ವಿಟ್ಲ:ಮನೆಯಿಂದ ಯಾರೀಗೂ ಹೇಳದೆ ನಾಪತ್ತೆಯಾಗಿದ್ದ ಬಾಲಕನೋರ್ವನನ್ನು ವಿಟ್ಲ ಠಾಣಾ ಪೊಲೀಸರು ಮಂಗಳೂರಿನಲ್ಲಿ ಪತ್ತೆ ಮಾಡಿ ಕರೆತಂದಿದ್ದಾರೆ.
ಬಿಜಾಪುರ ಜಲ್ಲೆಯ ಮುದ್ದೆಬಿಹಾಳ ತಾಲೂಕಿನ ಅಜಾದ್ ನಗರ್ ನಿವಾಸಿ ಹನುಮಂತ ಎಸ್ ಸುಡುಗಾಡಸಿದ್ದರವರ ಪುತ್ರ
ಗಣೇಶ್ (15 ವ.) ರವರು ಜ.೨ ರಿಂದ ನಾಪತ್ತೆಯಾಗಿದ್ದರು. ಬಾಲಕನಿಗೆ ಆನ್-ಲೈನ್ ಕ್ಲಾಸಿಗೆಂದು ಮೊಬೈಲ್ ತೆಗೆದುಕೊಡಲಾಗಿತ್ತು.ಆದರೆ ಆತ ಅದರಲ್ಲಿ ಪಬ್ ಜೀ ಆಟ ಆಡುತ್ತಾ ಸಮಯ ಕಳೆಯುತ್ತಿದ್ದ. ಹಾಗಾಗಿ ಆತನ ತಂದೆ ಹಲವು ಬಾರಿ ಬುದ್ಧಿ ಹೇಳಿದ್ದರು . ಆದರೂ ಆತ ಆಡೋದನ್ನು ಮುಂದುವರಿಸಿದ್ದ. ಇದರಿಂದ ಚಿಂತೆಗೀಡಾದ ಬಾಲಕನ ತಂದೆ ಶಾಲಾ ಶಿಕ್ಷಕರಿಗೆ ವಿಷಯ ತಿಳಿಸಿದ್ದರು. ಅವರು ಗಣೇಶನಿಗೆ ಬುದ್ದಿವಾದ ಹೇಳಿದ್ದರು.ಅಲ್ಲದೇ ಆತನನ್ನು ಶಿಕ್ಷಕರು ಶಾಲೆಗೆ ಬರುವಂತೆ ಹೇಳಿದ್ದರು. ಜ.೨ರಂದು ಶಾಲೆಯಿಂದ ಮರಳಿ ಮನೆಗೆ ಬಂದ ಬಾಲಕ ಆ ಬಳಿಕ ಯಾರೀಗೂ ಹೇಳದೆ ಮನೆಯಿಂದ ನಾಪತ್ತೆಯಾಗಿದ್ದ. ಬಾಲಕ ಮರಳಿ ಬಾರದಿರುವ ಹಿನ್ನೆಲೆಯಲ್ಲಿ ಪೋಷಕರು ವಿವಿದೆಡೆ ಹುಡುಕಾಟ ನಡೆಸಿದ್ದರೂ ಆತ ಪತ್ತೆಯಾಗದಿದ್ದ ಹಿನ್ನೆಲೆಯಲ್ಲಿ ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಬಾಲಕನನ್ನು ಹುಡುಕಾಟ ನಡೆಸುತ್ತಿದ್ದ ವೇಳೆ ಆತ ಮಂಗಳೂರಿನ ಗರಡಿ ಜಾತ್ರೆಯಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದು ಅಲ್ಲಿಂದ ಆತನನ್ನು ವಶಕ್ಕೆ ಪಡೆದು ಕರೆತಂದಿದ್ದಾರೆ.