ಚಿತ್ರ: ಸುಧಾಕರ್ ಕಾಣಿಯೂರು
ಕಾಣಿಯೂರು: ದೈಹಿಕ ಮತ್ತು ಮಾನಸಿಕ ಆರೋಗ್ಯದ ಗುಟ್ಟು ಕ್ರೀಡೆಗಳಲ್ಲಿ ಅಡಗಿದೆ. ಕ್ರೀಡೆಯಲ್ಲಿ ತೊಡಗಿಸಿ ಕೊಂಡವರಿಗೆ ಮಾತ್ರ ಅದರ ಲಾಭ ಸಿಗಲು ಸಾಧ್ಯ. ಸಮಾಜದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಅತ್ಯಂತ ಪ್ರಮುಖವಾದುದು. ದೇಶದ ಭವಿಷ್ಯವಾಗಿರುವ ಯುವ ಸಮುದಾಯ ಸನ್ಮಾರ್ಗದಲ್ಲಿ ಮುನ್ನಡೆದು ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಹೇಳಿದರು. ಅವರು ಜ ೩ರಂದು ಬರೆಪ್ಪಾಡಿ ಕೆಲಂಬೀರಿ ಯುವಶಕ್ತಿ ಫ್ರೆಂಡ್ಸ್ನ ಆಶ್ರಯದಲ್ಲಿ ಕೆಲಂಬೀರಿ ಕ್ರೀಡಾಂಗಣದಲ್ಲಿ ನಡೆದ ಪ್ರೋ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಪರಸ್ಪರ ಅನ್ಯೋನ್ಯತೆಯಿಂದ, ಸ್ನೇಹಮಯಿಯಾಗಿ ಸಮಾಜದ ಎಲ್ಲಾ ವರ್ಗದ ಜನರೂ ಭಾಗವಹಿಸುವ ಕ್ರೀಡೆ ಭಾವೈಕ್ಯಕ್ಕೆ ಪೂರಕ. ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ, ದೈಹಿಕ ವೃದ್ಧಿಯಾಗಲು ಸಹಕಾರಿ ಎಂದರು. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಗುರು ಗಿರಿಶಂಕರ ಸುಲಾಯರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಕೃತಿ ಮತ್ತು ಪ್ರಕೃತಿಯನ್ನು ಪ್ರತಿಬಿಂಬಿಸುವ ಕ್ರೀಡೆಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ದೇಶ ಭಕ್ತಿಯೊಂದಿಗೆ ರಾಷ್ಟ್ರ ಕಟ್ಟುವ ಕಾಯಕವನ್ನು ಮಾಡೋಣ. ಸಂಘಟನೆಯ ಮೂಲಕ ಯುವಕರು ಸಮಾಜಮುಖಿಗಳಾಗಿ ತೊಡಗಿಸಿಕೊಂಡಾಗ ಗ್ರಾಮದ ಅಭಿವೃದ್ದ್ಧಿ ಆಗುವುದರೊಂದಿಗೆ ದೇಶದ ಅಭಿವೃದ್ದಿ ಆಗಲು ಸಾಧ್ಯ ಎಂದರು. ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೃಷ್ಣ ಭಟ್, ತಾ.ಪಂ, ಸದಸ್ಯೆ ಲಲಿತಾ ಈಶ್ವರ, ಪಳ್ಳತ್ತಾರು ವೀರಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಶ್ರೀಧರ ಗೌಡ ಕೊಯಕ್ಕುಡೆ, ಬೆಳಂದೂರು ಗ್ರಾ.ಪಂ, ಸದಸ್ಯರಾದ ಲೋಹಿತಾಕ್ಷ ಕೆಡೆಂಜಿ, ಪ್ರವೀಣ್ ಕೆರೆನಾರು, ಕುದ್ಮಾರು ಸ್ಕಂದಶ್ರೀ ಯುವಕ ಮಂಡಲದ ಕಾರ್ಯದರ್ಶಿ ಪದ್ಮನಾಭ ಕೆರೆನಾರು, ಬರೆಪ್ಪಾಡಿ ಕೆಲಂಬೀರಿ ಯುವಶಕ್ತಿ ಫ್ರೆಂಡ್ಸ್ ಕಾರ್ಯಾಧ್ಯಕ್ಷ ರತನ್ ರೈ, ಅಧ್ಯಕ್ಷ ಸಂತೋಷ್ ರೈ ಕಾರ್ಲಾಡಿ ಉಪಸ್ಥಿತರಿದ್ದರು. ರಾಕೇಶ್ ಬನಾರಿ ಪ್ರಾರ್ಥಿಸಿದರು. ಕಾರ್ಯದರ್ಶಿ ಸಚಿನ್ ಸೌತೆಮಾರು ಸ್ವಾಗತಿಸಿ, ಸಂದೇಶ್ ಸೌತೆಮಾರು ವಂದಿಸಿದರು. ರಮ್ಯರವರು ಕಾರ್ಯಕ್ರಮ ನಿರೂಪಿಸಿದರು.