HomePage_Banner
HomePage_Banner
HomePage_Banner
HomePage_Banner

ಬಲ್ನಾಡಿನ ವಧುವಿನ ಮದುವೆ ದಿಬ್ಬಣದ ಖಾಸಗಿ ಬಸ್ ಕೇರಳದ ಪಾಣತ್ತೂರು ಸಮೀಪ ಅಪಘಾತ ತಂದೆ, ಮಗ ಸಹಿತ ಪುತ್ತೂರಿನ ಐವರು ಸೇರಿ 7 ಮಂದಿ ದುರ್ಮರಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಲ್ನಾಡು ವಧುವಿನ ಮನೆಯಿಂದ ಸುಳ್ಯದ ಅಲೆಟ್ಟಿ ಮೂಲಕ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದ ಕುಂಡತ್ತಿಕಾನ ವರನ ಮನೆಗೆ ತೆರಳುತ್ತಿದ್ದ ಮದುವೆ ದಿಬ್ಬಣದ ಖಾಸಗಿ ಬಸ್ಸು ಸುಳ್ಯ-ಪಾಣತ್ತೂರು ಅಂತರ್‌ರಾಜ್ಯ ರಸ್ತೆಯ ಕಾಸರಗೋಡು ಜಿಲ್ಲೆಯ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಮನೆಯೊಂದರ ಮೇಲೆ ಉರುಳಿಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ತಂದೆ, ಮಗ ಸಹಿತ ಪುತ್ತೂರಿನ ಐವರು ಸೇರಿದಂತೆ ಒಟ್ಟು ೭ ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಜ.೩ರಂದು ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಕೇರಳದ ಕಾಞಂಗಾಡ್ ಹಾಗೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಲ್ನಾಡು ಗ್ರಾಮದ ಚನಿಲ ಪಾಲೆಚ್ಚಾರು ನಿವಾಸಿ ಚೋಮ ನಾಯ್ಕರವರ ಪುತ್ರ ರಾಜೇಶ್(೩೮ವ.), ಅವರ ಪುತ್ರ ಆದರ್ಶ(೪ವ), ಆರ್ಯಾಪು ಗ್ರಾಮದ ಕುಂಜೂರುಪಂಜ ಸಮೀಪದ ದೇವಸ್ಯ ನಾರಾಯಣರವರ ಪುತ್ರಿ ಸುಮತಿ(೨೬ವ.), ಆರ್ಲಪದವು ಅರ್ಧಮೂಲೆ ನಿವಾಸಿ ನಾರಾಯಣರವರ ಪುತ್ರ ಶ್ರೇಯಸ್(೧೩ವ.), ಬೆಟ್ಟಂಪಾಡಿ ಗ್ರಾಮದ ಅಜ್ಜಿಕಲ್ಲು ಸಮೀಪದ ಕಳೆಂಜಿಲ ನಿವಾಸಿ ವಸಂತ ನಾಯ್ಕರವರ ಪತ್ನಿ ಸೇಸಮ್ಮ ಯಾನೆ ಜಯಲಕ್ಷ್ಮೀ, ಸುಳ್ಯ ತಾಲೂಕು ಸೋಣಂಗೇರಿ ಗ್ರಾಮದ ಕುಕ್ಕಂದೂರು ನಾರಾಯಣ ನಾಯ್ಕರವರ ಪುತ್ರ ರವಿಚಂದ್ರ (೪೦ವ.) ಹಾಗೂ ಬಸ್‌ನ ನಿರ್ವಾಹಕ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಶ್ರೀಧರ ಪೂಜಾರಿಯವರ ಪುತ್ರ ಶಶಿಧರ ಮೃತಪಟ್ಟವರಾಗಿದ್ದಾರೆ ಎಂದು ವರದಿಯಾಗಿದೆ.
