- ಕೇರಳ ಮುಖ್ಯಮಂತ್ರಿ ಸಂತಾಪ; ತನಿಖೆಗೆ ಆದೇಶ
ಪುತ್ತೂರು: ಪುತ್ತೂರು ಕಡೆಯಿಂದ ಸುಳ್ಯದ ಆಲೆಟ್ಟಿ ಮೂಲಕ ಕೇರಳದ ಪಾಣತ್ತೂರು ಕರಿಕೆ ಕಡೆಗೆ ಹೋಗುತ್ತಿದ್ದ ಮದುವೆ ದಿಬ್ಬಣದ ಖಾಸಗಿ ಬಸ್ ಕಾಸರಗೋಡು ಜಿಲ್ಲೆಯ ಪಾಣತ್ತೂರು ಬಳಿಯ ಪರಿಯಾರಂ ಪಲ್ಟಿಯಾಗಿದ್ದು, ಸಾವಿನ ಸಂಖ್ಯೆ 7ಕ್ಕೆ ಏರಿದೆ ಎಂದು ಇದೀಗ ತಿಳಿದು ಬಂದಿದೆ. ಮೃತರನ್ನು ರಾಜೇಶ್, ರವಿಚಂದ್ರ, ಆದರ್ಶ್, ಶ್ರೇಯಸ್, ಸುಮತಿ, ಶಶಿ, ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಮಕ್ಕಳು.
ಪಾಣತ್ತೂರಿನ ಕರಿಕೆ ಸಮೀಪದ ಚತ್ತೂಕಾಯಂ ಎಂಬಲ್ಲಿ ಪುತ್ತೂರಿನ ಬಲ್ನಾಡು ಪಾಲೇಚಾರು ಚನಿಲ ಕೊಗ್ಗು ನಾಯ್ಕ ರವರ ಪುತ್ರಿಯ ವಿವಾಹಕ್ಕೆಂದು ಪುತ್ತೂರಿನಿಂದ ಬೆಳಿಗ್ಗೆ ಖಾಸಗಿ ಬಸ್ ನಲ್ಲಿ ಸಂಬಂಧಿಕರು ಸಮೇತ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
35 ಮಂದಿಯನ್ನು ಕಾಞಂಗಾಡ್ ಆಸ್ಪತ್ರೆಗೂ 11 ಮಂದಿಯನ್ನು ಮಂಗಳೂರು ಆಸ್ಪತ್ರೆಗೂ ದಾಖಲಿಸಲಾಗಿದ್ದು, ಈ ಪೈಕಿ ಹತ್ತಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಘಟನೆಗೆ ಕೇರಳ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ. ಘಟನೆಯ ತನಿಖೆಗೆ ಕೇರಳ ಸಾರಿಗೆ ಮಂತ್ರಿ ಆದೇಶಿಸಿದ್ದು, ಕಾಸರಗೋಡು ಜಿಲ್ಲಾಧಿಕಾರಿಯವರು ಕಾಞಂಗಾಡ್ ಸಹಾಯಕ ಕಮೀಷನರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.