ಪುತ್ತೂರು: ಒಂದು ಕಡೆಯಲ್ಲಿ ಚಿರತೆ ಭಯ ಹುಟ್ಟಿಸುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಕಾಡುಕೋಣಗಳು ಕೃಷಿಯನ್ನು ನಾಶ ಮಾಡುತ್ತಿವೆ. ಅರಿಯಡ್ಕ ಗ್ರಾಮದ ಬಪ್ಪಪುಂಡೇಲು ಪ್ರದೇಶದಲ್ಲಿ ಕಾಡುಕೋಣಗಳ ಹಿಂಡು ಕಾಣಿಸಿಕೊಳ್ಳುತ್ತಿವೆ. ಸುಮಾರು 10 ಕ್ಕೂ ಅಧಿಕ ಕಾಡುಕೋಣಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿದ್ದು ರೈತರ ಬೆಳೆಗಳನ್ನು ಹಾಳು ಮಾಡುತ್ತಿವೆ. ಬಪ್ಪಪುಂಡೇಲು ಹೊನ್ನಪ್ಪ ನಾಯ್ಕಸ ಎಂಬವರ ಗದ್ದೆಗೆ ಕಳೆದ ಎರಡು ದಿನಗಳಿಂದ ಕಾಡುಕೋಣಗಳ ಹಿಂಡು ದಾಳಿ ಮಾಡಿದ್ದು ಭತ್ತದ ಪೈರನ್ನು ನಾಶಮಾಡಿವೆ. ೧ ಎಕ್ರೆಯಷ್ಟು ಪ್ರದೇಶದಲ್ಲಿ ಇವರು ಗದ್ದೆ ಮಾಡಿದ್ದು ಪೈರು ತೆನೆ ಬಿಡುವ ಹಂತದಲ್ಲಿತ್ತು. ಎರಡು ದಿನಗಳಿಂದ ರಾತ್ರಿ ವೇಳೆ ಕಾಡುಕೋಣಗಳು ದಾಳಿ ಮಾಡಿ ಪೈರನ್ನು ತಿಂದು ಹಾಕಿವೆ. ಮುಕ್ಕಾಲು ಭಾಗ ಪೈರನ್ನು ತಿಂದು ಹಾಕಿದ್ದು ಅಪಾರ ನಷ್ಟ ಉಂಟಾಗಿದೆ ಎಂದು ಹೊನ್ನಪ್ಪ ನಾಯ್ಕರವರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಬಪ್ಪಪುಂಡೇಲು ಪ್ರದೇಶದಲ್ಲಿ ಕಾಡುಕೋಣಗಳು ಹಿಂಡುಹಿಂಡಾಗಿ ತಿರುಗಾಡುತ್ತಿರುವುದನ್ನು ಗ್ರಾಮಸ್ಥರು ನೋಡಿದ್ದು ಜನರಲ್ಲಿ ಭಯ ಆವರಿಸಿದೆ. ಅರಣ್ಯ ಇಲಾಖೆಯವರು ಈ ಕೂಡಲೇ ಸೂಕ್ತ ಕ್ರಮ ಕೈಗೊಂಡು ಕಾಡುಕೋಣಗಳನ್ನು ಗ್ರಾಮದಿಂದ ಓಡಿಸುವ ಕೆಲಸಕ್ಕೆ ಮುಂದಾಗಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.