ಬಲ್ನಾಡು ಗ್ರಾಮದ ಚನಿಲ ಪಾಲೆಚ್ಚಾರು ನಿವಾಸಿ ಕೊಗ್ಗು ನಾಯ್ಕರವರ ಪುತ್ರಿ ಅರುಣಾರವರ ವಿವಾಹವು ಮಡಿಕೇರಿ ತಾಲೂಕು ಕರಿಕೆ ಗ್ರಾಮದ ಕುಂಡತ್ತಿಕಾನ ಚೆನ್ನಪ್ಪ ನಾಯ್ಕರವರ ಪುತ್ರ ಪ್ರಶಾಂತ್ ಕುಮಾರ್‌ರವರೊಂದಿಗೆ ಜ.೩ರಂದು ಕರಿಕೆ ವರನ ಮನೆಯಲ್ಲಿ ನಿಗದಿಯಾಗಿತ್ತು. ಅದರಂತೆ ಜ.೩ರಂದು ಬೆಳಿಗ್ಗೆ ಬಲ್ನಾಡುವಿನ ವಧುವಿನ ಮನೆಯಿಂದ ಟಿಟಿ ವಾಹನ ಹಾಗೂ ಖಾಸಗಿ ಬಸ್ಸೊಂದರಲ್ಲಿ ದಿಬ್ಬಣ ಹೊರಟಿತ್ತು. ವಧು ಹಾಗೂ ಇತರರು ಟಿಟಿ ವಾಹನದಲ್ಲಿ ಪ್ರಯಾಣಿಸುತ್ತಿದ್ದು ಇತರೇ ಸಂಬಂಧಿಕರು, ಗ್ರಾಮಸ್ಥರು ಬಸ್ಸಿನಲ್ಲಿ ಹೊರಟಿದ್ದರು. ಎರಡೂ ವಾಹನವೂ ಸುಳ್ಯ ತಾಲೂಕಿನ ಅಲೆಟ್ಟಿ-ಪಾಣತ್ತೂರು ಅಂತರ್‌ರಾಜ್ಯ ರಸ್ತೆ ಮೂಲಕ ಕರಿಕೆ ಕಡೆಗೆ ಪ್ರಯಾಣಿಸುತ್ತಿತ್ತು. ಟಿಟಿ ವಾಹನದ ಹಿಂದೆ ಬಸ್ಸು ಪ್ರಯಾಣಿಸುತ್ತಿತ್ತು ಎಂದು ತಿಳಿದುಬಂದಿದೆ. ಬಸ್ಸು ಕಾಸರಗೋಡು ಜಿಲ್ಲೆಯ ವೆಲ್ಲಿಕುಂಡು ತಾಲೂಕಿನ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಇಳಿಜಾರು ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ವಾಸ್ತವ್ಯ ಇಲ್ಲದ ಮನೆಯೊಂದರ ಮೇಲೆ ಉರುಳಿಬಿದ್ದಿದೆ. ಘಟನೆಯಿಂದಾಗಿ ಬಸ್‌ನಲ್ಲಿದ್ದ ೫ ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು ತೀವ್ರ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.


ಗಾಯಗೊಂಡವರಿಗೆ ಚಿಕಿತ್ಸೆ:
ಸುಮಾರು ೬೦ ಮಂದಿ ಈ ನತದೃಷ್ಟ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು ತೀವ್ರ ಗಾಯಗೊಂಡ ೧೨ ಮಂದಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಪ ಸ್ವಲ್ಪ ಗಾಯಗೊಂಡವರನ್ನು ಕೇರಳದ ಕಾಞಂಗಾಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ಸುಳ್ಯಪದವು ಪದಡ್ಕ ನಿವಾಸಿ ಶಿವಪ್ಪ ಎಂಬವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಶ್ವರಮಂಗಲ ಪಡುವನ್ನೂರು ಗ್ರಾಮದ ಮುಗುಳಿ ನಿವಾಸಿ ಯಶೋಧರ ಹಾಗೂ ಅವರ ತಾಯಿ ಜಯಲತಾರವರು ಕಾಞಂಗಾಡ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ತಿಳಿದುಬಂದಿದೆ. ಉಳಿದ ಗಾಯಾಳುಗಳ ವಿವರ ಲಭ್ಯವಾಗಿಲ್ಲ. ಸಣ್ಣಪುಟ್ಟ ಗಾಯಾಳುಗಳಿಗೆ ಕಾಞಂಗಾಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಊರಿಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ತಕ್ಷಣ ತೆರಳಿದ ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್, ಕಾಸರಗೋಡು ಜಿ.ಪಂ.ಅಧ್ಯಕ್ಷರು ಹಾಗೂ ಇತರರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಸಹಕರಿಸಿದರು. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಪುತ್ತೂರಿನಿಂದ ಕ್ಯಾಂಪ್ಕೋ ಮಾಜಿ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ, ಟೌನ್ ಬ್ಯಾಂಕ್ ನಿರ್ದೇಶಕ ಕಿರಣ್ ಕುಮಾರ್ ಶೆಟ್ಟಿ ಬಲ್ನಾಡು, ಭರತ್ ಚನಿಲ, ರವಿಪ್ರಸಾದ್ ಬಂಗಾರಡ್ಕ, ವಿಶ್ವೇಶ್ವರ ಭಟ್ ಬಂಗಾರಡ್ಕ, ಬಲ್ನಾಡು ಗ್ರಾ.ಪಂ. ಸದಸ್ಯೆ ಪರಮೇಶ್ವರಿ ಭಟ್ ಬಬ್ಬಿಲಿ, ಜಗನ್ನಾಥ ಬಂಗಾರಡ್ಕ ಮೊದಲಾದವರು ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡು ಗಾಯಾಳುಗಳು ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆಗೆ ಸಹಕರಿಸಿದ್ದಾರೆ. ಅಲ್ಲದೇ ಮೃತರ ಮೃತದೇಹಗಳ ಮರಣೋತ್ತರ ಪರೀಕ್ಷೆಯ ಬಳಿಕ ಊರಿಗೆ ತರುವಲ್ಲಿಯೂ ಸಹಕರಿಸಿದ್ದಾರೆ.
