ಚಿತ್ರ: ಯೂಸುಫ್ ರೆಂಜಲಾಡಿ
ಪುತ್ತೂರು: ಸರ್ವೆ ಗ್ರಾಮದ ವಿವಿಧ ಕಡೆಗಳಲ್ಲಿ ಚಿರತೆ ಪ್ರತ್ಯಕ್ಷಗೊಳ್ಳುತ್ತಿರುವ ಘಟನೆಗಳು ನಡೆಯುತ್ತಿದ್ದು ಗ್ರಾಮದ ಜನತೆಯನ್ನು ಭಯಭೀತಗೊಳಿಸಿದೆ. ಇತ್ತೀಚೆಗಷ್ಟೇ ಗ್ರಾಮದ ಕೂಡುರಸ್ತೆ ಸಮೀಪದ ಎಲಿಯದಲ್ಲಿ ಚಿರತೆಯೊಂದನ್ನು ನೋಡಿರುವುದಾಗಿ ಪ್ರತ್ಯಕ್ಷದರ್ಶಿ ಗುರುಪ್ರಸಾದ್ ಬಾಳಾಯ ಎಂಬವರು ಹೇಳಿಕೊಂಡಿದ್ದು ಆ ಬಳಿಕ ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಅದಾದ ಕೆಲವೇ ದಿನಗಳಲ್ಲಿ ಗ್ರಾಮದ ಪರಾಡ್ ಎಂಬಲ್ಲಿ ಅಬ್ದುಲ್ ರಹಿಮಾನ್ ಎಂಬವರ ಮನೆಯ ಅಂಗಲದಲ್ಲಿ ಚಿರತೆ ಹೆಜ್ಜೆ ಗುರುತು ಕಂಡು ಬಂದಿದ್ದು ಆಗಲೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿ ಪರಿಶಿಲನೆ ನಡೆಸಿದ್ದರು. ಇದೀಗ ಮೂರನೇ ಬಾರಿಗೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು ಜನರನ್ನು ಭಯದ ವಾತಾವರಣದಲ್ಲಿರುವಂತೆ ಮಾಡಿದೆ.
ಜ.೫ರಂದು ಬೆಳಿಗ್ಗೆ ೧೦.೩೦ರ ವೇಳೆಗೆ ಕೂಡುರಸ್ತೆ ಬಾಳಾಯ ನಿವಾಸಿ ಜಯಪ್ರಕಾಶ್ ಅವರ ಮನೆಯ ಬಳಿಯಿಂದ ಕೂಡುರಸ್ತೆ ರಾಮಣ್ಣ ಗೌಡ ಅವರ ಮನೆಯ ಕಡೆಗೆ ಬಂದ ಚಿರತೆಯೊಂದು ಮನೆ ಮಂದಿ ನೋಡುತ್ತಿದ್ದಂತೆ ಮುಂಭಾಗದ ತೋಟಕ್ಕೆ ಹಾರಿ ಕಣ್ಮರೆಯಾಗಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು `ಸುದ್ದಿ’ಗೆ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯ ರಕ್ಷಕ ಸತ್ಯನ್ ಡಿ.ಜಿ ಅವರು ಪರಿಶೀಲನೆ ನಡೆಸಿದ್ದಾರೆ. ೧೦ ದಿನಗಳೊಳಗಾಗಿ ಗ್ರಾಮದಲ್ಲಿ ಮೂರು ಬಾರಿ ಚಿರತೆ ಪ್ರತ್ಯಕ್ಷಗೊಂಡಿರುವುದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಗ್ರಾಮದಲ್ಲಿ ಸುತ್ತಾಡುತ್ತಿರುವುದು ಚಿರತೆಯೋ ಅಥವಾ ನಾಯಿಹುಲಿಯೋ ಎನ್ನುವ ಅನುಮಾನ ಇತ್ತೀಚೆಗೆ ವ್ಯಕ್ತಗೊಂಡಿತ್ತು.
ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಪ್ರಶಂಸೆ:
ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡ ಘಟನೆಗಳು ವರದಿಯಾದ ತಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲಿಯದಲ್ಲಿ ಚಿರತೆ ಇದೆ ಎಂಬ ಮಾಹಿತಿ ಪಡೆದ ತಕ್ಷಣ ಪುತ್ತೂರು ವಲಯಾರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ್ರವರ ತಂಡವೇ ಗ್ರಾಮಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿತ್ತು. ಆ ಬಳಿಕ ಪರಾಡ್ನಲ್ಲಿ ಹೆಜ್ಜೆ ಗುರುತು ಇದೆ ಎಂದಾಗಲೂ ಅರಣ್ಯ ರಕ್ಷಕ ಸತ್ಯನ್ ಡಿ.ಜಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ್ದರು. ಇದೀಗ ಕೂಡುರಸ್ತೆಯಲ್ಲಿ ಚಿರತೆ ಇದೆ ಎನ್ನುವ ಮಾಹಿತಿ ಸಿಕ್ಕ ತಕ್ಷಣವೇ ಸತ್ಯನ್ ಡಿ.ಜಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಸಂಜೆ ವೇಳೆ ಉಪ ವಲಯಾರಣ್ಯಾಧಿಕಾರಿ ಶಿವಾನಂದ ಆಚಾರ್ಯ ಮತ್ತು ತಂಡದವರು ಸ್ಥಳಕ್ಕೆ ಭೇಟಿ ಕೊಟ್ಟು ಬೋನು ಅಳವಡಿಕೆ ಮಾಡಿದ್ದಾರೆ. ಅದೇ ರೀತಿ ಮುಕ್ವೆಯಲ್ಲೂ ಬೋನು ಅಳವಡಿಕೆ ಮಾಡಿಕೆ ಮಾಡಿ ಚಿರತೆಯನ್ನು ಬಲೆಗೆ ಬೀಳಿಸಲು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಅರಣ್ಯಾಧಿಕಾರಿಗಳ ಸಕಾಲಿಕ ಸ್ಪಂಧನೆಗೆ ಗ್ರಾಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಬೋನಿಗೆ ಬೀಳುತ್ತಾ ಚಿರತೆ…!
ಜ.೫ರಂದು ಸಂಜೆ ವೇಳೆಗೆ ಕೂಡುರಸ್ತೆಗೆ ಆಗಮಿಸಿದ ಅರಣ್ಯಾಧಿಕಾರಿಗಳ ತಂಡ ಸ್ಥಳೀಯವಾಗಿ ಮಾಹಿತಿ ಕಲೆ ಹಾಕಿದರು. ಉಪವಲಯಾರಣ್ಯಾಧಿಕಾರಿ ಶಿವಾನಂದ ನಾಯ್ಕ್, ಅರಣ್ಯ ರಕ್ಷಕ ಸತ್ಯನ್ ಡಿ.ಜಿ ಮತ್ತು ತಂಡದವರು ಪರಿಶೀಲನೆ ನಡೆಸಿದರು. ಬಳಿಕ ಚಿರತೆಯನ್ನು ಉಪಾಯವಾಗಿ ಹಿಡಿಯಲು ಕೂಡುರಸ್ತೆಯಲ್ಲಿ ಬೋನು ಅಳವಡಿಕೆ ಮಾಡಿದ್ದಾರೆ. ಬೋನಿನ ಒಳಗಡೆ ಇರುವ ಇನ್ನೊಂದು ಸಣ್ಣ ಕಬ್ಬಿಣದ ಗೂಡಿನಲ್ಲಿ ನಾಯಿಯನ್ನು ಕೂಡಿ ಹಾಕಲಾಗಿದೆ. ಚಿರತೆ ಕೂಡುರಸ್ತೆ ಪರಿಸರದಲ್ಲೇ ಸುತ್ತಾಡುತ್ತಿದೆಯಾ? ನಾಯಿಯನ್ನು ಕಂಡು ಬೋನಿನೊಳಗೆ ಹೋಗುತ್ತಾ? ಎನ್ನುವುದು ಕುತೂಹಲವಾಗಿದೆ.
ಮಕ್ಕಳ ಬಗ್ಗೆ ಇರಲಿ ಎಚ್ಚರ:
ಗ್ರಾಮದಲ್ಲಿ ಚಿರತೆ ಆಗಾಗ ಪ್ರತ್ಯಕ್ಷಗೊಳ್ಳುತ್ತಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದು ಮನೆಯಿಂದ ಸ್ವಚ್ಛಂದವಾಗಿ ಹೊರಹೋಗಿ ಬರಲು ಹೆದರುತ್ತಿದ್ದಾರೆ ಎನ್ನುವ ಮಆಹಿತಿ ಲಭ್ಯವಾಗಿದೆ. ಚಿರತೆ ಹೆಚ್ಚಾಗಿ ನಾಯಿ ಮೇಲೆ ದಾಳಿ ಮಾಡುವ ಸಾಧ್ಯತೆಗಳನ್ನು ಅರಣ್ಯಾಧಿಕಾರಿಗಳು ಕೂಡಾ ಸ್ಪಷ್ಟಪಡಿಸಿದ್ದಾರೆ. ಸಣ್ಣ ಪುಟ್ಟ ಮಕ್ಕಳನ್ನು ಕೆಲವು ದಿನಗಳ ಮಟ್ಟಿಗಾದರೂ ಹೊರಹೋಗುವಾಗ ಇಲ್ಲವೇ ಮನೆಯಂಗಲದಲ್ಲಿ ಆಟವಾಡುತ್ತಿರುವಾಗ ಜಾಗ್ರತೆ ವಹಿಸುವುದು ಅಗತ್ಯವಾಗಿದೆ. ನಾಯಿ ಇಲ್ಲವೇ ಮಕ್ಕಳ ಮೇಲೆ ಚಿರತೆ ಯಾವುದೇ ಸಂದರ್ಭದಲ್ಲೂ ದಾಳಿ ನಡೆಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.