್ಕಾಣಿ ಹಿಡಿದಿದ್ದು, ಸಂಘವು ಅಭಿವೃದ್ಧಿಪಥದಲ್ಲಿ ಮುನ್ನೆಡೆಯಲಿ ಹಾಗೂ ನಿವೃತ್ತರಾದ ಮೌರಿಸ್ ಮಸ್ಕರೇನ್ಹಸ್‌ರವರು ನಮ್ಮ ನಿವೃತ್ತ ಸರಕಾರಿ ನೌಕರರ ಸಂಘಕ್ಕೆ ಸೇರುವಂತಾಗಲಿ.
-ಐತ್ತಪ್ಪ ನಾಯ್ಕ್, ಅಧ್ಯಕ್ಷರು, ನಿವೃತ್ತ ಸರಕಾರಿ ನೌಕರರ ಸಂಘ, ಪುತ್ತೂರು

ಝೀರೋದಿಂದ ಹೀರೋ ಆದವರು…
ಯಾವುದೇ ಕಾರ್ಯಕ್ರಮದ ಯೋಜನೆ ಹಾಕಿಕೊಳ್ಳುವುದು ಮಾತ್ರವಲ್ಲ, ಅದನ್ನು ಹೇಗೆ ಎಕ್ಸಿಕ್ಯೂಟ್ ಮಾಡುವುದು ಎನ್ನುವುದು ಮೌರಿಸ್ ಮಸ್ಕರೇನ್ಹಸ್‌ರವರಿಗೆ ತಿಳಿದಿದೆ. ಯೋಗಬಲ, ಜನಬಲ, ಹಣಬಲ, ದೈವಬಲವಿದ್ದಾಗ ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಮೌರಿಸ್‌ರವರು ಉದಾಹರಣೆಯಾಗಿದ್ದಾರೆ. ವೃತ್ತಿ ಅನಿರೀಕ್ಷಿತ ಆದರೆ ನಿವೃತ್ತಿ ನಿಶ್ಚಿತವಾದರೂ ನಿವೃತ್ತಿಯ ಮುಂಚೆ ಮಾಡಿದ ಕಾರ್ಯಗಳು ನಿಜಕ್ಕೂ ಮನದಲ್ಲಿ ಉಳಿಯುವಂತಹುದು. ಒಂದರ್ಥದಲ್ಲಿ ಝೀರೋದಿಂದ ಹೀರೋ ಆದವರು ನಮ್ಮ ಮೌರಿಸ್ ಮಸ್ಕರೇನ್ಹಸ್‌ರವರು.
-ಪುರುಷೋತ್ತಮ್ ಬಿ, ರಾಜ್ಯಪರಿಷತ್ ಸದಸ್ಯರು, ಸರಕಾರಿ ನೌಕರರ ಸಂಘ ಪುತ್ತೂರು ಶಾಖೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.