ಶಾಸಕ ಮಠಂದೂರು, ಕೇರಳ ಸಿ.ಎಂ ಸಂತಾಪ
ಘಟನೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರವರು ಸಂತಾಪ ಸೂಚಿಸಿದ್ದಾರೆ. ಘಟನೆಯು ಕುರಿತು ತನಿಖೆ ನಡೆಸುವಂತೆ ಕೇರಳ ಸಾರಿಗೆ ಸಚಿವರು ಆದೇಶಿಸಿದ್ದು, ಕಾಸರಗೋಡು ಜಿಲ್ಲಾಧಿಕಾರಿ ಹಾಗೂ ಕಾಞಂಗಾಡ್ ಸಹಾಯಕ ಕಮಿಷನರ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದು ವರದಿಯಾಗಿದೆ.
ಸಂಪ್ಯ ಪೊಲೀಸರಿಂದ ತನಿಖೆ:
ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನಿರ್ದೇಶನದಂತೆ ಸಂಪ್ಯ ಠಾಣಾ ಎಎಸ್‌ಐ ತಿಮ್ಮಯ್ಯ ಗೌಡ ಹಾಗೂ ಸಿಬಂದಿಗಳಾದ ಗಿರೀಶ್, ಪ್ರಶಾಂತ್‌ರವರು ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ಇಂದು ಅಂತ್ಯಕ್ರಿಯೆ:
ಮೃತಪಟ್ಟ ಏಳುಮಂದಿಯ ಮೃತದೇಹದ ಮರಣೋತ್ತರ ಪರೀಕ್ಷೆ ಕಾಞಂಗಾಡ್‌ನ ಆಸ್ಪತ್ರೆಯಲ್ಲಿ ನಡೆದಿದ್ದು ಬಳಿಕ ಅಲ್ಲಿನ ಆಂಬುಲೆನ್ಸ್ ಮೂಲಕ ಮೃತದೇಹವನ್ನು ತಡರಾತ್ರಿ ವೇಳೆ ಪುತ್ತೂರಿಗೆ ಕರೆತರಲಾಗಿದೆ. ಅಪಘಾತದಲ್ಲಿ ಮೃತಪಟ್ಟವರ ಪೈಕಿ ನಾಲ್ವರ ಮೃತದೇಹದ ಅಂತ್ಯಕ್ರಿಯೆಯು ಪುತ್ತೂರು ನೆಲ್ಲಿಕಟ್ಟೆಯ ಹಿಂದು ರುದ್ರಭೂಮಿಯಲ್ಲಿ ಜ.೪ರಂದು ಬೆಳಿಗ್ಗೆ ನಡೆಯಲಿದೆ ಎಂದು ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ತಿಳಿಸಿದ್ದಾರೆ.

5 ಕಿ.ಮೀ.ಪ್ರಯಾಣಿಸುತ್ತಿದ್ದರೆ ಮದುವೆ ಮನೆ ಸೇರುತ್ತಿದ್ದರು ಘಟನೆ ನಡೆದ ಸ್ಥಳದಿಂದ ವಿವಾಹ ನಡೆಯಬೇಕಿದ್ದ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದ ಕುಂಡತ್ತಿಕಾನ ವರನ ಮನೆಗೆ ಕೇವಲ ೫ ಕಿ.ಮೀ. ಅಂತರವಿದೆ. ಇನ್ನೇನೂ ಕೆಲವೇ ನಿಮಿಷದಲ್ಲಿ ವರನ ಮನೆಗೆ ತಲುಪಿ ಎಲ್ಲರೊಂದಿಗೆ ಮದುವೆಯ ಸಂಭ್ರಮದಲ್ಲಿರಬೇಕಾದವರು ವಿಧಿಯಾಟಕ್ಕೆ ಸಿಲುಕಿ ಮದುವೆ ಮನೆಯಲ್ಲಿ ಸೂತಕದ ಛಾಯೆ ಆವರಿಸುವಂತೆ ಆಗಿದೆ. ಇದೀಗ ಮದುವೆಯ ಸಂತೋಷ, ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ.
————————–

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.