ಕಡಬ: ಬಲ್ಯ ಸಂಪಡ್ಕದಲ್ಲಿ ಸರಕಾರಿ ಜಾಗದಲ್ಲಿ ಪಂಚಾಯತ್ ಕ್ರಿಯಾ ಯೋಜನೆಯನ್ವಯ ರಸ್ತೆ ಅಭಿವೃದ್ದಿಗೆ ಸ್ಥಳ ಪರಿಶೀಲನೆಗೆಂದು ತೆರಳಿದ್ದ ಕುಟ್ರುಪಾಡಿ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಯವರ ವಿರುದ್ದ ಐವರ ತಂಡ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿಸಿ ಐವರು ಆರೋಪಿಗಳ ವಿರುದ್ದ ಜ.೨ರಂದು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಗಳಲ್ಲಿ ಓರ್ವರಾದ ಯಾಕೂಬ್ ಅವರು ಮತ್ತೊಂದು ಪ್ರಕರಣದಲ್ಲಿ ಬಂಧನವಾಗಿ ಆ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ದೊರೆತ ಬಳಿಕ ಅವರು ಸೇರಿದಂತೆ ಇತರ ನಾಲ್ವರು ಆರೋಪಿಗಳು ನಾಪತ್ತೆಯಾಗಿದ್ದು ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ.
ಪ್ರಕರಣ:
ಬಲ್ಯ ಗ್ರಾಮದ ಕುದ್ರಡ್ಕ ಎಂಬಲ್ಲಿ ಸರಕಾರಿ ಜಾಗದಲ್ಲಿ ಕುಟ್ರುಪಾಡಿ ಗ್ರಾಮ ಪಂಚಾಯತ್ನ ೨೦೧೯-೨೦ನೇ ಸಾಲಿನ ನಿಧಿ ೧ರ ಅನುದಾನದ ಕ್ರಿಯಾಯೋಜನೆಯಲ್ಲಿ ಅಳವಡಿಸಿರುವ ಚಂದ್ರಪ್ಪ ಸಂಪಡ್ಕ ಮನೆ ಇವರ ವಾಸದ ಮನೆಗೆ ಸಂಪರ್ಕ ರಸ್ತೆ ನಿರ್ಮಾಣದ ಕಾಮಗಾರಿಯ ಸ್ಥಳ ಪರಿಶೀಲನೆಗೆಂದು ಗ್ರಾ,ಪಂ, ಸಿಬ್ಬಂದಿಗಳು ಹಾಗೂ ಕಿರಿಯ ಇಂಜಿನಿಯರ್ ಜತೆ ಸ್ಥಳಕ್ಕೆ ತೆರಳಿದ್ದ ಕುಟ್ರುಪಾಡಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿಲ್ಪೈಡ್ ಲಾರೆನ್ಸ್ ರೋಡ್ರಿಗಸ್ ಅವರಿಗೆ ಸ್ಥಳೀಯ ನಿವಾಸಿಗಳಾದ ಯಾಕೂಬ್, ಅಬ್ದುಲ್ ಕರೀಂ, ಹನೀಫ್, ರಹಿಮತ್, ಇಕ್ಬಾಲ್ ಎಂಬವರು ಸೇರಿ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಒಡ್ಡಿದ್ದಾರೆ, ಅಲ್ಲದೆ ಪಂಚಾಯತ್ ಸಿಬ್ಬಂದಿಗಳ ಮೊಬೈಲ್ಗಳನ್ನು ಕಸಿದುಕೊಂಡು ರೆಕಾರ್ಡ್ ಮಾಡಲಾಗಿರುವ ವೀಡಿಯೋಗಳನ್ನು ಡಿಲಿಟ್ ಮಾಡಿದ್ದಾರೆ ಎಂದು ಪಿಡಿಒ ಅವರು ದೂರು ನೀಡಿದ್ದು ಈ ಬಗ್ಗೆ ಕಡಬ ಠಾಣೆಯಲ್ಲಿ ಐವರು ಆರೋಪಿಗಳ ವಿರುದ್ದ ಕಲಂ ೫೦೪,೩೨೩,೩೫೩,೩೪೧,೫೦೬ ಆರ್.ಡಬ್ಲ್ಯೂ೧೪೯ ಐ.ಪಿ.ಸಿ ಅನ್ವಯ ಪ್ರಕರಣ ದಾಖಲಾಗಿದೆ.
ಐವರು ಆರೋಪಿಗಳಲ್ಲಿ ಓರ್ವನ ಬಂಧನವಾಗಿದ್ದರೂ ಕೋರ್ಟಿನಲ್ಲಿ ಪರಾರಿ!
ಕಡಬದಲ್ಲಿ ಬಾಲಕಿಯೋರ್ವಳ ಫೋಟೋ ಸ್ಟೇಟಸ್ ಹಾಕಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಯಾಕೂಬ್ ಅವರು ಕುಟ್ರುಪಾಡಿ ಪಿಡಿಒಗೆ ಹಲ್ಲೆ ನಡೆಸಿದ ಐವರು ಆರೋಪಿಗಳಲ್ಲಿ ಓರ್ವರಾಗಿದ್ದರು. ಜ.೩ರಂದು ಸಂಜೆ ವೇಳೆ ನ್ಯಾಯಾದೀಶರ ಎದುರು ಆರೋಪಿಯನ್ನು ಹಾಜರುಪಡಿಸಿದ್ದು ಅವರಿಗೆ ಆ ಪ್ರಕರಣದಲ್ಲಿ ಜಾಮೀನು ಮಂಜೂರಾಗಿತ್ತು. ಆದರೇ ಪಿಡಿಒಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದರೂ ಅವರನ್ನು ಆ ಸಂದರ್ಭದಲ್ಲಿ ಮತ್ತೆ ಪೋಲಿಸ್ ವಶಕ್ಕೆ ಪಡೆದುಕೊಂಡು ಪುನಃ ನ್ಯಾಯಾದೀಶರ ಎದುರು ಹಾಜರುಪಡಿಸಲು ಪೋಲಿಸರಿಗೆ ಕಾನೂನು ತೊಡಕು ಎದುರಾಗಿತ್ತು ಎನ್ನಲಾಗಿದ್ದು, ಜಾಮೀನು ಪಡೆದ ಆರೋಪಿ ಪೋಲಿಸರ ಎದುರೇ ವಕೀಲರ ಜತೆ ತೆರಳಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗಳು ಪ್ರಾರಂಭವಾಗಿದೆ.